ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಧರ್ಮಕ್ಕೆ ಸಮನ್ವಯತೆಯೇ ಜೀವಾಳ

Last Updated 4 ಸೆಪ್ಟೆಂಬರ್ 2017, 9:40 IST
ಅಕ್ಷರ ಗಾತ್ರ

ದಾವಣಗೆರೆ: ಧರ್ಮಗಳ ಮಧ್ಯೆ ಸಂಘರ್ಷ ತಲೆ ದೋರಿದಾಗ ಭಿನ್ನಾಭಿಪ್ರಾಯ ನಿವಾರಿಸಿ ಸಮನ್ವಯತೆ ಮೆರೆದ ವೀರಶೈವ ಧರ್ಮಕ್ಕೆ ಸಮನ್ವಯತೆಯೇ ಜೀವಾಳ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀಶೈಲ ಮಠದಲ್ಲಿ ಭಾನುವಾರ ವಾಗೀಶ ಪಂಡಿತಾರಾಧ್ಯ ಶ್ರೀಗಳ ಪುಣ್ಯಾರಾಧನೆ ಹಾಗೂ ಉಮಾಪತಿ ಪಂಡಿತಾರಾಧ್ಯ ಶ್ರೀಗಳ ಸ್ಮರಣೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ‘ಭಾರತದಲ್ಲಿ ವೇದ ಹಾಗೂ ಆಗಮ ವಾಙ್ಮಯಗಳಿವೆ. ಕೆಲವರು ವೇದ ಒಪ್ಪಿದರೆ, ಕೆಲವರು ಆಗಮ ಒಪ್ಪುತ್ತಾರೆ. ವೀರಶೈವ ಧರ್ಮ ಮಾತ್ರ ಎರಡನ್ನೂ ಒಪ್ಪಿ ಸಮನ್ವಯತೆ ಸಾಧಿಸುತ್ತದೆ’ ಎಂದರು.

ಭಗವಂತನ ಸಾಕಾರ ಹಾಗೂ ನಿರಾಕಾರ ರೂಪಗಳಲ್ಲಿ ಸಾಕ್ಷಾತ್ಕಾರದ ಮಾರ್ಗಗಳಾದ ಕರ್ಮ ಮತ್ತು ಜ್ಞಾನಗಳಲ್ಲಿ ಸಮನ್ವಯತೆಯನ್ನು ಸಾಧಿಸಿದ್ದೂ ವೀರಶೈವ ಧರ್ಮವೇ. ಸಂಘರ್ಷದ ಮೂಲಕ ಮನುಷ್ಯ ಎಂದಿಗೂ ಶಾಂತಿ ಪಡೆಯಲಾರ. ಸಂಘರ್ಷ ಬಿಟ್ಟು ಜೀವನ ಸಾಗಿಸಿ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

ಪಂಚಪೀಠದ ಪರಂಪರೆ ಮತ್ತು ವಿರಕ್ತ ಪರಂಪರೆಯಲ್ಲಿ ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶ್ರೀಗಳು ಸಮನ್ವಯ ಭಾವ ಹೊಂದಿದ್ದರು ಎಂದು ಸ್ವಾಮೀಜಿ ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ‘ಇದುವರೆಗೂ 22 ಮಂದಿ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದಾರೆ. ಯಾರ ಅವಧಿಯಲ್ಲೂ ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಎಂಬ ಅಪಸ್ವರ ಕೇಳಿಬಂದಿರಲಿಲ್ಲ. ನನ್ನ ಅವಧಿಯಲ್ಲಿ ಗೊಂದಲಗಳು ಸೃಷ್ಟಿಯಾಗಿರುವುದು ಬೇಸರ ತಂದಿದೆ’ ಎಂದರು.

ವೀರಶೈವ ಹಾಗೂ ಲಿಂಗಾಯತರು ಒಂದೇ. ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದರೂ ಯಾರೂ ಕಿವಿಗೊಡಬಾರದು ಎಂದು ಶಾಮನೂರು ಕಿವಿಮಾತು ಹೇಳಿದರು.

ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಬಿ.ಇ.ರಂಗಸ್ವಾಮಿ ಮಾತನಾಡಿ, ಪ್ರತಿಯೊಬ್ಬರಲ್ಲೂ ವೈಜ್ಞಾನಿಕ ಮನೋಭಾವ ಅಗತ್ಯ. ಪ್ರಶ್ನೆ ಮಾಡದೆ, ಸತ್ಯ ಹಾಗೂ ಜ್ಞಾನದ ಹುಡುಕಾಟ ನಡೆಸದೆ, ವಿಚಾರಣೆ ನಡೆಸದೆ, ತರ್ಕಬದ್ಧವಾಗಿ ಯೋಚಿಸದೆ ಯಾವುದೇ ವಿಷಯಗಳನ್ನು ಒಪ್ಪಿಕೊಳ್ಳಬಾರದು ಎಂದರು.

ವೈಜ್ಞಾನಿಕ ಮನೋಭಾವ ಸತ್ಯದ ಅನ್ವೇಷಣೆಗೆ ದಾರಿಯಾಗುತ್ತದೆ. ಹೊಸ ವಿಚಾರಗಳು ಜನ್ಮ ತಾಳುತ್ತವೆ. ಒಳಿತು, ಕೆಡಕುಗಳ ಅರಿವಾಗುತ್ತದೆ. ಎಲ್ಲರೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು. ಪಾಲಿಕೆ ಸದಸ್ಯ ದಿನೇಶ್‌ ಕೆ.ಶೆಟ್ಟಿ, ಅಪೂರ್ವ ಹೋಟೆಲ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಅಣಬೇರು ರಾಜಣ್ಣ ಮಾತನಾಡಿದರು. ಈ ಸಂದರ್ಭ ಗಣ್ಯರಿಗೆ ಗುರು ರಕ್ಷೆ ನೀಡಲಾಯಿತು. ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಜೈನಾಪುರ ಹಿರೇಮಠದ ರೇಣುಕ ಶಿವಾಚಾರ್ಯ ಶ್ರೀ, ಉಪ ಮೇಯರ್ ಮಂಜಮ್ಮ ಹನುಮಂತಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT