ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ ತಲುಪಿದ ಬ್ರಿಟನ್‌ನ ಪಾದಯಾತ್ರಿ ಡೇವಿಡ್

Last Updated 4 ಸೆಪ್ಟೆಂಬರ್ 2017, 9:43 IST
ಅಕ್ಷರ ಗಾತ್ರ

ಭದ್ರಾವತಿ: ಆತನ ದೇಶ ಬ್ರಿಟನ್‌. ಆದರೆ, ಪಾದಯಾತ್ರೆ ಮೂಲಕ ಭಾರತದ ಹಳ್ಳಿಗಳನ್ನು ಸುತ್ತಾಡಿ ಇಲ್ಲಿನ ಅನ್ನದಾತರ ಸಮಸ್ಯೆಗಳ ಸರಮಾಲೆಗಳನ್ನು ಅಧ್ಯಯನ ನಡೆಸಲು ಹೊರಟಿದ್ದಾರೆ. ಹೌದು!. ಬ್ರಿಟನ್‌ನ ಡೇವಿಡ್‌ ಅತೊವ್ ಕನ್ಯಾಕುಮಾರಿಯಿಂದ 1,000 ಕಿ.ಮೀ ಕ್ರಮಿಸಿ ನಗರಕ್ಕೆ ಶನಿವಾರ ಬಂದಿದ್ದರು. ಕೂಡ್ಲಿಗೆರೆ ಹಾಗೂ ಕಣಕಟ್ಟೆ ಗ್ರಾಮದ ತೋಟ, ಜಮೀನುಗಳಿಗೆ ಭಾನುವಾರ ಭೇಟಿ ನೀಡಿ ರೈತರ ಸಮಸ್ಯೆಗಳ ಮಾಹಿತಿ ಪಡೆದರು.

ಭೂಮಿ ಫಲವತ್ತತೆ, ಕೃಷಿ ಯೋಗ್ಯ ಭೂಮಿಯಲ್ಲಿನ ಬೆಳೆಗಳ ಪರಿಶೀಲನೆ, ಗ್ರಾಹಕ ಹಾಗೂ ರೈತರ ನಡುವಿರುವ ಸಂಪರ್ಕ ಕೊರತೆಯ ಮಾಹಿತಿ ಪಡೆದ ಡೇವಿಡ್. ಸುಸ್ಥಿರ ಕೃಷಿ ಜಾಗೃತಿ, ಗ್ರಾಹಕ ಸಂಪರ್ಕ ವ್ಯವಸ್ಥೆ ಹಾಗೂ ಕಷ್ಟದಲ್ಲಿನ ಕುಟುಂಬಕ್ಕೆ ನೆರವಿನ ಯೋಜನೆ ಕುರಿತು ಹೇಳಿದರು.

‘ರೆಸ್ಕ್ಯೂ ಎ ಫ್ಯಾಮಿಲಿ’ ಘೋಷಣೆ ಹೊತ್ತು ನಡೆದಿರುವ ಅವರ ಪಾದಯಾತ್ರೆ ಅಭಿಯಾನದಲ್ಲಿ ಪಂಜಾಬ್‌ನ ಅಮೃತಸರದ ಬಹದ್ದೂರ್ ಸಿಂಗ್ ಜತೆಯಾಗಿ ಹೆಜ್ಜೆ ಹಾಕುವ ಮೂಲಕ ಕುಟುಂಬ ನೆರವಿನ ಯೋಜನೆಗೆ ದೇಣಿಗೆ ಸಂಗ್ರಹಣೆಯನ್ನೂ ನಡೆಸಿದ್ದಾರೆ.

ಯಾತ್ರೆಯ ಉದ್ದೇಶವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡ ಡೇವಿಡ್, ‘ಇಲ್ಲಿನ ರೈತರು ಮದುವೆ, ಮನೆ ಕಟ್ಟುವುದು ಸೇರಿದಂತೆ ವಿವಿಧ ಐಷಾರಾಮಿ ಬದುಕಿಗೆ ದುಡಿದ ಹಣ ವ್ಯಯ ಮಾಡುವ ಜತೆಗೆ, ತಾವು ಕೃಷಿಗೆ ಮಾಡಿದ ಸಾಲವನ್ನು ಇಂತಹ ಚಟುವಟಿಕೆಗೆ ಬಳಕೆ ಮಾಡುತ್ತಿರುವ ಪರಿಣಾಮ ಸಾಲದ ಹೊರೆ ಹೆಚ್ಚುತ್ತಿದೆ’ ಎಂದು ಹೇಳಿದರು.

‘ಶೂನ್ಯ ಬಂಡವಾಳ ಮೂಲಕ ಕೃಷಿ ಚಟುವಟಿಕೆ ನಡೆಸಿ, ಸುಸ್ಥಿರ ಕೃಷಿ ಕೈಗೊಳ್ಳುವ ಆಶಯ ಹೊಂದಿರುವ ನನ್ನ ಪಾದಯಾತ್ರೆಯ ಮೂಲಕ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರಿಗೆ ಪಿಂಚಣಿ ಒದಗಿಸುವ ಗುರಿ ಇಟ್ಟುಕೊಂಡಿದ್ದೇನೆ’ ಎಂದರು.

ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಗಮನ ಸೆಳೆಯಲು ಇಲ್ಲಿನ ಕೃಷಿಕರು ನಡೆಸಬೇಕಾದ ಕಾರ್ಯದ ಬಗ್ಗೆ ಮಾಹಿತಿ ನೀಡುವ ಕೆಲಸ ಕೈಗೊಂಡಿರುವ ಡೇವಿಡ್ ಯಾತ್ರೆಗೆ ಕರ್ನಾಟಕ ರಾಜ್ಯ ರೈತ ಸಂಘ, ಸಹಜ ಸಮೃದ್ಧ್, ಕನೆಕ್ಟ್ ಫಾರ್ಮರ್ಸ್ ಸಂಸ್ಥೆಯೂ ಕೈಜೋಡಿಸಿದೆ ಎಂದು ಬಹದ್ದೂರ ಸಿಂಗ್ ತಿಳಿಸಿದರು.
ರೈತ ಮುಖಂಡರಾದ ವೀರಭದ್ರಪ್ಪ, ಈಶ್ವರ, ಆರ್.ಮೋಹನಕುಮಾರ್, ಮಹೇಶ್ವರಪ್ಪ, ಮೂರ್ತಿ, ರವಿಕುಮಾರ್, ಸೋಮಶೇಖರ್, ಮಹಾದೇವ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT