ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷ ಕೆಲಸ ಮೊದಲು; ಟಿಕೆಟ್‌ ಆಮೇಲೆ’

ಬಿಜೆಪಿ ನಾಯಕರಿಗೆ ಸಚಿವ ಜಾವಡೇಕರ್‌ ಪಾಠ
Last Updated 4 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ವಿಧಾನಸಭಾ ಚುನಾವಣೆಗೆ ಟಿಕೆಟ್ ಅಂತಿಮಗೊಳಿಸುವವರು ಬಿಜೆಪಿ ಅಧ್ಯಕ್ಷ ಅಮಿತ್ ಷಾ. ಇದರ ಬಗ್ಗೆ, ಯಾರೂ ತಲೆಕೆಡಿಸಿಕೊಳ್ಳಬೇಡಿ. ಜನವರಿಯ ಬಳಿಕ‌ ನೋಡೋಣ’ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಪಕ್ಷದ ಪ್ರಮುಖರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

‘ಹೊಸಬರಿಗೆ ಟಿಕೆಟ್ ಖಚಿತ ಎಂದುಕೊಳ್ಳಬೇಡಿ. ಬಂದವರಿಗೆಲ್ಲ ಟಿಕೆಟ್ ಕೊಡುವುದಕ್ಕೂ ಆಗುವುದಿಲ್ಲ. ಪಕ್ಷಕ್ಕೆ ಸೇರ್ಪಡೆಯಾದ ನಾಯಕರಿಗೆ ಮೊದಲು ಪಕ್ಷ ಸಂಘಟನೆ ಕೆಲಸ ನೀಡಿ. ಗೆಲುವಿನ ಸಂಕಲ್ಪದೊಂದಿಗೆ ಪಕ್ಷ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ’ ಎಂದು ತಾಕೀತು ಮಾಡಿದ್ದಾರೆ.

ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಉದ್ದೇಶದಿಂದ ಸೋಮವಾರ ರಾಜಕೀಯ ವ್ಯವಹಾರ ಸಮಿತಿಯ ಸಭೆ ನಡೆಸಿದ ಅವರು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ನಂತರದ ಬೆಳವಣಿಗೆ ಕುರಿತು ಮಾಹಿತಿ ಪಡೆದರು.

‘ಮುಂದಿನ ಸಭೆ ಸಂದರ್ಭದಲ್ಲಿ ಬೂತ್‌ಮಟ್ಟದ ವರದಿ ನೀಡಬೇಕು. ಚುನಾವಣೆಗೆ ಸಜ್ಜುಗೊಳ್ಳುವ ನಿಟ್ಟಿನಲ್ಲಿ ಆಕ್ರಮಣಕಾರಿಯಾಗಿ ಕೆಲಸ ಮಾಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

‘ಪ್ರಸ್ತುತ ಚರ್ಚೆ ಆಗುತ್ತಿರುವ ಸ್ವತಂತ್ರ ಧರ್ಮ, ಪ್ರತ್ಯೇಕ ನಾಡಧ್ಬಜ ವಿಷಯದಲ್ಲಿ ಜನಪರ ನಿಲುವು ವ್ಯಕ್ತಪಡಿಸಬೇಕು. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಜನಾಂದೋಲನ ರೂಪಿಸಬೇಕು. ಆಂದೋಲನದ ರೂಪುರೇಷೆ ಮತ್ತು ದಿನವನ್ನು ಅತಿ ಶೀಘ್ರ ನಿಗದಿಪಡಿಸಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.
*
‘ಕೋಯೀ ಭಿ ನಹೀ ಯಹ್ಞಾಂ, ಕಹಾ ಹೈ ಸಬ್?’

ಬಿಜೆಪಿ ಪ್ರಮುಖರು ಬರುವ ಮೊದಲೇ ಪಕ್ಷದ ಕಚೇರಿಗೆ ಜಾವಡೇಕರ್‌ ಬಂದಿದ್ದರು. ರಾಜ್ಯ ನಾಯಕರು ಯಾರೂ ಇಲ್ಲದ್ದನ್ನು ಕಂಡು, ‘ಕೋಯೀ ಭಿ ನಹೀ ಯಹ್ಞಾಂ, ಕಹಾ ಹೈ ಸಬ್?’ ಎಂದು ಜಾವಡೇಕರ್ ಪ್ರಶ್ನಿಸಿದರು. ‘ಬರುತ್ತಿದ್ದಾರೆ ಸರ್’ ಎಂದು ಅಲ್ಲಿ ಇದ್ದವರು ಸಮಜಾಯಿಷಿ ನೀಡಿದರು!

ಸಭೆಯಲ್ಲಿ ಕೆಲಹೊತ್ತು ಮಾತ್ರ ಭಾಗವಹಿಸಿ, ಪಕ್ಷದ ಸಹ ಚುನಾವಣಾ ಉಸ್ತುವಾರಿ ಪೀಯೂಷ್‌ ಗೋಯಲ್ ಅವರು ರೈಲ್ವೆ ಖಾತೆ ಅಧಿಕಾರ ವಹಿಸಿಕೊಳ್ಳುವ ಉದ್ದೇಶದಿಂದ ತರಾತುರಿಯಲ್ಲಿ ದೆಹಲಿಗೆ ತೆರಳಿದರು.
*
ಹೆಸರು, ಖಾತೆ ಮರೆತ ಯಡಿಯೂರಪ್ಪ
ಕೇಂದ್ರ ಸಚಿವರಾಗಿ ನೇಮಕವಾದ ಅನಂತಕುಮಾರ್ ಹೆಗಡೆ ವಿಷಯ ಸಭೆಯಲ್ಲಿ ಪ್ರಸ್ತಾಪವಾಯಿತು. ಆದರೆ, ಮಾತನಾಡುವ ಸಂದರ್ಭದಲ್ಲಿ ಅನಂತಕುಮಾರ್ ಹೆಗಡೆ ಹೆಸರನ್ನೇ ಯಡಿಯೂರಪ್ಪ ಮರೆತರು. ಪಕ್ಕದಲ್ಲಿದ್ದ ಸಚಿವ ಅನಂತಕುಮಾರ್, ಹೆಗಡೆ ಹೆಸರನ್ನು ನೆನಪಿಸಿದರು.

‘ಈ ಬಾರಿ ಕೇಂದ್ರದಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾದ ಸಚಿವರ ದಂಡೇ ಇದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಗೆ ಗೃಹ ಖಾತೆ ನೀಡಲಾಗಿದೆ’ ಎಂದು ಯಡಿಯೂರಪ್ಪ ಹೇಳಿದರು. ‘ನಿರ್ಮಲಾ ಅವರಿಗೆ ರಕ್ಷಣಾ ಖಾತೆ’ ಎಂದೂ ಅನಂತಕುಮಾರ್‌ ಉಸುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT