ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸಿನ ಕಾಯಿಸೊಳೆ ಈಗ ವಿಶ್ವಪ್ರಿಯ

Last Updated 4 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಾಯಿ ಹಲಸಿನ ಸೊಳೆ – ಕಾಯಿಸೊಳೆ ಎಂದೇ ಕರೆಯುತ್ತಾರೆ- ಕರಾವಳಿ ಕರ್ನಾಟಕ, ಕೇರಳ ಮತ್ತು ಶ್ರೀಲಂಕಾಗಳಲ್ಲಿ ಜನಪ್ರಿಯ ತರಕಾರಿ. ಇದು ಮಧುಮೇಹ ಕಾಯಿಲೆ ಇರುವವರಿಗೆ ಉತ್ತಮ ಆಹಾರ ಎನ್ನುವುದು ಈಚೆಗೆ ಬೆಳಕಿಗೆ ಬಂದಿದೆ.

ಅಕ್ಕಿ, ಗೋಧಿಗಳಿಗಿಂತ ಕಾಯಿಸೊಳೆಯ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ. ಹೀಗೆ ಇದು ರಕ್ತಕ್ಕೆ ಬಹು ನಿಧಾನವಾಗಿ ಸಕ್ಕರೆಯಂಶ ಸೇರಿಸುತ್ತದೆ. ತಮ್ಮ ಆಹಾರದಲ್ಲಿ ಕ್ರಮಬದ್ಧವಾಗಿ ಕಾಯಿಸೊಳೆಯಂಶ ಸೇರಿಸಿದರೆ ಮಧುಮೇಹಿಗಳು ಇನ್ಸುಲಿನ್ ಬಳಕೆಯನ್ನೂ ಕಡಿಮೆ ಮಾಡುತ್ತದೆ. ಈ ಅಧ್ಯಯನ ಮಾಹಿತಿ ಹೊರಬರಲು ಕಾರಣ ಕೊಚ್ಚಿಯ ಜೇಮ್ಸ್ ಜೋಸೆಫ್. ‘ಜಾಕ್ ಫ್ರೂಟ್ 365’ ಹೆಸರಿನ ಫ್ರೀಝ್ ಡ್ರೈ ಕಾಯಿಸೊಳೆ ತಯಾರಿಸಿ ಮಾರುಕಟ್ಟೆಗಿಳಿಸಿರುವ ಇವರು ಹಲಸಿನ ರಾಯಭಾರಿಯೂ ಹೌದು.

ಕೇರಳದ ಮಾಧ್ಯಮಗಳು ಬಲು ಚುರುಕು. ಜನರಲ್ಲಿ ಪತ್ರಿಕೆ-ಟೀವಿ ನೋಡಿ ತಿಳಿದುಕೊಳ್ಳುವ ಅಭ್ಯಾಸವೂ ಗರಿಷ್ಠ. ಹೀಗಾಗಿ ಹೊಚ್ಚಹೊಸ ಸುದ್ದಿಗಳೂ ರಾಜ್ಯದಾದ್ಯಂತ ಮಾತ್ರವಲ್ಲ ವಿದೇಶೀ ಮಲೆಯಾಳಿಗಳನ್ನೂ ಗಂಟೆಗಳಲ್ಲೇ ತಲುಪಿಬಿಡುತ್ತವೆ. ಕಾಯಿಸೊಳೆಯ ಪ್ರಯೋಜನದ ವಿಷಯದಲ್ಲೂ ಹಾಗೆಯೇ ಆಗಿದೆ.

ಮಧುಮೇಹಿಗಳಿಗೆ ಕಾಯಿಸೊಳೆ ಒಳ್ಳೆಯದು ಎಂಬ ಸುದ್ದಿ ಕೇರಳ ಮೂಲದ ಹಲವರನ್ನು ಇದನ್ನು ಸೇವಿಸಲು ಪ್ರೇರೇಪಿಸಿದೆ. ಹಾಗೆ ಮಾಡಿದವರಿಗೆ ಪ್ರಯೋಜನ ಸಿಕ್ಕಿದ ವರದಿಗಳಿವೆ. ಕಾಯಿಸೊಳೆಯಿಂದ ಮಾಡುವ ಪಲ್ಯದ ರೀತಿಯ ‘ಚಕ್ಕ ಪುಳುಕ್’ ಕೇರಳದ ಸಾಂಪ್ರದಾಯಿಕ ಆಹಾರ. ಇದನ್ನು ಅನ್ನಕ್ಕೆ ಬದಲಾಗಿ ಸೇವಿಸುವಷ್ಟು ಜನಪ್ರಿಯತೆ ಇತ್ತು. ಬರಬರುತ್ತಾ ಇಳಿದುಹೋದ ಈ ಅಭ್ಯಾಸ ಈಗ ಮತ್ತೆ ತುಂಬ ಚುರುಕುಗೊಂಡಿದೆ.

ಕೋಟ್ಟಯಂ ಜಿಲ್ಲೆಯ ಪಾಲಾ ನಗರದ ಮಲ್ಟಿಸ್ಟೇಟ್ ಅಗ್ರಿಕಲ್ಚರ್ ಪ್ರೊಡ್ಯೂಸರ್ಸ್ ಪ್ರಾಸೆಸಿಂಗ್ ಆಂಡ್ ಮಾರ್ಕೆಟಿಂಗ್ ಸೊಸೈಟಿ – ಮಲ್ಟಿಸ್ಟೇಟ್ ಸೊಸೈಟಿ ಎಂದು ಕರೆಯೋಣ – ಮೂರು ವರ್ಷಗಳಿಂದ ಕೃಷಿಕರಿಂದ ಕಾಯಿ ಹಲಸು ಖರೀದಿಸಿ ಸೊಳೆಯಾಗಿಸಿ ಮಾರುತ್ತಿದೆ. ಆಯ್ದು ಕತ್ತರಿಸಿದ ಕಾಯಿಸೊಳೆಯನ್ನು ಸೊಸೈಟಿ ಶೈತ್ಯೀಕರಿಸಿ ಮಾರಹತ್ತಿದೆ.

ನೂರು ಕಿಲೋ ಹಲಸು ಕೊಯ್ದರೆ ಸರಾಸರಿ 18 ಕಿಲೋ ಸೊಳೆ ಸಿಗುತ್ತದೆ. ಕಳೆದ ವರ್ಷದವರೆಗೂ ಸೊಸೈಟಿ ಹಲಸು ಖರೀದಿಸಿ ತಾನೇ ಕಾರ್ಮಿಕರ ಮೂಲಕ ಕತ್ತರಿಸಿ ಸೊಳೆ ಮಾಡುತ್ತಿತ್ತು. ಈ ವರ್ಷದಿಂದ ಕ್ರಮ ಬದಲಿಸಿದೆ. ಈ ಕೆಲಸವನ್ನೂ ಹಲಸು ಮಾರುವವರಿಗೆ ವರ್ಗಾಯಿಸಿದೆ. ಅವರೇ ಕೊಯ್ದು, ಆಯ್ದು ಕತ್ತರಿಸಿ ಕೊಡಬೇಕು. ಸೊಸೈಟಿ ಅವರಿಂದ ಕಿಲೋಗೆ 50 ರೂಪಾಯಿಗೆ ಖರೀದಿಸುತ್ತದೆ.

‘ಮೂವತ್ತು ಕಿಲೋಮೀಟರ್ ವ್ಯಾಪ್ತಿಯ ಮೂರು ಪಂಚಾಯಿತಿಗಳಿಂದ ಕಾಯಿಸೊಳೆ ಖರೀದಿಸಿದ್ದೇವೆ. ಪೂರ್ವನಿಗದಿತ ದಿನ, ಸಮಯದಂದು ನಿಗದಿತ ರೂಟಿನಲ್ಲಿ ನಮ್ಮದೇ ವಾಹನ ಇದನ್ನು ತರುತ್ತದೆ. ಹತ್ತು ಕಡೆ ಇರಿಸಿದ ಫ್ರೀಜರುಗಳಲ್ಲಿ ಇದನ್ನು ಕಾಯ್ದಿಟ್ಟು ಮಾರುತ್ತೇವೆ’ ಎನ್ನುತ್ತಾರೆ ಸೊಸೈಟಿ ಅಧ್ಯಕ್ಷ ರೋನಿ ಮ್ಯಾಥ್ಯೂ.

ಕಳೆದ ಸಾಲಿನಲ್ಲಿ ಸೊಸೈಟಿ ಖರೀದಿಸಿದ ಸೊಳೆ ಒಟ್ಟು 21 ಟನ್. ಇವರು ಅರ್ಧ ಮತ್ತು ಒಂದು ಕಿಲೋದ ಪ್ಯಾಕೆಟ್ ಮಾಡುತ್ತಾರೆ. ಬೆಲೆ ಕಿಲೋಗೆ 150 ರೂಪಾಯಿ. ರಖಂ ಬೆಲೆ 100 ರೂಪಾಯಿ. ಪಾಲಾ, ಕೋಟ್ಟಯಂ ಮತ್ತು ಎರ್ನಾಕುಲಂಗಳ ಹದಿನೈದು ಸೂಪರ್ ಮಾರ್ಕೆಟುಗಳಿಗೆ ‘ಫ್ರೀಝ್ಡ್ ಪಚ್ಚ ಚಕ್ಕ’ (ಶೈತ್ಯೀಕರಿಸಿದ ಕಾಯಿಸೊಳೆ) ಪೂರೈಸುತ್ತಾರೆ. ಇದು ಮುಖ್ಯವಾಗಿ ಬಳಕೆ ಆಗುವುದು ಚಕ್ಕ ಪುಳುಕ್ ತಯಾರಿಗೇ.

ಪಾಲಾ ನಗರದಿಂದ ಅನತಿ ದೂರದಲ್ಲಿದೆ ನೇಲೂರ್ ಸಹಕಾರಿ ಸೊಸೈಟಿ. ಇವರ ಆಶ್ರಯದ ಕೃಷಿಕ ಉತ್ಪಾದಕ ಕಂಪೆನಿಯೂ ಹಲಸಿನ ಉತ್ಪನ್ನ ತಯಾರಿಸುತ್ತಿದೆ. ಇವರ ಉತ್ಪನ್ನಗಳ ವ್ಯಾಪಾರನಾಮ ನೆಸ್ಕೋ. ಈ ಕಂಪೆನಿಯೂ ಕತ್ತರಿಸಿದ ಕಾಯಿಸೊಳೆ ಖರೀದಿಸುತ್ತದೆ. ಸೀಸನಿನಲ್ಲಿ ಇವರು ಪ್ರತಿದಿನ ಸರಾಸರಿ ಎರಡರಿಂದ ಮೂರು ಕ್ವಿಂಟಾಲ್ ಸೊಳೆಯನ್ನು ಹತ್ತಿರದ ರಫ್ತುದಾರ ಕಂಪೆನಿಗೆ ಪೂರೈಸಿದ್ದಾರೆ.

ಕಳೆದ ಸಾಲಿನಲ್ಲಿ ಇವರು ಪೂರೈಸಿದ ಕಾಯಿಸೊಳೆ ಹತ್ತು ಟನ್ ಆಗಬಹುದು.

ಈ ಎರಡೂ ಸಂಸ್ಥೆಗಳಿಂದ ಕಾಯಿಸೊಳೆ ಖರೀದಿಸಿದ್ದು ರಾಮಪುರಂನ ವಿಶ್ವಾಸ್ ಫುಡ್ಸ್. ಈ ಕಂಪೆನಿ ಹಲಸಿನ ಏಳೆಂಟು ಸಿದ್ಧ ತಯಾರಿಗಳನ್ನು ಫ್ರೋಝನ್ ರೂಪದಲ್ಲಿ ರಫ್ತು ಮಾಡುತ್ತಲಿದೆ.

ಆದರೆ ಕಾಯಿಸೊಳೆಯನ್ನು ಅಧಿಕ ಪ್ರಮಾಣದಲ್ಲಿ ನಿರ್ಯಾತ ಮಾಡಿದ್ದು ಈ ವರ್ಷವೇ ಮೊದಲು. ಮೇಲೆ ತಿಳಿಸಿದ ಎರಡು ಸಂಸ್ಥೆಗಳಲ್ಲದೆ ಬೇರೆ ಮೂಲಗಳಿಂದಲೂ ವಿಶ್ವಾಸ್ ಫುಡ್ಸ್ ಕಾಯಿಸೊಳೆ ಖರೀದಿಸುತ್ತದೆ. ಸ್ವತಃ ಹಲಸು ಖರೀದಿಸಿ ಸೊಳೆ ಸಿದ್ಧಗೊಳಿಸುವುದೂ ಇದೆ.

ವಿಶ್ವಾಸ್ ಫುಡ್ಸ್ ಶೈತ್ಯೀಕರಿಸಿದ ಕಾಯಿಸೊಳೆ ರಫ್ತು ಮಾಡುವ ಮುಖ್ಯ ದೇಶಗಳು ಆಸ್ಟ್ರೇಲಿಯಾ, ಅಮೆರಿಕ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್, ಜರ್ಮನಿ ಮತ್ತು ಸ್ವಿಟ್ಸರ್ಲೆಂಡ್. ‘ಈ ಉತ್ಪನ್ನದ ವ್ಯವಹಾರದಲ್ಲಿ ನಾವು ಹೆಚ್ಚಿನ ಆಸಕ್ತಿ ತೆಗೆದುಕೊಂಡ ಕಾರಣ ಕಳೆದ ಸಾಲಿನಲ್ಲಿ 125 ಟನ್ ರಫ್ತು ಸಾಧ್ಯವಾಗಿದೆ. ಬಹುಶಃ ಕೇರಳದಲ್ಲೇ ಕಾಯಿಸೊಳೆ ರಫ್ತಿನಲ್ಲಿ ನಾವು ಉಳಿದವರಿಗಿಂತ ಮುಂದೆ’ ಎನ್ನುತ್ತಾರೆ ವಿಶ್ವಾಸ್ ಫುಡ್ಸ್ ಮಾಲೀಕ ಸೋನಿ. ಇವರ ಕಾಯಿಸೊಳೆಯ ಕೊನೆ ಬಳಕೆದಾರರಲ್ಲಿ 80 ಶೇಕಡಾವೂ ವಿದೇಶವಾಸಿ ಕೇರಳಿಗರೇ.

‘ಹಲಸಿನಕಾಯಿ ಕತ್ತರಿಸಿ ಸೊಳೆ ಆಯಲು ತುಂಬ ಶ್ರಮ ಬೇಕಾಗುತ್ತದೆ. ಇದಕ್ಕೆ ಯಂತ್ರ ಅಭಿವೃದ್ಧಿಗೊಳಿಸಿದರೆ ಈ ವ್ಯವಹಾರ ಇನ್ನೂ ಹೆಚ್ಚು ಮಾಡಲು ಸಾಧ್ಯ’ ಎನ್ನುವುದು ಸೋನಿ ಅವರ ಅಭಿಪ್ರಾಯ. ‘ನಮ್ಮಲ್ಲಿ ಇನ್ನೂ ಹೆಚ್ಚಿನ ದಾಸ್ತಾನು ಸೌಕರ್ಯ ಇಲ್ಲ. ಸರಕಾರ ಇನ್ನಷ್ಟು ಫ್ರೀಝರು ಮತ್ತು ಸೌಕರ್ಯ ಒದಗಿಸಿದರೆ ಈಗಿನದರ ಹಲವು ಪಟ್ಟು ಹೆಚ್ಚು ಖರೀದಿಸಿ ಕೃಷಿಕ ಸಮುದಾಯಕ್ಕೆ ನೆರವಾಗಬಹುದು’ ಎನ್ನುವುದು ರೋನಿ ಮ್ಯಾಥ್ಯೂ ವಿಶ್ವಾಸ.

ರಬ್ಬರ್ ಬೆಳೆ ಇಳಿತ ಮತ್ತು ಹಲಸಿಗೆ ಮಾರುಕಟ್ಟೆ ಬಂದಿರುವುದರಿಂದ ಪಾಲಾ ತಾಲ್ಲೂಕಿನಲ್ಲಿ ಬದಲಾವಣೆಗಳಾಗುತ್ತಿವೆ. ಕೃಷಿಕರು ರಬ್ಬರ್ ತೋಟ ಕಡಿದು ಹಲಸು ನೆಡತೊಡಗಿದ್ದಾರೆ. ಹದವರಿತು, ಗುಣಮಟ್ಟ ಕಾಯ್ದುಕೊಂಡು ವ್ಯವಹರಿಸಿದರೆ ಮುಂದಿನ ದಿನಗಳಲ್ಲಿ ಕಾಯಿಸೊಳೆಗೆ ಅಂತರ ರಾಷ್ಟ್ರೀಯ ಮಾರುಕಟ್ಟೆಯ ಬಾಗಿಲು ದೊಡ್ಡದಾಗಿ ತೆರೆಯಲಿದೆ.⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT