ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ವರ್ಷದಲ್ಲಿ ನಾಲ್ಕು ದಿನ ರಜೆ ಪಡೆದ ಶಿಕ್ಷಕಿ ಮಾಶಾಬೀ...!

Last Updated 5 ಸೆಪ್ಟೆಂಬರ್ 2017, 4:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ತವ್ಯವನ್ನೇ ಸದಾ ಜಪ ಮಾಡುವ ತಾಲ್ಲೂಕಿನ ಬಿಡ್ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಾಶಾಬೀ ಉಸ್ಮಾನ್‌ಸಾಬ್‌ ಮುಜಾಹಿದ್‌ ಅವರು 15 ವರ್ಷದಲ್ಲೇ ನಾಲ್ಕೇ ದಿನ ರಜೆ ಪಡೆದಿದ್ದಾರೆ.

2002ರಲ್ಲಿ ಶಿಕ್ಷಕಿಯಾಗಿ ನೇಮಕ ವಾದಾಗಿನಿಂದ ತಂದೆ ತೀರಿಕೊಂಡಾಗ ಮಾತ್ರ 4 ದಿನ ರಜೆ ತೆಗೆದುಕೊಂಡಿದ್ದು ಬಿಟ್ಟರೆ, ಬೇರೆ ಸಮಯದಲ್ಲಿ ಇಲ್ಲಿಯವರೆಗೆ ರಜೆ ತೆಗೆದುಕೊಂಡಿಲ್ಲ. ಸರ್ಕಾರಿ ರಜೆಗಳನ್ನೇ ಬಳಸಿಕೊಂಡು ಕೆಲಸ ಮಾಡುತ್ತಿದ್ದಾರೆ.

‘ಸರ್ಕಾರಿ ರಜೆಗಳೇ ಸಾಕು. ವೈಯಕ್ತಿವಾಗಿ ಯಾವುದೇ ರಜೆಗಳೂ ಬೇಡ. ಮಕ್ಕಳೊಂದಿಗೆ ಕಳೆಯುವುದರಲ್ಲಿಯೇ ನನಗೆ ತುಂಬಾ ಖುಷಿ. ಶಾಲೆಗೆ ಹೋಗುವುದು ಎಂದರೆ ನನಗೆ ಎಲ್ಲಿಲ್ಲದ ಖುಷಿ’ ಎನ್ನುತ್ತಾರೆ ಮಾಶಾಬೀ.

‘ಮಕ್ಕಳಲ್ಲಿ ವಿಪರೀತ ಕುತೂಹಲ ಇರುತ್ತದೆ. ನಾವೂ ಅವರಂತೆಯೇ ಕುತೂಹಲ ಬೆಳೆಸಿಕೊಳ್ಳಬೇಕು. ಕುತೂಹಲವನ್ನು ತಣಿಸುವ ಕೆಲಸ ಮಾಡಬೇಕು. ಆಗ ಮಕ್ಕಳೂ ಕಲಿಕೆ ಯಲ್ಲಿ ಆಸಕ್ತಿ ತೋರಿಸುತ್ತಾರೆ’ ಎನ್ನುತ್ತಾರೆ ಅವರು.

‘ಶಿಸ್ತು ಹಾಗೂ ಸಮಯಪ್ರಜ್ಞೆಯಿಂದಾಗಿ ಕೆಲಸಗಳು ಸರಾಗವಾಗಿ ಆಗುತ್ತವೆ. ತಂದೆ ತೀರಿಕೊಂಡಾಗ ಹೊರತುಪಡಿಸಿದರೆ ಬೇರೆ ಸಂದರ್ಭದಲ್ಲಿ ರಜೆ ತೆಗೆದುಕೊಳ್ಳುವ ಸಂದರ್ಭ ಎದುರಾಗಿಲ್ಲ. ಈ ಸಾಧನೆಯಲ್ಲಿ ನನ್ನ ಸಹೋದ್ಯೋಗಿಗಳ, ಎಸ್‌ಡಿಎಂಸಿಯವರ ಹಾಗೂ ಮನೆಯವರ ಸಹಕಾರವಿದೆ’ ಎಂದು ನೆನೆಯುತ್ತಾರೆ ಮಾಶಾಬೀ.
‘ಶಾಲೆಯಲ್ಲಿದ್ದಾಗಲೂ ನಾನು ಶಿಸ್ತಿನ ವಿದ್ಯಾರ್ಥಿಯಾಗಿದ್ದೆ.

ಹಿಂದಿ ವಿಷಯದಲ್ಲಿ ಬಿ ಇಡಿ ಹಾಗೂ ಕನ್ನಡ ವಿಷಯದಲ್ಲಿ ಸ್ನಾತ ಕೋತ್ತರ ಪದವಿ ಪಡೆದಿದ್ದೇನೆ. ತಾಯಿ, ಅಣ್ಣ–ತಮ್ಮಂದಿರ ತುಂಬು ಕುಟುಂಬದೊಂದಿಗೆ ಇದ್ದೇನೆ. ಓದುವುದು ಎಂದರೆ ನನಗೆ ಅಚ್ಚು ಮೆಚ್ಚು. ಇದರ ಜೊತೆಗೆ ಬೇಸಿಗೆ ಸಂಭ್ರಮ ತರಗತಿಗಳನ್ನು ತೆಗೆದು ಕೊಂಡಿದ್ದೇನೆ’ ಎಂದರು. ಮಾಶಾಬೀ ಅವರ  ಕರ್ತವ್ಯ ಮೆಚ್ಚಿ 2004ರಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವತಿಯಿಂದ ‘ಉತ್ತಮ ಶಿಕ್ಷಕಿ’ ಎಂದು ಪ್ರಶಸ್ತಿ ನೀಡಲಾಗಿದೆ. ಶಿಕ್ಷಕರ ಸಂಘಗಳೂ ಸನ್ಮಾನಿಸಿವೆ.

* * 

ಹಾಡು, ಕತೆ ಹೇಳದೆ ಮಾಶಾಬೀ ಟೀಚರ್‌ ಅವರು ಪಾಠ ಮಾಡುವುದಿಲ್ಲ. ಅವರೆಂದರೆ ನಮಗೆಲ್ಲ ತುಂಬಾ ಇಷ್ಟ. ಪ್ರತಿಭಾ ಕಾರಂಜಿಗೆ ಅವರೇ ನಮ್ಮನ್ನೆಲ್ಲ ಸಿದ್ಧಗೊಳಿಸುತ್ತಾರೆ
ತಸ್ಮೀಯಾ ನಾಜ್
ವಿದ್ಯಾರ್ಥಿನಿ, ಏಳನೇ ತರಗತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT