ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಗಳೂರು ಚಲೋ: ಜಿಲ್ಲೆಯಿಂದ 900 ಬೈಕ್‌’

Last Updated 5 ಸೆಪ್ಟೆಂಬರ್ 2017, 5:27 IST
ಅಕ್ಷರ ಗಾತ್ರ

ಹಾವೇರಿ: ‘ಹಿಂದು ಪರ ಸಂಘಟನೆಗಳ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ಹಾಗೂ ಕೊಲೆಗಡುಕ ಸಂಘಟನೆಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಖಂಡಿಸಿ ಇದೇ 6 ರಂದು ಜಿಲ್ಲೆಯಿಂದ 900 ಕಾರ್ಯಕರ್ತರು ‘ಮಂಗಳೂರು ಚಲೋ’ ತೆರಳಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಜಿಲ್ಲೆಯ 1,800 ಯುವ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ 900 ಬೈಕ್‌ಗಳಲ್ಲಿ ತೆರಳಲಿದ್ದಾರೆ’ ಎಂದರು.

‘ಇದೇ 6ರಂದು ಬೆಳಿಗ್ಗೆ 6ಗಂಟೆಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಶಿವಮೊಗ್ಗಕ್ಕೆ ತೆರಳುವರು. ಅಲ್ಲಿಂದ ಬೆಳಿಗ್ಗೆ 10.30ಕ್ಕೆ ರಥಯಾತ್ರೆ ಜೊತೆ ಹೊರಡುವರು. ಸಂಜೆ ಕಾರ್ಕಳದಲ್ಲಿ ವಾಸ್ತವ್ಯ ಮಾಡುವರು. ಮರುದಿನ ಬೆಳಿಗ್ಗೆ ಮಂಗಳೂರಿನಲ್ಲಿ ನಡೆಯಲಿರುವ ‘ಮಂಗಳೂರು ಚಲೊ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು’ ಎಂದರು.

‘ರಾಜ್ಯದ ವಿವಿಧೆಡೆಯಿಂದ 25 ಸಾವಿರಕ್ಕೂ ಅಧಿಕ ಬೈಕ್‌ಗಳಲ್ಲಿ ಬಂದ 50 ಸಾವಿರಕ್ಕೂ ಅಧಿಕ ಯುವಕರು ಮಂಗಳೂರಿನಲ್ಲಿ ಸಮಾವೇಶಗೊಳ್ಳುವರು’ ಎಂದ ಅವರು, ‘ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ವೈಫಲ್ಯಗಳನ್ನೂ ಖಂಡಿಸಲಾಗುವುದು’ ಎಂದರು.

ಭ್ರಷ್ಟಾಚಾರ: ‘ರಾಜ್ಯ ಸರ್ಕಾರವು ಭ್ರಷ್ಟಾಚಾರದಿಂದ ಕೂಡಿದೆ. ಸ್ವತಃ ಸಿ.ಎಂ ಅಕ್ರಮ ಆಸ್ತಿಗಳನ್ನು ಹೊಂದಿದ್ದು, ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಸಾಧ್ಯತೆ ಇದೆ. ಅಲ್ಲದೇ, ಇನ್ನಷ್ಟು ಸಚಿವರ ಅಕ್ರಮಗಳು ಬಯಲಿಗೆ ಬರಲಿವೆ. ‘ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಸಿಐಡಿ ಬಳಸಿಕೊಂಡು ಕಳಂಕಿತ ಸಚಿವರಿಗೆ ಕ್ಲೀನ್‌ಚೀಟ್ ಕೊಡಿಸುತ್ತಿದೆ’ ಎಂದು ಆರೋಪಿಸಿದರು. 

‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ 2015–16 ಮತ್ತು 2016–17ರಲ್ಲಿ ಮಂಜೂರಾದ ಪರಿಹಾರದ ಹಣವನ್ನು ಇನ್ನೂ ರೈತರ ಖಾತೆಗೆ ಜಮಾ ಮಾಡಿಲ್ಲ. ಕುರುಬ ಗೊಂಡ ಗ್ರಾಮದಲ್ಲೇ 239 ರೈತರಿಗೆ 2 ವರ್ಷಗಳಿಂದ ಹಣ ಜಮಾ ಆಗಿಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿ ಬರ ಪರಿಹಾರದ ಹಣವನ್ನೂ ಸಮರ್ಪಕ ವಾಗಿ ಬಳಸಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ವಕ್ತಾರ ಸುರೇಶ ಹೊಸ್ಮನಿ, ನಗರ ಘಟಕದ ಅಧ್ಯಕ್ಷ ನಿರಂಜನ ಹೇರೂರ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂಜುಂಡೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT