ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ತೋಟಗಳಲ್ಲಿ ಕೊಳೆ ರೋಗ

Last Updated 5 ಸೆಪ್ಟೆಂಬರ್ 2017, 5:59 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ ಹಲವಾರು ಅಡಿಕೆ ತೋಟಗಳಲ್ಲಿ ಕೊಳೆರೋಗ  ಕಾಣಿಸಿಕೊಂಡಿದ್ದು, ರೈತರಿಗೆ ಅಡಿಕೆ ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ವರ್ಷದ  ಮಳೆಯನ್ನು ಕಳೆದ ಹಲವು ವರ್ಷಗಳ ಮಳೆಗಾಲಕ್ಕೆ ಹೋಲಿಸಿದರೆ  ಇದುವರೆಗೆ ಬಿದ್ದಿರುವ ಮಳೆಯ ಪ್ರಮಾಣ ಕಡಿಮೆಯೇ. ಹೀಗಿದ್ದರೂ ಮಳೆ ಹೆಚ್ಚಾದಾಗ ಮಾತ್ರ ಹರಡುತ್ತದೆ ಎಂದೇ ಹೇಳಲಾಗುವ  ಅಡಿಕೆಯ ಕೊಳೆ  ರೋಗ ಮಾತ್ರ ವರ್ಷದಂತೆ ಈ ವರ್ಷವೂ ಕಾಣಿಸಿ ಕೊಂಡಿರುವುದು ವಿಶೇಷ.

ಪಟ್ಟಣದಲ್ಲಿ  ಭಾನುವಾರ ಬೆಳಿಗ್ಗೆ (ಸೆ.3)ಯರೆಗೆ ಒಟ್ಟು 2079.2 ಮಿ.ಮೀ ಮಳೆ ಬಿದ್ದಿದೆ. ಕಳೆದ ವರ್ಷ ಇದೇ ಅವಧಿಯವರೆಗೆ 1692.2  ಮಿ.ಮೀ ಬಿದ್ದಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.ತಾಲ್ಲೂಕಿನ  ಸರಾಸರಿ ವಾಡಿಕೆ ಮಳೆ(ಮಳೆಗಾಲದ ಅಂತ್ಯದವರೆಗೆ) ಸುಮಾರು 3000 ಮಿ.ಮೀ ಆಗಿದೆ. ಆದ್ದರಿಂದ ಈಗ ಸುರಿದಿರುವ ಮಳೆ ಜಾಸ್ತಿಯಂತೂ ಅಲ್ಲ ಎಂಬುದು ರೈತರ ಅನಿಸಿಕೆ. 

ಮಳೆಯ ಪ್ರಮಾಣ ತಾಲ್ಲೂಕಿನ ಎಲ್ಲ ಪ್ರದೇಶಗಳಲ್ಲಿ ಒಂದೇ ರೀತಿ ಇರುವುದಿಲ್ಲ ಎಂಬುದು  ಇಲ್ಲಿನ ಜನತೆಗೆ  ಗೊತ್ತಿರುವ ಸಂಗತಿ. ತಾಲ್ಲೂಕಿನ ಹೇರೂರು, ಹೆಗ್ಗರಣಿ, ನಿಲ್ಕುಂದ, ಹಲಗೇರಿ, ಲಂಬಾ ಪುರ, ದೊಡ್ಮನೆ ಮತ್ತು ಮಾವಿನಗುಂಡಿ ಪ್ರದೇಶದಲ್ಲಿ ಮಳೆ ಸಾಕಷ್ಟು ಜಾಸ್ತಿ. ಈ ಪ್ರದೇಶಗಳಿಗೆ ಹೋಲಿಸಿದರೆ ಪಟ್ಟಣದಲ್ಲಿ ಬೀಳುವ ಮಳೆಯ ಪ್ರಮಾಣ ಕಡಿಮೆ. ಈ ಬಾರಿ ಕೂಡ ಅದೇ ರೀತಿ ಆಗಿದೆ.

‘ತಾಲ್ಲೂಕಿನ ದಾನಮಾಂವ್ ಮತ್ತು ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ತೀವ್ರವಾಗಿ ಕೊಳೆ ರೋಗ ಕಾಣಿಸಿ ಕೊಂಡಿದೆ. ತಾಲ್ಲೂಕಿನ  ಹಲಗೇರಿ, ಕುಳಿಬೀಡು  ಮತ್ತಿತರ ಹಳ್ಳಿಗಳಲ್ಲಿ, ಮಾವಿನಗುಂಡಿ, ಬಸವನಬೈಲ್‌ ಪ್ರದೇಶಗಳಲ್ಲಿಯೂ ಅಡಿಕೆ ಕೊಳೆ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರಾಮಚಂದ್ರ ಮಡಿವಾಳ ತಿಳಿಸಿದರು.

ಈ ಪ್ರದೇಶಗಳಷ್ಟೆ  ಅಲ್ಲದೇ ತಾಲ್ಲೂಕಿನ ಹಲವಾರು ಅಡಿಕೆ ತೋಟ ಗಳಲ್ಲಿ   ಕೊಳೆ ರೋಗ  ಕಾಲಿಟ್ಟಿರುವ ಸಂಗತಿ ರೈತರೊಂದಿಗೆ ಮಾತನಾಡಿದಾಗ ಗೊತ್ತಾಗುತ್ತದೆ. ‘ ನಮ್ಮ ತೋಟದಲ್ಲಿ ಗಣೇಶ ಚೌತಿಯ ಆಸುಪಾಸಿನ ದಿನದಲ್ಲಿ  ಒಂದು ಅಡಿಕೆ ಮರದಲ್ಲಿ ಕೊಳೆ ಬಂದಿತ್ತು. ಈಗ ಐದಾರು ಮರಗಳಿಗೆ ವ್ಯಾಪಿಸಿದೆ’ ಎಂದು ಹಣಜಿಬೈಲಿನ ಪ್ರಕಾಶ ಹೆಗಡೆ ಹೇಳಿದರು.

‘ಒಂದೆರಡು ವಾರದ ಹಿಂದೆ ಸುರಿದ ಭಾರಿ ಮಳೆಯಿಂದ ವಾತಾವರಣ ತಂಪಾಗಿದ್ದು, ಇದರಿಂದ  ಕೊಳೆ ರೋಗ ಹರಡಿದೆ. ತಾಲ್ಲೂಕಿನಲ್ಲಿ  ಮಳೆಗಾಲದಲ್ಲಿ ಇಂತಹ ವಾತಾವರಣ ಸಾಮಾನ್ಯ.  ಆದ್ದರಿಂದ  ರೈತರಿಗೆ ಮಳೆಗಾಲದ ಆರಂಭದಲ್ಲಿಯೇ ಬೊರ್ಡೋ ಮಿಶ್ರಣ ಸಿಂಪರಣೆ ಮಾಡಬೇಕು ಎಂಬ ಸೂಚನೆಯನ್ನು ನೀಡುತ್ತೇವೆ’ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ವಿವರ ನೀಡಿದರು.

ತಾಲ್ಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸಂಪೂರ್ಣ ಮಾಯವಾಗಿ, ಬಿಸಿಲು  ಕಾಣಿಸಿಕೊಂಡಿದೆ. ಇದರಿಂದ ಕೊಳೆ ರೋಗ ಕೆಲಮಟ್ಟಿಗೆ ಕಡಿಮೆಯಾಗಬಹುದು ಎಂಬ ಆಶಾಭಾವನೆ ರೈತರದ್ದು.

* * 

ಮಳೆ–ಬಿಸಿಲಿನ ವಾತಾವರಣ ಕೊಳೆ ರೋಗ ಆರಂಭಗೊಳ್ಳಲು ಕಾರಣವಾಗಿದೆ. ಕೊಳೆ ರೋಗದ ನಿಯಂತ್ರಣಕ್ಕೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡಬೇಕು
ರಾಮಚಂದ್ರ ಮಡಿವಾಳ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT