ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಮಾರುಕಟ್ಟೆಗೆ ದಾಂಗುಡಿ ಇಟ್ಟ ‘ನುಚ್ಕೆ’

Last Updated 5 ಸೆಪ್ಟೆಂಬರ್ 2017, 6:04 IST
ಅಕ್ಷರ ಗಾತ್ರ

ಕಾರವಾರ: ಏಂಡಿ ಬಲೆಗೆ ನುಚ್ಕೆ (ಸ್ಕ್ವಿಡ್‌) ಹೇರಳವಾಗಿ ಬೀಳುತ್ತಿದ್ದು, ಕಡಲತೀರದಲ್ಲಿನ ತಾತ್ಕಾಲಿಕ ಮೀನು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ದಾಂಗುಡಿ ಇಟ್ಟಿದೆ. ಮೀನು ಖಾದ್ಯ ಪ್ರಿಯರು ಮುಗಿಬಿದ್ದು ಇದರ ಖರೀದಿಯಲ್ಲಿ ತೊಡಗಿದ್ದಾರೆ.

ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲತೀರದಲ್ಲಿ ಶಿಕಾರಿಗೆ ತೆರಳುವ ನಾಡದೋಣಿಗೆ ಕಳೆದೆರಡು ದಿನಗಳಿಂದ ನುಚ್ಕೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿದೆ. ಸಾಂಪ್ರದಾಯಿಕ ಮೀನುಗಾರರು ಅದನ್ನು ಸಮೀಪದಲ್ಲೇ ಇರುವ ಮೀನು ಮಾರುಕಟ್ಟೆಗೆ ತರುತ್ತಿದ್ದಾರೆ. ನುಚ್ಕೆಯನ್ನು ಪ್ಲಾಸ್ಟಿಕ್‌ ಬುಟ್ಟಿಗಳಲ್ಲಿ ತುಂಬಿ ಸ್ಥಳದಲ್ಲೇ ದರ ನಿಗದಿ ಮಾಡಿ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.

ಬುಟ್ಟಿ ನುಚ್ಕೆಗೆ ₹ 800: ಶನಿವಾರ ಮಾರುಕಟ್ಟೆಯೊಳಗೆ ಪ್ರವೇಶಿಸಿದರೆ ಮೀನಿಗಿಂತ ‘ನುಚ್ಕೆ’ಯೇ ಅಧಿಕವಾಗಿ ಕಂಡುಬಂತು. ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ತುಂಬಿದ ನುಚ್ಕೆ ₹ 800ಕ್ಕೆ ಬಿಸಿ ದೋಸೆಯಂತೆ ಖಾಲಿಯಾಯಿತು. ಕೆಲವರು ಒಟ್ಟಾಗಿ ಖರೀದಿಸಿ, ಆನಂತರ ಪಾಲು ಮಾಡಿಕೊಂಡರು. ಇನ್ನು ಒಳಗೆ ಕುಳಿತಿದ್ದ ಮೀನು ಮಾರಾಟ ಮಹಿಳೆಯರು ಸಣ್ಣ ಪಾಲಿಗೆ ₹ 100ರಂತೆ ಮಾರಾಟ ಮಾಡಿದರು. ಎಲ್ಲರೂ ಮೀನಿನ ಜತೆಗೆ ಇದನ್ನು ಖರೀದಿಸಿದರು.

‘ನುಚ್ಕೆಯನ್ನು ಕೊಂಕಣಿಯಲ್ಲಿ ಮಾಣಕಿ ಎಂದು ಕರೆಯಲಾಗುತ್ತದೆ. ಇದು ಎಲ್ಲ ಕಾಲಕ್ಕೂ ಸಿಗುವುದಿಲ್ಲ. ಇದನ್ನು ಸಾಂಬರ್‌ಗಿಂತ ಹೆಚ್ಚಾಗಿ ಸುಕ್ಕಾ ಮಾಡುತ್ತೇವೆ. ಅಲ್ಲದೇ ರಿಂಗ್‌ ರೀತಿಯಲ್ಲಿ ಕತ್ತರಿಸಿ, ಎಣ್ಣೆಯಲ್ಲಿ ಕರಿಯಲಾಗುತ್ತದೆ. ಹೋಟೆಲ್‌ಗಳಲ್ಲಿ ಒಂದು ಪ್ಲೇಟಿಗೆ ₹ 80 ರಿಂದ ₹ 100 ಇದೆ. ಜಗಿದಾಗ ಸ್ವಲ್ಪ ರಬ್ಬರ್‌ ತರಹ ಇದ್ದರೂ ನಾಲಿಗೆ ರುಚಿ ಕೊಡುತ್ತದೆ’ ಎನ್ನುತ್ತಾರೆ ಸ್ಥಳೀಯ ಪ್ರಶಾಂತ್‌.

ತರಹೇವಾರಿ ಮೀನು..
‘ಕಳೆದ ಕೆಲ ದಿನಗಳಿಂದ ತರಹೇವಾರಿ ಮೀನುಗಳು ಮಾರುಕಟ್ಟೆಗೆ ಬರುತ್ತಿವೆ. ಬಂಗುಡೆ, ಬೆಳ್ಳಂಜಿ, ಕಾಪಿ, ಇಶ್ವಾಣ, ಮೋರಿ, ಸಿಗಡಿ ನಾನಾ ರೀತಿಯ ಮೀನುಗಳು ಲಭ್ಯವಿದೆ. ಸದ್ಯ ಇವುಗಳ ಬೆಲೆ ತುಸು ಹೆಚ್ಚಾಗಿಯೇ ಇದೆ. ಆದರೆ ಗ್ರಾಹಕರು ಮಾತ್ರ ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ’ ಎನ್ನುತ್ತಾರೆ ಮೀನು ಮಾರಾಟಗಾರ್ತಿ ರೇವತಿ.

* * 

ಕಡಲಲ್ಲಿ ಒಂದೊಂದು ಋತುಮಾನಕ್ಕೆ ಒಂದೊಂದು ಜಾತಿಯ ಮೀನುಗಳು ಹೇರಳವಾಗಿ ಸಿಗುತ್ತವೆ. ಹಾಗೆಯೇ ಸೆಪ್ಟೆಂಬರ್‌ನಲ್ಲಿ ನುಚ್ಕೆ ಅಧಿಕವಾಗಿ ಸಿಗುತ್ತಿದೆ
ಗಣೇಶ ಸುರಂಗೇಕರ
ಮೀನುಗಾರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT