ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ ಕನಸು ನನಸಾಗಿಸಿದ ‘ಸ್ಮಾರ್ಟ್‌’ ಶಿಕ್ಷಕ

Last Updated 5 ಸೆಪ್ಟೆಂಬರ್ 2017, 6:44 IST
ಅಕ್ಷರ ಗಾತ್ರ

ಕೊಪ್ಪಳ: ನಾನು ಮಹಮ್ಮದ ಆಬಿದ್‌ ಹುಸೇನ್‌ ಅತ್ತಾರ. ನನ್ನ ತಂದೆ ಕಾಸೀಂಸಾಬ್‌ ಅತ್ತಾರ. ವೃತ್ತಿಯಲ್ಲಿ ಟೈಲರ್‌. ಅವರಿಗೆ ತಾನು ಶಿಕ್ಷಕನಾಗಬೇಕು ಎನ್ನುವ ಕನಸಿತ್ತು. ಆದರೆ ಕಿತ್ತು ತಿನ್ನುವ ಬಡತನ ಅವರದು. ಅದಕ್ಕಾಗಿ ತಮ್ಮ ಮಕ್ಕಳನ್ನು ಶಿಕ್ಷಕರನ್ನಾಗಿಸಬೇಕು ಎನ್ನುವ ಕನಸು ಕಂಡರು.

ಅದರ ಫಲವೇ ನಮ್ಮ ಕುಟುಂಬದಲ್ಲಿ ಐವರು ಶಿಕ್ಷಕರು ಇದ್ದಾರೆ. ನಾನು, ನನ್ನ ಅಣ್ಣ, ನಮ್ಮ ಪತ್ನಿಯರು ಶಿಕ್ಷಕರಾಗಿದ್ದಾರೆ. ತಮ್ಮ ಶಿಕ್ಷಕ ನೇಮಕಾತಿ ಪರೀಕ್ಷೆ ಬರೆದಿದ್ದಾನೆ. ಆದೇಶ ಬಂದರೆ ಅವನೂ ಮೇಷ್ಟ್ರು. ಕನಸಿಗೆ ಜೀವ ತುಂಬಿದ ಟೈಲರಿಂಗ್‌ ವೃತ್ತಿಯನ್ನು ನಮ್ಮಪ್ಪ ಮುಂದುವರಿಸಿದ್ದಾರೆ.

ಮನೆ ನಿರ್ವಹಣೆಗೆ ನನ್ನ ಪತ್ನಿ ಸ್ವಾಲಿಹಾ ತಬಸ್ಸುಮ್ ಅವರ ಆದಾಯ ಬಳಕೆಯಾಗುತ್ತಿದೆ. ನನ್ನದೇನಿದ್ದರೂ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಬದುಕು ಇದೆ. ಶಿಕ್ಷಕ ವೃತ್ತಿಯಿಂದ ಬಂದ ಹಣವನ್ನು ಅದೇ ಕ್ಷೇತ್ರಕ್ಕೆ ಮತ್ತೆ ತೊಡಗಿಸುತ್ತೇನೆ. ಈ ಬದ್ಧತೆಯ ಫಲವೇ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌.

ನಮ್ಮ ಕುಟುಂಬದವರೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದವರು. ಹಾಗಾಗಿ ಆ ಶಾಲೆಗಳ ಮೇಲೆ ವಿಪರೀತ ಕಾಳಜಿ. ನಮ್ಮ ಮಕ್ಕಳೂ ಸರ್ಕಾರಿ ಶಾಲೆಯಲ್ಲೇ ಓದುತ್ತಿದ್ದಾರೆ.ಅಧಿಕಾರಿಯಾಗಬೇಕಿದ್ದವ ಅಕ್ಷರದ ಜಾಡು ಹಿಡಿದೆ...

ನಾನು ಎಂ.ಎ. ಬಿಇಡಿ ಮುಗಿಸಿದ್ದೇನೆ. 2007ರಲ್ಲಿ ಬರೆದ ಮೊದಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೇ ಪಾಸಾಗಿ ಹಾಲವರ್ತಿಯ ಸರ್ಕಾರಿ ಶಾಲೆಗೆ ಗಣಿತ ಮತ್ತು ವಿಜ್ಞಾನ ಶಿಕ್ಷಕನಾಗಿ ನೇಮಕ ಆದೆ. ಅದಕ್ಕೂ ಮುನ್ನ ಕೆಎಎಸ್‌ ಅಥವಾ ಸಿಐಡಿ ಅಧಿಕಾರಿ ಆಗಬೇಕು ಅಂದುಕೊಂಡಿದ್ದೆ. ಆದರೆ ಮನೆಯವರ ಆಸೆಯಂತೆ ಶಿಕ್ಷಕನಾದೆ. ಹಾಗಾಗಿ ಈ ಕೆಲಸದಲ್ಲಿದ್ದುಕೊಂಡು ಯಾವ ರೀತಿ ಸಮಾಜ ಸೇವೆ ಮಾಡಬೇಕು ಎಂದು ಯೋಚಿಸಿದೆ. ಆ ನಂತರ ನಾನು ಮೊದಲು ಮಕ್ಕಳಿಗೆ ಅಭ್ಯಾಸಕ್ಕೆ ಅವಶ್ಯವಿರುವ ಸಲಕರಣೆಗಳನ್ನು ನೀಡುತ್ತಿದ್ದೆ.

ಸ್ಮಾರ್ಟ್‌ ಕ್ಲಾಸ್‌ ಸಾಕಾರದ ಬಗೆ...
ಸ್ಮಾರ್ಟ್‌ ಕ್ಲಾಸ್‌ ಯೋಜನೆ ಮಾಡಬೇಕು ಅನಿಸಿತು. ಆಗ ಅಲ್ಲಿನ ಗ್ರಾಮಸ್ಥರು ಕೂಡಾ ನನಗೆ ಸಹಕಾರ ನೀಡಿದರು. ಅಲ್ಲಿಂದಲೇ ನನ್ನ ಸ್ಮಾರ್ಟ್‌ ಕ್ಲಾಸ್‌ ಯೋಜನೆ ಆರಂಭ ಆಯಿತು. 8 ತಿಂಗಳ ಹಿಂದೆ ಕೊಪ್ಪಳದ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆದೆ. ಇಲ್ಲಿಯೂ ಕೂಡಾ ಎಲ್ಲ ಶಿಕ್ಷಕರು ನನಗೆ ಬಹಳಷ್ಟು ಸಹಕಾರ ನೀಡಿದರು.

ದಿನ ಪತ್ರಿಕೆಗಳಲ್ಲಿ ಬರುವ ವಿಜ್ಞಾನಕ್ಕೆ ಸಂಬಂಧಿಸಿದ ಅಂಕಣದಲ್ಲಿ ಬರುವ ಎಲ್ಲ ಪತ್ರಿಕೆಗಳಲ್ಲಿನ ಪ್ರತಿಯನ್ನು ಕತ್ತರಿಸಿ ಅವುಗಳನ್ನು ಸಂಗ್ರಹಿಸಿ, ನೋಟ್‌ ಪುಸ್ತಕಕ್ಕೆ ಅಂಟಿಸುತ್ತೇನೆ. ಇದನ್ನು ಮಕ್ಕಳಿಗೆ ಬೋಧಿಸುತ್ತೇನೆ ಮತ್ತು ತೋರಿಸುತ್ತೇನೆ. ಇದರಿಂದ ಅವರಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನ ವೃದ್ಧಿಸುತ್ತದೆ.

ಈ ಸ್ಮಾರ್ಟ್‌ ಕ್ಲಾಸ್‌ಗೆ ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌, ಪರದೆ ಮತ್ತು ಧ್ವನಿವರ್ಧಕವನ್ನು ಬಳಸುತ್ತೇನೆ. ಈ ರೀತಿಯಾಗಿ ಬೋಧನೆ ಮಾಡುವುದರಿಂದ ಮಕ್ಕಳಿಗೆ ಸಿನಿಮಾ ನೋಡಿದ ಅನುಭವ ಆಗುತ್ತದೆ. ಇದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯಲು ಸಹಕಾರಿ. ಅಲ್ಲದೇ ನನ್ನ ಸ್ಮಾರ್ಟ್‌ ಕ್ಲಾಸ್‌ನಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಚಿತ್ರಗಳು ಮತ್ತು ವಿವಿಧ ಅಳತೆಯ ಕಲರ್‌ ಚಾರ್ಟ್‌ಗಳು ಇವೆ. ಇವುಗಳನ್ನು ಮಕ್ಕಳು ದಿನನಿತ್ಯ ನೋಡುವುದರಿಂದ ಅವರಿಗೆ ಆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ.
ಸಂಬಳ ಹೆಚ್ಚಿತು,

ಯೋಜನೆ ಬೆಳೆಯಿತು...
ಈ ಸ್ಮಾರ್ಟ್‌ ಕ್ಲಾಸ್‌ನ ಎಲ್ಲ ಸಲಕರಣೆ ಹಾಗೂ ಚಿತ್ರ ಪಟಗಳನ್ನು ಖರೀದಿಸಲು ₹ 1.80 ಲಕ್ಷ ವೆಚ್ಚ ಆಗಿದೆ. ಇದಕ್ಕೆ ಸರ್ಕಾರದ ಯಾವುದೇ ಅನುದಾನ ಬಳಕೆ ಮಾಡಿಲ್ಲ. ಮೊದಲು ನನ್ನ ಸಂಬಳ ಬರೀ ₹ 8 ಸಾವಿರ ಇತ್ತು. ಆದರೆ ಈಗ ₹ 35 ಸಾವಿರ ಆಗಿದೆ. ಸಂಬಳ ಹೆಚ್ಚಾದಂತೆ ಯೋಜನೆಯ ಪ್ರಮಾಣವೂ ದೊಡ್ಡದಾಯಿತು. ಇಲ್ಲಿನ ಪರಿಕರಗಳೆಲ್ಲವನ್ನೂ ನನ್ನ ಸಂಬಳದಲ್ಲಿಯೇ ಖರೀದಿಸಿದ್ದೇನೆ. 

ಮೊದಲು ಥರ್ಮಾಕೋಲ್‌ನಿಂದ ಚಿತ್ರಗಳನ್ನು ತಯಾರಿಸುತ್ತಿದ್ದೆ. ಆದರೆ ಅದು ಮಳೆಯ ನೀರು ಬಿದ್ದಾಗ ನೆನೆದು ಹರಿದುಹೋಗುತ್ತಿತ್ತು. ಆದರೆ ಈಗ ಕಲರ್‌ ಪ್ರಿಂಟ್‌ ಲ್ಯಾಮಿನೇಷನ್‌ ಮಾಡಿಸುತ್ತೇನೆ. ಅದಕ್ಕೆ ದಪ್ಪನೆಯ ರಟ್ಟನ್ನು ಅಂಟಿಸಿ ಗೋಡೆಗೆ ನೇತು ಹಾಕುತ್ತೇನೆ. ನನಗೆ 4 ತಿಂಗಳ ಹಿಂದೆ ಸ್ಮಾರ್ಟ್‌ ಕ್ಲಾಸ್‌ಗೆ ಪ್ರತ್ಯೇಕ ಕೊಠಡಿ ನೀಡಿದ್ದಾರೆ.

ವಿಜ್ಞಾನದ ಸ್ಮಾರ್ಟ್‌ ಕ್ಲಾಸ್‌...
6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯನ್ನು ಅಳವಡಿಸಲಾಗಿದೆ. ದಿನಕ್ಕೆ 3 ವಿಜ್ಞಾನ ವಿಷಯದ ಸ್ಮಾರ್ಟ್‌ ಕ್ಲಾಸ್‌ ನಡೆಯುತ್ತದೆ. ಅಲ್ಲದೇ ಬೇರೆ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ಅಲ್ಲದೇ ವರ್ಷಕ್ಕೆ ₹ 10 ಸಾವಿರ ನೋಟ್‌ ಪುಸ್ತಕಕ್ಕೆ ದೇಣಿಗೆ ನೀಡುತ್ತೇನೆ.

ನಾನು ಪ್ರೌಢಶಾಲಾ ಶಿಕ್ಷಕ. ಆದರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಮಕ್ಕಳಿಗೆ ಬೋಧಿಸುತ್ತೇನೆ. ಅದಕ್ಕಾಗಿ ದಿನನಿತ್ಯ ಶಾಲೆ ಮುಗಿದ ಬಳಿಕ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇನೆ. ಬಿಡುವಿನ ಸಮಯದಲ್ಲಿ ಚಿತ್ರ ಪಟಗಳನ್ನು ತಯಾರಿಸುತ್ತೇನೆ. ತರಬೇತಿ ನೀಡುತ್ತೇನೆ. ನಾನು ಎಸ್ಸೆಸ್ಸೆಲ್ಸಿ ಬಡ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ನಡೆಸುತ್ತೇನೆ.

ಈ ಶಿಬಿರದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದ ಪಠ್ಯವನ್ನು ಬೋಧಿಸಲಾಗುತ್ತದೆ. ಒಬ್ಬನಿಂದಲೇ ಇಡೀ ಪಠ್ಯವನ್ನು ಮುಗಿಸಲು ಆಗುವುದಿಲ್ಲ. ಅದಕ್ಕಾಗಿ ನನ್ನ ಶಿಕ್ಷಕ ಸ್ನೇಹಿತರಿಗೆ ಒಂದೊಂದು ಪಾಠ ಹೇಳಲು ಕೇಳಿಕೊಳ್ಳುತ್ತೇನೆ. ಹಾಗಾಗಿ 10ರಿಂದ 15 ಜನ ಶಿಕ್ಷಕರು ಶಿಬಿರದಲ್ಲಿ ಯಾವುದೇ ಅಪೇಕ್ಷೆ ಇಲ್ಲದೆ ಬೋಧಿಸುತ್ತಾರೆ. ಈ ಶಿಬಿರ ಮಸೀದಿಯ ಕೊಠಡಿಯಲ್ಲಿ ನಡೆಯುತ್ತದೆ. ಈ ಶಿಬಿರದಲ್ಲಿ ಎಲ್ಲ ಬಡ ವಿದ್ಯಾರ್ಥಿಗಳು ಭಾಗವಹಿಸಬಹುದು.

ಹೀಗೂ ಮಾಡಬಹುದು...
ಎಲ್ಲ ಶಿಕ್ಷಕರು ತಿಂಗಳಿಗೆ ₹ 10ರಂತೆ ತೆಗೆದಿಡಬೇಕು. ಇದರಿಂದ ವರ್ಷಕ್ಕೆ 120 ತಮ್ಮ ವಿಷಯಕ್ಕೆ ಸಂಬಂಧಪಟ್ಟ ಚಿತ್ರಪಟಗಳನ್ನು ಖರೀದಿಸಬಹುದು. ಸಣ್ಣ ಪ್ರಯತ್ನದಲ್ಲಿ ಹೆಜ್ಜೆ ಹಾಕಿದ್ದೇನೆ. ಕ್ರಮಿಸಬೇಕಾದ ದಾರಿ ಇನ್ನೂ ದೂರವಿದೆ. ನನ್ನ ಮೊಬೈಲ್‌:9742156396 –ಆಬಿದ್‌ ಹುಸೇನ್‌, ಶಿಕ್ಷಕ, ಸರ್ಕಾರಿ ಕೇಂದ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೊಪ್ಪಳ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT