ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕರಂಗನಾಥಕೆರೆಗೆ ಕೊಳಚೆ ನೀರು

Last Updated 5 ಸೆಪ್ಟೆಂಬರ್ 2017, 7:00 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ ಜೆಎಸ್ಎಸ್ ಮಹಿಳಾ ಕಾಲೇಜಿಗೆ ಹೊಂದಿಕೊಂಡಂತಿರುವ ಪುರಾತನ ಚಿಕ್ಕರಂಗನಾಥಕೆರೆಗೆ ಹೊಸ ಬಡಾವಣೆಯ ಕೊಳಚೆ ನೀರು ಹರಿದುಬಂದು ಕಲುಷಿತಗೊಂಡಿದೆ. ಸಾಂಕ್ರಾಮಿಕ ರೋಗಗಳ ಉತ್ಪತ್ತಿಯ ತಾಣವಾಗಿ ಬದಲಾಗಿದೆ.

ಕೊಳ್ಳೇಗಾಲ ಸರ್ವೆ ನಂಬರ್ 596/ಎನಲ್ಲಿ 84.66 ಎಕರೆ ಪ್ರದೇಶ ವಿಸ್ತೀರ್ಣವುಳ್ಳ ಚಿಕ್ಕರಂಗನಾಥಕೆರೆಯ ನೀರನ್ನು ಕೊಳ್ಳೇಗಾಲ, ಸಿದ್ದಯ್ಯನಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಬೆಳೆ ಬೆಳೆಯಲು ಆಶ್ರಯಿಸಿಕೊಂಡಿದ್ದಾರೆ.

ಕೃಷಿ ಜಮೀನು, ಜಾನುವಾರು ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಸಿಹಿನೀರು ಒದಗಿಸುತ್ತಿದ್ದ ಚಿಕ್ಕರಂಗನಾಥ ಕೆರೆ ಒತ್ತುವರಿಯಿಂದ ತನ್ನ ಗಾತ್ರ ಕಳೆದುಕೊಂಡಿದ್ದರೆ, ಹೊಸ ಬಡಾವಣೆಯ ಮನೆಗಳ ಶೌಚಾಲಯದ ಕಲುಷಿತ ನೀರು ಹರಿದು ಬಂದು ಕಲುಷಿತಗೊಂಡಿದೆ. ಇದರಿಂದ ಕೆರೆ ನೀರು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಕೆರೆ ಒತ್ತುವರಿಯ ಬಗ್ಗೆ 2010ರಲ್ಲಿ ಪರಿಶೀಲಿಸಿ ಅಳತೆಕಾರ್ಯ ನಡೆಸಲಾಗಿತ್ತು. ಜತೆಗೆ, ಕೆರೆಯ ಸುತ್ತಲೂ ಟ್ರೆಂಚ್ ತೆಗೆಯಲಾಗಿತ್ತು. ಸಾಕಷ್ಟು ಹಣ ಖರ್ಚು ಮಾಡಿ ಕೆರೆಯ ಹೂಳು ತೆಗೆಸಲಾಗಿತ್ತು. ಆದರೆ, ಮತ್ತೆ ಒತ್ತುವರಿ ಮಾಡಲಾಗಿದೆ.

ನೀರಾವರಿ ಇಲಾಖೆ ಅಧಿಕಾರಿಗಳೂ ಕೆರೆಯ ನಿರ್ವಹಣೆಯ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಕೆರೆಯಂಗಳದಲ್ಲೇ ನಗರದ ವಿವಿಧ ಬಡಾವಣೆಗಳ ಕೊಳಚೆ ನೀರು ಸಾಗಿಸುವ ಒಳಚರಂಡಿಯ ಮ್ಯಾನ್‌ಹೋಲ್‌ಗಳು ನಿರ್ಮಾಣಗೊಂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ನೀರು ತುಂಬಿಕೊಂಡಾಗ ಕೆರೆಯ ವಿಹಂಗಮ ನೋಟ ಜನರನ್ನು ಆಕರ್ಷಿಸುತ್ತದೆ. ದಾನಿಗಳಿಂದ ನಿರ್ಮಾಣವಾದ ಈ ಕೆರೆಯನ್ನು ಸರ್ಕಾರ ಅಭಿವೃದ್ಧಿಪಡಿಸಲು ಮುಂದಾಗದೆ ಅವಸಾನದ ಅಂಚಿಗೆ ತಳ್ಳುತ್ತಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಾರೆ.

‘ಕೆರೆಯಲ್ಲಿ ದುರ್ಗಂಧಯುಕ್ತ ನೀರು ಸಂಗ್ರಹವಾಗಿದೆ. ಚರಿತ್ರೆಯ ಕುರುಹು ಸಾರುವ ಕೆರೆಯ ಆವರಣದಲ್ಲೇ ನಿರ್ಮಿಸಲಾಗುವ ಒಳಚರಂಡಿ ಮ್ಯಾನ್‌ಹೋಲ್ ಮತ್ತು ಪೈಪ್‌ಲೈನ್ ತೆರವುಗೊಳಿಸುವಂತೆ ಒತ್ತಾಯಿಸಿದ್ದೇವೆ ಈ ಬಗ್ಗೆ ಕ್ರಮವಹಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯಸರ್ಕಾರ ಜಲಮೂಲ ಮತ್ತು ಕೆರೆಗಳ ಸಂರಕ್ಷಣೆ, ಅಭಿವೃದ್ಧಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿ ರಚಿಸಿದ್ದು, ಕೆರೆಯ ಸರ್ವೇ ಮಾಡಲು ಕ್ರಮವಹಿಸುವಂತೆ ಸೂಚಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಎ.ಜೆ. ರೂಪಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT