ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಓಣಂ; ಆಕರ್ಷಿಸಿದ ಪೂಕಳಂ

Last Updated 5 ಸೆಪ್ಟೆಂಬರ್ 2017, 7:07 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಕೇರಳಿಗರು ಸಂಭ್ರಮದಿಂದ ಓಣಂ ಆಚರಿಸಿದರು. ಮನೆಯ ಮುಂದೆ ಹೂವಿನ ರಂಗೋಲಿ ಹಾಕಿ ಸಂತಸ ಪಟ್ಟರು. ರಂಗೋಲಿ ಮಧ್ಯದಲ್ಲಿ ಹಣತೆಯಿಟ್ಟು ಬೆಳಗಿಸಿದರು.

ಕೇರಳದವರು ಕೆಲಸ ಮಾಡುವ ಕಚೇರಿಗಳಲ್ಲೂ ರಂಗೋಲಿ ಚಿತ್ತಾರ ಕಾಣಿಸಿತು. ಮಡಿಕೇರಿ ಕೆನರಾ ಬ್ಯಾಂಕ್‌ ಮುಖ್ಯ ಕಚೇರಿಯಲ್ಲಿ ರಂಗೋಲಿಯ ಆಕರ್ಷಣೆ ಕಂಡುಬಂತು. ಇನ್ನು ಹೊರವಲಯದ ನವೋದಯ ಶಾಲೆಯಲ್ಲೂ ಓಣಂ ಸಂಭ್ರಮ ಮನೆ ಮಾಡಿತ್ತು. ಭಾನುವಾರ ರಾತ್ರಿಯಿಂದಲೇ ವಿದ್ಯಾರ್ಥಿಗಳು ಹೂವಿನ ರಂಗೋಲಿ ಬಿಡಿಸಿ ಸಂಭ್ರಮಿಸಿದರು.

ಇನ್ನು ಕೆಲವು ಸಂಘ– ಸಂಸ್ಥೆಗಳು ಸಮು ದಾಯ ಬಾಂಧವರಿಗೆ ಕ್ರೀಡಾಕೂಟ ಆಯೋಜಿಸಿದ್ದರು. ಮನೆಯಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ಸವಿಯುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದರು.

ಸಡಗರದ ಆಚರಣೆ
ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆಲೆಸಿರುವ ಮಳೆಯಾಳಿಗರು ಕೇರಳದ ನಾಡಹಬ್ಬ, ಭಾವೈಕ್ಯತೆಯ ಪ್ರತೀಕವಾದ ಓಣಂ ಹಬ್ಬವನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಮನೆಯ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ(ಪೊಕಳಂ), ಮಧ್ಯೆ ಬೆಳಗುವ ಹಣತೆ, ಸುಣ್ಣ ಬಣ್ಣ ಬಳಿದು ಶೃಂಗರಿಸಿದ ಮನೆ, ಅಡುಗೆ ಮನೆಯಲ್ಲಿ ಘಮ್ಮೆನ್ನುವ ಭಕ್ಷ್ಯಭೋಜನಗಳು, ಸಂಪ್ರಾದಾಯಿಕ ಉಡುಗೆ ಧರಿಸಿದ್ದ ಮಹಿಳೆಯರ ಹುರುಪು ಹಬ್ಬದ ಸಂದರ್ಭ ಕಂಡುಬಂದ ವಿಶೇಷತೆಗಳು.

ಗುಡ್ಡೆಹೊಸೂರು, ಏಳನೇ ಹೊಸ ಕೋಟೆ, ಹಾರಂಗಿ, ಚಿಕ್ಕತ್ತೋರು, ಕೂಡಿಗೆ, ಸಿದ್ಧಲಿಂಗಪುರ, ಅರಸಿಣ ಕುಪ್ಪೆ, ನಾಕುರು-ಶಿರಂಗಾಲ, ನಂಜರಾಯಪಟ್ಟಣ ಮತ್ತಿತರರ ಗ್ರಾಮ ಗಳಲ್ಲಿ ಮಳೆಯಾಳಿಗರು ಸಾಂಪ್ರಾಯಿಕ ಹೊಸ ಉಡುಗೆ ತೊಡುಗೆ ಧರಿಸಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪರಸ್ಪರ ಸಿಹಿ ವಿತರಿಸುವ ಮೂಲಕ ಓಣಂ ಹಬ್ಬದ ಶುಭಾಶಯ ಹಂಚಿಕೊಂಡರು.

ಸಿಂಹಮಾಸದಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಕೇರಳಿಯರಿಗೆ ಈ ಸಿಂಹಮಾಸ ಚಿನ್ನದ ಮಾಸವಾಗಿದ್ದು, ಸಿಂಹ ಮಾಸದಲ್ಲಿ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ.

ಪ್ರತಿವರುಷ ತಿರುಓಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರಲ್ಲಿ ಮಾನೆ ಮಾಡಿದೆ. ಅದಕ್ಕಾಗಿ ಮನೆಗಳ ಅಂಗಳದಲ್ಲಿ ಹೂವಿನ ರಂಗೋಲಿ ಹಾಕಿ, ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ಬಲಿಚಕ್ರವರ್ತಿಗಾಗಿ ಕಾಯು ವುದು ಇಂದಿಗೂ ರೂಢಿಯಲ್ಲಿದೆ. ಜಾತಿ, ಮತ,ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಮಳೆಯಾಳಿಗರು ಓಣಂ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT