ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲುಪಿತು ನೂರು ಅಡಿ: ಬೆಳೆಗೆ ನೀರು ಕೊಡಿ

Last Updated 5 ಸೆಪ್ಟೆಂಬರ್ 2017, 7:21 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಎಸ್‌. ಜಲಾಶಯದ ನೀರಿನ ಮಟ್ಟ ನೂರು ಅಡಿ ದಾಟಿದ್ದು ಒಂದು ಬೆಳೆ ಬೆಳೆದುಕೊಳ್ಳಲು ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಬೇಕು ಎಂಬ ಒತ್ತಡ ಜಿಲ್ಲೆಯಾದ್ಯಂತ ಹೆಚ್ಚಾಗಿದೆ. ಸೋಮವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 100. 20 ಅಡಿಗೆ ತಲುಪಿದ್ದು ಜಿಲ್ಲೆಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿಶ್ವೇಶ್ವರಯ್ಯ ನಾಲೆಗಳಲ್ಲಿ 20 ದಿನಗಳ ಕಾಲ ಒಂದು ಕಟ್ಟು ನೀರು ಹರಿಸಲಾಗಿದೆ. ಆದರೆ ಕಬ್ಬ, ಭತ್ತ ಬೆಳೆಯದಂತೆ ಕಟ್ಟಪ್ಪಣೆಯೊಂದಿಗೆ ನೀರು ಹರಿಸಿರುವ ಕಾರಣ ರೈತರು ಅಸಮಾಧಾನಗೊಂಡಿದ್ದರು.

ಸರ್ಕಾರ ಕೆರೆ,ಕಟ್ಟೆ, ಕೊಳವಿಬಾವಿಗಳ ಮರುಪೂರಣಗೊಳಿಸಲು ನೀರು ಹರಿಸಿತ್ತು. ಕೆಲವು ರೈತರು ಸರ್ಕಾರದ ಆದೇಶ ಮೀರಿ ಭತ್ತ ಬೆಳೆಯುಲು ಮುಂದಾಗಿದ್ದರು. ಮಳೆ ಕೊರತೆ ಉಂಟಾಗಿ ಬೆಳೆ ನಷ್ಟವಾದರೆ ಯಾವುದೇ ಕಾರಣಕ್ಕೂ ನಷ್ಟ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿತ್ತು.

ಈಗ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ನೀರು ಸಂಗ್ರಹವಾಗಿರುವ ಕಾರಣ ಬೆಳೆಗೆ ನೀರು ಕೊಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ‘ಅಗತ್ಯ ಇರುವಷ್ಟು ನೀರು ಬಂದರೆ ಉನ್ನತ ಮಟ್ಟದ ಸಭೆ ಕರೆದು ಬೆಳೆ ಬೆಳೆದುಕೊಳ್ಳಲು ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಿಳಿಸಿದ್ದರು. ಅದರಂತೆ ನಾಲೆಗಳಿಗೆ ನೀರು ಹರಿಸಿ ರೈತರ ಹಿತ ಕಾಯಬೇಕು‌’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ ಆಗ್ರಹಿಸಿದರು.

‘ಕಳೆದ ವರ್ಷ ಜಲಾಶಯದ ನೀರಿನ ಮಟ್ಟ 96 ಅಡಿ ಇದ್ದಾಗ ಸರ್ಕಾರ ಬೆಳೆ ಬೆಳೆದುಕೊಳ್ಳಲು ನೀರು ಹರಿಸಿತ್ತು. ಈ ವರ್ಷ ನೀರು 100 ಅಡಿ ತಲುಪಿದ್ದರೂ ಬೆಳೆ ಬೆಳೆಯಲು ನೀರು ಹರಿಸಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗ ತುರ್ತಾಗಿ ನೀರು ಹರಿಸಿದರೆ ಹಿಂಗಾರು ಭತ್ತ, ರಾಗಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ನಿತ್ಯ ತಮಿಳುನಾಡಿಗೆ ಸರ್ಕಾರ ನೀರು ಹರಿಸುತ್ತಿದೆ. ಆದರೆ ರೈತರ ಬೆಳೆಗೆ ನೀರು ಕೊಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ದುಃಖ ತಂದಿದೆ’ ಎಂದು ರೈತಸಂಘದ (ಮೂಲ ಸಂಘಟನೆ) ಮುಖಂಡ ಕೆ.ಎಸ್‌.ಸುಧೀರ್‌ ಕುಮಾರ್‌ ಹೇಳಿದರು.

‘ಜಿಲ್ಲೆಯಲ್ಲಿ ಭತ್ತ ಬೆಳೆಯುವ ಕಾಲ ಮುಗಿದಿದೆ. ಜೂನ್‌, ಜುಲೈ, ಆಗಸ್ಟ್‌ ವೇಳೆಯಲ್ಲಿ ನೀರು ಬಂದರೆ ಮಾತ್ರ ಭತ್ತ ಬೆಳೆಯಲು ಸಾಧ್ಯ. ರಾಜ್ಯ ಸರ್ಕಾರ ಕಳೆದ ತಿಂಗಳು ನೀರು ಹರಿಸಿದಾಗ ಬೆಳೆ ಬೆಳೆದುಕೊಳ್ಳಲು ಅವಕಾಶ ನೀಡಬೇಕಾಗಿತ್ತು. ಆದರೆ ಈಗ ಇನ್ನೂ ಎರಡು ಕಟ್ಟು ನೀರು ಬಿಡುವ ಕುರಿತು ಮಾತನಾಡುತ್ತಿದ್ದಾರೆ. ಈಗ ನೀರು ಕೊಟ್ಟರೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ರೈತರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೋಸ ಮಾಡಿದೆ’ ಎಂದು ರೈತ ಮುಖಂಡ ಹನಿಯಂಬಾಡಿ ನಾಗರಾಜು ತಿಳಿಸಿದರು.

‘ಮುಕ್ತಿ’ ಭತ್ತ ಬೆಳೆಯಿರಿ: ‘ಈಗ ಭತ್ತ ಬೆಳೆಯಲು ತಡವಾಗಿದೆ. ರೈತರು ಕಬ್ಬು ಬೆಳೆಯಲು ಮುಂದಾದರೆ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಹೀಗಾಗಿ ಅರೆ ನೀರಾವರಿ ಬೆಳೆ ಬೆಳೆದುಕೊಳ್ಳಬಹುದು. ಮುಕ್ತಿ ಭತ್ತದ ತಳಿ ಬೆಳೆಯಲು ಇದು ಸಕಾಲ. ಆದರೆ ಜಿಲ್ಲೆಯಲ್ಲಿ ಮುಕ್ತಿ ತಳಿಯ ಬಿತ್ತನೆ ಬೀಜದ ಕೊರತೆ ಇದೆ. ಬಿತ್ತನೆ ಬೀಜ ದೊರೆಯುವ ಬಗ್ಗೆ ಮಾಹಿತಿ ಸಂಗ್ರಹಿಸಿ ರೈತರಿಗೆ ತಿಳಿಸಲಾಗುವುದು’ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾಸುಲೋಚನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT