ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ಕಚೇರಿ ಎದುರು ಮುಳ್ಳಿನ ಗಿಡ ಹಾಕಿ ಧರಣಿ

Last Updated 5 ಸೆಪ್ಟೆಂಬರ್ 2017, 8:38 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಕೆರೆಗಳು ಹಾಗೂ ರಾಜಕಾಲುವೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಮುಳ್ಳಿನ ಗಿಡಗಳನ್ನು ಹಾಕಿ ಧರಣಿ ನಡೆಸಿದರು.

ಜಿಲ್ಲೆಯ ಕೆರೆಗಳಲ್ಲಿ ಬಹುಪಾಲು ಒತ್ತುವರಿಯಾಗಿದ್ದು, ನೀರಿನ ಸಮಸ್ಯೆ ಗಂಭೀರವಾಗಿದೆ. ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಕೊಟ್ಟಿದೆ. ಆದರೆ, ಅಧಿಕಾರಿಗಳು ಗುತ್ತಿಗೆದಾರರ ಜತೆ ಸೇರಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಧರಣಿನಿರತರು ಆರೋಪಿಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ರಾಜ್ಯದಲ್ಲೇ ಅತಿ ಹೆಚ್ಚು ಕೆರೆಗಳು ಜಿಲ್ಲೆಯಲ್ಲಿವೆ. ಆದರೆ, ಕೆರೆಗಳ ಸಂರಕ್ಷಣೆಯಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಖಾಸಗಿ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳ ಸದಸ್ಯರು ಕೆರೆ ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡ ಕಟ್ಟಿದ್ದಾರೆ. ಅಲ್ಲದೇ, ಲೇಔಟ್‌ಗಳನ್ನು ನಿರ್ಮಿಸಿದ್ದಾರೆ’ ಎಂದು ಹೇಳಿದರು.

ಕೆರೆ, ರಾಜಕಾಲುವೆಗಳ ಅಭಿವೃದ್ಧಿಗೆ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಬರುತ್ತಿದೆ. ಆದರೆ, ಕೆಲಸ ಮಾತ್ರ ಶೂನ್ಯ. ನಗರದ 5 ರಾಜಕಾಲುವೆಗಳನ್ನು ₹ 2 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲು ವರ್ಷದ ಹಿಂದೆ ಶಾಸಕರ ಆಪ್ತರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಆ ಗುತ್ತಿಗೆದಾರ ಶೇ 5ರಷ್ಟು ಕೆಲಸ ಮಾಡಿ ಬಿಲ್‌ ಪಡೆದಿದ್ದಾನೆ. ಅಧಿಕಾರಿಗಳು ಕಾಮಗಾರಿ ಪೂರ್ಣಗೊಳದಿದ್ದರೂ ಬಿಲ್‌ ಮಂಜೂರು ಮಾಡಿದ್ದಾರೆ ಎಂದರು.

ಮರಳು ದಂಧೆ: ಕೆರೆಗಳಲ್ಲಿ ಫಿಲ್ಟರ್‌ ಮರಳು ದಂಧೆ ನಡೆಯುತ್ತಿದೆ. ಅಲ್ಲದೇ, ಇಟ್ಟಿಗೆ ಕಾರ್ಖಾನೆಯವರು ಕೆರೆಗಳಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ನಗರಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೆರೆಗಳಲ್ಲಿ ಸುರಿಯಲಾಗುತ್ತಿದೆ. ಕೆರೆಗಳನ್ನು ರಕ್ಷಿಸಬೇಕಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೈಚೆಲ್ಲಿದ್ದಾರೆ ಎಂದು ಧರಣಿನಿರತರು ದೂರಿದರು.

10 ವರ್ಷಗಳಿಂದ ನಡೆದಿರುವ ಅನುದಾನ ದುರ್ಬಳಕೆ ಸಂಬಂಧ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ತಾಲ್ಲೂಕು ಕೇಂದ್ರದ ಸುತ್ತಲಿನ ಮೂರ್ನಾಲ್ಕು ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕು. ಕುಡಿಯುವ ನೀರಿನ ಯೋಜನೆಗೆ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಚಂದ್ರಪ್ಪ, ಸದಸ್ಯರಾದ ಉಮಾಗೌಡ, ವೆಂಕಟೇಶಪ್ಪ, ಚಂದ್ರಪ್ಪ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT