ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ವಿದ್ಯಾರ್ಥಿಗಳು ನೀರುಪಾಲು

Last Updated 5 ಸೆಪ್ಟೆಂಬರ್ 2017, 8:52 IST
ಅಕ್ಷರ ಗಾತ್ರ

ಮುಡಿಪು: ಓಣಂ ರಜೆಯಲ್ಲಿ ಇನೋಳಿ ನಡುಗುಡ್ಡೆಯ ಬಳಿ ನೇತ್ರಾವತಿ ನದಿ ತಟಕ್ಕೆ ವಿಹಾರಕ್ಕಾಗಿ ಬಂದಿದ್ದ ಮೂವರು ವಿದ್ಯಾರ್ಥಿಗಳು ಸೋಮವಾರ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಅಡ್ಯಾರ್ ವಳಚ್ಚಿಲ್‍ನ ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್‌ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಬೆಳ್ತಂಗಡಿಯ ನಿಖಿಲ್(21) ಬಿಹಾರದ ಶುಭಂ (22) ಹಾಗೂ ಚಿತ್ರದುರ್ಗದ ಶ್ರೀರಾಮ್ (21) ಮೃತಪಟ್ಟವರು.

ಘಟನೆ ವಿವರ: ಓಣಂ ಪ್ರಯುಕ್ತ ಕಾಲೇಜಿಗೆ ರಜೆ ಇದ್ದುದರಿಂದ 8 ವಿದ್ಯಾರ್ಥಿಗಳ ತಂಡದವರು ಇನೋಳಿಯ ನಡುಗುಡ್ಡೆ ಪರಿಸರದ ನೇತ್ರಾವತಿ ನದಿ ತಟಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅಲ್ಲಿಯ ಬಂಡೆಯೊಂದರಲ್ಲಿ ಕುಳಿತಿದ್ದ ವಿದ್ಯಾರ್ಥಿಗಳಲ್ಲಿ ಶ್ರೀರಾಮ ಬಂಡೆಯಿಂದ ಜಾರಿ ನೀರಿಗೆ ಉರುಳಿ ಬಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಈತನನ್ನು ರಕ್ಷಿಸಲು ಶುಭಂ ಮತ್ತು ವಿಕಿಲ್ ಎಂಬವರು ನೀರಿಗೆ ಇಳಿದಾಗ ನೀರಿನ ಸೆಳೆತ ವಿಪರೀತವಾಗಿದ್ದರಿಂದ ಮೂವರು ಕೂಡಾ ನೀರು ಪಾಲಾದರು ಎಂದು ತಿಳಿದು ಬಂದಿದೆ.

ಕೂಡಲೇ ಉಳಿದ ವಿದ್ಯಾರ್ಥಿಗಳು ಕಿರುಚಿದಾಗ ಸ್ಥಳೀಯರು ಬಂದು ಉಳಿದವರನ್ನುಅಪಾಯದಿಂದ ರಕ್ಷಿಸಿದ್ದಾರೆ. ‌ಶಾಹಿದ್ ಮಾರಿಪಳ್ಳ, ಇಮ್ರಾನ್ ಅರ್ಕುಲ, ಆಸೀಫ್ ಅರ್ಕುಲ, ಅರಫ್ ಅರ್ಕುಲ, ತೌಸಿಫ್ ಹಾಗೂ ಅವರ ನೇತೃತ್ವದ ಉತ್ತರ ಪ್ರದೇಶದ ತಂಡವು ಶ್ರಮ ವಹಿಸಿ ದೋಣಿಗಳ ಮೂಲಕ ಕಾರ್ಯಾಚರಣೆ ನಡೆಸಿ ನೀರುಪಾಲಾದ ಶವಗಳನ್ನು ಮೇಲಕೆತ್ತುವಲ್ಲಿ ಯಶಸ್ವಿಯಾಯಿತು.

ಅಗ್ನಿಶಾಮಕ ದಳ ಸೇರಿದಂತೆ ಎಸಿಪಿ ರಾಮ್‍ರಾವ್, ಕೊಣಾಜೆ ಪ್ರಭಾರ ಇನ್‍ಸ್ಪೆಕ್ಟರ್ ಶರೀಫ್, ಎಸ್‌ಐ ಸುಕುಮಾರ್, ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮೊದಲಾದವರು ಸ್ಥಳದಲ್ಲಿದ್ದರು.

ದೇವಸ್ಥಾನಕ್ಕೆಂದು ಬಂದಿದ್ದ ತಂಡ: ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಬೆಂಗಳೂರು ಸದಾಶಿವ ನಗರದ ಉಮೇಶ್ ಮೋರೆ ಪುತ್ರ ರೋಹಿತ್, ಕೋಟೆಕಾರು ಬೀರಿ ಮಾಡೂರಿನ ಕರುಣಾಕರ ಅವರ ಪುತ್ರ ವಿಕಾಸ್, ಸುಳ್ಯ ಗುತ್ತಿಗಾರು ನಿವಾಸಿ ಚಾಮಿಯ್ಯ ಪುತ್ರ ಇಂದ್ರೇಶ್, ಸುಳ್ಯ ವೀರಮಂಗಲದ ರೋನಿಗೋಯಸ್ ಪುತ್ರ ರಾಯ್ಸನ್ ಗೋಯಸ್ ಹಾಗೂ ಬೆಳಗಾವಿಯ ಉಮೇಶ್ ಮೋರ ಪುತ್ರ ಅಭಿಜಯ್ ಹಾಗೂ ನೀರು ಪಾಲಾದ ಮೂವರು ಸೇರಿ ಇನೋಳಿಯ ದೇವಂದ ಬೆಟ್ಟದ ಸೋಮನಾಥೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನಕ್ಕೆ ಹೋಗುವ ಮೊದಲು ಬಿಸಿಲು ಇದ್ದ ಕಾರಣ ಇಲ್ಲಿಯ ಬಂಡೆಯ ಮೇಲೆ ಕಾಲ ಕಳೆಯುತ್ತಿದ್ದೆವು ಎಂದು ಸಹಪಾಠಿ ವಿದ್ಯಾರ್ಥಿ ತಿಳಿಸಿದ್ದಾನೆ.

ಅಪಾಯಕಾರಿ ಪ್ರದೇಶ: ಇನೋಳಿಯ ನಡುಗುಡ್ಡೆ ಪ್ರದೇಶವಾಗಿದ್ದು ಸುಮಾರು ಮೂರು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಶ್ರೀನಿವಾಸ ಕಾಲೇಜಿನ ಮೂವರು ಸ್ನಾನಕ್ಕೆಂದು ಬಂದು ಒಬ್ಬ ನೀರುಪಾಲಾಗಿದ್ದರು. ಅಲ್ಲದೆ ಇನೊಳಿಯ ಸುಣ್ಣದ ಕಲ್ಲು ಎಂಬಲ್ಲಿ ಕಳೆದ ಐದಾರು ವರ್ಷಗಳ ಹಿಂದೆ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಈಜಲು ಬಂದು ಮೂವರು ನೀರುಪಾಲಾಗಿದ್ದರು ಎಂದು ಸ್ಥಳೀಯರಾದ ಲತೀಫ್‌ ಇನೋಳಿ ತಿಳಿಸಿದರು.

ಸ್ನಾನಕ್ಕಾದರೆ ಕರೆದುಕೊಂಡು ಹೋಗುವುದಿಲ್ಲ ಎಂದಿದ್ದ ಸಮದ್: ಇಲ್ಲಿ ದಿನನಿತ್ಯ ದೋಣಿಯಲ್ಲಿ ಜನರನ್ನು ಕರೆದುಕೊಂಡು ಹೋಗುವ ಸಮದ್ ಎಂಬವರು ವಿದ್ಯಾರ್ಥಿಗಳು ಬಂದಾಗ ಸ್ನಾನಕ್ಕೆ ಹೋಗುವುದಾದರೆ ಕರೆದುಕೊಂಡು ಹೋಗುವುದಿಲ್ಲ, ಆಗ ವಿದ್ಯಾರ್ಥಿಗಳು ದೇವಸ್ಥಾನಕ್ಕೆಂದು ಹೇಳಿದ್ದರು.

‘ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಕ್ಕೆ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ವಿಹಾರಕ್ಕೆಂದು ಬರುತ್ತಿದ್ದಾರೆ. ಅಲ್ಲದೆ ನದಿಯ ನೀರಲ್ಲಿ ಸ್ನಾನ ಮಾಡಬೇಡಿ ಎಂದು ಹೇಳಿದರೂ ಕೇಳುವುದಿಲ್ಲ. ಎಷ್ಟೋ ಜನರನ್ನು ಹಿಂದೆ ಕಳಿಸಿದ್ದೇವೆ. ಆದರೂ ಕಣ್ತಪ್ಪಿಸಿ ನೀರಿಗೆ ಇಳಿಯುತ್ತಾರೆ. ಆದ್ದರಿಂದ ಸ್ಥಳೀಯಾಡಳಿತ ಈ ಬಗ್ಗೆ ಇಲ್ಲಿ ವಿದ್ಯಾರ್ಥಿಗಳು, ಪ್ರವಾಸಿಗರು ನೀರಿಗಿಳಿಯದಂತೆ ಮುನ್ನಚೆರಿಕೆ ವಹಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ’ ಎಂದು ಸ್ಥಳೀಯರಾದ ಸಬೀರ್ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT