ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರದಿಂದ 11 ಕೆರೆ ಅಭಿವೃದ್ಧಿ

Last Updated 5 ಸೆಪ್ಟೆಂಬರ್ 2017, 8:59 IST
ಅಕ್ಷರ ಗಾತ್ರ

ಉಡುಪಿ: ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಏಕಕಾಲಕ್ಕೆ ಒಟ್ಟು 11 ಕೆರೆಗಳನ್ನು ₹2.84 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇವುಗಳಲ್ಲಿ ಕೆಲವು ಕಾಮಗಾರಿ ಅಂತಿಮ ಹಂತದಲ್ಲಿವೆ. ಇನ್ನೂ ಕೆಲವು ಕೆರೆಗಳ ಕಾಮಗಾರಿ ಭರದಿಂದ ಸಾಗಿವೆ.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಮಾರ್ಚ್‌, ಏಪ್ರಿಲ್ ತಿಂಗಳಿನಲ್ಲಿ ಜನರು ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಬಾವಿ ಹಾಗೂ ಕೊಳವೆ ಬಾವಿಗಳಲ್ಲಿಯೂ ನೀರಿಲ್ಲದೆ ಬತ್ತಿದ ಹಲವು ಉದಾಹರಣೆ ಇದೆ. ಆದ್ದರಿಂದ ಅಮೂಲ್ಯ ಆಸ್ತಿಯಾಗಿರುವ ಕೆರೆಗಳನ್ನು ರಕ್ಷಿಸುವುದು ಹಾಗೂ ಅಂತರ್ಜಲದ ಮಟ್ಟವನ್ನು ವೃದ್ಧಿಸುವುದಕ್ಕಾಗಿ ಕೆರೆಗಳ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಲಾಗಿದೆ.

ನಗರದ ಹಲವು ಕೆರೆಗಳು ಮೂಲ ಸ್ವರೂಪವನ್ನೇ ಕಳೆದುಕೊಂಡು ಮುಚ್ಚಿ ಹೋಗಿದ್ದವು. ಅಂತಹ ಕೆರೆಗಳನ್ನು ಸಹ ಗುರುತಿಸಲಾಗಿದೆ. ಒತ್ತುವರಿಯನ್ನೂ ಗುರುತಿಸಿ ತೆರವು ಮಾಡಿ ಸುಪರ್ದಿಗೆ ತೆಗೆದುಕೊಳ್ಳಲಾಗುತ್ತಿದೆ.

ಗೃಹ, ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್‌ ನಿರ್ಮಾಣ ನಕ್ಷೆಗೆ ಅನುಮೋದನೆ ನೀಡುವ ನಗರಾಭಿವೃದ್ಧಿ ಪ್ರಾಧಿಕಾರ ಅರ್ಜಿದಾರರಿಂದ ಕೆರೆ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸುತ್ತದೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸಂಗ್ರಹವಾಗುತ್ತದೆ. ಕೆರೆಗಳನ್ನು ಅಭಿವೃದ್ಧಿಪಡಿಸಲು ಮಾತ್ರ ಇದನ್ನು ಬಳಸಬೇಕು ಎಂಬ ನಿಯಮ ಇದೆ. ಅದರಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಅಭಿವೃದ್ಧಿಯಾಗುತ್ತಿರುವ ಕೆರೆಗಳು: ಶ್ರೀದೇವಿ ಭೂದೇವಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮುಂಭಾಗದ ಕೆರೆ ₹15 ಲಕ್ಷ, 76 ಬಡಗಬೆಟ್ಟು ಗ್ರಾಮದ ಕೆರೆ ₹25 ಲಕ್ಷ, ಕೊಡವೂರು ಗ್ರಾಮದ ಕಲ್ಮಾಡಿ ವಾರ್ಡಿನ ಬಂಕೇರಕಟ್ಟ ಸಮೀಪದ ಕೆರೆ ₹25 ಲಕ್ಷ, ಉದ್ಯಾವರ ಗ್ರಾಮದ ಸಾಲ್ಮರದಲ್ಲಿರುವ ಕೆರೆ ₹10.30 ಲಕ್ಷ, ಕೊರಂಗ್ರಪಾಡಿಯಲ್ಲಿರುವ ಕೆರೆ ₹25 ಲಕ್ಷ, ಕೊಡವೂರಿನ ಕಂಗಣಬೆಟ್ಟು ಕಂಗೂರು ಮಠದ ಸಮೀಪ ಇರುವ ಕೆರೆ ₹25 ಲಕ್ಷ, 76 ಬಡಗಬೆಟ್ಟು ಗ್ರಾಮದ ಕೊಳಂಬೆ ಶಾಂತಿನಗರದಲ್ಲಿರುವ ಕೆರೆ ₹13.85 ಲಕ್ಷ, ಹೆರ್ಗ ಗ್ರಾಮದಲ್ಲಿರುವ ಕಟ್ಟಿಂಗೇರಿ ಕೆರೆ ₹50 ಲಕ್ಷ, ಉದ್ಯಾವರ ಬಲಾಯಿಪಾದೆ ಪೆರ್ಲ ಕೆರೆ ₹30 ಲಕ್ಷ, ಕುತ್ಪಾಡಿ ಗರೋಡಿ ಸಮೀಪ ಇರುವ ಕೆರೆ ₹35 ಲಕ್ಷ, ಪಡುತೋನ್ಸೆ ಗ್ರಾಮದ ಕೋಡಿಕಂಡಾಳ ಬಬ್ಬುಸ್ವಾಮಿ ಕ್ಷೇತ್ರದ ಕೆರೆ ₹30 ಲಕ್ಷ.

‘ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆರೆ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನೀರಿನ ಮೂಲಗಳ ರಕ್ಷಣೆ ಇದರಿಂದ ಸಾಧ್ಯವಾಗಲಿದೆ. ಸರ್ಕಾರದ ಆಸ್ತಿಯನ್ನೂ ಉಳಿಸಿಕೊಂಡಂತಾಗುತ್ತದೆ’ ಎನ್ನುತ್ತಾರೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ನರಸಿಂಹಮೂರ್ತಿ.

‘ಮೊದಲು ಒಂದು ಸೆಂಟ್ಸ್ ಜಾಗಕ್ಕೆ ₹1 ಸಾವಿರ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಜನರಿಗೆ ಹೆಚ್ಚಿನ ಹೊರೆಯಾಗಬಾರದು ಎಂಬ ಕಾರಣಕ್ಕೆ ಅದನ್ನು ₹625ಕ್ಕೆ ಇಳಿಸಲಾಗಿದೆ. ಸಂಗ್ರಹವಾಗುವ ಎಲ್ಲ ಹಣವನ್ನು ಕೆರೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ₹2 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ದೋಣಿ ವಿಹಾರ ಸಹ ನಡೆಯುತ್ತಿದೆ. ದೋಣಿ ವಿಹಾರದ ಗುತ್ತಿಗೆದಾರರು ನೀಡುವ ಮೊತ್ತದಲ್ಲಿ ಅದನ್ನು ನಿರ್ವಹಣೆ ಮಾಡಲಾಗುತ್ತಿದೆ. ಪ್ರತಿ ದಿನ ನೂರಾರು ಮಂದಿ ವಾಯು ವಿಹಾರ ಮಾಡುತ್ತಾರೆ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT