ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಈ ಶಾಲೆ ಮುಂದೆ...

ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರಿ ಶಾಲೆ– ಕಾಲೇಜು ಎಂದರೆ ಬಹುತೇಕ ಪೋಷಕ ಹಾಗೂ ವಿದ್ಯಾರ್ಥಿಗಳಲ್ಲಿ ಅಸಡ್ಡೆಯ ಮನೋಭಾವ. ಗುಣಮಟ್ಟದ ಶಿಕ್ಷಣದ ಕೊರತೆ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಆಗುವುದಿಲ್ಲ ಎನ್ನುವ ದೂರುಗಳೇ ಹೆಚ್ಚು. ಇಂತಹ ಸಾಮಾನ್ಯ ದೂರುಗಳ ನಡುವೆಯೂ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಎಸ್ಎಸ್‌ಜೆವಿಪಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ಶಾಲೆಯಲ್ಲಿ ಅಧ್ಯಯನ ಮಾಡಿದ ಬಹುತೇಕ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯಲ್ಲೇ ಪ್ರಥಮ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಲು ಪೋಷಕರು ಆಸಕ್ತಿ ತೋರಿಸುವುದಿಲ್ಲ. ಆದರೆ, ನಮ್ಮ ಪ್ರೌಢಶಾಲೆಯಲ್ಲಿ 771 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇದು ಇಡೀ ಜಿಲ್ಲೆಯಲ್ಲಿಯೇ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡಿರುವ ಶಾಲೆಯಾಗಿ ಹೊರಹೊಮ್ಮಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯಿನಿ ಎಂ.ಶಶಿಕಲಾ.

1948ರಲ್ಲಿ ಆರಂಭ: ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ (ಎಸ್ಎಸ್‌ಜೆವಿಪಿ) ಅವರು ಪ್ರಯತ್ನದ ಫಲವಾಗಿ 1948ರಲ್ಲಿ ಈ ಶಾಲೆಯನ್ನು ಆರಂಭಿಸಲಾಯಿತು. ನಂತರ ದಿನಗಳಲ್ಲಿ ರಾಜ್ಯ ಸರ್ಕಾರ ಈ ಶಾಲೆ ನಡೆಸುತ್ತಾ ಬಂದಿದೆ. ಇದರಿಂದಾಗಿಯೇ ಈ ಶಾಲೆ ಎಸ್ಎಸ್‌ಜೆವಿಪಿ ಸರ್ಕಾರಿ ಪ್ರೌಢಶಾಲೆ ಎಂದು ಹೆಸರಾಗಿದೆ.

‘ಗುಣಮಟ್ಟದ ಶಿಕ್ಷಣ ಕೊಡುವುದರ ಜೊತೆಗೆ ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದಾ ಗಿಯೇ ನಮ್ಮ ಶಾಲೆಗೆ ತ್ಯಾವಣಿಗೆ, ನಲ್ಕುದರೆ, ಬೆಳ್ಳಿಗನಾಡು, ಮೆದಿಕೆರೆ, ದೊಡ್ಡಬ್ಬಿಗೆರೆ, ಕಾಕನೂರು, ಸೋಮ್ಲಾಪುರ, ಚನ್ನಾಪುರ, ಕೊಂಡದ ಹಳ್ಳಿ, ದೇವರಹಳ್ಳಿ, ನುಗ್ಗಿಹಳ್ಳಿ, ಸಿದ್ದಯ್ಯನಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ 700 ವಿದ್ಯಾರ್ಥಿಗಳು ಇಲ್ಲಿನ ಅಧ್ಯಯನಕ್ಕೆ ಬರುತ್ತಾರೆ. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು 625ರಲ್ಲಿ 619 ಅಂಕ ಗಳಿಸಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

ಸಂಪನ್ಮೂಲ ವ್ಯಕ್ತಿಗಳ ದೊಡ್ಡ ಬಳಗ: ಎಸ್ಎಸ್‌ಜೆವಿಪಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ವಿಷಯವಾರು ಸಂಪನ್ಮೂಲ ಶಿಕ್ಷಕರ ದೊಡ್ಡ ಬಳಗವೇ ಇಲ್ಲಿದೆ. ಈ ಶಾಲೆಯಲ್ಲಿ ಅಧ್ಯಯನ ಮಾಡಿದವರು ಇಲ್ಲಿಯೇ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಶಿಕ್ಷಕ ನಾಗೇಶ ನಾಯ್ಕ ಅವರು ರಾಜ್ಯ ಸಂಪನ್ಮೂಲ ಶಿಕ್ಷರಾಗಿದ್ದು, ಹೈದರಾಬಾದ್‌ನಲ್ಲಿ ತರಬೇತಿ ಪಡೆದಿರುತ್ತಾರೆ.

ಶಿಕ್ಷಕ ಫೈಜುಲ್ಲಾ ಅವರು ಬರೆದ ಕಥೆಯೊಂದು ಮಹಾರಾಷ್ಟ್ರ ರಾಜ್ಯದ ತೃತೀಯ ಭಾಷೆಯ ಪಠ್ಯದಲ್ಲಿ ಕಥೆಯಾಗಿ ಮುದ್ರಣವಾಗಿದೆ ಎಂದು ಮಾಹಿತಿ ನೀಡಿದರು ಶಿಕ್ಷಣಾಧಿಕಾರಿ ಜಿ.ಎಂ.ಬಸವಲಿಂಗಪ್ಪ.

ಈ ಶಾಲೆಯಲ್ಲಿ ಅಧ್ಯಯನ ಮಾಡಿದವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ದಾವಣಗೆರೆಯ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಸಿಇಒ ಆಗಿ ಸೇವೆ ಸಲ್ಲಿಸಿದ್ದ ಗಿರೀಶ್‌ ಅವರು ಇದೇ ಶಾಲೆಯ ವಿದ್ಯಾರ್ಥಿ. ಇವರೊಂದಿಗೆ ಅಧ್ಯಯನ ಮಾಡಿದವರು ವೈದ್ಯರು, ದಂತ ವೈದ್ಯರು, ಎಂಜಿನಿಯರ್‌, ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT