ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆಗಳ ತುಂಬಿಸಿ, ರೈತರ ಜೀವ ಉಳಿಸಿ’

Last Updated 5 ಸೆಪ್ಟೆಂಬರ್ 2017, 9:22 IST
ಅಕ್ಷರ ಗಾತ್ರ

ಮಾಯಕೊಂಡ: ಮಾಯಕೊಂಡದ ಕೆಂಚಾಲಪ್ಪನ ಕೆರೆ, ಹೊಸಕೆರೆ ಮತ್ತು ಹುಚ್ಚವ್ವನಹಳ್ಳಿ ಕೆರೆಗಳಿಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಿಂದ ಶೀಘ್ರ ನೀರು ಹರಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.

ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸಿ, ಅಡಿಕೆ ತೋಟ ಬದುಕಿಸಿಕೊಳ್ಳಲು ಹುಚ್ಚವ್ವನಹಳ್ಳಿ, ಎಚ್.ಬಸವಾಪುರ, ಮಾಯಕೊಂಡ ಮತ್ತು ಹೆದ್ನೆ, ರಾಂಪುರ ರೈತರು ಇನ್ನಿಲ್ಲದ ಯತ್ನ ನಡೆಸುತ್ತಿದ್ದಾರೆ. ಸಿರಿಗೆರೆ ಶ್ರೀಗಳು, ಶಾಸಕರಾದ ವಡ್ನಾಳ್ ರಾಜಣ್ಣ, ಕೆ.ಶಿವಮೂರ್ತಿ ಬಳಿ ನಿಯೋಗ ತೆರಳಿ, ಮನವೊಲಿಕೆಗೆ ಚರ್ಚೆ ನಡೆಸಿದ್ದಾರೆ.

22 ಕೆರೆ ಏತ ನೀರಾವರಿ ಯೋಜನೆಯಲ್ಲಿ ಸಮೀಪದ ಕೊಡಗನೂರು, ಕೊಗ್ಗನೂರು, ಆನಗೋಡು, ಅಣಜಿ ಕೆರೆಗೆ ನೀರು ಬರುತ್ತಿದ್ದರೂ ಮಾಯಕೊಂಡ ಮತ್ತು ಹುಚ್ಚವ್ವನಹಳ್ಳಿ ಕೆರೆ ಒಣಗಿ ಬಣಗುಡುತ್ತಿವೆ. ಹಾಗಾಗಿ, ಅಂತರ್ಜಲ ವೃದ್ಧಿಗೆ ಈ ಕೆರೆಗಳನ್ನೇ ನೆಚ್ಚಿರುವ ಹುಚ್ಚವ್ವನಹಳ್ಳಿ, ಎಚ್.ಬಸವಾಪುರ, ಮಾಯಕೊಂಡ, ಹೆದ್ನೆ, ರಾಂಪುರ ಮತ್ತಿತರ ಗ್ರಾಮಸ್ಥರ ನಿದ್ದೆಗೆಡಿಸಿದೆ.

ಮಳೆಗಾಲ ಮುಗಿಯುತ್ತಾ ಬಂದರೂ ಕೆರೆಗಳು ನೀರು ಕಾಣದೆ ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ. ಮುಂದಿನ ವರ್ಷ ತೋಟ ಉಳಿಸಿಕೊಳ್ಳಲು ಕೆರೆಗಳಿಗೆ ನೀರು ತುಂಬಿಸುವುದು ಬಿಟ್ಟರೆ ಅನ್ಯಮಾರ್ಗವಿಲ್ಲ ಎನ್ನುತ್ತಾರೆ ರೈತರು.

ಈ ಭಾಗದ ರೈತರು ಸಿರಿಗೆರೆ ಶ್ರೀಗಳ ಬಳಿ ಅಳಲು ತೋಡಿಕೊಂಡು, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಮನವಿ ಮಾಡಿದ್ದಾರೆ. ಮಾಯಕೊಂಡ ಮತ್ತು ಹುಚ್ಚವನಹಳ್ಳಿ ಕೆರೆ ಯೋಜನೆಯಿಂದ ಕೈಬಿಟ್ಟ ಬಗ್ಗೆ ಆತಂಕ ತೋಡಿಕೊಂಡಿದ್ದಾರೆ. ಶ್ರೀಗಳು ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ ಅವರೊಂದಿಗೆ ಚರ್ಚಿಸಿ, ಕಾಮಗಾರಿಗೆ ಶೀಘ್ರ ಚಾಲನೆ ನೀಡಲು ಸಲಹೆ ಮಾಡಿದರು ಎಂದು ನಿಯೋಗದಲ್ಲಿದ್ದ ಗ್ರಾಮಸ್ಥರು ತಿಳಿಸಿದ್ದಾರೆ.

ಶಾಸಕ ವಡ್ನಾಳ್ ರಾಜಣ್ಣ ಬಳಿ ನಿಯೋಗ ತೆರಳಿ ಚರ್ಚಿಸಿದಾಗ, ಮಾಯಕೊಂಡದ ಕೆಂಚಾಲಪ್ಪನ ಕೆರೆ ಮತ್ತು ಹುಚ್ಚವನಹಳ್ಳಿ ಕೆರೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಸೇರಿವೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ’ ಎಂದು ನಿಯೋಗದಲ್ಲಿದ್ದ ಕಲ್ಲೇಶ್, ರುದ್ರೇಶ್, ಮೂರ್ತಿ, ತಿಪ್ಪಜ್ಜ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT