ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದಲೇ ಕಂಪೆನಿ ಸ್ಥಾಪಿಸಿ ಮಾರುಕಟ್ಟೆ ಆರಂಭಕ್ಕೆ ಯೋಜನೆ

Last Updated 5 ಸೆಪ್ಟೆಂಬರ್ 2017, 9:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: 2020ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಂದಲೇ ಕಂಪೆನಿಗಳನ್ನು ಸ್ಥಾಪಿಸಿ ಮಾರುಕಟ್ಟೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಕೆ.ಎನ್‌. ಶ್ರೀನಿವಾಸಪ್ಪ ಹೇಳಿದರು.

ತಾಲ್ಲೂಕಿನ ರಾಜಘಟ್ಟ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ರೈತರಿಂದ ಸ್ಥಾಪನೆಯಾಗಿರುವ ಕಂಪೆನಿಗಳು ಬೀಜ,ಗೊಬ್ಬರ,ಕೀಟನಾಶಕ ಎಲ್ಲವನ್ನು ರೈತರಿಗೆ ನೇರವಾಗಿ ಮಾರಾಟ ಮಾಡಬೇಕು. ಇದರಿಂದ ರೈತರಿಗೆ ಕಡಿಮೆ ಬೆಲೆಗೆ ಗುಣಮಟ್ಟದ ಬೀಜ, ಗೊಬ್ಬರ ದೊರೆಯಲು ಸಹಕಾರಿಯಾಗಲಿದೆ ಎಂದರು.

ಸಹಕಾರಿ ತತ್ವದ ಅಡಿಯಲ್ಲಿ ಸ್ಥಾಪನೆಯಾಗಿರುವ ರೈತ ಕಂಪೆನಿಗಳು ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಕೃಷಿಯಲ್ಲಿ ಇವತ್ತು ಸಾಕಷ್ಟು ಆಧುನಿಕ ವಿಧಾನಗಳು ಹಾಗೂ ಯಾಂತ್ರಿಕರಣ ಆಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಅಗತ್ಯ ಇರುವ ತರಬೇತಿ, ಮಾಹಿತಿಗಳನ್ನು ಕೃಷಿ ವಿಜ್ಞಾನ ಕೇಂದ್ರದಿಂದ ವಸತಿ ಸಹಿತ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.

ರೈತರು ಸೂಕ್ತ ತರಬೇತಿಗಳನ್ನು ಪಡೆಯುವ ಮೂಲಕ ಕೃಷಿಯನ್ನು ಲಾಭದಾಯಕ ಮಾಡಬೇಕು ಎಂದು ಹೇಳಿದರು. ತಾಲ್ಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಸುಬ್ಬಣ್ಣ ಮಾತನಾಡಿ, ‘ಇಡೀ ದೇಶದಲ್ಲಿ ರೈತ ಕಂಪೆನಿಗಳನ್ನು ಸ್ಥಾಪನೆ ಮಾಡುವ ಮೂಲಕ ಕೃಷಿಯನ್ನು ಉದ್ಯಮದ ರೀತಿಯಲ್ಲಿ ಬೆಳೆಸಲು ಉದ್ದೇಶಿಸಲಾಗಿದೆ’ ಎಂದರು.

ಮುಖಂಡರಾದ ಕೋಡಿ ನರಸಿಂಹಮೂರ್ತಿ ಮಾತನಾಡಿ, ‘ತರಕಾರಿ ಮಾರುಕಟ್ಟೆಯಲ್ಲಿ ರೈತರಿಂದ ಶೇ 10 ಕಮಿಷನ್‌ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕೃತ ರಶೀದಿಯನ್ನು ವರ್ತಕರು ರೈತರಿಗೆ ನೀಡುತ್ತಿಲ್ಲ. ಚಿಕ್ಕಬಳ್ಳಾಪುರ ಸೇರಿದಂತೆ ಪೂರ್ಣ ರಾಜ್ಯದಲ್ಲಿ ಇಲ್ಲದ ವ್ಯವಸ್ಥೆ ದೊಡ್ಡಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಅನುಸೂಯಮ್ಮ, ರಾಜಘಟ್ಟ ವಿಶ್ವಕುಂಡಲಿ ಆಶ್ರಮದ ಉಮಾಮಹೇಶ್ವರತೀರ್ಥ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಮುನೇಗೌಡ ಹಾಜರಿದ್ದರು.

ಜೆಡಿಎಸ್‌ ಜಿಲ್ಲಾ ಕಾರ್ಯದರ್ಶಿ ಆರ್‌.ಚಿದಾನಂದ್‌, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್‌, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟನಾರಾಯಣಪ್ಪ, ಆರ್‌.ಸಿ.ಶಿವಣ್ಣ, ಅಶೋಕ್‌, ಅಶ್ವತ್ಥಪ್ಪ, ರೈತ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎನ್‌. ಬಾಬುರಾಜು, ಅಧ್ಯಕ್ಷ ಡಿ.ಭೈರೇಗೌಡ, ಉಪಾಧ್ಯಕ್ಷೆ ಬಿ.ಎಸ್‌.ತುಂಗಭದ್ರ, ಗೌರವ ಅಧ್ಯಕ್ಷ ಜಿ.ಜಯರಾಮಯ್ಯ, ಪ್ರದಾನ ಕಾರ್ಯದರ್ಶಿ ಎಲ್‌.ಆರ್‌. ನಂಜುಂಡಗೌಡ, ಖಜಾಂಚಿ ಎಸ್‌.ರಾಜಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT