ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಕರ ಮೆಚ್ಚುಗೆ ಗಳಿಸುವತ್ತ ಜಿಎಸ್‌ಟಿ

Last Updated 5 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಕೆಜಿಎಸ್‌ಟಿ) ಜಾರಿಗೆ ಬಂದು ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ಜಿಎಸ್‌ಟಿಯನ್ನು ಭಾರಿ ಹುರುಪಿನಿಂದ ಮತ್ತು ಕುತೂಹಲದಿಂದ ಸ್ವಾಗತಿಸಿದ ಮತ್ತು ಒಂದು ರೀತಿಯಲ್ಲಿ ಇದರ ನೇರ ‘ಫಲಾನುಭವಿ’ಗಳಾದ ವರ್ತಕರು ನಿಧಾನವಾಗಿ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ. ಪರೋಕ್ಷ ತೆರಿಗೆ ವ್ಯವಸ್ಥೆಯೊಂದರಲ್ಲಿ ಆಮೂಲಾಗ್ರ ಬದಲಾವಣೆ ತರುವ ಮಹಾ ಕೆಲಸದಲ್ಲಿ ಉದ್ಭವಿಸಿದ ಗೊಂದಲಗಳು ಬಹುಮಟ್ಟಿಗೆ ನಿವಾರಣೆಯಾಗಿ ವ್ಯಾಪಾರ-ವಹಿವಾಟುಗಳು ಎಂದಿನಂತೆ ಸಹಜ ಸ್ಥಿತಿಗೆ ಬರುತ್ತಿವೆ.

ಈಗ ‘ಜಿಎಸ್‌ಟಿ’ಯ ಕುರಿತು ವರ್ತಕರಲ್ಲಿ ಸಕಾರಾತ್ಮಕ ಮನೋಭಾವನೆಗಳು ಗೋಚರಿಸುತ್ತಿವೆ. ವ್ಯಾಟ್‌ ಕಾಯ್ದೆ ಪದ್ಧತಿಯಲ್ಲಿ ಎದುರಿಸುತ್ತಿದ್ದ ಕೆಲವು ಗಂಭೀರ ಸಮಸ್ಯೆಗಳನ್ನು ಜಿಎಸ್‌ಟಿ ನಿವಾರಿಸಿರುವುದೇ ಇದಕ್ಕೆ ಮುಖ್ಯ ಕಾರಣ. ವರ್ತಕರ ಬಹು ಬೇಡಿಕೆಯಂತೆ ಜಿಎಸ್‌ಟಿಯಲ್ಲಿ ನೋಂದಣಿ ನೀಡಿಕೆ ಪ್ರಕ್ರಿಯೆ ಬಹಳ ಸರಳ ಗೊಳಿಸಲಾಗಿದೆ.   ಸಂಪೂರ್ಣ ವಿದ್ಯುನ್ಮಾನದಲ್ಲಿ ನಡೆಯುವ ಈ ಪ್ರಕ್ರಿಯೆ ಪೂರ್ಣ ಪಾರದರ್ಶಕವಾಗಿದೆ. ನೋಂದಣಿಗಾಗಿ ಅರ್ಜಿ ಸಲ್ಲಿಸಿದ ಕೇವಲ 3 ದಿನಗಳಲ್ಲಿ ನೋಂದಣಿ ನೀಡಲಾಗುತ್ತಿದೆ. ವರ್ತಕರನ್ನು ತೆರಿಗೆ ವ್ಯಾಪ್ತಿಗೆ ಕರೆತರುವ ಈ ಪ್ರಮುಖ ಮತ್ತು ಮಹತ್ವಪೂರ್ಣ ಕೆಲಸದಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲಾಗಿದೆ. ನೋಂದಣಿ ಈಗ ಸಂಪೂರ್ಣ ಉಚಿತವಾಗಿದ್ದು ವ್ಯಾಟ್‌ ಕಾಯ್ದೆಯಲ್ಲಿದ್ದಂತೆ ಈಗ ಯಾವುದೇ ನೋಂದಣಿ ಶುಲ್ಕ, ಭದ್ರತಾ ಠೇವಣಿ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಮೊದಲಿನಂತೆ ನೋಂದಣಿ ಪಡೆಯಲು ಈಗ ಸ್ಥಳೀಯ ವ್ಯಾಟ್‌ ಕಚೇರಿಗಳಿಗೆ ಅಲೆಯಬೇಕಾದ ಅಗತ್ಯವೂ ಇಲ್ಲ.  ಮನೆ, ಕಚೇರಿಯಲ್ಲಿಯೇ ಕುಳಿತು ನೋಂದಣಿ ಅರ್ಜಿ ಸಲ್ಲಿಸಿದರೆ ತಾವಿರುವಲ್ಲಿಯೇ ನೋಂದಣಿ ಸಂಖ್ಯೆ, ನೋಂದಣಿ ಪ್ರಮಾಣಪತ್ರ ಪಡೆಯಬಹುದು.

ಜಿಎಸ್‌ಟಿ ಅಂತರ್ಜಾಲ ತಾಣ ಪ್ರವೇಶಿಸಲು ಅಗತ್ಯವಾಗಿರುವ ಬಳಕೆದಾರರ ಸಂಖ್ಯೆ ಮತ್ತು ರಹಸ್ಯ ಸಂಖ್ಯೆಗಳು ವರ್ತಕರ  ಮೊಬೈಲ್‌ ಮತ್ತು ಇ–ಮೇಲ್‌ಗೆ ಬರುತ್ತವೆ. ಜಿಎಸ್‌ಟಿ ಜಾರಿಯಾದ ಜುಲೈ 1 ರಿಂದ ಇಲ್ಲಿಯವರೆಗೆ ಒಟ್ಟು 10,000 ರಷ್ಟು ದೊಡ್ಡ ಪ್ರಮಾಣದಲ್ಲಿ ವರ್ತಕರು ಜಿಎಸ್‌ಟಿಗೆ ಹೊಸದಾಗಿ ನೋಂದಾಯಿತರಾಗಿದ್ದಾರೆ.

ಬಹುತೇಕ ನಿರ್ಬಂಧ ರದ್ದು

ಈ ಹಿಂದಿನ ವ್ಯಾಟ್‌ ವ್ಯವಸ್ಥೆಯಲ್ಲಿ ಅಂತರರಾಜ್ಯ ವ್ಯಾಪಾರ–ವಹಿವಾಟಿನ ಮೇಲಿದ್ದ ಬಹುತೇಕ ನಿರ್ಬಂಧಗಳನ್ನು ಜಿಎಸ್‌ಟಿಯಲ್ಲಿ ತೆಗೆದು ಹಾಕಲಾಗಿದೆ. ಅಂತರರಾಜ್ಯ ಕ್ರಮದಲ್ಲಿ ಸರಕು ಮತ್ತು ಸೇವೆಗಳ ತಡೆರಹಿತ ಮುಕ್ತ ಚಲನೆಗೆ ಅವಕಾಶ ಮಾಡಿಕೊಡಲಾಗಿದೆ. ಜೂನ್‌,30 2017 ರ ಮಧ್ಯರಾತ್ರಿಯೇ ರಾಜ್ಯದ ಗಡಿಭಾಗದಲ್ಲಿದ್ದ ಎಲ್ಲ ಒಳ-ಹೊರ ತನಿಖಾ ಠಾಣೆಗಳನ್ನು ಮುಚ್ಚಲಾಗಿದೆ. ಆ ಮೂಲಕ ದಾಖಲೆಗಳ ಪರಿಶೀಲನೆ ರೂಪದಲ್ಲಿ ವರ್ತಕರಿಗೆ ಇಲ್ಲಿ ಆಗುತ್ತಿದ್ದ ಕಿರಿಕಿರಿ ಮತ್ತು ಸರಕು ಸಾಗಣೆಯಲ್ಲಿ ಉಂಟಾಗುತ್ತಿದ್ದ ವಿಳಂಬವನ್ನು ತಪ್ಪಿಸಲಾಗಿದೆ. ವರ್ತಕ ಸಮೂಹವು ಜಿಎಸ್‌ಟಿಯತ್ತ ಆಕರ್ಷಿತರಾಗಲು ಇದು ಮುಖ್ಯ ಕಾರಣಗಳಲ್ಲಿ ಒಂದು.

ದೇಶದಲ್ಲಿ ಎಲ್ಲಿಯೇ ಸರಕುಗಳನ್ನು ಖರೀದಿಸಿದರೂ ಹೂಡುವಳಿ ತೆರಿಗೆ ಜಮೆ (ಸರಕು ಮತ್ತು ಸೇವೆಗಳನ್ನು ಖರೀದಿಸುವಾಗ ಪಾವತಿಸುವ ತೆರಿಗೆ) ಪಡೆಯುವ ಸೌಲಭ್ಯ ನೀಡಲಾಗಿದೆ. ಇದು ವ್ಯಾಟ್‌ ಕಾಯ್ದೆಯಲ್ಲಿ ಇರಲಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ವರ್ತಕರು ರಾಜ್ಯದೊಳಗೇ ಸರಕುಗಳನ್ನು ಖರೀದಿಸುತ್ತಿದ್ದರು. ಹೊರ ರಾಜ್ಯಗಳಿಂದ ಸರಕುಗಳನ್ನು ಖರೀದಿಸಿದವರು ಹೂಡುವಳಿ ತೆರಿಗೆ ಜಮೆ  ಸಿಗದೆ ನಷ್ಟಕ್ಕೊಳಗಾಗುತ್ತಿದ್ದರು.

ರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆಯ   ಧ್ಯೇಯೋದ್ದೇಶಗಳೊಂದಿಗೆ ಜಾರಿಗೆ ಬಂದಿರುವ ಜಿಎಸ್‌ಟಿ, ಅಂತರರಾಜ್ಯ ವಹಿವಾಟಿನ ಮೇಲಿದ್ದ ಇಂಥಹ ನಿರ್ಬಂಧಗಳನ್ನು ಕೈಬಿಟ್ಟಿದ್ದರಿಂದ ವರ್ತಕರಿಗೆ ವರದಾನವಾಗಿ ಪರಿಣಮಿಸಿದೆ. ಅಲ್ಲದೆ ಅಂತರರಾಜ್ಯ ವಹಿವಾಟಿಗೆ ಸಂಬಂಧ ಜೋಡಿಸಿಕೊಂಡಿದ್ದ ನಮೂನೆ-ಸಿ, ಎಚ್‌, ಎಫ್, ಇ-1, ಇ-2  ಶಾಸನಬದ್ಧ ನಮೂನೆಗಳ ಸಮಸ್ತ ಸಂಕಟಗಳನ್ನು ಒಂದೇ ಏಟಿಗೆ ಕಿತ್ತುಹಾಕಿದ್ದರಿಂದ ವರ್ತಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವ್ಯಾಟ್‌ ವ್ಯವಸ್ಥೆಯಲ್ಲಿ ಗಣಕ ಸಂಬಂಧಿ ತಾಂತ್ರಿಕ ಕಾರಣಗಳಿಂದಾಗಿ ಈ ನಮೂನೆಗಳ ನೀಡಿಕೆ ಮತ್ತು ಪಡೆಯುವಿಕೆಯಲ್ಲಿ ವರ್ತಕರು ಸಾಕಷ್ಟು ಪರಿಶ್ರಮಪಡುತ್ತಿದ್ದರು. ಕೆಲವು ವರ್ತಕರಂತೂ ಮನಸ್ಸಿನ ಸಮತೋಲನ ಕಳೆದುಕೊಂಡು ತಮ್ಮ ರಕ್ತದೊತ್ತಡ ಹೆಚ್ಚಿಸಿಕೊಂಡಿದ್ದರು. ಈ ವಿಷಯದಲ್ಲಿ ಏಜೆಂಟರು  ಇದರ ಪ್ರಯೋಜನ ತೆಗೆದುಕೊಳ್ಳುತ್ತಿದ್ದರು.ಇದನ್ನೆಲ್ಲಾ ನಿವಾರಿಸಿದ ಜಿಎಸ್‌ಟಿಗೆ ಎಲ್ಲರೂ ಬೆನ್ನು ತಟ್ಟಬೇಕಾಗಿದೆ!

ಈ ಹಿಂದಿನ ಕಾಯ್ದೆ ಪದ್ಧತಿಯಲ್ಲಿ ವ್ಯಾಟ್‌ ಕಾಯ್ದೆ, ಕೇಂದ್ರ ಮಾರಾಟ ತೆರಿಗೆ ಕಾಯ್ದೆ, ಪ್ರವೇಶ ತೆರಿಗೆ, ವಿಲಾಸ ತೆರಿಗೆ, ಮನರಂಜನಾ ತೆರಿಗೆ-ಇತ್ಯಾದಿ ಈ ಎಲ್ಲ ಪರೋಕ್ಷ ತೆರಿಗೆಗಳ ಲೆಕ್ಕಪತ್ರಗಳನ್ನು (ರಿಟರ್ನ್ಸ್‌) ಪ್ರತ್ಯೇಕವಾಗಿ ನಿರ್ವಹಿಸಬೇಕಾಗುತ್ತಿತ್ತು. ಲೆಕ್ಕಪತ್ರ ವರದಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕಾಗಿತ್ತು. ಲೆಕ್ಕಪರಿಶೋಧನೆ ಸಮಯದಲ್ಲಿ ಲೆಕ್ಕದ ಪುಸ್ತಕಗಳನ್ನು ಅಧಿಕಾರಿಗಳ ಮುಂದೆ ಕಾಯ್ದೆವಾರು ಪ್ರತ್ಯೇಕವಾಗಿ ಹಾಜರುಪಡಿಸಬೇಕಾಗಿ ಬರುತ್ತಿತ್ತು. ಇದನ್ನೆಲ್ಲಾ ಮಾಡಲು ಸಾಕಷ್ಟು ಶ್ರಮ ಮತ್ತು ಹಣ ಖರ್ಚಾಗುತ್ತಿತ್ತು. ವರ್ತಕರು ಪರೋಕ್ಷವಾಗಿ ಶೋಷಣೆಗೆ ಒಳಗಾಗುತ್ತಿದ್ದರು. ಈಗ ಇದೆಲ್ಲ ತಪ್ಪಿದೆ. ಜಿಎಸ್‌ಟಿ ಕಾಯ್ದೆಯಡಿಯಲ್ಲಿ ಮಾತ್ರ ಲೆಕ್ಕವಿಟ್ಟು ಲೆಕ್ಕಪತ್ರ ವರದಿ ಸಲ್ಲಿಸಿದರೆ ಸಾಕು. ಇದರಿಂದಾಗಿ ಬಹು ಕಾಯ್ದೆ ಲೆಕ್ಕ ಬರೆದು ಬಸವಳಿದಿದ್ದ ವರ್ತಕರಿಗೆ ನೆಮ್ಮದಿ ತಂದಿದೆ. ಈಗಿನ ವ್ಯವಸ್ಥೆಯಲ್ಲಿ ಒಂದಿಷ್ಟು ಗಣಕ ಜ್ಞಾನ ಹೊಂದಿರುವ ಸಾಮಾನ್ಯ ವರ್ತಕರೂ ತಮ್ಮ ವ್ಯಾಪಾರ-ವಹಿವಾಟಿನ ಲೆಕ್ಕಪತ್ರವನ್ನು ತಾವೇ ನಿರ್ವಹಿಸಿಕೊಳ್ಳಬಹುದು.

ಸುಲಭ ತೆರಿಗೆ ಪಾವತಿ

ಜಿಎಸ್‌ಟಿಯಲ್ಲಿ ತೆರಿಗೆ ಸಂದಾಯದ ವಿಧಾನವನ್ನೂ ಸುಗಮಗೊಳಿಸಲಾಗಿದೆ. ತೆರಿಗೆ ಬಾಧ್ಯತಾ ಖಾತೆ, ಹೂಡುವಳಿ ತೆರಿಗೆ ಖಾತೆ ಮತ್ತು ನಗದು ಖಾತೆಯೆಂದು ವೈಜ್ಞಾನಿಕ ಮತ್ತು ಅತ್ಯಂತ ಪ್ರಾಯೋಗಿಕವಾಗಿ 3 ಖಾತೆಗಳ ವ್ಯವಸ್ಥೆ ಮಾಡಲಾದೆ.

ಜಿಎಸ್‌ಟಿಎನ್‌ ಅಂತರ್ಜಾಲ ತಾಣದಲ್ಲಿ ಸ್ವಯಂಚಾಲಿತವಾಗಿ ನಿರ್ವಹಣೆಗೊಳ್ಳುವ ಈ ವಿದ್ಯುನ್ಮಾನ ಖಾತೆಗಳು ತೆರಿಗೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಹುಮಟ್ಟಿಗೆ ನೀಗಿಸುವ ಸ್ವರೂಪದಲ್ಲಿವೆ. ನಗದು ಖಾತೆಗೆ ವರ್ತಕರು ಹಣ ಜಮಾ ಮಾಡಿದರೆ ಲೆಕ್ಕಪತ್ರವರದಿ ಸಲ್ಲಿಸುವ ಸಮಯದಲ್ಲಿ ಬರುವ ತೆರಿಗೆ ಬಾಧ್ಯತೆಗೆ ತಕ್ಕಂತೆ ಅದು ಸ್ವಯಂಚಾಲಿತವಾಗಿ ಹೊಂದಿಕೆಯಾಗಿ ಸರಕಾರಕ್ಕೆ ತೆರಿಗೆ ಸಂದಾಯವಾಗುತ್ತದೆ.

ವ್ಯಾಟ್‌ ಕಾಯ್ದೆಯಲ್ಲಿದ್ದಂತೆ ಸಿಟಿಡಿ ಸಂಖ್ಯೆ, ಚಲನ, ಧನಾದೇಶ, ಹುಂಡಿ ಇತ್ಯಾದಿಗಳ ಸಂಖ್ಯೆ ಮತ್ತು ತೆರಿಗೆ ಅವಧಿಯನ್ನು ಕಣ್ತಪ್ಪಿನಿಂದ ತಪ್ಪಾಗಿ ನಮೂದಿಸಿ ಆಗುತ್ತಿದ್ದ ಸಮಸ್ಯೆಗಳು ಈಗ ಆಗುವುದಿಲ್ಲ. ವರ್ತಕರು ತಮ್ಮ ಕೈಯಲ್ಲಿ ಹಣವಿದ್ದಾಗ ಮುಂಗಡವಾಗಿ ಈ ನಗದು ಖಾತೆಗೆ ಹಣ ಜಮೆ ಮಾಡಬಹುದು. ಸಣ್ಣ ವರ್ತಕರಿಗೆ ಸಹಾಯವಾಗಲಿ ಎಂಬ ಕಾರಣಕ್ಕಾಗಿ 10,000 ರೂಪಾಯಿವರೆಗಿನ ತೆರಿಗೆ ಸಂದಾಯವನ್ನು ಬ್ಯಾಂಕಿನಲ್ಲಿ ಚಲನ ತುಂಬಿ ನಗದು,ಧನಾದೇಶ ಅಥವಾ ಹುಂಡಿಯ ಮೂಲಕ ಪಾವತಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೀಗೆ ಪಾವತಿಸಿದ ಮೊತ್ತವೂ ಸ್ವಯಂಚಾಲಿತವಾಗಿ ವರ್ತಕರ ನಗದು ಖಾತೆಗೆ (ಕ್ಯಾಷ್‌ ಲೆಡ್ಜ್‌ರ್‌) ಜಮಾ ಆಗುತ್ತದೆ. ಒಂದು ನಯೆಪೈಸೆಯೂ ಎಲ್ಲಿಯೂ ತಪ್ಪಿಸಿಕೊಳ್ಳುವುದಿಲ್ಲ. ಹೀಗಾಗಿ ಜಿಎಸ್‌ಟಿಯ ಈ ಸುಲಭ ತೆರಿಗೆ ಪಾವತಿ ವಿಧಾನವೂ ವರ್ತಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಚ್ಚುವರಿ ಕಾಲಾವಕಾಶ

ಇದರೊಂದಿಗೆ ಜಿಎಸ್‌ಟಿ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿರುವ ವರ್ತಕರಿಗೆ ಹೊರೆಯಾಗುತ್ತದೆಂಬ ಕಾರಣಕ್ಕೆ ಜುಲೈ  ಮತ್ತು ಆಗಸ್ಟ ಎರಡು ತಿಂಗಳ ಲೆಕ್ಕಪತ್ರ ವರದಿ ಸಲ್ಲಿಸಲು ಕ್ರಮವಾಗಿ ಒಂದು ತಿಂಗಳು, 10 ಹತ್ತು ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ಜುಲೈ ತಿಂಗಳ ನಮೂನೆ ಜಿಎಸ್‌ಟಿಆರ್-1, 2 ಮತ್ತು 3 ಗಳನ್ನು ಕ್ರಮವಾಗಿ ಆಗಸ್ಟ್‌- ತಿಂಗಳ  10, 15 ಮತ್ತು 20 ನೇ ತಾರೀಕಿ ಒಳಗೆ ಸಲ್ಲಿಸಬೇಕಿತ್ತು. ಕರದಾತರಿಗೆ ಅನುಕೂಲ ಮಾಡುವ ದಿಸೆಯಲ್ಲಿ ಇದನ್ನು ಸಪ್ಟೆಂಬರ್‌ ತಿಂಗಳಲ್ಲಿ ಕ್ರಮವಾಗಿ  ದಿನಾಂಕ 5, 11 ಮತ್ತು 15 ಕ್ಕೆ ವಿಸ್ತರಿಸಲಾಗಿದೆ. ಇದೇ ರೀತಿ ಆಗಸ್ಟ್‌ ತಿಂಗಳಿಗೂ ಹತ್ತು ದಿನಗಳ ಹೆಚ್ಚುವರಿ ಸಮಯಾವಕಾಶ ನೀಡಲಾಗಿದೆ.

ಸೆಪ್ಟೆಂಬರ್‌ರಿಂದ ಯಥಾವತ್ತಾಗಿ ಕೆಜಿಎ್‌ಟಿ ಕಾಯ್ದೆಯ ಕಲಂ 37, 38 ಮತ್ತು 39 ರ ಪ್ರಕಾರ ಲೆಕ್ಕಪತ್ರವರದಿಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಬೇಕಾಗುತ್ತದೆ. ಆದರೆ, ಸರ್ಕಾರದ ತೆರಿಗೆ ಸಂಗ್ರಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಬಾರದೆಂಬ ಕಾರಣಕ್ಕಾಗಿ  ಜುಲೈ ಮತ್ತು ಆಗಸ್ಟ್‌  ತಿಂಗಳುಗಳಿಗೆ ನಮೂನೆ 3ಬಿಯಲ್ಲಿ ಲೆಕ್ಕಪತ್ರ ವರದಿ ಸಲ್ಲಿಸಿ ತೆರಿಗೆ ಸಂದಾಯ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಜುಲೈತಿಂಗಳ ಲೆಕ್ಕಪತ್ರ ವರದಿ ಸಲ್ಲಿಸಲು ಆಗಸ್ಟ್‌ 25 ಕೊನೆಯ ದಿನವಾಗಿತ್ತು. ಹೀಗೆ ಜಿಎಸ್‌ಟಿ ಜಾರಿಯಾದ ದಿನದಿಂದ ಎರಡು ತಿಂಗಳುಗಳಿಗೆ ಸೀಮಿತವಾಗಿ ಹೆಚ್ಚುವರಿ ಸಮಯಾವಕಾಶ ಸಿಕ್ಕಿದ್ದು ವರ್ತಕರಿಗೆ ಗಣಕಯಂತ್ರ ಮುಂತಾದ ಸಾಧನ ಸಲಕರಣೆಗಳನ್ನು ಹೊಂದಿಸಿಕೊಳ್ಳಲು ಉಪಯುಕ್ತವಾಗಿದೆ. ಇದರಿಂದ ಜಿಎಸ್‌ಟಿಯಲ್ಲಿ ಮೂರು, ಮೂರು ರಿಟರ್ನ್ಸ್‌ ಸಲ್ಲಿಸಬೇಕು ಎಂದು ಆರಂಭದಲ್ಲಿ ದಿಗಿಲುಗೊಂಡಿದ್ದ ವ್ಯಾಪಾರಿ ಸಮುದಾಯ ಈಗ ತುಸು ನಿರಾಳವಾಗುವಂತಾಗಿದೆ.

ಚುರುಕು ಜಾಲತಾಣ

ಇಂಥಹ ಕ್ರಮಗಳೊಂದಿಗೆ ಆಗೊಮ್ಮೆ ಈಗೊಮ್ಮೆ ಸಣ್ಣ-ಪುಟ್ಟ ದೋಷಗಳನ್ನು ಹೊರತುಪಡಿಸಿದರೆ ಜಿಎಸ್‌ಟಿ ಜಾಲತಾಣ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದೆ. ಆ ಮೂಲಕ ಇದು ವಣಿಕರ ಒಂದು ದೊಡ್ಡ ತಲೆನೋವನ್ನು ದೂರಮಾಡಿದೆ. ಇಲ್ಲವಾದರೆ ಅವರು ಗಂಟೆಗಟ್ಟಲೇ ಗಣಕ ಪರದೆಯ ಮೇಲೆ ಜಾಲತಾಣ ಮಿಸುಕಾಡುವುದನ್ನು ಕಾಯುತ್ತ ಕುಳಿತಿರಬೇಕಾಗುತ್ತಿತ್ತು. ಈಗ ಜಾಲತಾಣ ಚಾಲಾಕಿತನದಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ವರ್ತಕರ ಗಣಕಾಧಾರಿತ ಕೆಲಸಗಳಾದ ಪಾವತಿ, ಲೆಕ್ಕಪತ್ರ ವರದಿ ಸಲ್ಲಿಕೆ,ರಸೀದಿಗಳ ದಾಖಲೀಕರಣಗಳು ಜೋರಾಗಿ ಆಗುತ್ತಿದ್ದು ವರ್ತಕರು ತುಸು ನಿರುಮ್ಮಳರಾಗಿದ್ದಾರೆ.

ಜಿಎಸ್‌ಟಿಯಡಿಯಲ್ಲಿ ವರ್ತಕರಿಗೆ ನೀಡಲಾಗುತ್ತಿರುವ ಗುರುತಿನ ಸಂಖ್ಯೆ(ಜಿಎಸ್‌ಟಿಐಎನ್) ಜತೆಗೆ ಪ್ಯಾನ್‌ ಜೋಡಿಸಿರುವುದು ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಸಂಗ್ರಹಕ್ಕೆ ಕಾರಣವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈ ಕಾರಣಕ್ಕಾಗಿಯೇ ಕೃಷ್ಣನ ಲೆಕ್ಕ ಬರೆಯುತ್ತಿದ್ದವರಲ್ಲಿ ಈಗಾಗಲೇ ತಲ್ಲಣ ಶುರುವಾಗಿದೆ! ಆದರೆ ರಾಮನ ಲೆಕ್ಕ ಬರೆದು ಪ್ರಾಮಾಣಿಕವಾಗಿ ಸರ್ಕಾರಕ್ಕೆ ನಿಯಮಿತವಾಗಿ ತೆರಿಗೆ ತುಂಬುತ್ತಿದ್ದ ಬಹುಸಂಖ್ಯೆಯ ಸದಾಚಾರಿ ವರ್ತಕರಿಗೆ ಈಗ ಬಹಳಷ್ಟು ಖುಷಿಯಾಗಿದೆ.

ಏಕೆಂದರೆ ಇವರ ಪ್ರಾಮಾಣಿಕತೆಗೆ ಈಗ ಫಲ ಸಿಗುವ ಕಾಲ ಬಂದಿದೆ! ನೋಂದಣಿ ಸಂಖ್ಯೆಯೊಂದಿಗೆ ಪ್ಯಾ್‌ ಜೋಡಿಸಿರುವುದರಿಂದ ಇನ್ನು ಮೇಲೆ ವರ್ತಕರು ಆದಾಯ ತೆರಿಗೆ ಇಲಾಖೆಗೊಂದು ವಾಣಿಜ್ಯ ತೆರಿಗೆ ಇಲಾಖೆಗೊಂದು ಲೆಕ್ಕ ತೋರಿಸುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ. ಜಿಎಸ್‌ಟಿ ಈ ಒಂದು ಮೂಲಭೂತ ವಿಷಯದಲ್ಲಿಯೇ ಭಾರಿ ಯಶಸ್ವಿಯಾಗುವ ದಾರಿಯಲ್ಲಿದೆ.

ಈ ಪ್ಯಾನ್‌  ಜೋಡಣೆಯ ಒತ್ತಡದ ಫಲ ಸ್ವರೂಪದಿಂದಾಗಿ ವರ್ತಕರು ಸರಕುಗಳನ್ನು ಮಾರಾಟ ಮಾಡುವಾಗ ಈಗ ಕಡ್ಡಾಯವಾಗಿ ಮಾರಾಟ ರಸೀದಿ ನೀಡುತ್ತಿದ್ದಾರೆ. ಮಾರಾಟ ರಸೀದಿ ಬೇಡ ಎನ್ನುವ ಖರೀದಿದಾರರಿಗೆ ಸರಕುಗಳನ್ನು ಮಾರಾಟ ಮಾಡಲು ನಿರಾಕರಿಸುತ್ತಿದ್ದಾರೆ. ಇದರ ಬಿಸಿ ನೇರವಾಗಿ ನೋಂದಾಯಿತರಲ್ಲದ ವರ್ತಕರಿಗೆ ತಟ್ಟಿದೆ. ಈಗ ಅವರು ಕಾಳಜಿಯಿಂದ ನೋಂದಣಿ ಪಡೆಯುತ್ತಿದ್ದಾರೆ. ಗಡಿಭಾಗದಲ್ಲಿ ಇದು ತುಸು ಢಾಳಾಗಿ ಕಾಣುತ್ತದೆ. ಸರಿಯಾಗಿ ಮಾರಾಟ ಬಿಲ್ಲು ನೀಡುವುದೆಂದರೆ ಎಲ್ಲ ಮಾರಾಟದ ವಹಿವಾಟನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಎಂದರ್ಥ. ಲೆಕ್ಕಕ್ಕೆ ತೆಗೆದುಕೊಳ್ಳುವುದೆಂದರೆ ಸರ್ಕಾರಕ್ಕೆ ಸರಿಯಾಗಿ ತೆರಿಗೆ ಪಾವತಿಯಾಗುತ್ತದೆ ಎಂದೂ ಅರ್ಥ!

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಜಿಎಸ್‌ಟಿ ಜಾರಿಯಾದ ನಂತರ ಒಟ್ಟು ಸುಮಾರು 5,50,000 ವರ್ತಕರಲ್ಲಿ ತೆರಿಗೆ ದರಗಳು, ಮಾರಾಟ ರಸೀದಿ ನೀಡಿಕೆ, ತಾತ್ಪೂರ್ತಿಕ ಗುರುತಿನ ಸಂಖ್ಯೆ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿದ್ದವು. ಇದನ್ನರಿತ ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್‌ಟಿ ಜಾಗೃತಿ ಅಭಿಯಾನ ಹಮ್ಮಿಕೊಂಡು ವರ್ತಕರ ಅಂಗಡಿ ಬಾಗಿಲಿಗೆ ಹೋಗಿ ಸೂಕ್ತ ತಿಳಿವಳಿಕೆ ನೀಡಿ ಸಮಸ್ಯೆಗಳನ್ನು ಪರಿಹರಿಸಿದೆ. ವ್ಯಾಟ್‌ ಕಾಯ್ದೆ ಪದ್ಧತಿಯಲ್ಲಿ ಶಿಸ್ತುಬದ್ಧ ತೆರಿಗೆ ಸಂಗ್ರಹಣೆ ಕಾರ್ಯದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದ ರಾಜ್ಯವು ಜಿಎಸ್‌ಟಿಯಲ್ಲಿಯೂ ಈ ಸ್ಥಾನ ಅಲಂಕರಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎನಿಸುತ್ತದೆ.

**

ನೋಂದಣಿ ನೀಡಿಕೆ ಪ್ರಕ್ರಿಯೆ ಸರಳ ಮತ್ತು ಸಂಪೂರ್ಣ ಪಾರದರ್ಶಕ

ನೋಂದಣಿ ಶುಲ್ಕ, ಭದ್ರತಾ ಠೇವಣಿ ಪಾವತಿಸುವ ರಗಳೆ ಇಲ್ಲ

10 ಸಾವಿರ ವರ್ತಕರು ಜಿಎಸ್‌ಟಿಗೆ ಹೊಸದಾಗಿ ನೋಂದಾಯಿತರಾಗಿದ್ದಾರೆ

ಅಂತರರಾಜ್ಯ ವ್ಯಾಪಾರ–ವಹಿವಾಟಿನ ಮೇಲಿದ್ದ ಬಹುತೇಕ ನಿರ್ಬಂಧ ರದ್ದು

ವ್ಯಾಟ್‌ ಕಾಯ್ದೆಯಲ್ಲಿದ್ದ ಕೆಲ ಗಂಭೀರ ಸಮಸ್ಯೆಗಳನ್ನು ಜಿಎಸ್‌ಟಿ ನಿವಾರಿಸಿದೆ

ಹೂಡುವಳಿ ತೆರಿಗೆ ಜಮೆ (ಸರಕು ಮತ್ತು ಸೇವೆಗಳನ್ನು ಖರೀದಿಸುವಾಗ ಪಾವತಿಸುವ ತೆರಿಗೆ) ಪಡೆಯುವ ಸೌಲಭ್ಯ ಒದಗಿಸಲಾಗಿದೆ

ಬಹು ಕಾಯ್ದೆ ಲೆಕ್ಕ ಬರೆದು ಬಸವಳಿದಿದ್ದ ವರ್ತಕರಿಗೆ ನೆಮ್ಮದಿ

*

(ಲೇಖಕರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT