ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀ ನನಗಿದ್ದರೆ, ನಾ ನಿನಗೆ!

Last Updated 5 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಾವೆಲ್ಲರೂ ಹೀಗೆಯೇ ಆಲೋಚಿಸುತ್ತೇವೆ. ಮತ್ತು ಇದೇ ಸರಿ ಎನ್ನುವಂತೆ ಬದುಕುತ್ತೇವೆ. ನೀ ನನಗಿದ್ದರೆ, ನಾ ನಿನಗೆ ಎನ್ನುತ್ತೇವೆ. ಇದು ಸರೀನಾ?
ಅಲ್ಲ!

ಮತ್ತೆ ಸರಿ ಯಾವುದು? ‌

ನೀ ನನಗಿಲ್ಲದಿದ್ದರೂ, ನಾ ನಿನಗೆ ಎನ್ನುವುದು ಯಾವಾಗಲೂ ಸರಿ. ಇದು ಎಲ್ಲ ಮಾನವ ಸಂಬಂಧಗಳಲ್ಲೂ ಸರಿಯೆನ್ನಿಸುತ್ತದೆ. ನೀನು ಯಾವಾಗಲೂ ನನಗಾಗಿ ಇರುವೆ ಎನ್ನುವ ನಿರಂತರವಾದ ನಂಬಿಕೆ ನನಗಿದೆ. ನಿನಗಾಗಿ ನಾನಿರಬೇಕಾಗಿದ್ದು ನನ್ನ ಧರ್ಮ. ಅದರಿಂದ ನನಗೆ ಸಂತೋಷ ಸಿಗುತ್ತದೆ. ಇದರಿಂದ ನನ್ನ ಅಸ್ತಿತ್ವ ಮತ್ತು ಶ್ರಮ ಸಾರ್ಥಕವಾಯಿತು.

ಇಷ್ಟಕ್ಕೂ ನಮ್ಮಿಬ್ಬರ ನಡುವೆ ಇರುವುದು ವ್ಯವಹಾರಿಕ ಸಂಬಂಧವಲ್ಲ. ಅದಕ್ಕಿಂತಲೂ ಆಳವಾದ ಭಾವನಾತ್ಮಕ ಸಂಬಂಧ. ಅಕಸ್ಮಾತ್ ವ್ಯವಹಾರಿಕವೇ ಆಗಿದ್ದರೂ ಸಂಬಂಧವನ್ನು ನಿತ್ಯಸಂತೋಷವನ್ನಾಗಿ ಬದಲಾಯಿಸಿಕೊಳ್ಳುವ ಅವಕಾಶ ನಮ್ಮಿಬ್ಬರಿಗೂ ಇದ್ದೇ ಇದೆ. ಇಬ್ಬರಲ್ಲೂ ಅಂತಹ ಅಭಿರುಚಿ ಇರಬೇಕು. ಇಬ್ಬರಿಗೂ ಪರಸ್ಪರ ಗೌರವಾದರ ಇರಬೇಕು. ಇಬ್ಬರಿಗೂ ಜೀವನಪ್ರೀತಿ ಇರಬೇಕು. ಅಷ್ಟೇ.

ನಮಗೆ ನಮ್ಮ ಸಂಬಂಧದ ಮಹತ್ವ ಮತ್ತು ಅಗತ್ಯಗಳ ಅರಿವಿರಬೇಕು. ಪರಸ್ಪರರಲ್ಲಿ ಸಂಬಂಧವನ್ನು ಉಳಿಸಿಕೊಳ್ಳಬೇಕೆನ್ನುವ ಹಪಾಹಪಿ ಇರಬೇಕು. ಸಂಬಂಧವನ್ನು ಕಡಿದುಕೊಳ್ಳುವುದಕ್ಕೆ ಸಿಗುವ ಹತ್ತು ಕಾರಣಗಳಿಗಿಂತಲೂ, ಸಂಬಂಧವನ್ನು ಉಳಿಸಿಕೊಳ್ಳಲಿಕ್ಕೆ ಸಿಗುವ ಆರೇ ಕಾರಣಗಳನ್ನು ಗಟ್ಟಿಗೊಳಿಸಬೇಕು. ಇಷ್ಟರವರೆಗೆ ಬೆಳೆದು ಬಂದ ಸಂಬಂಧವನ್ನು ಯಾವುದೇ ಕಾರಣದಿಂದ ಕಡಿದುಕೊಳ್ಳುವುದು ಸುಲಭ. ಆದರೆ ಅದನ್ನು ಮತ್ತೆ ಸಂಪಾದಿಸುವುದು ಅಸಾಧ್ಯ. ನೀನು ನನ್ನಿಂದ ದೂರಾಗುವುದರಿಂದ ಇಬ್ಬರಿಗೂ ಸಮನಾದ ನಷ್ಟವಾಗುತ್ತದೆ. ನಿನಗೆ ಹೊಸಬರು ಸಿಗಬಹುದು. ನನಗೂ ಹೊಸಬರು ಸಿಗಬಹುದು. ಹೊಸ ಗೆಳೆತನ ಶುರುವಾಗಬಹುದು. ಆದರೆ ಎಲ್ಲರೂ ನಿನ್ನಂತೆ ಇರಬೇಕು ಎಂದೆನಿಲ್ಲ. ನಾನು ಎಲ್ಲರಲ್ಲೂ ನಿನ್ನನ್ನೆ ಹುಡುಕಲು ಆರಂಭಿಸಬಹುದು. ನಿನಗೂ ಹಾಗೆ ಅನ್ನಿಸಬಹುದು, ಇಬ್ಬರೂ ಹುಡುಕಾಟದಲ್ಲಿಯೇ ಕಾಲವನ್ನು ವ್ಯರ್ಥ ಮಾಡಬಹುದು.

ನಮ್ಮ ಸಮಾಜದಲ್ಲಿ ಯಾರೂ ಪರಸ್ಪರ ಸರಿ ಇಲ್ಲ. ಮಕ್ಕಳಿಗೆ ಪಾಲಕರು ಸರಿ ಇಲ್ಲ. ಪಾಲಕರಿಗೆ ಮಕ್ಕಳು ಸರಿ ಇಲ್ಲ. ಗಂಡನಿಗೆ ಹೆಂಡತಿ ಸರಿ ಇಲ್ಲ. ಹೆಂಡತಿಗೆ ಗಂಡ ಸರಿ ಇಲ್ಲ. ಅಕ್ಕಪಕ್ಕದವರೂ ಸರಿ ಇಲ್ಲ. ಯಾರೂ ಯಾರಿಗೂ ಸರಿ ಇಲ್ಲ. ಆದರೂ ಸಮಾಜ ಜೀವಂತ ಇದೆ. ಎಲ್ಲರೂ ಎಲ್ಲರಿಗಾಗಿ ಎನ್ನುವಂತೆ ಬದುಕುತ್ತಿದ್ದಾರೆ. ಅದೇ ಮಜಾ! ಇಲ್ಲಿ ಯಾರೂ ಯಾರನ್ನೂ ಪ್ರೀತಿಸುವುದಿಲ್ಲ. ಯಾರೂ ಯಾರಿಗಾಗಿಯೂ ಬದುಕುವುದಿಲ್ಲ. ಎಲ್ಲರೂ ಪರಸ್ಪರರ ತಪ್ಪುಗಳನ್ನು ಹುಡುಕುತ್ತ, ಕೆದಕುತ್ತ, ಹಳಿಯುತ್ತ, ಹೇಳುತ್ತ ಇರುತ್ತಾರೆ. ಯಾರೂ ಯಾರಿಗಾಗಿಯೂ ಸರಿಯಾಗುವುದಿಲ್ಲ. ಹಾಗಾಗಿ ಸಮಸ್ಯೆ ಯಾವಾಗಲೂ ಮುಗಿಯುವುದಿಲ್ಲ. ನೀನು ಸರಿಯಿಲ್ಲ. ಸೋ ನಾನೂ ಸರಿಯಿಲ್ಲ. ಮೊದಲು ನೀನು ಸರಿಯಾಗು. ಇದು ಬಹುತೇಕರ ಅನಿಸಿಕೆ. ನಾನು ನಿನಗಾಗಿ ಐ ಮೀನ್ ನಿನ್ನ ಸಂತೋಷಕ್ಕಗಿ,ಕೊಂಚ ಕೊಂಚವೇ ಸರಿಯಾಗಲು ಪ್ರಯತ್ನಿಸುತ್ತೇನೆ. ನೀನೂ ನನ್ನ ಪ್ರಯತ್ನವನ್ನು ಗಮನಿಸು. ನನಗೆ ಸಹಾಯ ಮಾಡು ಎನ್ನುವ ಒಮ್ಮತ ಯಾರಲ್ಲೂ ಇಲ್ಲ.

ನಿನಗೆ ನನ್ನ ಮಾತುಗಳಿಂದಾಗಲೀ, ವರ್ತನೆಗಳಿಂದಾಗಲೀ ಬೇಸರವಾಗಿರಬಹುದು. ಅದನ್ನು ನೀನು ನನಗೆ ತಿಳಿಯುವಂತೆ ಮಾಡಬೇಕು. ನಿನ್ನಿಂದಲೂ ನನಗೆ ಬಹಳಷ್ಟು ಸಂದರ್ಭಗಳಲ್ಲಿ ನೋವಾಗಿರಬಹುದು. ನಾನು ಅವುಗಳನ್ನು ಮರೆಯಬೇಕು. ನೀನು ಹೇಳಿದ್ದು ನಿಜವೆಂದು ಅನ್ನಿಸಿದರೆ ನಾನು ಅವುಗಳನ್ನು ಒಪ್ಪಿಕೊಳ್ಳಬೇಕು. ನನ್ನನ್ನು ನಾನು ತಿದ್ದಿಕೊಳ್ಳಲಿಕ್ಕೆ ನೀನು ಕೊಡುವ ಅವಕಾಶವನ್ನು ನಾನು ಪುರಸ್ಕರಿಸಬೇಕು. ನೀನೂ ಅಷ್ಟೇ, ನನಗೆ ನೋವಾಗದಂತೆ ವರ್ತಿಸುವುದನ್ನು ರೂಢಿಸಿಕೊಳ್ಳಬೇಕು. ನಮಗೆ ಪರಸ್ಪರರಿಂದ ಬೇಸರವಾದಾಗ ನಾವು ನಮ್ಮಷ್ಟಕ್ಕೆ ಉಳಿದುಬಿಡಬಾರದು. ನಾವು ಜೊತೆಯಲ್ಲಿ ಕಳೆದ ಸವಿನೆನಪುಗಳನ್ನು ನೆನಪು ಮಾಡಿಕೊಳ್ಳಬೇಕು. ಅಷ್ಟೆಲ್ಲ ಸಂತೋಷಗಳ ನಡುವೆ ಇದೊಂದಿಷ್ಟು ಕಸವೆನ್ನುವುದನ್ನು ಗಮನಿಸಿಕೊಳ್ಳಬೇಕು. ಅನಿರೀಕ್ಷಿತವಾಗಿ ಬಂದ ಕಸವನ್ನು ಮುಲಾಜಿಲ್ಲದೇ ಎತ್ತಿ ಬಿಸಾಕಬೇಕು. ಯಾಕೆಂದರೆ ನಾವು ಜೊತೆಯಾಗಿ ಎಷ್ಟೆಲ್ಲ ಎದುರಿಸಿದ್ದೇವೆ. ಸಂತೋಷವನ್ನು ಅನುಭವಿಸಿದ್ದೇವೆ. ಪರಸ್ಪರರ ಸಂತೋಷಕ್ಕೆ ಕಾರಣರಾಗಿದ್ದೇವೆ. ಯಶಸ್ಸನ್ನು ಕಂಡಿದ್ದೇವೆ. ನಮ್ಮಲ್ಲಿ ನಂಬಿಕೆ, ಪ್ರಾಮಾಣಿಕತೆ, ವಿಶ್ವಾಸ, ಅವಲಂಬನೆ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಪ್ರೀತಿಯು ಬಂಧಿಸಿದೆ.

ನನ್ನ ಖುಷಿಗಾಗಿ ನಾನು ಹೀಗಿದ್ದೇನೆ ಎನ್ನುವುದರ ಅರಿವು ನಮಗಾಗಬೇಕು. ಆಗ ನಮ್ಮ ಆಲೋಚನಾ ಕ್ರಮ ಬದಲಾಗುತ್ತದೆ. ನಮ್ಮ ವ್ಯಕ್ತಿತ್ವದ ಘಮ ಬದಲಾಗುತ್ತದೆ. ಬೇರೆಯವರ ಸಂತೋಷಕ್ಕಾಗಿ ಬದುಕುವುದರಲ್ಲಿ ನಮ್ಮ ಸಂತೋಷವಿದೆ ಮತ್ತು ನಮ್ಮ ಬದುಕಿಗೊಂದು ಸಾರ್ಥಕತೆಯೂ ಇದೆ!

ನಿನ್ನ ಪಾಡಿಗೆ ನೀನು ದು:ಖದಲ್ಲಿ ಇರಲಿಕ್ಕೆ ನಾನು ಬಿಡಬಾರದು. ನೀನು ಸೋತಾಗ ನಿನ್ನನ್ನು ಒಂಟಿಯಾಗಿ ಬಿಡಬಾರದು. ನೀನು ಸೋಲಿನಿಂದ, ದು:ಖದಿಂದ ಹೊರಬರಲಿಕ್ಕೆ ನಾನು ಕೈಲಾದಷ್ಟು ಸಹಾಯ ಮಾಡಬೇಕು. ಅದು ಸಹಾಯ ಅಂತೇನಲ್ಲ. ಅದು ನನ್ನ ಕರ್ತವ್ಯ. ನಾವು ಜೊತೆಯಲ್ಲಿ ಬದುಕುವ ಮೂಲಕ ಬದುಕಿನ ಸ್ವಾದವನ್ನು, ಸಂತೋಷವನ್ನು ಸಾರ್ಥಕತೆಯನ್ನು ಹೆಚ್ಚಿಸಿಕೊಳ್ಳಬಹುದು. ‘ನಿದ್ದೆಗೊಮ್ಮೆ ನಿತ್ಯ ಮರಣ. ಎದ್ದ ಸಲ ನವೀನ ಜನನ’ ಎನ್ನುವ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಮಾತನ್ನು ಅರ್ಥಮಾಡಿಕೊಂಡು, ಪರಸ್ಪರರು ಪರಸ್ಪರರಿಗಾಗಿ ಬದುಕುವುದರಲ್ಲಿ ನಿತ್ಯ ಸಂತೋಷವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT