ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾನುಕಂಪವೆಂಬ ಬಂಗಾರದ ಪಂಜರ!

Last Updated 5 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅವತ್ತು ನನ್ನ ಗೆಳತಿಯೊಬ್ಬಳು ಸಂಗೀತ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿದ್ದಳು. ಅವಳು ಕಣ್ಣುಗಳು ನಕ್ಷತ್ರಗಳನ್ನು ಸುರಿದುಕೊಂಡಂತೆ ಹೊಳೆಯುತ್ತಿದ್ದವು. ಹೃದಯ ಆನಂದದಿಂದ ತುಂಬಿರುವುದು ಮಾತಿನಲ್ಲಿಯೇ ತಿಳಿಯುತ್ತಿತ್ತು. ಆ ಖುಷಿಯ ಆವೇಶದಿಂದಲೇ ಅವಳು ನನ್ನ ಬಳಿ ಸಂಗೀತ ಕಾರ್ಯಕ್ರಮದ ಬಗ್ಗೆ ಹೇಳುತ್ತಿದ್ದಳು. ‘ವಾ..! ಎಂಥ ಅದ್ಭುತ ಗಾಯಕ! ಅವರ ಧ್ವನಿ ಇಡೀ ಸಭಾಂಗಣವನ್ನು ಎಂಥ ಅದ್ಭುತ ಚೈತನ್ಯದಿಂದ ತುಂಬಿತು ಗೊತ್ತಾ? ನಿಜವಾದ ಆನಂದ ಅದು!

ಗೆಳತಿಯ ಮಾತನ್ನು ಕೇಳುತ್ತಾ ನನ್ನೊಳಗೆ ನಾನೇ ಯೋಚಿಸತೊಡಗಿದೆ. ನಾವು ಕೂಡ ನಮ್ಮ ಮನಸ್ಸನ್ನು ಅಂಥದ್ದೇ ಆನಂದದಿಂದ, ಸುಂದರ ಅನುಭೂತಿಯಿಂದ ತುಂಬಬೇಕಲ್ಲವೇ? ಒಬ್ಬ ಗಾಯಕ ಸ್ವರತಪ್ಪಿ ಕೆಟ್ಟದಾಗಿ ಹಾಡುತ್ತಿದ್ದರೆ ನಾವು ಆ ಸಭಾಂಗಣದಲ್ಲಿ ಕೂತಿರುತ್ತೇವೆಯೇ? ಮರುಕ್ಷಣವೇ ಕಿರಿಕಿರಿಯೆನಿಸಿ ಎದ್ದು ಬಂದುಬಿಡುತ್ತೇವಲ್ಲವೇ? ಹಾಗೆಯೇ ನಮ್ಮೊಳಗಿನ ಮನಸ್ಸೆಂಬ ಸಭಾಂಗಣವು ಪೂರ್ತಿಯಾಗಿ ಸ್ವಾನುಕಂಪದ ಕರ್ಕಶ ಧ್ವನಿಯನ್ನು, ಮಾಧುರ್ಯವೇ ಇಲ್ಲದ, ಸೌಂದರ್ಯದ ಲವಲೇಶವೂ ಇರದ ಹಾಡುಗಳನ್ನು ತುಂಬಿಕೊಂಡು ನೆಮ್ಮದಿಯಾಗಿ ಇರಬೇಕು ಎಂದು ಹೇಳಿದರೆ ಹೇಗೆ ಸಾಧ್ಯ?

ಒಮ್ಮೆ ನಮ್ಮೊಳಗಿನ – ಕರ್ಕಶತೆ ತುಂಬಿಕೊಂಡಿರುವ ಈ ಅವಕಾಶದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಯೋಚಿಸಿ ನೋಡಿ. ಇದರಿಂದ ನಮಗೆ ನಾವೇ ಮಾಡಿಕೊಳ್ಳುತ್ತಿರುವ ಅನ್ಯಾಯದ ಬಗ್ಗೆ ಒಮ್ಮೆ ಅರಿವು ಮೂಡಿದರೆ ನಮ್ಮ ಅಂತರಂಗದ ಮಾಧುರ್ಯಗೀತೆಯನ್ನು ಸ್ವರಕ್ಕೆ ಜೋಡಿಸುವುದು ಹೇಗೆ ಎಂಬ ದಾರಿಯೂ ತೆರೆದುಕೊಳ್ಳುತ್ತ ಹೋಗುತ್ತದೆ.

‘ನನ್ನ ಮನಸ್ಸು ಆರೋಗ್ಯಕರವಾಗಿದೆಯೇ? ವಿವೇಕಯುತವಾಗಿದೆಯೇ? ಅದರಲ್ಲಿ ಸಕಾರಾತ್ಮಕ ಆಲೋಚನೆಗಳು ಹುಟ್ಟುತ್ತಿವೆಯೇ? ನನ್ನ ಉದ್ದೇಶಗಳು ಸದಾ ಶುದ್ಧ ಮತ್ತು ನಿಸ್ವಾರ್ಥದಿಂದ ಕೂಡಿರುತ್ತವೆಯೇ?’ ಇವೆಲ್ಲ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುವ ಮೂಲಕ ಮಲಗಿರುವ ನಮ್ಮ ಮನಸ್ಸನ್ನು ನಾವೇ ಆಗಾಗ ಎಚ್ಚರಿಸಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಲು ಯಾವಾಗಲೂ ಹಿಂಜರಿಯಬಾರದು.

‘ನಮ್ಮೊಳಗಿನ ಚೈತನ್ಯದ ಹರಿವಿಗೆ ಸ್ವಾನುಕಂಪದಷ್ಟು ಪ್ರಬಲವಾದ ತಡೆ ಇನ್ನೊಂದಿಲ್ಲ’ ಗುರುಗಳೊಬ್ಬರು ಹೇಳಿದ ಈ ಮಾತು ನಮ್ಮೆಲ್ಲರ ಆತ್ಮಾವಲೋಕನಕ್ಕೆ ಇಂಬುಮಾಡಿಕೊಡುವಂತಿದೆ. ಸ್ವಾನುಕಂಪ ನಮ್ಮ ಮನಸ್ಸನ್ನು ಯಾವಾಗಲೂ ದುಃಖದಲ್ಲಿಯೇ ಮುಳುಗಿರುವಂತೆ ನೋಡಿಕೊಳ್ಳುತ್ತದೆ.

ಈ ಸ್ವಾನುಕಂಪ ಎನ್ನುವುದು ಹೇಗೆ ಹುಟ್ಟಿಕೊಳ್ಳುತ್ತದೆ?

ನಮಗೆ ಏನು ಸಿಗಬೇಕಾಗಿತ್ತೋ ಅದು ಸಿಗದೇ ಇದ್ದಾಗ ನಮ್ಮ ಬಗ್ಗೆ ನಮಗೇ ಮರುಕ ಹುಟ್ಟಿಕೊಳ್ಳುತ್ತದೆ. ನಮಗೆ ಸಿಗದೇ ಇದ್ದುದರ ಕುರಿತು ನಮ್ಮಲ್ಲಿ ಅಸಮಧಾನ ಹುಟ್ಟಿಕೊಳ್ಳುತ್ತದೆ. ಏನನ್ನೋ ಕಳೆದುಕೊಂಡು ಭಾವ ಹುಟ್ಟಿಕೊಳ್ಳುತ್ತದೆ. ಅದೇ ಸ್ವಾನುಕಂಪ ಅಥವಾ ಆತ್ಮಮರುಕ.

ಇದು ಬಾಹ್ಯ ಜಗತ್ತಿನ ವ್ಯವಹಾರಿಕ ಲೆಕ್ಕಾಚಾರವಾಯ್ತು. ಆದರೆ ಈ ಲೋಕದ ವ್ಯವಹಾರವನ್ನು ಮೀರಿದ ಇನ್ನೊಂದು ಜಗತ್ತಿದೆಯಲ್ಲ, ಅಲ್ಲಿನ ಲೆಕ್ಕಾಚಾರಗಳೇ ಬೇರೆ. ಅಲ್ಲಿ ನೀವು ಯಾವುದನ್ನೋ ಕಳೆದುಕೊಂಡಿದ್ದೀರಿ ಎಂದರೆ ಅಷ್ಟರ ಮಟ್ಟಿಗೆ ನಿಮ್ಮ ಮನಸ್ಸು ನಿರಾಳವಾಗಲು ಅವಕಾಶ ಸಿಕ್ಕಿದೆ ಎಂದರ್ಥ! ಭೌತಿಕ ಜಂಜಡಗಳಿಗೆ ಅಷ್ಟರಮಟ್ಟಿಗೆ ಬಿಡುಗಡೆ ಸಿಕ್ಕಿ ಅದರಿಂದ ಅಧ್ಯಾತ್ಮದ ಔನ್ನತ್ಯದ ಸಾಧನೆಗೆ ವೇದಿಕೆ ದೊರೆತಂತೆ!! ಇಷ್ಟ – ಅನಿಷ್ಟಗಳ ಹಂಗನ್ನು ಮೀರಿ ಅವೆರಡನ್ನೂ ಒಂದೇ ಸಮನಾಗಿ ನೋಡುವ ಸಮಚಿತ್ತತೆಯನ್ನು ಸಿದ್ಧಿಸಿಕೊಂಡರೆ ಆಗ ಬದುಕು ಬೇರೆಯದೇ ರೀತಿ ಕಾಣತೊಡಗುತ್ತದೆ.

ಸಮಚಿತ್ತವನ್ನು ರೂಪಿಸಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆ ಏನಿದೆ ಎಂದು ನೀವು ಕೇಳಬಹುದು. ಒಬ್ಬಳು ಸನ್ಯಾಸಿನಿಗೆ ಕ್ಯಾಸಿನೋದಲ್ಲಿ ಅಚಾನಕ್ಕಾಗಿ ದೊಡ್ಡ ಮೊತ್ತದ ಹಣ ಸಿಕ್ಕಿಬಿಟ್ಟಿತು. ಅದರಿಂದ ಅವಳ ಸಮಚಿತ್ತತೆ ಕೊಂಚ ಏರುಪೇರಾಯ್ತು. ದೊಡ್ಡ ಮಟ್ಟದ ಹಣ ಸಿಕ್ಕಿತು, ಅದು ಅವಳ ಜೀವನಪದ್ಧತಿಗೆ ವಿರುದ್ಧವಾದದ್ದು ಎಂಬುದಷ್ಟೇ ಆ ಏರುಪೇರಿಗೆ ಕಾರಣವಲ್ಲ, ಆ ಹಣ ಯಾವ ವ್ಯಕ್ತಿಗೆ ತಲುಪಬೇಕೋ ಅವರನ್ನು ಹುಡುಕಿ ಅವನಿಗೆ ನಾನು ಈ ಹಣ ಪಡೆಯಲು ಯೋಗ್ಯಳಲ್ಲ ಎಂಬುದನ್ನು ವಿವರಿಸಿ ಹಣ ಮರುಳಿಸುವ ಸಂಕೀರ್ಣ ಪ್ರಕ್ರಿಯೆಯೇ ಅವಳಿಗೆ ತುಂಬಾ ತ್ರಾಸದಾಯಕವಾಗಿತ್ತು. ಆದರೆ ಆ ವ್ಯಕ್ತಿಯನ್ನು ಹುಡುಕಿ, ಅವನಿಗೆ ಹಣ ತಲುಪಿಸಿ, ಈ ಎಲ್ಲವನ್ನೂ ತನ್ನ ಗುರುಸನ್ಯಾಸಿನಿಯ ಎದುರು ನಿವೇದಿಸಿಕೊಂಡ ಮೇಲೆಯೇ ಅವಳಿಗೆ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗಿದ್ದು. ಆ ಸನ್ಯಾಸಿನಿಯಷ್ಟು ನಿರ್ಲಿಪ್ತವಾಗಿ ಬದುಕುವುದು ನಮಗೆ ಕಷ್ಟವಾಗಿ ಕಾಣಬಹುದು. ಆದರೆ ಅದರಲ್ಲಿ ನಾವು ಕಲಿತುಕೊಳ್ಳಬಹುದಾದ ಪಾಠಗಳಂತೂ ಸಾಕಷ್ಟಿವೆ. ಅದರಲ್ಲಿ ಮುಖ್ಯವಾದದ್ದು ಸರಳ ಬದುಕು! ಬಿಟ್ಟುಕೊಡುವುದರಲ್ಲಿ ಇರುವ ಸ್ವಾತಂತ್ರ್ಯದಲ್ಲಿಯೇ ಅವರ ಬದುಕಿನ ಸಾರ್ಥಕತೆಯ ಗುಟ್ಟಿದೆ.

ಎಷ್ಟೆಲ್ಲ ವಸ್ತು ವಿಷಯಗಳು ನಿಮ್ಮಿಂದ ದೂರವಾಗುತ್ತವೆಯೋ ಅಷ್ಟು ಅದ್ಭುತವಾದ ಬದುಕನ್ನು ಬದುಕಲು ನಿಮಗೆ ಅವಕಾಶ ಸಿಗುತ್ತ ಹೋಗುತ್ತದೆ! ನಮ್ಮೊಳಗೆ ಅನಂತವಾದ ದೈವಿಕವಾದ ಅವಕಾಶ ಇದೆ. ಚಾಕೋಲೆಟ್‌ ಅನ್ನು ನೆನಪಿಸಿಕೊಂಡ ಹಾಗೆಯೇ ಬಾಯಲ್ಲಿ ನೀರೂರುತ್ತದಲ್ಲ; ಹಾಗೆಯೇ ನೀವು ಯಾವ ಸಂಗತಿಗಳ ಕುರಿತು ಸಕಾರಾತ್ಮಕವಾಗಿ ಯೋಚಿಸುತ್ತೀರೋ, ಆಗ ನಿಮ್ಮ ಮನಸ್ಸೂ ಅದರ ಆನಂದದಲ್ಲಿ ತುಂಬುತ್ತದೆ. ಗಾಳಿಗೆ ಹುಚ್ಚೆದ್ದು ಕುಣಿಯುವ ಗಾಳಿಪಟದ ಹಾಗೆ ನರ್ತಿಸಲು ಶುರು ಮಾಡುತ್ತದೆ.

ಇದಕ್ಕೊಂದು ಆರೋಗ್ಯಾತ್ಮಕವಾದ ಆಯಾಮವೂ ಇದೆ. ಕಿರಿಕಿರಿಯಿಂದ ತುಂಬಿದ ಮನಸ್ಸು ಕಿರಿಕಿರಿಯ ಮಾತುಗಳಿಗೆ, ಕಿರಿಕಿರಿಯ ವರ್ತನೆಗಳಿಗೆ, ಕಿರಿಕಿರಿಯ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ನಮ್ಮ ಮಿದುಳಲ್ಲಿ ಹುಟ್ಟಿಕೊಳ್ಳುವ ಆಮ್ಲವೊಂದು ಹೊಟ್ಟೆಯ ಹಸಿವನ್ನು ಸೂಚಿಸುತ್ತಿರುತ್ತದಲ್ಲವೇ? ಬಾಯಿಯ ಮೂಲಕ ಆಹಾರ ಸೇವಿಸಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತೇವಲ್ಲವೇ? ಹಾಗೆಯೇ ಇದು. ಒಂದಕ್ಕೊಂದು ಅಗೋಚರವಾಗಿ ಸಂಬಂಧಿಸಿಕೊಂಡಿರುತ್ತದೆ. ಹೊಟ್ಟೆಯ ಹಸಿವನ್ನು ತಣ್ಣಗಾಗಿಸಿಕೊಳ್ಳಲಿಕ್ಕೆ, ಬಾಯಿಯನ್ನು ಸ್ವಚ್ಛವಾಗಿಸಿಕೊಳ್ಳಲಿಕ್ಕೆ ಹಲವು ದಾರಿಗಳಿವೆ. ಆದರೆ ನೆನಪಿಡಿ, ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಅಥವಾ ಇವೆಲ್ಲಕ್ಕಿಂತ ಹೆಚ್ಚು ಮುಖ್ಯ. ಪ್ರಶಾಂತವಾದ ಪರಿಸರದಲ್ಲಿ ಧ್ಯಾನಸ್ಥರಾಗುವುದು ಅದಕ್ಕೆ ಒಂದು ದಾರಿ.

ಅದಕ್ಕಿಂತ ಹೆಚ್ಚಾಗಿ ನಮ್ಮೊಳಗೆ ತುಂಬಿಕೊಂಡಿರುವ ಸ್ವಮರುಕದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಲು ಸಾಧ್ಯವಾಗಬೇಕು. ಮನಸ್ಸಿನಲ್ಲಿನ ಮರುಕವನ್ನು ಹೊರದೂಡಿ, ಆ ಜಾಗದಲ್ಲಿ ಮಹತ್ವಾಕಾಂಕ್ಷೆಯನ್ನು ತುಂಬಿ. ಸಕಾರಾತ್ಮಕ ಆಲೋಚನೆಗಳು, ಸರಿಯಾದ ದಾರಿಯ ಮೂಲಕ ಮನಸ್ಸನ್ನು ಔನತ್ಯಕ್ಕೆರಿಸಿಕೊಳ್ಳುವ ಅಭಿಲಾಷೆ ನಮ್ಮನ್ನು ಸ್ವಮರುಕದ ಪಂಜರದಿಂದ ಪಾರು ಮಾಡಬಲ್ಲದು. ಒಮ್ಮೆ ಅಲ್ಲಿಂದ ಹೊರಬಂದ ಮನಸ್ಸು ವಿಶಾಲ ಆಕಾಶದಲ್ಲಿ ಸ್ವತಂತ್ರವಾಗಿ ಹಕ್ಕಿಯಂತೆ ಹಾರಾಡಲು ಶುರುಮಾಡುತ್ತದೆ. ಆ ಹಾರಾಟದ ಆನಂದವೇ ಬೇರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT