ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ನೀತಿಯಲ್ಲಿ ಬದಲಾವಣೆ ಘೋಷಣೆಗೇ ಸೀಮಿತವಾಗದಿರಲಿ

Last Updated 5 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಚೀನಾದ ಕ್ಸಿಯಾಮೆನ್‌ನಲ್ಲಿ ನಡೆದ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ) ಸಮಾವೇಶದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಲಭಿಸಿದೆ. ಸಮಾವೇಶದಲ್ಲಿ ಹೊರಡಿಸಲಾದ ಕ್ಸಿಯಾಮೆನ್ ಘೋಷಣೆಯಲ್ಲಿ ಭಯೋತ್ಪಾದನೆಯನ್ನು ಖಂಡಿಸಲಾಗಿದೆ. ಇದರಲ್ಲಿ ಪಾಕಿಸ್ತಾನದಿಂದ ಕಾರ್ಯ ನಿರ್ವಹಿಸುತ್ತಿರುವ ಲಷ್ಕರ್-ಎ-ತಯಬಾ, ಜೈಷ್- ಎ - ಮೊಹಮ್ಮದ್ ಮತ್ತು ಹಕ್ಕಾನಿ ಜಾಲಗಳಂತಹ ಉಗ್ರ ಸಂಘಟನೆಗಳನ್ನು ಹೆಸರಿಸಿರುವುದು ಮುಖ್ಯ. ಹಾಗೆಯೇ ಪಾಕ್ ಮೂಲದ ಉಗ್ರ ಗುಂಪುಗಳಲ್ಲದೆ ತಾಲಿಬಾನ್, ಇಸ್ಲಾಮಿಕ್ ಸ್ಟೇಟ್, ಅಲ್ ಕೈದಾ ಮತ್ತು ಅವುಗಳ ಸಹ ಸಂಘಟನೆಗಳನ್ನೂ ಪಟ್ಟಿ ಮಾಡಲಾಗಿದೆ.

ಸುಮಾರು ಎರಡು ವಾರಗಳ ಹಿಂದೆ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ನೀಡಿತ್ತು. ಆಗ ಪಾಕಿಸ್ತಾನದ ನೆರವಿಗೆ ಚೀನಾ ಬಂದಿತ್ತು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಮುಂಚೂಣಿಯಲ್ಲಿದೆ ಎಂದು ಪಾಕಿಸ್ತಾನವನ್ನು ಚೀನಾ ಬೆಂಬಲಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈ ವಿಚಾರದಲ್ಲಿ ಈಗ ಪಾಕಿಸ್ತಾನಕ್ಕೆ ಸಂದೇಶವಿದೆ. ಅದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ಆದರೆ ಇದು ಚೀನಾ ಮೇಲೆ ಸಾಧಿಸಿದ ವಿಜಯ ಎಂದು ಭಾರತ ಸುಲಭವಾಗಿ ತೀರ್ಮಾನಕ್ಕೆ ಬರಲಾಗದು. ಏಕೆಂದರೆ ಈ ಪಟ್ಟಿಯಲ್ಲಿ ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ತೆಹ್ರಿಕ್ - ಎ- ತಾಲಿಬಾನ್ ಸಹ ಸೇರಿದೆ. ಹೀಗಾಗಿ ತಾನೂ ಸಹ ಭಯೋತ್ಪಾದನೆ ಸಂತ್ರಸ್ತ ರಾಷ್ಟ್ರ ಎಂದು ಪ್ರತಿಪಾದಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶವಿದೆ.

ಹೀಗಿದ್ದೂ ಪಾಕ್ ಮೂಲದ ಉಗ್ರ ಗುಂಪುಗಳನ್ನು ಬ್ರಿಕ್ಸ್ ಘೋಷಣೆಯಲ್ಲಿ ಹೆಸರಿಸಲಾಗಿರುವುದು ಇದೇ ಮೊದಲು. ಚೀನಾ ನೀತಿಯಲ್ಲಾಗಿರುವ ಈ ಪಲ್ಲಟದ ಹಿಂದೆ ಬಹುಶಃ ದೀರ್ಘಾವಧಿ ಗುರಿಗಳು ಇವೆ. ಆದರೆ ಕಳೆದ ಡಿಸೆಂಬರ್‌ನಲ್ಲಿ ಅಮೃತಸರದಲ್ಲಿ ನಡೆದ ಅಫ್ಗಾನಿಸ್ತಾನ ಕುರಿತಾದ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಇಂತಹದೇ ಘೋಷಣೆ ಮಾಡಲಾಗಿತ್ತು. ಆಗಲೂ ಲಷ್ಕರ್ ಹಾಗೂ ಜೈಷ್ ಹೆಸರಿಸಲಾಗಿತ್ತು. ಅಲ್ಲದೆ ಸದಸ್ಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಈ ಸಭೆಯಲ್ಲಿ ಇದ್ದವು. ಆದರೆ ಕಳೆದ ಬಾರಿ ಗೋವಾದಲ್ಲಿ ಬ್ರಿಕ್ಸ್ ಸಮಾವೇಶ ನಡೆದಾಗ ‘ಗೋವಾ ಘೋಷಣೆಯಲ್ಲಿ’ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳ ಹೆಸರು ಸೇರಿಸಲು ಚೀನಾ ಅವಕಾಶ ನೀಡಿರಲಿಲ್ಲ ಎಂಬುದನ್ನೂ ಇಲ್ಲಿ ಸ್ಮರಿಸಬೇಕು.

2001ರಲ್ಲಿ ಜೈಷ್ ಅನ್ನು ವಿಶ್ವಸಂಸ್ಥೆ ನಿಷೇಧಿಸಿದೆ. ಆದರೆ ಜೈಷ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸುವ ಭಾರತದ ಪ್ರಯತ್ನಗಳಿಗೆ ಚೀನಾ ತಡೆ ಒಡ್ಡುತ್ತಲೇ ಬಂದಿದೆ. ಹೀಗಿದ್ದೂ ಈಗ ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಲ್ಲಿ (ಸಿಪಿಇಸಿ) ಹಣಹೂಡಿಕೆ ಮಾಡಿದ ನಂತರ, ತನ್ನ ಹಣಹೂಡಿಕೆಗೆ ಲಾಭ ಗಳಿಸಿಕೊಳ್ಳಲು ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನ ವಲಯದಲ್ಲಿ ಶಾಂತಿ ಉತ್ತೇಜಿಸಲು ಚೀನಾ ಯತ್ನಿಸುತ್ತಿದೆ ಎಂದು ಭಾವಿಸಬಹುದು. ಘೋಷಣೆಗಳಿಗೆ ಸಹಿ ಹಾಕುವುದೇನೊ ಸರಿ. ಆದರೆ ಅದು ಅನುಷ್ಠಾನಗೊಳ್ಳಬೇಕು. ರಾಜಕೀಯ ಪರಿಗಣನೆಗಳು ಇಲ್ಲಿ ಮುಖ್ಯವಾಗಬಾರದು. ಈಗ ಹಕ್ಕಾನಿ, ಜೈಷ್, ಎಲ್‌ಇಟಿಯಂತಹ ಉಗ್ರ ಗುಂಪುಗಳನ್ನು ನಿರ್ದಿಷ್ಟವಾಗಿ ಹೆಸರಿಸುವ ಮೂಲಕ ಚೀನಾ ಗಮನಾರ್ಹ ಹೆಜ್ಜೆ ಇರಿಸಿದೆ. ಬ್ರಿಕ್ಸ್‌ನ ಮೂಲ ಉದ್ದೇಶಗಳಲ್ಲಿ ಆರ್ಥಿಕ ಪ್ರಗತಿಯೂ ಸೇರಿದೆ. ಇದಕ್ಕೆ ನೆರೆ ರಾಷ್ಟ್ರಗಳಲ್ಲಿ ಶಾಂತಿ ಹಾಗೂ ಸ್ಥಿರತೆ ಬೇಕು.

ಕುಸಿಯುತ್ತಿರುವ ಇಸ್ಲಾಮಿಕ್ ಸ್ಟೇಟ್‍‍ ನಿಂದ ಭಯೋತ್ಪಾದನೆ ಬೆದರಿಕೆ ಹೆಚ್ಚಾಗುತ್ತಿದೆ. ಉತ್ತರ ಕೊರಿಯಾದ ಅಣ್ವಸ್ತ್ರ ಭೀತಿಯನ್ನೂ ನಿಭಾಯಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಭಾರತದೊಂದಿಗೆ ಉತ್ತಮ ಬಾಂಧವ್ಯಕ್ಕೆ ಚೀನಾ ಹಾತೊರೆಯುತ್ತಿರುವುದು ಸಹಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT