ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ವಲಯಗಳಲ್ಲಿ ದಿನಕ್ಕೊಮ್ಮೆ ನೀರು

Last Updated 6 ಸೆಪ್ಟೆಂಬರ್ 2017, 4:50 IST
ಅಕ್ಷರ ಗಾತ್ರ

ಗದಗ: ನಗರವಾಸಿಗಳಿಗೆ ದಿನದ 24 ತಾಸು ಕುಡಿವ ನೀರು ಪೂರೈಕೆ ಮಾಡುವ 24x7 ಕುಡಿವ ನೀರಿನ ಯೋಜನೆಯ ಕಾಮಗಾರಿಯು ಇದುವರೆಗೆ ನಾಲ್ಕು ವಲಯಗಳಲ್ಲಿ ಪೂರ್ಣಗೊಂಡಿದೆ. ಈ ನಾಲ್ಕೂ ವಲಯಗಳ 16ರಿಂದ 18 ಸಾವಿರ ಮನೆಗಳಿಗೆ ಸದ್ಯ ನಿರಂತರ ಕುಡಿಯುವ ನೀರಿನ ಭಾಗ್ಯ ಲಭಿಸುತ್ತಿದೆ. ಡಿಸೆಂಬರ್‌ ಅಂತ್ಯದ ವೇಳಗೆ ಇನ್ನುಳಿದ 8 ವಲಯಗಳಲ್ಲಿ  ಕಾಮಗಾರಿ ಪೂರ್ಣ ಗೊಳಿಸಿ, ಗದಗ–ಬೆಟಗೇರಿ ಅವಳಿ ನಗ ರದ ಎಲ್ಲ ಕುಟುಂಬಗಳಿಗೆ ನಿರಂತರ ನೀರು ಪೂರೈಕೆ ಮಾಡುವಂತೆ ಕಾಮಗಾರಿ ಗುತ್ತಿಗೆ ಪಡೆದಿರುವ ಎಸ್‌ಪಿಎಂಎಲ್‌ ಕಂಪೆನಿಗೆ ಗುಡುವು ನೀಡಲಾಗಿದೆ.

ಆದರೆ, ನಗರದ 35ವಾರ್ಡ್‌ಗಳ ಪೈಕಿ ಇನ್ನೂ ಕೆಲವು ವಾರ್ಡ್‌ಗಳಲ್ಲಿ 24x7 ಯೋಜನೆಯ ಕಾಮಗಾರಿಯೇ ಆರಂಭಗೊಂಡಿಲ್ಲ. ಕೆಲ ಪ್ರದೇಶಗಳಲ್ಲಿ ಪೈಪ್‌ಲೈನ್‌ ಅಳವಡಿಕೆಯೇ ಪೂರ್ಣ ಗೊಂಡಿಲ್ಲ. ಈಗಾಗಲೇ ಪ್ರಾಯೋಗಿಕ ವಾಗಿ ನೀರು ಪೂರೈಕೆ ಪ್ರಾರಂಭವಾಗಿರುವ ನಾಲ್ಕು ವಲಯಗಳಲ್ಲಿ ಸೋರಿಕೆ ಪತ್ತೆ ಹಚ್ಚಿ ಸರಿಪಡಿಸುವುದೇ ವಿಳಂಬವಾ ಗುತ್ತಿದೆ.  ಹೀಗಾಗಿ, ನಿಗದಿತ ಗಡುವಿನ ಒಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ.

24x7 ಯೋಜನೆಯಡಿ ನಗರ ವ್ಯಾಪ್ತಿ ಯಲ್ಲಿ ಒಟ್ಟು  24,559 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಜೂನ್‌ 4ರಂದು ಸಿಎಂ ಸಿದ್ದರಾಮಯ್ಯ ಅವರು, ಈ ಯೋಜನೆಯಡಿ 4 ವಲಯ ಗಳಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆ ಮಾಡುವುದಕ್ಕೆ ಚಾಲನೆ ನೀಡಿ ದ್ದರು. ಆನಂದ ನಗರ, ಹುಡ್ಕೋ ಕಾಲೊನಿ, ಕೆ.ಸಿ ಪಾರ್ಕ್ ಮತ್ತು ಪಿ ಅಂಡ್‌ ಟಿ ಕ್ವಾಟರ್ಸ್‌ನ ಜನತೆ ಮೊದಲು 24x7 ನೀರಿನ ಭಾಗ್ಯವನ್ನು ಪಡೆದಿದ್ದರು. ‘ಈಗಲೂ ಈ ಪ್ರದೇಶಗಳಲ್ಲಿ ನೀರು ಪೂರೈಕೆಯಾಗುತ್ತಿದೆ.

ಆದರೆ, ದಿನದ 24 ಗಂಟೆಯೂ ನೀರು ಬರುವುದಿಲ್ಲ. ಬೆಳಿಗ್ಗೆ ಮತ್ತು ಸಂಜೆ ತಲಾ ಒಂದರಿಂದ ಒಂದೂ ವರೆ ಗಂಟೆಗಳ ಕಾಲ ಮಾತ್ರ ನೀರು ಪೂರೈಕೆಯಾಗುತ್ತಿದೆ. ಉಳಿದ ಸಮಯ ದಲ್ಲಿ  ನಳ ತಿರುಗಿದರೆ ಒಂದು ಹನಿ ಕೂಡ ನೀರು ಬರುವುದಿಲ್ಲ. ಪ್ರತಿ ದಿನ ನೀರು ಬರುತ್ತಿದೆ ಎನ್ನುವುದೇ ದೊಡ್ಡ  ಸಮಾಧಾನ’ ಎಂದು ಪಿ ಅಂಡ್‌ ಟಿ ಕ್ವಾಟರ್ಸ್ ನಿವಾಸಿ ಶುಭಾ ನಿರಂಜನ ಹೇಳಿದರು. 

‘ಪ್ರಾಯೋಗಿಕವಾಗಿ ನೀರು ಪೂರೈಕೆ ಪ್ರಾರಂಭಿಸಿದ್ದ ನಾಲ್ಕೂ ವಲಯಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಈಗ ಬೆಟಗೇರಿ ಕುರಟ್ಟಿಪೇಟೆ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಸೋರಿಕೆ ಇರುವುದು ನಿಜ. ಇದನ್ನು ಪತ್ತೆ ಹಚ್ಚಿ ಸರಿಪಡಿಸುವ  ಕೆಲಸವೂ ನಡೆದಿದೆ. ಕಾಮಗಾರಿ ಪೂರ್ಣಗೊಂಡ 4 ವಲಯ ಗಳಲ್ಲಿ ನಗರಸಭೆಯ ಸಾಂಪ್ರದಾಯಿಕ ಕುಡಿಯುವ ನೀರು ಪೂರೈಕೆ ಸ್ಥಗಿತ ಗೊಂಡಿದ್ದು, ಪ್ರತಿನಿತ್ಯ 24x7 ಪೈಪ್‌ಲೈನ್‌ ಮೂಲಕವೇ ನೀರು ಪೂರೈಸಲಾಗುತ್ತಿದೆ’ ಎಂದು ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಲ್‌.ಜಿ ಪತ್ತಾರ ತಿಳಿಸಿದರು.

ಸೋರಿಕೆ ಹೆಚ್ಚು: ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ಪ್ರದೇಶ ಗಳಲ್ಲಿ ಒಳಚರಂಡಿ ಯೋಜನೆ ಕಾಮ ಗಾರಿಗಾಗಿ ಮತ್ತೆ ರಸ್ತೆ ಅಗೆಯಲಾಗಿದ್ದು, ಪೈಪ್‌ಲೈನ್‌ ಹಾನಿಗೊಳಗಾಗಿದೆ. ಗುತ್ತಿಗೆ ದಾರರು ಇದನ್ನು ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ ಕುಡಿಯುವ ನೀರು ಪೂರೈಕೆ ಆದಾಗ ಅಲ್ಲಲ್ಲಿ ಸೋರಿಕೆ ಆಗುತ್ತದೆ.  ಹೀಗಾಗಿ, ನಗರಸಭೆ ನೀರು ಪೂರೈಸಿದರೂ ಕೆಲವು ಬಡಾವಣೆಯ ನಿವಾಸಿಗಳಿಗೆ ಕುಡಿಯುವ ನೀರಿನ ಭಾಗ್ಯ ಲಭಿಸುತ್ತಿಲ್ಲ. ಲಕ್ಷಾಂತರ ಲೀಟರ್‌ ನೀರು ಸೋರಿಕೆಯಾಗಿ ಚರಂಡಿಗೆ ಹರಿಯುತ್ತಿದೆ. ವಿವೇಕಾನಂದ ಬಡಾವಣೆ, ರಾಜೀವ ಗಾಂಧಿ ನಗರ, ಕೆಸಿ ಪಾರ್ಕ್‌ನ ಹಲವು ಕಡೆ ನೀರು ಸೋರಿಕೆಯಾಗುತ್ತಿದೆ. 

ನಗರಸಭೆ ಅಂಕಿ ಅಂಶದ ಪ್ರಕಾರ, ಗದಗ–ಬೆಟಗೇರಿ ಅವಳಿ ನಗರದಲ್ಲಿ ಒಟ್ಟು 24,559 ಮನೆಗಳಿದ್ದು, ನಗರದ ಜನಸಂಖ್ಯೆ ಅನುಗುಣವಾಗಿ  ಪ್ರತಿ ನಿತ್ಯ ನೀರು ಪೂರೈಸಬೇಕಾದರೆ ಅಂದಾಜು 45 ಎಂಎಲ್‌ಡಿ  ನೀರು ಬೇಕಾಗುತ್ತದೆ.  ಇದಕ್ಕಾಗಿ ಹಮ್ಮಿಗೆ ಬ್ಯಾರೇಜ್‌ನಿಂದ ನಗರಕ್ಕೆ 62.78 ಕಿ.ಮೀ ಉದ್ದ ಪೈಪ್‌ ಲೈನ್‌ ಅಳವಡಿಸಿ ನೀರು  ಶುದ್ಧೀಕರಿಸಿ ಪೂರೈಕೆ ಮಾಡುವ ಯೋಜನೆಯನ್ನು ₹ 127.29 ಕೋಟಿ ವೆಚ್ಚದಲ್ಲಿ ಕೈಗೆತ್ತಿ ಕೊಳ್ಳಲಾಗಿದೆ. ಈ ಯೋಜನೆಯ ನೀರು ಶುದ್ದೀಕರಣ ಘಟಕ ಶಿಂಗಟರಾಯನ ಕೆರೆ ತಾಂಡಾದ ಪಾಪನಾಶಿಯಲ್ಲಿದೆ.

*  * 

ನಿರಂತರ ನೀರು ಪೂರೈಸುವ 24X7 ಕುಡಿಯುವ ನೀರಿನ ಕಾಮಗಾರಿ 6 ತಿಂಗಳಲ್ಲಿ ಮುಗಿಯಲಿದೆ.  ಅವಳಿ ನಗರದ 35 ವಾರ್ಡ್‌ಗಳಿಗೂ ನೀರು ಪೂರೈಕೆ ಮಾಡಲಾಗುವುದು
ಎಚ್‌.ಕೆ. ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT