ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ‘ಜೂಜಾಟ’: ಬಾಂದಾರಿಗೆ ಸದ್ಯಕ್ಕಿಲ್ಲ ಗೇಟು!

Last Updated 6 ಸೆಪ್ಟೆಂಬರ್ 2017, 5:04 IST
ಅಕ್ಷರ ಗಾತ್ರ

ಹಾವೇರಿ: ಬರದ ಪರಿಣಾಮ ಜಿಲ್ಲೆಯ 50 ಬಾಂದಾರು (ಬ್ರಿಡ್ಜ್‌ ಕಂ ಬ್ಯಾರೇಜು)ಗಳಿಗೆ ಗೇಟು ಹಾಕಬೇಕು ಎಂಬ ಬೇಡಿಕೆ  ರೈತರಿಂದ ಕೇಳಿಬಂದಿದ್ದರೆ, ‘ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯಬಹುದು’ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದ, ‘ಇತ್ತ ನೀರಿಲ್ಲ, ಅತ್ತ ಗೇಟು ಹಾಕಲು ಪೂರಕ ವಾತಾವರಣವಿಲ್ಲ’ ಎಂಬ ಇಕ್ಕಟ್ಟಿಗೆ ಜಿಲ್ಲಾಡಳಿತ ಸಿಲುಕಿದೆ.

‘ಮಹಾರಾಷ್ಟ್ರದಲ್ಲಿ ಈಚೆಗೆ ಸುರಿದ ‘ಮಹಾ’ ಮಳೆಯಂತೆ, ಜಿಲ್ಲೆಯಲ್ಲೂ ಮುಂದಿನ ದಿನಗಳಲ್ಲಿ  ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರಿಂದಾಗಿ ಬಾಂದಾರುಗಳ ಗೇಟು ಹಾಕುವುದು ಅಪಾಯ. ಈ ನಿಟ್ಟಿನಲ್ಲಿ  ನಿರಂತರ ನಿಗಾ ವಹಿಸಿದ್ದು, ತಜ್ಞರ ಅಭಿಪ್ರಾಯದಂತೆ ಕ್ರಮಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆಯಾಶ್ರಿತ: ‘ಭಾರತದ ಕೃಷಿಯನ್ನು ಮಳೆ ಜೊತೆಗಿನ ಜೂಜಾಟ’ ಎಂದೇ ಬಣ್ಣಿಸುತ್ತಾರೆ. ಜಿಲ್ಲೆಯಲ್ಲೂ 3.29 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿಯಲ್ಲಿ 2.30 ಲಕ್ಷ ಹೆಕ್ಟೇರ್ ಪ್ರದೇಶವು ಮಳೆಯಾಶ್ರಿತ. ಸತತ ಮೂರು ವರ್ಷಗಳ ಬರದ ಕಾರಣ, ಕೇವಲ ಕೃಷಿ ಮಾತ್ರವಲ್ಲ, ಬಳಕೆಯ ನೀರಿಗೂ ಮಳೆ ಆಶ್ರಯಿಸುವ ಸ್ಥಿತಿ ಬರುತ್ತಿದೆ. ಜಿಲ್ಲೆಯಲ್ಲಿ ಶೇ 35ಕ್ಕೂ ಹೆಚ್ಚು ಮಳೆ ಕೊರತೆಯಿದೆ.

ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮುದ್ವತಿ ನದಿಗಳು ಹಾಗೂ ಹಳ್ಳಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಬಾಂದಾರುಗಳು ಜಿಲ್ಲೆಯಲ್ಲಿವೆ. ಈ ಬಾರಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಮಳೆಯ ತೀವ್ರ ಕೊರತೆ ಕಾರಣ ಆಗಸ್ಟ್‌ ಎರಡನೇ ವಾರದ ಬಳಿಕ ಗೇಟು ಹಾಕಲು ನಿರ್ಧರಿಸಲಾಗಿತ್ತು. ಆದರೆ, ಆಗಸ್ಟ್‌ ಕೊನೆ ವಾರದಲ್ಲಿ ಸುರಿದ ಮಳೆಗೆ ಹರಿವು ಸ್ವಲ್ಪ ಹೆಚ್ಚಿತ್ತು. ಈಗ ಮತ್ತೆ ಇಳಿಕೆಯಾಗಿದೆ. ಹೀಗಾಗಿ ಬಾಂದಾರುಗಳಿಗೆ ಗೇಟು ಹಾಕಬೇಕು ಎಂಬ ಬೇಡಿಕೆ ಹೆಚ್ಚಿದೆ. 

ಬಾಂದಾರುಗಳ ಮೂಲಕ ಕೇವಲ ಕೃಷಿ, ಕೈಗಾರಿಕೆಗಳು, ಕೆರೆಗೆ ನೀರು ತುಂಬಿಸುವುದು ಮಾತ್ರವಲ್ಲ, ಜಿಲ್ಲೆಯ 237 ಗ್ರಾಮಗಳಿಗೆ ಕುಡಿವ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯ ಅಂತರ್ಜಲ ಮಟ್ಟವು 26.77 ಮೀಟರ್ಸ್‌ ಕುಸಿತ ಕಂಡಿದ್ದು, ಜಿಲ್ಲಾಡಳಿತದ ನಿದ್ದೆಗೆಡಿಸಿದೆ.

ಗೇಟು ಹಾಕಿದರೂ ಬತ್ತಿತ್ತು!
‘ಹಿಂದಿನ ವರ್ಷ ಮುಂಚಿತವಾಗಿ ಹಾಕಲಾಗಿತ್ತು. ಆದರೆ, ಈಗ ನೀರಿನ ಹರಿವು ಕಡಿಮೆ ಇದ್ದರೂ, ಮಳೆಯ ಮುನ್ಸೂಚನೆ ಇರುವ ಕಾರಣ ಗೇಟು ಹಾಕುವುದು ಅಪಾಯಕಾರಿ’ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲೆಯ ನದಿಗಳಲ್ಲಿ ನವೆಂಬರ್‌ ಆರಂಭದ ತನಕ ನೀರಿನ ಹರಿವು ಇರುತ್ತದೆ. ಅಕ್ಟೋಬರ್‌ ಅಂತ್ಯದಲ್ಲಿ ಗೇಟು ಹಾಕುವುದು ವಾಡಿಕೆ. 2016ರಲ್ಲಿ ಅವಧಿಗೂ ಮೊದಲೇ ಗೇಟುಗಳನ್ನು ಹಾಕಲಾಗಿತ್ತು. ಆದರೂ,  ಮಾರ್ಚ್‌ನಲ್ಲಿ ನೀರಿನ ಮಟ್ಟವು ಶೇ 50 ರಷ್ಟು ಕುಸಿದಿತ್ತು. ಏಪ್ರಿಲ್‌ –ಮೇ ತಿಂಗಳಲ್ಲಿ ಬಾಂದಾರುಗಳು ಬತ್ತಿ ಹೋಗಿದ್ದವು ಎಂದು ಅವರು ಹೇಳುತ್ತಾರೆ.

‘ಹೊಸ ನಿಯಮದಂತೆ ಸಮೀಕ್ಷೆ’
‘ಬದಲಾದ ನಿಯಮಾವಳಿ ಪ್ರಕಾರ ಶೇ50 ರಷ್ಟು ಬೆಳೆ ಹಾನಿಯಾದ ಹೊಲಗಳ  ಜಿಪಿಎಸ್ ಫೋಟೊ ತೆಗೆದು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲಾಗುವುದು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ ಡಿಎಂಸಿ) ವರದಿ, ಜಂಟಿ ಸಮೀಕ್ಷಾ ವರದಿಗಳನ್ನು ಆಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ತಿಳಿಸಿದರು. ‘ಈ ಕುರಿತು ಹೆಚ್ಚುವರಿ ಡಿ.ಸಿ ನೇತೃತ್ವದ 35 ಅಧಿಕಾರಿಗಳಿಗೆ ತರಬೇತಿ ನಡೆಯುತ್ತಿದೆ’ ಎಂದರು.

ಹಾವೇರಿ ಜಿಲ್ಲೆಯ ಬಾಂದಾರುಗಳು
50ಬಾಂದಾರು ಹಾವೇರಿ ಜಿಲ್ಲೆಯಲ್ಲಿ ನಿರ್ಮಿಸಲಾದ ಒಟ್ಟು ಸಂಖ್ಯೆ

ಜೌಗು ಸಮೀಕ್ಷೆ ಸರ್ಕಾರವು ಜಿಲ್ಲೆಯ ಸುಮಾರು 320 ಪ್ರದೇಶಗಳನ್ನು ‘ಜೌಗು ಪ್ರದೇಶ’ಗಳೆಂದು ಗುರುತಿಸಿದೆ

16ಬಾಂದಾರು ವರದಾ ನದಿಗೆ ಕಟ್ಟಿರುವ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT