ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಹೋದ ಜೋಕುಮಾರ ಬಂದ !

Last Updated 6 ಸೆಪ್ಟೆಂಬರ್ 2017, 5:32 IST
ಅಕ್ಷರ ಗಾತ್ರ

ರಬಕವಿ- ಬನಹಟ್ಟಿ: ಮಳೆಯ ದೇವತೆ ಮತ್ತು ಫಲವತ್ತತೆಯ ಸಂಕೇತವಾಗಿರುವ  ಜೋಕುಮಾರನನ್ನು ಮಹಿಳೆಯರು ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿಕೊಂಡು ಅವನನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿಯ ಕಟ್ಟೆಯ ಮೇಲೆ ಕುಳಿತು ಹಾಡು ಹಾಡಿ  ಪೂಜಿಸುವುದು ಈ ಭಾಗಗಳಲ್ಲಿ ಐದಾರು ದಿನಗಳಿಂದ ನಡೆಯುತ್ತಿದೆ.

ಮಂಗಳವಾರ ಸ್ಥಳೀಯ ಮಂಗಳವಾರ ಪೇಟೆಯ ಬೇರೆ ಬೇರೆ ಓಣಿಗಳಲ್ಲಿ ಜೋಕುಮಾರ ಸ್ವಾಮಿ ಕಾಣಿಸಿಕೊಂಡನು. ಜೋಕುಮಾರನ್ನು ಹೊತ್ತು ತಂದ ಮಹಿಳೆಯರು ಮನೆಗಳ ಕಟ್ಟೆಯ ಮೇಲೆ ಕುಳಿತು ಹಾಡು ಹಾಡಿ ಸುತ್ತ ಮುತ್ತಲಿನ ಮನೆಯ ಹೆಣ್ಣು ಮಕ್ಕಳು ನೀಡಿದ ನೈವೇದ್ಯ ಪಡೆದುಕೊಂಡರು.

ಜೋಕುಮಾರನನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ ನಂತರ ಸುತ್ತ ಮುತ್ತಲಿನ ಮಹಿಳೆಯರು ಮರದಲ್ಲಿ ಅಕ್ಕಿ, ಜೋಳ, ಗೋಧಿ, ಎಣ್ಣೆ, ರೊಟ್ಟಿ ಇಟ್ಟುಕೊಂಡು ಬಂದು ನೈವೇದ್ಯ ಸಲ್ಲಿಸುತ್ತಾರೆ.

ಜೋಕುಮಾರನ ತುಟಿಗೆ ಹಚ್ಚಿದ ಬೆಣ್ಣೆಯನ್ನು ಬೇವಿನ ಎಲೆಗೆ ಹಚ್ಚಿ ಅದನ್ನು ಮಹಿಳೆಯರಿಗೆ ನೀಡುತ್ತಿದ್ದರು. ಜೋಕುಮಾರನಿಗೆ ಹಚ್ಚಿದ ಬೆಣ್ಣೆಯನ್ನು ಕಣ್ಣುಗಳಿಗೆ ಹಚ್ಚಿಕೊಂಡರೆ ಯಾವುದೇ ಕಣ್ಣಿನ ರೋಗ ಬರುವುದಿಲ್ಲ ಎಂಬುವುದು ಇಲ್ಲಿಯ ಜನರ ನಂಬಿಕೆಯಾಗಿದೆ.

ಕುಂಬಾರರ ಮನೆಯಲ್ಲಿ ಜನಿಸಿ, ತಳವಾರ ಮನೆಯಲ್ಲಿ ಮೆರದಾಡಿ, ಕೇರ್‍್ಯಾನ ಮನೆಯಲ್ಲಿ ಜಿಗಿದಾಡಿ, ಕೊನೆಗೆ ದಾಸರ ಪಡಿಯಲ್ಲಿ ಮರಣ ಹೊಂದುತ್ತಾನೆ ಎಂಬುದು ಮೊದಲಿನಿಂದ ಜಾರಿಯಲ್ಲಿದ್ದ ಪದ್ಧತಿಯಾಗಿದೆ. 7 ದಿನಗಳವರೆಗೆ ತಿರುಗಾಡಿ 7ನೇ ರಾತ್ರಿ ಎಲ್ಲ ಜನ ಮಲಗಿದ ಮೇಲೆ ಕೇರಿಯಲ್ಲಿನ ದೇವಿಗುಡಿ ಕಟ್ಟೆಯ ಮೇಲೆ ಇಟ್ಟು ಬರುತ್ತಾರೆ.

ನಂತರ ಕೇರಿ ಜನ  ಮೂರ್ತಿ ಯ ಮೇಲೆ ಬಾರಿಗಿಡದ ಕಂಟಿಯಿಂದ ಮುಚ್ಚಿ ಆತನ ಸುತ್ತಲೂ ಸುತ್ತುತ್ತಾರೆ. ಸುತ್ತುವಾಗ ಬಾರಿ ಕಂಟಿಗೆ ಸೀರೆ ಸಿಲುಕಿದಾಗ ಜೋಕುಮಾರ ಜಗ್ಗಿದಾ ಎಂದು ಭಾವಿಸಿ ಕಲ್ಲಿನಿಂದ, ಒನಕೆಯಿಂದ ಜಡಿದು ತಲೆ ಬುರುಡೆ ಒಡೆಯುವುದು ವಾಡಿಕೆ.

ನಂತರ ದಾಸರ ಪಡಿಯಲ್ಲಿ ಒಡೆದ ಮೂರ್ತಿಯನ್ನು ದಫನ್‌ ಮಾಡುತ್ತಾರೆ.ಮರುದಿನ ಅಗಸರು ಜೋಕುಮಾರನ ದಿನವನ್ನು ಮಾಡಿ ಸಿಹಿ ಊಟ ಮಾಡಿ ಹಬ್ಬ ಮುಗಿಸುತ್ತಾರೆ. ಕಾರು ಹುಣ್ಣಿಮೆ ಯಿಂದ ಆರು ತಿಂಗಳಗಳ ಕಾಲ ಭಾರತೀಯರು ಅನೇಕ ರೀತಿಯ ಮಣ್ಣಿನ ಪೂಜೆ ಮಾಡುತ್ತಾರೆ. ಅದರಲ್ಲಿ ಜೋಕು ಮಾರ ಒಬ್ಬ. ಇಂದಿನ ದಿನದಲ್ಲಿಯೂ  ಹಬ್ಬದ ಆಚರಣೆ ಈಗಲೂ ನಡೆದು ಕೊಂಡು ಬಂದಿರುವುದು ಹೆಮ್ಮೆಯ ಸಂಗತಿ.

* * 

ಜೋಕುಮಾರ ಪ್ರಕೃತಿ ಮತ್ತು ಪುರುಷನ ಸಮ್ಮಿಲನದ ಸಂಕೇತ. ಇಂದಿಗೂ ಆಚರಿಸುತ್ತಿರುವುದು ವಿಶಿಷ್ಟವಾಗಿದೆ
ಸಿದ್ಧರಾಜ ಪೂಜಾರಿ
ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT