ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ವಿಶ್ವವಿದ್ಯಾಲಯಗಳ ರಾಜಧಾನಿ

Last Updated 6 ಸೆಪ್ಟೆಂಬರ್ 2017, 5:44 IST
ಅಕ್ಷರ ಗಾತ್ರ

ಕಲಬುರ್ಗಿ: ‘ಗುಲಬರ್ಗಾ ವಿಶ್ವ ವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಈಗ ಶರಣಬಸವ ವಿಶ್ವ ವಿದ್ಯಾಲಯ ಸ್ಥಾಪನೆಯಿಂದ ಕಲಬುರ್ಗಿಯು ವಿಶ್ವವಿದ್ಯಾಲಯಗಳ ರಾಜಧಾನಿಯಾಗಿದೆ’ ಎಂದು ಶರಣ ಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಶರಣಬಸವಪ್ಪ ಅಪ್ಪ ಅಭಿಪ್ರಾಯಪಟ್ಟರು.

ನಗರದ ಶರಣಬಸವ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಇತರ ಆಡಳಿತ ಮಂಡಳಿ ಸದ್ಯರ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಒಳಗೊಂಡು ಎಲ್ಲ ಪದಾಧಿಕಾ ರಿಗಳು ಮತ್ತು ಉಪನ್ಯಾಸಕರು ಜ್ಞಾನದ ಪರಿಧಿಯನ್ನು ವಿಸ್ತರಿಸಬೇಕು’ ಎಂದು ಸಲಹೆ ನೀಡಿದರು.
‘ಪೂಜ್ಯ ದೊಡ್ಡಪ್ಪ ಅಪ್ಪ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ವಿಶ್ವವಿದ್ಯಾಲಯವಾಗಿದೆ. ಸಂಸ್ಥೆಯಲ್ಲಿ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆ ಮಕ್ಕಳಿಗೆ ಪರೀಕ್ಷೆಯಲ್ಲಿ ನಕಲು ಮಾಡಿ ಎಂದು ಪುಸ್ತಕ ಕೊಟ್ಟರೂ ನಿರಾಕರಿಸುತ್ತಾರೆ. ಗುಣಾತ್ಮಕ ಶಿಕ್ಷಣ ಇದಕ್ಕೆ ಕಾರಣ’ ಎಂದರು.

ಕುಲಪತಿ ಡಾ.ನಿರಂಜನ ವಿ.ನಿಷ್ಠಿ ಮಾತನಾಡಿ, ‘ಶರಣಬಸವಪ್ಪ ಅಪ್ಪ ಅವರ ಅವಿರತ ಪ್ರಯತ್ನದ ಫಲವಾಗಿ ಶರಣಬಸವ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ. ಹಿಂದುಳಿದ ಭಾಗದಲ್ಲಿ ಜ್ಞಾನದ ಬೆಳಕನ್ನು ಪಸರಿಸುತ್ತಿರುವ ಶರಣಬಸವಪ್ಪ ಅಪ್ಪ ಅವರು ‘ವಿದ್ಯೆ ಭಂಡಾರಿ’ ಆಗಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಗೊಂದಲದ ಗೂಡಾಗಿವೆ. ಶಿಸ್ತು ಮೈಗೂಡಿಸಿಕೊಂಡಿರುವ ಶರಣಬಸವ ವಿ.ವಿ ಈ ಭಾಗದ ಭವಿಷ್ಯತ್ತಿನ ಬೆಳಕಾಗಲಿದೆ’ ಎಂದರು.

‘ಅನೇಕ ಕಾರಣಗಳಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಾರೆ. ಯಾದಗಿರಿ ಜಿಲ್ಲೆ ಸರಾಸರಿ ಶೇ 3ರಷ್ಟು, ಕೊಪ್ಪಳ ಶೇ 14, ಬೀದರ್‌ ಶೇ 22, ಕಲಬುರ್ಗಿ ಶೇ 32ರಷ್ಟು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಾರೆ’ ಎಂದು ಮಾಹಿತಿ ನೀಡಿದರು.

ಮೇಯರ್‌ ಶರಣಕುಮಾರ ಮೋದಿ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಶಿಕ್ಷಕರು ದೇಶ ಕಟ್ಟುವ ಕೆಲಸ ಮಾಡುತ್ತಾರೆ. ದೇಶದ ಭವಿಷ್ಯ ಯುವಶಕ್ತಿಯ ಮೇಲೆ ನಿಂತಿದೆ. ಈ ಮಟ್ಟಕ್ಕೆ ಬೆಳೆಯಲು ಸಂಸ್ಥೆಯಲ್ಲಿ ನಮಗೆ ದೊರೆತ ಗುಣಮಟ್ಟದ ಶಿಕ್ಷಣ ಹಾಗೂ ಶರಣಬಸವೇಶ್ವರರ ಆಶೀರ್ವಾದವೇ ಕಾರಣ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಪ್ರಾಸ್ತಾವಿಕ ಮಾತನಾಡಿದರು.

ಸಹ ಕುಲಪತಿ ಡಾ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಶಿವದತ್ತ ಹೊನ್ನಳ್ಳಿ, ಡೀನ್‌ ಡಾ.ಲಿಂಗರಾಜ ಶಾಸ್ತ್ರಿ, ಹಣಕಾಸು ಅಧಿಕಾರಿ ಶಿವಲಿಂಗಪ್ಪ ನಿರಗುಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT