ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಪರಿಸರಕ್ಕೆ ಈ ಶಾಲೆ ಮಾದರಿ

Last Updated 6 ಸೆಪ್ಟೆಂಬರ್ 2017, 6:02 IST
ಅಕ್ಷರ ಗಾತ್ರ

ಸಿರವಾರ: ಪಟ್ಟಣದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮುಚ್ಚಳಗುಡ್ಡ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣ ವಿವಿಧ ತಳಿಗಳ ಗಿಡಗಳನ್ನು ಬೆಳೆಸುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ಪಾಠದ ಜತೆಗೆ ಪರಿಸರ ಪಾಠ.

ಶಾಲೆಯ ಪ್ರಾರಂಭದ ವರ್ಷದಿಂದಲೂ ಕ್ಯಾಂಪಿನ ನಿವಾಸಿಗಳ ಸಹಕಾರದಿಂದ ಅಂದಿನ ಶಾಲೆ ಮುಖ್ಯ ಶಿಕ್ಷಕ ನಾಗಪ್ಪ ಅವರ ಪರಿಸರ ವಿಶೇಷ ಕಾಳಜಿಯಿಂದ ಅಂದು ನೆಟ್ಟ ಸಸಿಗಳು ಇಂದು ದೊಡ್ಡ ಮರಗಳಾಗಿ ಶಾಲೆಯ ಅಂದ ಹೆಚ್ಚಿಸಿವೆ.

ಕ್ಯಾಂಪಿನ ತುಂಬಾ ಸ್ವಚ್ಛತೆ ಕೊರತೆ ಇದ್ದರೂ, ಶಾಲೆ ಆವರಣ ಪ್ರವೇಶಿಸಿದರೆ ದೇವಸ್ಥಾನ ಪ್ರವೇಶಿಸಿದ ಭಾವನೆ ಮೂಡುತ್ತದೆ. 1997ರಲ್ಲಿ ಕ್ಯಾಂಪಿನ ಭೂದಾನಿಗಳಾದ ದಿವಂಗತ ಭೀಮಯ್ಯ ನಾಯಕ ಅವರು ನೀಡಿದ್ದ ಜಮೀನಿನಲ್ಲಿ ನಿರ್ಮಾಣವಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದು ತಾಲ್ಲೂಕಿನ ಮಾದರಿ ಶಾಲೆಯಾಗಿದೆ.
35 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಾಲೆಯ ಸುಸಜ್ಜಿತ ನಾಲ್ಕು ಕೊಠಡಿಗಳಿದ್ದು, ಎರಡಲ್ಲಿ ಮಕ್ಕಳಿಗೆ ಪಾಠ, ಒಂದರಲ್ಲಿ ಕಾರ್ಯಾಲಯ ಮತ್ತೊಂದು ಬಿಸಿಯೂಟ ತಯಾರಿಕೆ ಬಳಸಿಕೊಳ್ಳಲಾಗಿದೆ.
ಶಾಲೆ ಆವರಣದಲ್ಲಿಯೇ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ, ಸುತ್ತಲೂ ಕಾಂಪೌಂಡ್, ಗೇಟ್ ವ್ಯವಸ್ಥೆ ಇದೆ.

ತೋಟ ನಿರ್ಮಾಣ: ಶಾಲೆ ಪ್ರಾರಂಭದಿಂದಲೂ ಮುಖ್ಯ ಶಿಕ್ಷಕರು ಸ್ವ ಆಸಕ್ತಿಯಿಂದ ಶಾಲೆ ಅವಧಿ ಮುಗಿದ ನಂತರ ಕೆಲ ಸಮಯ ತೋಟ ನಿರ್ಮಾಣ ಮತ್ತು ಗಿಡಗಳ ಪೋಷಣೆಗಾಗಿ ಕೆಲಸ ಮಾಡಿದ್ದಾರೆ.

ಶಾಲೆಯ ಹಿಂದಿನ ಆವರಣದಲ್ಲಿ ತೋಟ ನಿರ್ಮಾಣ ಮಾಡಿದ್ದು, ಅದರಲ್ಲಿ ಈರೇಕಾಯಿ, ಸೌತೆಕಾಯಿ ಬಳ್ಳಿಗಳು, ಕರಿಬೇವು, ಪುಂಡೆ ಸೊಪ್ಪುಗಳನ್ನು ಬೆಳೆದು ಪೋಷಿಸಿ ದಿನಾಲೂ ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತದೆ.

ಗಿಡ ಮತ್ತು ತೋಟದ ನಿರ್ವಹಣೆಯನ್ನು ಶಿಕ್ಷಕರು ಒಬ್ಬ ವಿದ್ಯಾರ್ಥಿಗೆ ಒಂದರಂತೆ ಅವುಗಳ ಪೋಷಣೆ ಕ್ರಮವಹಿಸಿದ್ದಾರೆ. ಅದರ ಪ್ರಕಾರ ವಿದ್ಯಾರ್ಥಿಗಳು ಪ್ರತಿದಿನ ತಮಗೆ ವಹಿಸಿದ ಬಳ್ಳಿ ಮತ್ತು ಸಸಿಗಳಿಗೆ ಅಗತ್ಯದ ಪೋಷಣೆ ಮಾಡುತ್ತಾರೆ.

ಶಾಲೆ ಪ್ರಾರಂಭ ವರ್ಷದಿಂದಲೂ ಮುಖ್ಯ ಶಿಕ್ಷಕರಾಗಿದ್ದ ನಾಗಪ್ಪ ಕಳೆದ ಶೈಕ್ಷಣಿಕ ವರ್ಷದಲ್ಲಿ ಹಿರಿತನ ಮತ್ತು ಹೆಚ್ಚುವರಿ ಶಿಕ್ಷಕರ ಕಾರಣ ಬೇರೆ ಕಡೆ ವರ್ಗವಾದರೂ ನಾಗಪ್ಪ ಮಾಸ್ಟರ್ ಶಾಲೆ ಎಂದು ಈಗಲೂ ಕರೆಯುತ್ತಿರುವುದು ಅವರ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಶಾಲೆಯ ಉತ್ತಮ ಪರಿಸರಕ್ಕೆ 2004– 05 ಮತ್ತು 2005-06ನೇ ಸಾಲಿನ ಜಿಲ್ಲಾ ಶಿಕ್ಷಣ ಇಲಾಖೆಯ ಕಲಿಕಾ ಖಾತ್ರಿ ಪ್ರಶಸ್ತಿಗಳು, 2013-14 ನೇ ಸಾಲಿನಲ್ಲಿ ಪರಿಸರ ಮಿತ್ರ ಪಶಸ್ತಿ ಪಡೆದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT