ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಗೆ ಆಗ್ರಹ: ಬಿಜೆಪಿ ಪ್ರತಿಭಟನೆ

Last Updated 6 ಸೆಪ್ಟೆಂಬರ್ 2017, 6:52 IST
ಅಕ್ಷರ ಗಾತ್ರ

ಗೌರಿಬಿದನೂರು: ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸುವುದು, ಹೋಬಳಿ ಕೇಂದ್ರದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನಿರ್ಮಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರೆಗೆರೆ ಹೋಬಳಿ ಬಿಜೆಪಿ ಯುವ ಮೋರ್ಚಾ ಘಟಕದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಬಿಜೆಪಿ ಯುವ ಮೋರ್ಚಾ ನಗರಗೆರೆ ಹೋಬಳಿ ಘಟಕದ ಅಧ್ಯಕ್ಷ ನಾಗಭೂಷಣ್ ರೆಡ್ಡಿ ಮಾತನಾಡಿ, ಗುಡಿಬಂಡೆ ಮುಖ್ಯ ರಸ್ತೆಯಿಂದ ನಗರಗೆರೆ ಹೋಬಳಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ 15 ಕಿ. ಮೀ. ರಸ್ತೆ ಹಾಗೂ ಹೋಬಳಿಯಲ್ಲಿ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.

ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸವಾರರು ಪ್ರಯಾಣಿಸಲು ಹರಸಾಹಸ ಪಡಬೇಕಾಗಿದೆ. ತುರ್ತು ಸಂದರ್ಭದಲ್ಲಿ ಹದಗೆಟ್ಟ ರಸ್ತೆಯಲ್ಲಿ ರೋಗಿಗಳನ್ನು ಪಟ್ಟಣಕ್ಕೆ ಕರೆದೊಯ್ಯುವಾಗ ನರಕ ಯಾತನೆ ಅನುಭವಿಸಬೇಕಾಗಿದೆ. ಅಭಿವೃದ್ಧಿಗೆ ಅನುದಾನ ನೀಡುವುದರಲ್ಲಿ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಸದಸ್ಯ ಸಂತೋಷ್ ರೆಡ್ಡಿ ಮಾತನಾಡಿ, ಆರು ತಿಂಗಳ ಹಿಂದೆ ಈ ಭಾಗದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಾಗಿ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಆದರೆ ಇದುವರೆಗೂ ಯಾವುದೇ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದರು.

ವಾಟದ ಹೊಸಹಳ್ಳಿಯಿಂದ ಮೇಳ್ಯಾ, ನಕ್ಕಲಹಳ್ಳಿಯಿಂದ ಜೀಲಾಕುಂಟೆ, ನಗರಗೆರೆಯಿಂದ ಬಂದಾರ್ಲಹಳ್ಳಿ, ಸಾದಾರ್ಲಹಳ್ಳಿಯಿಂದ ಮಣಿವಾಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಈ ಎಲ್ಲ ರಸ್ತೆಗಳನ್ನು ಕಾಲಮಿತಿಯೊಳಗೆ ಅಭಿವೃದ್ಧಿ ಪಡಿಸಬೇಕು. ಇಲ್ಲವಾದರೆ ತಾಲ್ಲೂಕಿನಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಬಾಬುರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಪಕ್ಷದ ಹಿರಿಯ ಮುಖಂಡ ರಾಮಕೃಷ್ಣಾ ರೆಡ್ಡಿ, ನಗರಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೋಡಿರಪ್ಪ, ಪ್ರದೀಪ್, ಸೋಮಶೇಖರರೆಡ್ಡಿ, ಶ್ರೀಧರ್, ಲಕ್ಷ್ಮಣರೆಡ್ಡಿ, ವಿವೇಕಾನಂದರೆಡ್ಡಿ, ರಂಗನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT