ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಮುಕ್ತ ದಕ್ಷಿಣ ಕನ್ನಡ ಜಿಲ್ಲೆಗೆ ಪಣ

Last Updated 6 ಸೆಪ್ಟೆಂಬರ್ 2017, 7:19 IST
ಅಕ್ಷರ ಗಾತ್ರ

ಮಂಗಳೂರು: ಸ್ವಚ್ಛತಾ ಅಭಿಯಾನ, ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯ ನಿರ್ಮಾಣದಲ್ಲಿ ಯಶಸ್ಸು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಇದೀಗ ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣತೊಟ್ಟಿದೆ. ಇದಕ್ಕಾಗಿಯೇ ಸ್ವಚ್ಛತಾ ನೀತಿಯನ್ನೂ ಅಂಗೀಕರಿಸಿದೆ.

ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯ 230 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಸೂಕ್ತ ವಿಲೇವಾರಿಗಾಗಿ ವಿಶೇಷ ಸ್ವಚ್ಛತಾ ನೀತಿ 2017 ಅನ್ನು ಅಂಗೀಕರಿಸಲಾಗಿದೆ. ಇದರ ಅಂಗವಾಗಿ ವಾರ್ಡ್‌ ಮಟ್ಟದಲ್ಲಿ ಮನೆ– ಮನೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿಡುವ ಅಭಿಯಾನವನ್ನು ಆರಂಭಿಸಿದೆ. ಇದಕ್ಕಾಗಿ ಜಿಲ್ಲೆಯ 1,688 ಅಂಗನವಾಡಿ ಕೇಂದ್ರಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ.

ಮನೆಗಳಿಂದ ತರುವ ಶುಚಿ ಮತ್ತು ಶುಷ್ಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಾತ್ರ ಸಂಗ್ರಹಿಸಲಾಗುವುದು. ಈ ರೀತಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅದೇ ದಿನ ಸಂಜೆ ಗ್ರಾಮ ಪಂಚಾಯಿತಿ ಹಂತದಲ್ಲಿ ನಿರ್ಮಿಸಲಾದ ಪ್ಲಾಸ್ಟಿಕ್ ಸಂಗ್ರಹಣಾ ಶೆಡ್‌ನಲ್ಲಿ ಶೇಖರಿಸಿಡಲಾಗುವುದು.

ಹೀಗೆ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮೂರು ತಿಂಗಳಿಗೊಮ್ಮೆ ಮರು ಬಳಕೆ ಘಟಕಗಳಿಗೆ ರವಾನಿಸಲಾಗುವುದು. ಇದರಿಂದ ಬಂದ ಆದಾಯದ ಶೇ 25ರಷ್ಟನ್ನು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದ್ದಾರೆ.

ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಇರುವುದೊಂದೇ ಭೂಮಿ’ ಎನ್ನುವ ಕಿರುಚಿತ್ರವನ್ನು ರಚಿಸಲಾಗಿದೆ. ಈ ಚಿತ್ರದಲ್ಲಿ ಮನೆಗಳಲ್ಲಿ ಉತ್ಪಾದನೆಯಾಗುವ ಘನ, ದ್ರವ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸುವುದು, ಹಸಿ ಕಸವನ್ನು ಪರಿಸರ ಸ್ನೇಹಿ ಮಿತವ್ಯಯಕರವಾದ ವಿಧಾನಗಳ ಮೂಲಕ ಸೂಕ್ತ ರೀತಿಯಲ್ಲಿ ಸಂಪನ್ಮೂಲವಾಗಿ ಮರುಬಳಕೆ ಮಾಡುವುದು ಹಾಗೂ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ಅರೋಗ್ಯ ಹಾಗೂ ಪರಿಸರದ ಮೇಲೆ ಉಂಟಾಗುವ ದುಷ್ಪಪರಿಣಾಮಗಳ ಬಗ್ಗೆ ಚಿತ್ರಿಸಲಾಗಿದೆ.

ಸಾರ್ವಜನಿಕರು ಸಾಮಾಜಿಕ ಹೊಣೆಗಾರಿಕೆಯಲ್ಲಿ ತಮ್ಮ ಮನೆಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶುಚಿ ಮತ್ತು ಶುಷ್ಕವಾಗಿ ಶೇಖರಿಸಿ, ಮರು ಬಳಕೆ ಘಟಕಗಳಿಗೆ ಕಳುಹಿಸಲು ಸ್ಥಳೀಯ ಆಡಳಿತದೊಂದಿಗೆ ಕೈಜೋಡಿಸಬೇಕು. ಇರುವ ಒಂದು ಅಮೃತ ಭೂಮಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಸಹಕರಿಸಬೇಕು ಎಂದು ಡಾ.ರವಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT