ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ಕಣವಾಗುತ್ತಿರುವ ಮಂಗಳೂರು

Last Updated 6 ಸೆಪ್ಟೆಂಬರ್ 2017, 7:21 IST
ಅಕ್ಷರ ಗಾತ್ರ

ಮಂಗಳೂರು: ಪೊಲೀಸರ ಅನುಮತಿ ನಿರಾಕರಣೆಯನ್ನು ಮೀರಿ ‘ಮಂಗಳೂರು ಚಲೋ’ ರ‍್ಯಾಲಿ ನಡೆಸಲು ಬಿಜೆಪಿ ಸಿದ್ಧವಾಗುತ್ತಿದೆ. ಪರಿಸ್ಥಿತಿ ಕೈ ಮೀರುವುದನ್ನು ತಡೆಯಲು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸುವ ಕುರಿತು ಪೊಲೀಸ್‌ ಇಲಾಖೆ ಯೋಚಿಸುತ್ತಿದ್ದು, ಮಂಗಳೂರು ನಗರ ಮತ್ತೊಮ್ಮೆ ಬಿಜೆಪಿ, ಸಂಘ ಪರಿವಾರ ಮತ್ತು ಪೊಲೀಸರ ನಡುವಿನ ಕದನ ಕಣವಾಗಿ ಮಾರ್ಪಡುವಂತೆ ಗೋಚರಿಸುತ್ತಿದೆ.

ಜಿಲ್ಲೆಯ ವಿವಿಧೆಡೆ ಬೈಕ್‌ ರ‍್ಯಾಲಿ ಮತ್ತು ಪ್ರತಿಭಟನಾ ಸಭೆಗಳನ್ನು ನಡೆಸಲು ಅನುಮತಿ ಕೋರಿ ಬಿಜೆಪಿ ಯುವ ಮೋರ್ಚಾ ಸಲ್ಲಿಸಿದ್ದ ಅರ್ಜಿಗಳನ್ನು ಪೊಲೀಸರು ಸೋಮವಾರ ತಿರಸ್ಕರಿಸಿದ್ದಾರೆ. ಮಂಗಳವಾರ ಪ್ರತ್ಯೇಕ ಅರ್ಜಿಯೊಂದನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ಅವರಿಗೆ ಸಲ್ಲಿಸಿರುವ ಬಿಜೆಪಿ ಜಿಲ್ಲಾ ಘಟಕ, ಗುರುವಾರ ಇಲ್ಲಿನ ನೆಹರೂ ಮೈದಾನದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಲು ಅನುಮತಿ ನೀಡುವಂತೆ ಕೋರಿದೆ.

ಮಂಗಳೂರು ಚಲೋಗೆ ಪೂರ್ವಭಾವಿಯಾಗಿ ಜಿಲ್ಲೆಯ 260 ಕಡೆಗಳಲ್ಲಿ ಸೋಮವಾರ ಪ್ರತಿಭಟನಾ ಸಭೆಗಳನ್ನು ನಡೆಸಿರುವ ಬಿಜೆಪಿ ಯುವ ಮೋರ್ಚಾ, ಜಿಲ್ಲೆಯಿಂದಲೇ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರಲು ಸಿದ್ಧತೆ ನಡೆಸಿದೆ. ಪೊಲೀಸರ ಕಣ್ತಪ್ಪಿಸಿ ಹೊರ ಜಿಲ್ಲೆಗಳಿಂದ ಬರುವವರಿಗೆ ಊಟ, ವಸತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ರ‍್ಯಾಲಿ ನಡೆಸುವುದನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಆಡಳಿತರೂಢ ಕಾಂಗ್ರೆಸ್‌, ಪೊಲೀಸರ ಬೆಂಬಲಕ್ಕೆ ನಿಂತಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಸಚಿವ ಯು.ಟಿ.ಖಾದರ್‌ ಪೊಲೀಸರ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ನ ಹಿರಿಯ ಅಧಿಕಾರಿಗಳು, ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸುವ ಕುರಿತು ಪರಿಶೀಲಿಸುತ್ತಿದ್ದಾರೆ.

ಬುಧವಾರ ಬೆಳಿಗ್ಗೆ ಈ ಸಂಬಂಧ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಮಂಗಳೂರು ಚಲೋ ವಿಚಾರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಪೊಲೀಸ್‌ ಇಲಾಖೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಸೇರಿದಂತೆ ಒಂದು ಸಾವಿರಕ್ಕಿಂತಲೂ ಅಧಿಕ ಹೆಚ್ಚುವರಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಿದೆ.

ರ‍್ಯಾಲಿ ನಡೆಯುವುದು ನಿಶ್ಚಿತ: ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಮತ್ತು ಹಿರಿಯ ಮುಖಂಡ ಮೋನಪ್ಪ ಭಂಡಾರಿ, ‘ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಪ್ರತಿಭಟನಾ ಸಭೆ ನಡೆಸಲು ಅನುಮತಿ ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದೇವೆ. ಅನುಮತಿ ದೊರೆಯದಿದ್ದರೂ, ಬೈಕ್‌ ರ‍್ಯಾಲಿ ಮತ್ತು ಬಹಿರಂಗ ಸಭೆ ನಡೆಯುವುದು ನಿಶ್ಚಿತ. ಜಿಲ್ಲೆಯ ಒಳಗಿನಿಂದಲೇ 10 ಸಾವಿರ ಬೈಕ್‌ಗಳು ರ‍್ಯಾಲಿಗೆ ಬರುತ್ತವೆ’ ಎಂದರು.

ರಾಜ್ಯ ಸರ್ಕಾರ ಪೊಲೀಸರನ್ನು ಜೀತದಾಳುಗಳ ರೀತಿ ಬಳಸಿಕೊಂಡು ಬಿಜೆಪಿಯ ಪ್ರತಿಭಟನೆ ತಡೆಯುತ್ತಿದೆ. ಇಂತಹ ತಂತ್ರಗಳಿಗೆ ಮಣಿಯುವುದಿಲ್ಲ. ರ‍್ಯಾಲಿಗೆ ಬರುವ ಎಲ್ಲರಿಗೂ ಊಟ ಮತ್ತು ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿಯ ಪ್ರತಿಭಟನೆಯನ್ನು ತಡೆಯುವುದು ಯಾರಿಂದಲೂ ಸಾಧ್ಯವಾಗದು ಎಂದು ಹೇಳಿದರು.

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಕಾರ್ಕಳ ಶಾಸಕ ಸುನೀಲ್‌ಕುಮಾರ್‌ ಹಾಗೂ ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲಾ ಘಟಕದ ಅದ್ಯಕ್ಷ ಶ್ರೀಶ ನಾಯಕ್‌ ಕೂಡ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂಬ ಹೇಳಿಕೆ ನೀಡಿದ್ದಾರೆ. ನೆರೆಯ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಂಗಳೂರು ಚಲೋ ರ‍್ಯಾಲಿಯ ಸಿದ್ಧತೆ ಮುಂದುವರಿದಿದೆ ಎಂಬುದನ್ನು ಅವರು ಹೇಳಿದ್ದಾರೆ.

ಕಾಂಗ್ರೆಸ್ ವಿರೋಧ: ಬೈಕ್‌ ರ‍್ಯಾಲಿಗೆ ಅನುಮತಿ ನಿರಾಕರಿಸಿರುವುದನ್ನು ಸಮರ್ಥಿಸಿಕೊಂಡ ಸಚಿವ ರಮಾನಾಥ ರೈ, ‘ರ‍್ಯಾಲಿಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣದಿಂದ ಪೊಲೀಸರು ಅನುಮತಿ ನೀಡಿಲ್ಲ. ಪೊಲೀಸರ ತೀರ್ಮಾನ ಸರಿ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಅವರ ಹೊಣೆ. ಅದಕ್ಕೆ ಪೂರಕವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.

‘15 ವರ್ಷಗಳ ಅವಧಿಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಾತ್ರ ಮತೀಯ ದ್ವೇಷಕ್ಕೆ ಬಲಿಯಾಗಿಲ್ಲ. ಅಮಾಯಕ ಹಿಂದೂಗಳು, ಮುಸಲ್ಮಾನರು ಕೂಡ ಬಲಿಯಾಗಿದ್ದಾರೆ. ಅವರೆಲ್ಲರ ವಿಚಾರ ಬಿಟ್ಟು ಒಂದೇ ವಿಷಯದ ಮೇಲೆ ಹೋರಾಟ ನಡೆಸುವುದರ ಹಿಂದೆ ಬೇರೆಯೇ ಕಾರ್ಯಸೂಚಿ ಇದೆ’ ಎಂದು ದೂರಿದರು.
‘ರ‍್ಯಾಲಿಗೆ ಅನುಮತಿ ನೀಡಿಲ್ಲ ಎಂದು ಈಗ ಪೊಲೀಸರನ್ನು ದೂಷಿಸಲಾಗುತ್ತಿದೆ. ರ‍್ಯಾಲಿ ನಡೆದು ಅಹಿತಕರ ಘಟನೆ ಸಂಭವಿಸಿದರೂ ಪೊಲೀಸರನ್ನೇ ದೂರುತ್ತಾರೆ’ ಎಂದು ಸಚಿವ ಖಾದರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT