ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರದು ನಾಯಿ ಪಾಡು: ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ

Last Updated 6 ಸೆಪ್ಟೆಂಬರ್ 2017, 7:30 IST
ಅಕ್ಷರ ಗಾತ್ರ

ಉಡುಪಿ: ‘ಪೊಲೀಸರ ಸ್ಥಿತಿ ನಾಯಿ ಪಾಡಾಗಿದೆ. ಅಧಿಕಾರಿಗಳು ಬೀದಿಗೆ ಬರುವಂತಾಗಿದೆ. ಡಿವೈಎಸ್‌ಪಿ ಗಣಪತಿ ಅವರ ದೂರವಾಣಿ ಕರೆಗಳ ವಿವರವನ್ನು ಅಳಿಸಲಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿದರೂ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಲಾಗಿದೆ’ ಎಂದು ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಆರೋಪಿಸಿದರು.

ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪಿನ ಹಿನ್ನೆಲಯಲ್ಲಿ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ಕೈವಾಡ ಇದೆ ಎಂಬ ಆರೋಪ ಇದೆ. ಆದರೂ ಸಿಐಡಿ ಈ ವರೆಗೂ ಆರೋಪಪಟ್ಟಿ ಸಲ್ಲಿಸಿಲ್ಲ’ ಎಂದು ಗದ್ಗದಿತರಾದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹70 ಲಕ್ಷ ಬೆಲೆಯ ವಾಚ್‌ ಪಡೆದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಪತ್ರವನ್ನು ಸಿಬ್ಬಂದಿ ಮತ್ತು ತರಬೇತಿ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಕಚೇರಿಯಿಂದ ಉತ್ತರ ಬಂದಿದೆ’ ಎಂದರು.

‘ಮುಖ್ಯಮಂತ್ರಿ, ಸಚಿವರಾದ ಆರ್‌.ವಿ. ದೇಶಪಾಂಡೆ, ಪ್ರಮೋದ್ ಮಧ್ವರಾಜ್‌, ರಮೇಶ್ ಕುಮಾರ್‌, ಎಚ್‌.ಸಿ. ಮಹದೇವಪ್ಪ, ಹಿರಿಯ ಐಎಎಸ್‌ ಅಧಿಕಾರಿಗಳಾದ ರಜನೀಶ್ ಗೋಯಲ್, ಶಾಲಿನಿ ರಜನೀಶ್‌, ಟಿ.ಬಿ. ಜಯಚಂದ್ರ, ಕಾಗೋಡು ತಿಮ್ಮಪ್ಪ (ಆಗಿನ ವಿಧಾನಸಭೆ ಅಧ್ಯಕ್ಷ), ಉದ್ಯಮಿ ಬಿ.ಆರ್. ಶೆಟ್ಟಿ ಹಾಗೂ ವಾಚ್‌ವನ್ನು ನೀಡಿದ ಡಾ. ಗಿರೀಶ್‌ಚಂದ್ರ ವರ್ಮಾ ಅವರ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ’ ಎಂದು ಹೇಳಿದರು.

‘ಗಿರೀಶ್ ಚಂದ್ರ ಅವರು ಬಿ.ಆರ್. ಶೆಟ್ಟಿ ಮಾಲೀಕತ್ವದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಉಡುಪಿಯ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಜೋಗ ಜಲಪಾತವನ್ನು ಅಭಿವೃದ್ಧಿಪಡಿಸಲು ಶೆಟ್ಟಿ ಅವರಿಗೆ ವಹಿಸಲಾಗಿದೆ. ಇದಕ್ಕೂ ದುಬಾರಿ ಬೆಲೆಯ ವಾಚ್‌ ಪಡೆದಿರುವುದಕ್ಕೂ ಸಂಬಂಧ ಇದೆ’ ಎಂದು ಆರೋಪಿಸಿದರು.

‘ಈಗ ವಾಚ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಸುಪರ್ದಿಯಲ್ಲಿದೆ. ಆದ್ದರಿಂದ ಅವರೇ ಎಫ್‌ಐಆರ್ ದಾಖಲಿಸಬೇಕು. ಈ ಬಗ್ಗೆ ವಿಧಾನಸಭೆ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರಿಗೂ ಪತ್ರ ಬರೆಯಲಾಗಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT