ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುವುದು ಬಿಟ್ಟು ಸುತ್ತೋಣ ಬನ್ನಿ !

Last Updated 6 ಸೆಪ್ಟೆಂಬರ್ 2017, 8:35 IST
ಅಕ್ಷರ ಗಾತ್ರ

ನಾವು ಈ ದೃಶ್ಯವನ್ನು ಮತ್ತೆ ಮತ್ತೆ ನೋಡುತ್ತಿರುತ್ತೇವೆ: ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಚೀಲ ಬಿದ್ದಿರುತ್ತದೆ. ಯಾರೋ ಅದರೊಳಕ್ಕೆ ಪುಲಾವ್, ಬಿರಿಯಾನಿ ಮೂಳೆ, ಸಾಂಬಾರ್ ಅನ್ನ ಹೀಗೇ ಏನೋ ಮಿಕ್ಕುಳಿದಿದ್ದ ಆಹಾರ ಪದಾರ್ಥವನ್ನು ತುಂಬಿ ಬಿಸಾಕಿದ್ದಾರೆ.

ಹಸಿದ ಹಸು, ಹಂದಿ, ನಾಯಿ ಅಥವಾ ಕಾಗೆ ಅದನ್ನು ಎಳೆದಾಡಿ ರಸ್ತೆಯವರೆಗೂ ತಂದು ಕಷ್ಟಪಟ್ಟು ಒಳಗಿನ ಆ ಎಂಜಲನ್ನು ತಿನ್ನಲು ಯತ್ನಿಸುತ್ತಿರುತ್ತದೆ. ಪ್ಲಾಸ್ಟಿಕ್ ಚೀಲವೂ ಅರ್ಧಂಬರ್ಧ ಅದರ ಹೊಟ್ಟೆಗೆ ಹೋಗಿ ಮರುದಿನ ಅದು ಸಂಕಟಪಡುತ್ತಿರುತ್ತದೆ. ಇತ್ತ ಮಿಕ್ಕುಳಿದ ಚೀಲ ಚಿಂದಿಯಾಗಿ ಚೆಲ್ಲಾಡಿರುತ್ತದೆ.

ಮನುಷ್ಯರ ಅತ್ಯಂತ ಅನಾಗರಿಕ ವರ್ತನೆಯ ಸಂಕೇತ ಇದು ತಾನೆ? ತಿಂದು ಮಿಕ್ಕುಳಿದ ಆಹಾರವನ್ನು ಬಿಸಾಕುವುದಾದರೆ ಬಿಸಾಕಲಿ. ಅದು ನಿಸರ್ಗಕ್ಕೆ ಸೇರಿದರೆ ಇತರ ಜೀವಿಗೆ ಆಹಾರವಾಗಿಯೋ, ಕೊಳೆತು ಗೊಬ್ಬರವಾಗಿಯೋ ಮರುಬಳಕೆ ಆಗುತ್ತದೆ.

ಆದರೆ ಪ್ಲಾಸ್ಟಿಕ್ ಚೀಲದಲ್ಲಿ ಆಹಾರ ತ್ಯಾಜ್ಯವನ್ನು ಕಟ್ಟಿ ಬಿಸಾಕಿದರೆ ಅದು ನಿಸರ್ಗಕ್ಕೆ ಸೇರುವುದಿಲ್ಲ. ಇರುವೆಗಳೂ ಎರೆಹುಳುಗಳೂ ಅದನ್ನು ತಿನ್ನಲಾರವು. ಅಲ್ಲೇ ಕಳಿತು ಗೊಬ್ಬರವಾಗಿ ಸಸ್ಯಗಳಿಗೂ ಸೇರುವುದಿಲ್ಲ. ದೊಡ್ಡ ಪ್ರಾಣಿಗಳ ಹಸಿದ ಹೊಟ್ಟೆಗೆ ಪ್ಲಾಸ್ಟಿಕ್ ಸಮೇತ ಹೋಗುತ್ತದೆ.

ಆ ಪ್ರಾಣಿಗೆ ನಾಳೆ ಏನೆಲ್ಲ ಸಂಕಟವನ್ನು, ಕಾಯಿಲೆಯನ್ನು ತರುತ್ತದೆ. ಅಂಥ ಹೆಚ್ಚುವರಿ ಆಹಾರವನ್ನು ಬಿಸಾಕಲೇಬೇಕೆಂದಿದ್ದರೆ ಬಾಳೆ ಎಲೆಯಲ್ಲಿ ಕಟ್ಟಿದ ಹಾಗೆ, ಕಾಗದದಲ್ಲೊ ಅಥವಾ ಬೇಕಿದ್ದರೆ ಪ್ಲಾಸ್ಟಿಕ್‌ನಲ್ಲೋ ಸುತ್ತಿ, ಅದು ಸಲೀಸಾಗಿ ತಿಪ್ಪೆಗುಂಡಿಯಲ್ಲಿ ತೆರೆದುಕೊಳ್ಳುವಂತೆ ಬಿಸಾಕಬೇಕು ತಾನೆ? ಕಟ್ಟಿ ಬಿಸಾಕುವುದಕ್ಕಿಂತ ಸುತ್ತಿ ಬಿಸಾಕಲು ಹೆಚ್ಚಿಗೆ ಶ್ರಮವೇನೂ ಬೇಕಾಗುವುದಿಲ್ಲ.

ಈ ಸರಳ ಸಂಗತಿಯನ್ನು ನಾವು ಯಾಕೆ ಜನರಿಗೆ ತಿಳಿಸಲು ವಿಫಲರಾಗುತ್ತಿದ್ದೇವೆ? ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಎಲ್ಲೆಡೆ ಇದನ್ನು ಕಾಣುತ್ತೇವೆ. ಬೆಂಗಳೂರು ಎಂದರೆ ಅತ್ಯಂತ ಹೈಟೆಕ್ ನಗರ, ವಿಜ್ಞಾನ ನಗರ. ದಿನವೂ ಕ್ಯಾಲಿಫೋರ್ನಿಯಾ, ಸಿಂಗಾಪೂರ್, ಟೋಕಿಯೊ, ಸಿಡ್ನಿಗಳಿಂದ ಜನರು ಬರುತ್ತಿರುವ ನಗರ. ಆದರೂ ಇಡೀ ಜಗತ್ತಿನೆದುರು ತಲೆ ತಗ್ಗಿಸುವಂಥ ಕೆಲಸ ಇಲ್ಲಿ ಏಕೆ ನಡೆಯುತ್ತಿದೆ ನಿತ್ಯ? ನಮ್ಮ ಸಂಸ್ಕೃತಿಯಲ್ಲಂತೂ ಪ್ರಾಣಿದಯೆಯ ಬಗ್ಗೆ ಹೇಳಬೇಕಾಗಿಯೇ ಇಲ್ಲ.

ಗೋಪೂಜೆ, ನಾಗಪೂಜೆ, ಆ ಪೂಜೆ, ಈ ಪೂಜೆ, ಗಣೇಶ ಹಬ್ಬದಲ್ಲಿ ಇಲಿಗೂ ಪೂಜೆ. ಆದರೂ ಹೀಗೇಕೆ? ಪರಿಸರ ಪ್ರೇಮ ಇಲ್ಲದಿದ್ದರೆ ಹೋಗಲಿ, ಪ್ರಾಣಿದಯೆ ತೋರಿಸಬಾರದೆ? ಇಂದಿನ ಸವಾಲು ಏನೆಂದರೆ ಜನರಿಗೆ ಈ ಸಂಗತಿಯನ್ನು ತಿಳಿಸಿ ಹೇಳುವುದು ಹೇಗೆ? ಯಾವ ಮಾಧ್ಯಮದ ಮೂಲಕ ಹೇಳೋಣ? ಪತ್ರಿಕೆಯಲ್ಲಿ ಬರೆಯಬೇಕೆ, ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಬೆಂಗಳೂರಿನಲ್ಲಿ ಶೇಕಡಾ 20ರಷ್ಟೂ ಇಲ್ಲ. ಮಾರ್ವಾಡಿ, ಗುಜರಾತಿ, ಬಂಗಾಳಿ, ಬಿಹಾರಿ, ಮಲಯಾಳಿ, ತಮಿಳು, ತೆಲುಗು ಜನರು (ಈಗೀಗ ಕನ್ನಡಿಗರೂ) ಕನ್ನಡ ಪತ್ರಿಕೆ ಓದುವುದಿಲ್ಲ.

ಓದಿದರೂ ಅವರಿಗೆ ಈ ಪುಟ್ಟ ಮಾಹಿತಿ ಕಾಣದೇ ಹೋಗಬಹುದು. ಟಿವಿಯಲ್ಲಿ, ರೇಡಿಯೊದಲ್ಲಿ, ಎಲ್ಲ ಭಾಷೆಯ ಪತ್ರಿಕೆಗಳಲ್ಲಿ ಚಳವಳಿ ಮಾದರಿಯಲ್ಲಿ ಒಂದು ವಾರ ದಿನವೂ ಇದೇ ಸಂದೇಶ ಮತ್ತೆ ಮತ್ತೆ ಬರುವಂತೆ ಮಾಡಿದರೆ ಅರ್ಧಕ್ಕರ್ಧ ಜನರಿಗೆ ಗೊತ್ತಾಗಬಹುದು (ಶೋಕಿ ವಸ್ತು ಮತ್ತು ಚಿನ್ನಾಭರಣ ಮಾರಾಟಗಾರರು ಕೋಟಿಗಟ್ಟಲೆ ರೂಪಾಯಿ ಸುರಿದು ಹೀಗೆ ಕ್ಯಾಂಪೇನ್ ಮಾಡುತ್ತಾರೆ, ಜಾಹೀರಾತುಗಳ ಮೂಲಕ). ಆಗಲೂ ಇನ್ನರ್ಧ ಜನರಿಗೆ ಗೊತ್ತೇ ಆಗುವುದಿಲ್ಲ.

ವರ್ಷವಿಡೀ ’ಸ್ವಚ್ಛ್ ಭಾರತ್ ಅಭಿಯಾನ್’ ನಡೆಸಿದರೂ ಜನರು ಬದಲಾಗಲಿಲ್ಲ ತಾನೆ? ಕಾನೂನು ಮಾಡಿದರೂ ಪ್ರಯೋಜನ ಇಲ್ಲ. ಏಕೆಂದರೆ ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಲೈಂಗಿಕ ಬಲಾತ್ಕಾರ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಎಲ್ಲವುಗಳ ವಿರುದ್ಧ ಉಗ್ರ ಕಾನೂನುಗಳಿದ್ದರೂ ಅಂತಹ ಅಪರಾಧಗಳೇನೂ ನಿಂತಿಲ್ಲವಲ್ಲ.

ಬೇರೆ ಯಾವ ಮಾಧ್ಯಮದ ಮೂಲಕ ಹೇಳೋಣ?
ನನಗೆ ಹೊಳೆಯುವ ಏಕೈಕ ಉಪಾಯವೆಂದರೆ: ಶಿಕ್ಷಕರು ಈ ಸರಳ ಸಂದೇಶವನ್ನು ಮನೆಮನೆಗೆ ಮುಟ್ಟಿಸಬಹುದು. ಅದು ಜಾರಿಗೆ ಬರುವಂತೆಯೂ ಮಾಡಬಹುದು. ಹೇಗೆಂದರೆ, ಮಕ್ಕಳ ಮನಸ್ಸಿಗೆ ನಾಟುವಂತೆ ಮೊದಲು ತಿಳಿಸಿ ಹೇಳುವುದು. ಹಸುಗಳ ಹೊಟ್ಟೆಯಿಂದ ಹತ್ತಾರು ಕಿಲೊ ಪ್ಲಾಸ್ಟಿಕ್ ಕಚಡಾವನ್ನು ಹೊರತೆಗೆದ ಚಿತ್ರಗಳು, ವಿಡಿಯೊಗಳು ಬೇಕಾದಷ್ಟಿವೆ.

ಮೂಕ ಪ್ರಾಣಿಗಳು ಪ್ಲಾಸ್ಟಿಕ್ ತಿಂದು ಹೇಗೆ ಸಂಕಟಪಡುತ್ತವೆ ಎಂದು ವಿವರಿಸಬೇಕು. ಒಂದು ತಿಂಗಳು ಕಾಲ ಪದೇ ಪದೇ ಮಕ್ಕಳಿಗೆ ಈ ವಿಷಯವನ್ನು ತಿಳಿಸಿ, ತಿಂಗಳ ಕೊನೆಯಲ್ಲಿ ವಿದ್ಯಾರ್ಥಿಗೆ ಒಂದು ಪ್ರತಿಜ್ಞಾ ಪತ್ರವನ್ನು ಕೊಡಬೇಕು. ಅದರಲ್ಲಿ, ’ನಾವು ಇನ್ನು ಹಾಗೆ ಆಹಾರ ತ್ಯಾಜ್ಯವನ್ನು ಚೀಲದಲ್ಲಿ ಕಟ್ಟಿ ಬಿಸಾಕುವುದಿಲ್ಲ’ ಎಂಬ ಪ್ರತಿಜ್ಞಾ ವಿಧಿ ಇರಬೇಕು.

ಈ ಪ್ರತಿಜ್ಞಾ ವಿಧಿಯ ಕರಪತ್ರಕ್ಕೆ ಮಗುವಿನ ಮನೆಯ ಆಸುಪಾಸಿನ ಕನಿಷ್ಠ ಹತ್ತು ಜನರಿಂದ ಸಹಿ ಹಾಕಿಸಿ ತರುವಂತೆ ವಿದ್ಯಾರ್ಥಿಗಳಿಗೆ ಹೇಳಬೇಕು. ನಗರದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೋ ಮಗುವಿನ ಅಮ್ಮ, ಅಪ್ಪ, ಅಜ್ಜ, ಅತ್ತೆ, ಅಂಕಲ್, ಮಾಮಾ ಅಥವಾ ಆಂಟಿ ಆಗಿರುತ್ತಾರೆ. ಮಗು ಬಂದು ‘ಸಹಿ ಹಾಕ್ತೀರಾ?’ ಎಂದು ಕೇಳಿದರೆ ಯಾರೂ ನಿರಾಕರಿಸಲಿಕ್ಕಿಲ್ಲ. ತೆಲುಗು, ಮಾರ‍್ವಾಡಿ, ಅಸ್ಸಾಮಿ, ಮಲೆಯಾಳಿ ಭೇದ ಇರುವುದಿಲ್ಲ. ಯಾವುದೇ ನಗರದ ಶೇಕಡಾ 9೦ಕ್ಕೂ ಹೆಚ್ಚು ಜನರಿಗೆ ಈ ಸಂದೇಶವನ್ನು ತಲುಪಿಸಲು ಸಾಧ್ಯವಾಗಬಹುದು.

ಟಿವಿ, ರೇಡಿಯೊ, ಪೇಪರ್ ಇತ್ಯಾದಿ ಮಾಧ್ಯಮಗಳಿಗಿಂತ ಮಗುವಿನ ಹೃದಯದಿಂದ ಬರುವ ಮಾತಿನ ಮಾಧ್ಯಮವೇ ಅತ್ಯಂತ ಮನಸ್ಪರ್ಶಿ ಆಗಬಹುದು. ಇಂಥದ್ದೊಂದು ಸರಳ ಕೆಲಸವನ್ನು ಮಕ್ಕಳ ಮೂಲಕ ಮಾಡಿಸೋಣ ಎಂದು ಶಿಕ್ಷಕರಿಗೆ ಹೇಳೋಣವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT