ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಬೆಳೆಕೆರೆ ಪಿಕಪ್‌ ಸುರಕ್ಷತೆಗೆ ‘ಡ್ರಿಪ್’ ಯೋಜನೆ

Last Updated 6 ಸೆಪ್ಟೆಂಬರ್ 2017, 8:43 IST
ಅಕ್ಷರ ಗಾತ್ರ

ಮಲೇಬೆನ್ನೂರು: ಸಮೀಪದ ದೇವರಬೆಳೆಕೆರೆ ಗ್ರಾಮದ ಹೊರವಲಯದ ಹರಿದ್ರಾವತಿ ನದಿಗೆ (ಶ್ಯಾಗಲೆ, ಸೂಳೆಕೆರೆಹಳ್ಳ) ಅಡ್ಡಲಾಗಿ ನಿರ್ಮಿಸಿರುವ ಪಿಕಪ್ ಅಣೆಕಟ್ಟೆಯಲ್ಲಿ ಕಂಡುಬಂದಿದ್ದ ಮೇಲ್ಮಟ್ಟದ ಬಿರುಕುಗಳ ದುರಸ್ತಿ ಕಾರ್ಯ, ಮಣ್ಣಿನ ಏರಿ ನವೀಕರಣ, ಕಲ್ಕಟ್ಟಣೆ, ರಸ್ತೆ, ಬಸಿಗಾಲುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಆರು ವರ್ಷಗಳ ಹಿಂದೆ ಮಣ್ಣಿನ ಏರಿ ಮೇಲ್ಪದರದಲ್ಲಿ ಕೆಲವೆಡೆ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ ಅಣೆಕಟ್ಟು ಸುರಕ್ಷತೆ ನಿರ್ವಹಣೆ ಅಧ್ಯಯನ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಅದರಂತೆ ಪಿಕಪ್ ಏರಿ ಸುರಕ್ಷತೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಸಿವಿಲ್ ಎಂಜಿನಿಯರಿಂಗ್ ವಿಭಾಗ, ನೀರಾವರಿ ನಿಗಮದ ವಿಶೇಷ ಪರಿಣಿತರ ತಂಡ ದುರಸ್ತಿಗೆ ‘ಅಣೆಕಟ್ಟು ಪುನಶ್ಚೇತನ ಅಭಿವೃದ್ಧಿ ಯೋಜನೆ’ (ಡಿ.ಆರ್‌.ಐ.ಪಿ) ರೂಪಿಸಿತು.

ಸುಮಾರು 2,343 ಚದರ್‌ ಕಿ.ಮೀ ವ್ಯಾಪ್ತಿಯ ಮಳೆಯಾಶ್ರಿತ ಪ್ರದೇಶದೊಂದಿಗೆ 0.10 ಟಿ.ಎಂ.ಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹರಿಹರ ತಾಲ್ಲೂಕಿನ ಏಕೈಕಿ ಪಿಕಪ್ ಅಣೆಕಟ್ಟೆ ಇದಾಗಿದೆ.

ಹರಿಹರ ಬಳಿ ತುಂಗಭದ್ರಾ ನದಿಗೆ ಸೇರುತ್ತಿದ್ದ ಬಸಿ ನೀರಿನ ಹಳ್ಳಕ್ಕೆ 1986ರಲ್ಲಿ ಪಿಕಪ್ ನಿರ್ಮಿಸಿ ಎಡ ಹಾಗೂ ಬಲ ನಾಲೆಯಿಂದ 4,280 ಹೆಕ್ಟೇರ್ ಪ್ರದೇಶದ ಜಮೀನಿಗೆ ನೀರುಣಿಸಿ ಬರಡಾಗಿದ್ದ ಭೂಮಿಯಲ್ಲಿ ಹಸಿರು ಕ್ರಾಂತಿ ಮಾಡಲಾಗಿದೆ.

₹ 2.83 ಕೋಟಿ ವೆಚ್ಚದಲ್ಲಿ ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳ ಮೇಲುಸ್ತುವಾರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಮಣ್ಣಿನ ಏರಿ ಅಗಲಿಸಿ ತಟ್ಟಣೆ ಮಾಡುವ ಮೂಲಕ ಭದ್ರಪಡಿಸಿ ದುರಸ್ತಿಗೊಳಿಸಿ ಬಸಿಗಾಲುವೆ ನಿರ್ಮಿಸಲಾಗಿದೆ. ಹುಲ್ಲುಹಾಸು, ರಸ್ತೆ, ಕಾಫರ್ ಡ್ಯಾಂ ತೆಗೆಯುವುದು, ಚಿಕ್ಕಪುಟ್ಟ ಕೆಲಸ ನಿಗದಿತ ಸಮಯದಲ್ಲಿ ನವೀಕರಣ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಎಇಇ ಗವಿಸಿದ್ದೇಶ್ವರ, ಎಇ ಕೃಷ್ಣಾನಾಯ್ಕ್ ಮಾಹಿತಿ ನೀಡಿದರು.

ನನೆಗುದಿಗೆ ಬಿದ್ದ ಉದ್ಯಾನ: ಮಣ್ಣಿನ ಏರಿಯ ಬಿರುಕು ದುರಸ್ತಿ ಮಾಡುತ್ತಿರುವುದು ಒಳ್ಳೆಯದು. ಹಲವು ವರ್ಷಗಳಿಂದ ಪಿಕಪ್‌ ಕೆಳಭಾಗದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿ ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ.

ಅತ್ಯುತ್ತಮ ಪ್ರವಾಸಿಧಾಮ, ಮೀನುಗಾರಿಕಾ, ದೋಣಿ ವಿಹಾರ ಕೇಂದ್ರವನ್ನಾಗಿಸಬಹುದಾದ ಈ ಸ್ಥಳ ಜಿಲ್ಲಾ ಕೇಂದ್ರದಿಂದ ಕೇವಲ 12 ಕಿ.ಮೀ ದೂರದಲ್ಲಿದ್ದರೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಆದಾಪುರದ ವೀರಭದ್ರಪ್ಪ ವಿಷಾದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT