ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ತಮ-ಆಕರ್ಷಕ ವಿನ್ಯಾಸದ ಟಿಗಾರ್

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಪ್ರಯಾಣಿಕರ ವಾಹನ ಕ್ಷೇತ್ರದಲ್ಲಿ ಹಲವು ಸೆಗ್ಮೆಂಟ್‌ಗಳನ್ನು ಸೃಷ್ಟಿಸಿದ ಶ್ರೇಯ ಟಾಟಾ ಮೋಟಾರ್ಸ್‌ಗೆ ಸಲ್ಲುತ್ತದೆ. ಭಾರತದ ಮೊದಲ ಡೀಸೆಲ್ ಪ್ಯಾಸೆಂಜರ್‌ ಕಾರ್‌ (ಸಿಯೆರಾ), ಭಾರತದ್ದೇ ಮೊದಲ ಎಸ್‌ಯುವಿ (ಸಫಾರಿ), ಮೊದಲ ಕಾಂಪಾಕ್ಟ್‌ ಸೆಡಾನ್ (ಇಂಡಿಗೊ ಸಿಎಸ್), ಮೊದಲ ಸ್ಟೇಷನ್ ವ್ಯಾಗನ್ (ಎಸ್ಟೇಟ್) ಹೀಗೆ ಹಲವು ಮೊದಲುಗಳನ್ನು ಭಾರತಕ್ಕೆ ಪರಿಚಯಿಸಿದ್ದು ಟಾಟಾ ಮೋಟಾರ್ಸ್. ಇದನ್ನೆಲ್ಲಾ ಈಗ ಹೇಳಬೇಕಾದದ್ದು ಏಕೆಂದರೆ ಕಂಪೆನಿ ಈಗ ಮತ್ತೊಂದು ಹೊಸ ಸೆಗ್ಮೆಂಟ್‌ ಅನ್ನು ಸೃಷ್ಟಿಸಿದೆ. ಅದು ಸ್ಟೈಲ್‌ ಬ್ಯಾಕ್. ಸ್ಟೈಲ್ ಬ್ಯಾಕ್ ಎಂಬುದು ಕಂಪೆನಿ ಈಚೆಗೆ ಬಿಡುಗಡೆ ಮಾಡಿದ ಟಿಗಾರ್‌ನ ವರ್ಗದ ಹೆಸರು. ಸ್ಟೈಲ್‌ ಬ್ಯಾಕ್ ಅದು ಯಾವ ವರ್ಗ ಎಂಬುದನ್ನು ಸೂಚಿಸುವುದಿಲ್ಲ.

ಆದರೆ ಈ ಕಾರ್ ಅತ್ತ ಹ್ಯಾಚ್‌ಬ್ಯಾಕ್ ಸಹ ಅಲ್ಲದ ಇತ್ತ ಕಾಂಪಾಕ್ಟ್ ಸೆಡಾನ್ ಸಹ ಅಲ್ಲದ ಕಾರು. ಈ ಎರಡೂ ವರ್ಗಗಳ ಮಧ್ಯದ ವರ್ಗವಿದು. ಹ್ಯಾಚ್‌ಬ್ಯಾಕ್‌ ಖರೀದಿಗೆಂದು ಮಾರುಕಟ್ಟೆಯಲ್ಲಿರುವವರು ತಮ್ಮ ಬಜೆಟ್ ಅನ್ನು ತುಸು ಹಿಗ್ಗಿಸಿಕೊಳ್ಳಬಹುದಾದ ಕಾರ್‌ ಇದು. ಶಕ್ತಿ ಮತ್ತು ಎಂಜಿನ್ ಕಾರ್ಯಕ್ಷಮತೆ ವಿಚಾರದಲ್ಲಿ ಇದು ಕಾಂಪಾಕ್ಟ್ ಸೆಡಾನ್‌ಗಳಿಗೆ ಸ್ಪರ್ಧಿಯಲ್ಲ. ಹ್ಯಾಚ್‌ಬ್ಯಾಕ್‌ ಕೊಳ್ಳಬಯಸುವವರು ಕೊಳ್ಳಬಹುದಾದ ಸೆಡಾನ್ ಅಲ್ಲದ ಸೆಡಾನ್ ಇದು.

ಆದರೆ ಭಾರತದಲ್ಲಿ ಈಗ ಇರುವ ಕಾಂಪಾಕ್ಟ್ ಸೆಡಾನ್‌ಗಳಿಗಿಂತ ಅತ್ಯಂತ ಸಮಕಾಲೀನ ಮತ್ತು ಹೆಚ್ಚು ಆಕರ್ಷಕವಾದ ಹೊರವಿನ್ಯಾಸ ಹೊಂದಿರುವ ಸೆಡಾನ್ ಇದು. ಕಂಪೆನಿ ಈಚೆಗೆ ಈ ಕಾರನ್ನು ಚಲಾಯಿಸುವ ಅವಕಾಶ ಒದಗಿಸಿತ್ತು. ಸುಮಾರು 1,200 ಕಿಮೀ ದೂರ ಈ ಕಾರನ್ನು ಚಲಾಯಿಸಲಾಯಿತು. ಚಾಲನೆಯ ಮೊದಲ ಅನುಭವವೆಂದರೆ ಇದು ಅತ್ಯುತ್ತಮ ಅರ್ಬನ್ ಕಾರು. ನಗರದೊಳಗಿನ ಚಾಲನೆಯಲ್ಲಿ ಅರಾಮದಾಯಕವಾದ ಜತೆಗೆ ಪ್ರೀಮಿಯಂ ಆದ ಅನುಭವ ನೀಡುತ್ತದೆ.

ಮೂಲತಃ ಇದು ಟಾಟಾ ಮೋಟಾರ್ಸ್‌ನ ಜನಪ್ರಿಯ ಹ್ಯಾಚ್‌ಬ್ಯಾಕ್ ಟಿಯಾಗೊದ ಪ್ಲಾಟ್‌ಫಾರಂ ಮತ್ತು ಎಂಜಿನ್‌ ಅನ್ನೇ ಹೊಂದಿರುವ ಕಾರು. ಹೀಗಾಗಿ ಟಿಯಾಗೊ ಒದಗಿಸಿದ್ದ ಎಲ್ಲಾ ಸವಲತ್ತುಗಳನ್ನು ಟಿಗಾರ್‌ ಹೊಂದಿದೆ. ಅವುಗಳ ಜತೆಯಲ್ಲೇ ಇನ್ನೂ ಹಲವು ಹೊಸ ಸವಲತ್ತುಗಳನ್ನು ಟಿಗಾರ್‌ ಹೊಂದಿದೆ.

ಟಿಯಾಗೊನಂತೆಯೇ ಟಿಗಾರ್‌ನ ಇಂಟೀರಿಯರ್ ಸಮಕಾಲೀನವಾಗಿದೆ ಮತ್ತು ಚೊಕ್ಕವಾಗಿದೆ. ಸಂಪೂರ್ಣ ಕಪ್ಪು ಬಣ್ಣದ ಇಂಟೀರಿಯರ್ ಆಕರ್ಷಕವಾಗಿದೆಯಲ್ಲದೆ ಪ್ರೀಮಿಯಂ ಅನುಭವ ನೀಡುತ್ತದೆ. ಕಾರಿನ ಬಣ್ಣದ್ದೇ ಅಂಚು ಹೊಂದಿರುವ ಎಸಿ ವೆಂಟ್ ಇದೆ. ಎಸಿ ಕಾರ್ಯಕ್ಷಮತೆ ಉತ್ತಮವಾಗಿದೆ. ಬ್ಲೋವರ್‌ ವೇಗವನ್ನು ಒಂದು ಅಥವಾ ಎರಡರಲ್ಲಿ ಇಟ್ಟರೆ ಸಾಕು ಮೈನಡುಗುವಷ್ಟು ಕ್ಯಾಬಿನ್ ತಂಪಾಗುತ್ತದೆ. ಆಟೊ ಕ್ಲೈಮೆಟ್ ಕಂಟ್ರೋಲ್ ಇರುವುದರಿಂದ ಎಸಿ

ಚೆನ್ನಾಗಿ ಕೆಲಸ ಮಾಡುತ್ತದೆ. ಟಿಯಾಗೊಗೆಂದೇ ಅಭಿವೃದ್ಧಿಪಡಿಸಿರುವ ಹರ್ಮಾನ್ ಮ್ಯೂಸಿಕ್ ಸಿಸ್ಟಂ ಇದೆ. ಅದರ ಜತೆಯಲ್ಲಿ ನೀಡಿರುವ ಸ್ಪೀಕರ್‌ ಮತ್ತು ಟ್ವೀಟರ್‌ಗಳು ನಿಜಕ್ಕೂ ಅತ್ಯುತ್ತಮವಾಗಿದೆ. ಧ್ವನಿ ವಿನ್ಯಾಸವನ್ನು ನಮಗೆ ಅಗತ್ಯವಿರುವಂತೆ ಬದಲಿಸಿಕೊಳ್ಳಲು ಅವಕಾಶವಿದೆ. ಕಂಪೆನಿಯಿಂದಲೇ ಬಂದಿರುವ ಡಿಫಾಲ್ಟ್ ವಿನ್ಯಾಸವೂ ಅತ್ಯುತ್ತಮವಾಗಿದೆ.

ಟಿಗಾರ್‌ನ ಮ್ಯೂಸಿಕ್ ಸಿಸ್ಟಂ 30 ಲಕ್ಷದ ಆಸುಪಾಸಿನ ಕಾರುಗಳಲ್ಲಿ ಇರುವ ಮ್ಯೂಸಿಕ್ ಸಿಸ್ಟಂಗಳಿಗೆ ಸರಿಸಾಟಿಯಾಗಿ ನಿಲ್ಲುತ್ತದೆ. ಟಿಯಾಗೊದಲ್ಲಿ ಇದ್ದಂತೆಯೇ ಎಂಜಿನ್ ಆನ್/ಆಫ್ ಮಾಡುವಾಗ ಮ್ಯೂಸಿಕ್ ಸಿಸ್ಟಂ ಆಫ್ ಆಗುವುದಿಲ್ಲ. ಕಾರಿನ ವೇಗ ಹೆಚ್ಚಿದಂತೆ ಧ್ವನಿಯೂ ಹೆಚ್ಚುತ್ತದೆ. ರಿವರ್ಸ್‌ ಗಿಯರ್‌ಗೆ ಬದಲಾದಂತೆ ಧ್ವನಿಯೂ ಕಡಿಮೆಯಾಗುತ್ತದೆ. ಇವೆಲ್ಲಾ ಸಣ್ಣಪುಟ್ಟ ಸಂಗತಿಗಳಾದರೂ ದೀರ್ಘಾವಧಿ ಬಳಕೆಯಲ್ಲಿ ಚೆಂದದ ಅನುಭವ ನೀಡುತ್ತದೆ.

ಮುಂಬದಿಯ ಸೀಟಿನಲ್ಲಿ ಕುಳಿತು ಕೊಳ್ಳುವುದು ಆರಾಮದಾಯಕ ವಾಗಿದೆ. ದೀರ್ಘ ಪಯಣದಲ್ಲೂ ಆಯಾಸವಾಗುವುದಿಲ್ಲ. ಹಿಂಬದಿಯ ಸೀಟು ಇಬ್ಬರು ಆರಾಮಾಗಿ ಕೂತು ಪ್ರಯಾಣಿಸಲು ಹೇಳಿ ಮಾಡಿಸಿದಂತಿದೆ. ಹಿಂಬದಿಯ ಆರ್ಮ್‌ ರೆಸ್ಟ್‌ನಲ್ಲಿ ಬಾಟಲ್ ಹೋಲ್ಡರ್‌ ನೀಡಿರುವುದು ಹೆಚ್ಚು ಉಪಯೋಗಕ್ಕೆ ಬರುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಾರಿನ ಸಸ್ಪೆನ್ಷನ್ ಮತ್ತು ಸ್ಟೀರಿಂಗ್ ಹಾಗೂ ಬ್ರೇಕಿಂಗ್ ಸಂಯೋಜನೆ ಚೆನ್ನಾಗಿದೆ. ಕಡಿಮೆ ವೇಗದಲ್ಲಿ ಸ್ಟೀರಿಂಗ್ ತೀರಾ ಹಗುರವಾಗಿದೆ, ಹೀಗಾಗಿ ಚಾಲನೆ ಸುಲಭ. ಆದರೆ ಭಾರದ ಸ್ಟೀರಿಂಗ್ ಚಾಲನೆ ಅನುಭವ ಇರುವವರಿಗೆ ಇದು ತುಸು ಅಭ್ಯಾಸವಾಗಬೇಕು. ಅಥವಾ ಕಂಪೆನಿಯೇ ಸ್ಟೀರಿಂಗ್‌ನ ಫೀಡ್‌ಬ್ಯಾಕ್‌ ಅನ್ನು ಹೆಚ್ಚಿಸಿದರೆ ಒಳಿತು. ಸಸ್ಪೆನ್ಷನ್ ಅತ್ತ ಮೆದುವೂ ಅಲ್ಲ ಇತ್ತ ಗಡಸೂ ಅಲ್ಲ.

ಹೀಗಾಗಿ ಹಳ್ಳಕೊಳ್ಳದ ರಸ್ತೆಗಳಲ್ಲಿ ಟಿಗಾರ್ ಹೆಚ್ಚು ಕುಲುಕಾಡುವುದಿಲ್ಲ. ಜತೆಗೆ ವೇಗದ ಚಾಲನೆಯಲ್ಲಿ ತಿರುವುಮುರುವಿನಲ್ಲೂ ಕಾರು ಹೆಚ್ಚು ಓಲಾಡುವುದಿಲ್ಲ. ಇದಕ್ಕೆ ಕಾರ್‌ನಲ್ಲಿ ನೀಡಿರುವ ಅಗಲವಾದ ಟೈರ್‌ಗಳೂ ಪ್ರಮುಖ ಕಾರಣ. ಟಿಗಾರ್‌ನ್ನು ತಿರುವು ಮುರುವಾಗಿದ್ದ ಹೆದ್ದಾರಿಯೊಂದರಲ್ಲಿ 120 ಕಿ.ಮೀ ವೇಗದಲ್ಲಿ (ಆ ಹೆದ್ದಾರಿಯ ವೇಗಮಿತಿ ಅಷ್ಟೆ) ಚಲಾಯಿಸಲಾಯಿತು. ರಸ್ತೆ ವಿಭಜಕದಿಂದ ಕೇವಲ ಒಂದು ಅಡಿ ಅಂತರದಲ್ಲಿ ಚಲಾಯಿಸುತ್ತಾ ಮೊದಲು ಬಲಕ್ಕೆ, ನಂತರ ಎಡಕ್ಕೆ ಮತ್ತು ಮತ್ತೆ ಬಲಕ್ಕೆ ತಿರುವು ಪಡೆಯಲಾಯಿತು (ರಸ್ತೆ ಇದ್ದದ್ದೇ ಹಾಗೆ).

ಅಷ್ಟು ವೇಗದಲ್ಲೂ ಕಾರಿನ ಮೇಲೆ ಚಾಲಕನಿಗೆ ನಿಯಂತ್ರಣ ಕಡಿಮೆಯಾಗುವುದಿಲ್ಲ. ಭಾರಿ ವೇಗದಲ್ಲೂ ಚಾಲಕ ಹೇಳಿದಂತೆ ಕೇಳುವಂತೆ ಕಾರಿನ ಸಸ್ಪೆನ್ಷನ್-ಸ್ಟೀರಿಂಗ್ ಅನ್ನು ಹದವಾಗಿ ಸಂಯೋಜನೆ ಮಾಡಲಾಗಿದೆ. ಕಾಂಪಾಕ್ಟ್ ಸೆಡಾನ್‌ಗಳಲ್ಲಿ ಹಲವು ಕಾರುಗಳನ್ನು ಹೀಗೆ ಚಲಾಯಿಸಲು ಸಾಧ್ಯವಿಲ್ಲ ಎಂಬುದು ಟಿಗಾರ್‌ನ ಹೆಗ್ಗಳಿಕೆಯೇ ಹೌದು.

ನಾವು ಚಲಾಯಿಸಿದ್ದು ಡೀಸೆಲ್ ಟಿಗಾರ್‌. ಕಾರಿನ ಗಾತ್ರ ಮತ್ತು ತೂಕಕ್ಕೆ ಹೋಲಿಸಿದರೆ ಎಂಜಿನ್ ನಿಜಕ್ಕೂ ಸಣ್ಣದು (1,050 ಸಿಸಿ). ಹೀಗಾಗಿ ಎಂಜಿನ್ ಚೆನ್ನಾಗಿ ಬಿಸಿಯಾಗುವವರೆಗೂ ಕಾಯಬೇಕು. ಆಗ ಮಾತ್ರ ಸುಲಭವಾಗಿ ಚಾಲನೆ ಮಾಡಬಹುದು. ಇಲ್ಲದಿದ್ದಲ್ಲಿ ಪದೇ ಪದೇ ಗಿಯರ್ ಬದಲಿಸಬೇಕಾಗುತ್ತದೆ. ಟಿಯಾಗೊ ಎಎಂಟಿಯಲ್ಲಿ ಗಿಯರ್‌ಗಳ ರೇಷಿಯೊವನ್ನು ಚೆನ್ನಾಗಿ ವಿನ್ಯಾಸ ಮಾಡಲಾಗಿದೆ. ಅದರಲ್ಲಿ ಕಾರಿನಲ್ಲಿ ಸಣ್ಣ ಎಂಜಿನ್ ಇದೆ ಎನಿಸುವುದೇ ಇಲ್ಲ. ಅಂಥದ್ದೇ ಬದಲಾವಣೆಯನ್ನು ಟಿಗಾರ್‌ ಮಾಡುವುದು ಅತ್ಯಗತ್ಯ. ಇದು ತಕ್ಷಣದ ಪರಿಹಾರ ಮಾತ್ರ. ಟಿಗಾರ್‌ಗೆ ಇನ್ನೂ ಶಕ್ತಿಯುತವಾದ ಎಂಜಿನ್ ನೀಡಿದಲ್ಲಿ ತನ್ನ ವರ್ಗಕ್ಕಿಂತಲೂ ದೊಡ್ಡ ವರ್ಗದ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT