ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲ್ಕ್ಯುಲೇಟರ್‌ ಕಥೆ-3

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕ್ಯಾಲ್ಕ್ಯುಲೇಟರ್‌ಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದದ್ದು 19ನೇ ಶತಮಾನದಲ್ಲಿ. ಆಧುನಿಕ ಕಾಲಘಟ್ಟದ ಕಚ್ಚಾ ಗಣಕ ಸಾಧನದ ಹರಿಕಾರ ಫ್ರಾನ್ಸ್‌ನ ಥಾಮಸ್‌ ಡಿ ಕೋಲ್ಮರ್‌. ಮನುಷ್ಯನ ಹಸ್ತಕ್ಷೇಪ ಇಲ್ಲದೇ ಯಂತ್ರಮುಖೇನ ಲೆಕ್ಕಾಚಾರ ಮಾಡಬಹುದಾಗಿದ್ದ ‘ಅರಿತ್ಮೊಮೀಟರ್‌’ ಎಂಬ ಸಾಧನವನ್ನು 1820ರಲ್ಲಿ ಅಭಿವೃದ್ಧಿಪಡಿಸಿದ ಅವರು ಅದಕ್ಕೆ ಪೇಟೆಂಟ್‌ ಪಡೆದರು. ಕೂಡಿಸುವುದು, ಕಳೆಯುವುದು, ಗುಣಾಕಾರ, ಭಾಗಾಕಾರಗಳನ್ನು ಇದರಲ್ಲಿ ಮಾಡಬಹುದಿತ್ತು. ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಲು ಆರಂಭಿಸಿದ್ದು 1851ರಲ್ಲಿ.

ಅದರ ತಯಾರಿಕೆ 20ನೇ ಶತಮಾನದ ಎರಡನೇ  ದಶಕದವರೆಗೂ ಮುಂದುವರಿದಿತ್ತು. ಯೂರೋಪಿನಾದ್ಯಂತ 20ಕ್ಕೂ ಹೆಚ್ಚು ಕಂಪೆನಿಗಳು ಈ ಗಣಕ ಸಾಧನವನ್ನು ನಕಲು ಮಾಡಿ ಕ್ಯಾಲ್ಕ್ಯುಲೇಟರ್‌ಗಳನ್ನು ತಯಾರಿಸಿದ್ದವು!

1886ರಲ್ಲಿ ವಿಲಿಯಂ ಸೀವರ್ಡ್‌ ಬರೊ ಎಂಬುವವರು ‘ಪಿ100 ಬರೊಸ್‌ ಕೂಡಿಸುವ ಯಂತ್ರ’ ರೂಪಿಸಿದರು. 1887ರಲ್ಲಿ ಅತ್ತ ಅಮೆರಿಕದಲ್ಲಿ ಡೊರ್‌ ಇ.ಫೆಲ್ಟ್‌ ಎಂಬುವವರು ‘ಕಂಪ್ಟೊಮೀಟರ್‌‘ ಎಂಬ ಸುಧಾರಿತ, ಗುಂಡಿ/ ಬಟನ್‌ಗಳಿರುವ ಗಣಕ ಸಾಧನ ರೂಪಿಸಿದರು.

20ನೇ ಶತಮಾನದ ಮಧ್ಯಭಾಗದಲ್ಲಿ ಮಹತ್ವದ ಬೆಳವಣಿಗೆ ಆಯಿತು. ಆಸ್ಟ್ರಿಯಾದ ಕರ್ಟ್‌ ಹರ್ಜ್‌‌ಸ್ಟಾರ್ಕ್‌ ಎಂಬುವರು 1948ರಲ್ಲಿ ಪುಟ್ಟ ಗಣಕ ಸಾಧನವನ್ನು ಅಭಿವೃದ್ಧಿ ಪಡಿಸಿದರು. ಅದರ ಹೆಸರು ‘ಕರ್ಟಾ ಕ್ಯಾಲ್ಕ್ಯುಲೇಟರ್‌’. ಅದುವರೆಗೂ ಈ ಸಾಧನಗಳ ಗಾತ್ರ ದೊಡ್ಡದಾಗಿತ್ತು. ಕರ್ಟಾ ಗಣಕಯಂತ್ರ ಸಣ್ಣ ಗಾತ್ರ ಹೊಂದಿದ್ದುದು ಮಾತ್ರವಲ್ಲದೇ ಜೇಬಿನಲ್ಲೂ ಹಿಡಿಯುತ್ತಿತ್ತು. ಇದರಲ್ಲೂ ಗಣಿತದ ನಾಲ್ಕು ವಿಧದ ಲೆಕ್ಕಗಳನ್ನು ಮಾತ್ರ ಮಾಡಬಹುದಾಗಿತ್ತು.

1950 ದಶಕದಲ್ಲಿ ಎಲೆಕ್ಟ್ರಾನಿಕ್ಸ್‌ ಕ್ಷೇತ್ರ ಚಿಗೊರೆಡೆಯಲು ಆರಂಭಿಸಿತ್ತು. ನಂತರದ ದಶಕದಲ್ಲಿ ಅದು ಪ್ರವರ್ಧಮಾನಕ್ಕೆ ಬಂತು. ಎಲೆಕ್ಟ್ರಾನಿಕ್‌ ಯುಗದಲ್ಲಿ ಕ್ಯಾಲ್ಕ್ಯುಲೇಟರ್‌ಗಳು ಮಗ್ಗಲು ಬದಲಿಸಿದವು.

ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ (ದತ್ತಾಂಶ ಸಂಗ್ರಹ, ಜನಗಣತಿ ಇತ್ಯಾದಿ) ಎಲೆಕ್ಟ್ರಾನ್‌ ಟ್ಯೂಬ್‌ (ವ್ಯಾಕ್ಯುಮ್‌ ಟ್ಯೂಬ್‌ ಎಂದು ಹೇಳುತ್ತಾರೆ), ಟ್ರಾನ್ಸಿಸ್ಟರ್‌ಗಳನ್ನು ಬಳಸಿ ಕಂಪ್ಯೂಟರ್‌ಗಳನ್ನು 1940–50ರ ದಶಕಗಳಲ್ಲಿ ತಯಾರಿಸುವ ರೂಢಿ ಜಾರಿಯಲ್ಲಿತ್ತು. ಮುಂದಿನ ದಿನಗಳಲ್ಲಿ ಇದೇ ಎಲೆಕ್ಟ್ರಾನಿಕ್‌ ಕ್ಯಾಲ್ಕ್ಯುಲೇಟರ್‌ಗಳ ಅಭಿವೃದ್ಧಿಗೆ ನಾಂದಿ ಹಾಡಿತು.

1957ರಲ್ಲಿ ಜಪಾನಿನ ಕ್ಯಾಸಿಯೊ ಕಂಪೆನಿ ‘ಮಾಡೆಲ್‌ 14-ಎ’ ಕ್ಯಾಲ್ಕ್ಯುಲೇಟರ್‌ ತಯಾರಿಸಿತು. ಇದು ಜಗತ್ತಿನ ಮೊದಲ ಎಲೆಕ್ಟ್ರಾನಿಕ್‌ ಗಣಕ ಯಂತ್ರ. ಆದರೆ ಅದು ಪರಿಪೂರ್ಣವಾಗಿ ಎಲೆಕ್ಟ್ರಾನಿಕ್‌ ಕ್ಯಾಲ್ಕ್ಯುಲೇಟರ್‌ ಆಗಿರಲಿಲ್ಲ. ಕಾರಣ, ವಿದ್ಯುತ್‌ ಚಾಲಿತವಾಗಿದ್ದ ಈ ಸಾಧನ ಎಲೆಕ್ಟ್ರಾನಿಕ್ಸ್‌ ತಂತ್ರಜ್ಞಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಬದಲಿಗೆ ರಿಲೆ (ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಸ್ವಿಚ್ಚು) ತಂತ್ರಜ್ಞಾನದ ಆಧಾರದಲ್ಲಿ ಕೆಲಸ ಮಾಡುತ್ತಿತ್ತು.

1961ರಲ್ಲಿ ಪರಿಪೂರ್ಣ ಎಲೆಕ್ಟ್ರಾನಿಕ್‌ ಕ್ಯಾಲ್ಕ್ಯುಲೇಟರ್‌ ಅನ್ನು ಬ್ರಿಟನ್‌ನಲ್ಲಿ ಅಭಿವೃದ್ಧಿಪಡಿಸಲಾಯಿತು. ಕಂಟ್ರೋಲ್‌ ಸಿಸ್ಟಮ್ಸ್‌ ಲಿಮಿಟೆಡ್‌ ರೂಪಿಸಿದ್ದ ‘ಅನಿಟಾ’ (ANITA- (A New Inspiration To Arithmetic/Accounting) ಜಗತ್ತಿನ ಮೊದಲ ಡೆಸ್ಕ್‌ಟಾಪ್‌ ಕ್ಯಾಲ್ಕ್ಯುಲೇಟರ್‌ ಎಂಬ ಮನ್ನಣೆ ಪಡೆಯಿತು. ದುಬಾರಿಯಾಗಿದ್ದ ‘ಅನಿಟಾ’ 15 ಕೆ.ಜಿ ಭಾರ ಇತ್ತು.

‘ಅನಿಟಾ’ ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಕ್ಯಾಲ್‌ಕ್ಯುಲೇಟರ್‌ಗಳ ಯುಗಕ್ಕೆ ನಾಂದಿ ಹಾಡಿತು. ಕೆನಾನ್‌, ಮ್ಯತಟ್ರೋನಿಕ್ಸ್‌, ಒಲಿವೆಟ್ಟಿ, ಸೋನಿ, ತೋಷಿಬಾದಂತಹ ಕಂಪೆನಿಗಳು ಹೊಸ ನಮೂನೆಯ ಎಲೆಕ್ಟ್ರಾನಿಕ್‌ ಗಣಕಯಂತ್ರಗಳನ್ನು ತಯಾರಿಸಿದವು. 1963ರ ನಂತರ ವ್ಯಾಕ್ಯುಮ್‌ ಟ್ಯೂಬ್‌ಗಳ ಬದಲಿಗೆ ಟ್ರಾನ್‌ಸಿಸ್ಟರ್‌ಗಳ ಬಳಕೆ ಆರಂಭವಾಯಿತು.

ತೋಷಿಬಾ ಸಂಸ್ಥೆಯು ಈಗಿನ ರ‍್ಯಾಮ್‌ (RAM) ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ ‘ಟೋಸ್ಕಲ್‌ ಬಿಸಿ-1411’ ಆಗಿನ ಕಾಲದ ಮಟ್ಟಿಗೆ ಅತ್ಯಂತ ಸುಧಾರಿತ ಎಲೆಕ್ಟ್ರಾನಿಕ್‌ ಕ್ಯಾಲ್ಕ್ಯುಲೇಟರ್‌ ಆಗಿ ಜನಪ್ರಿಯತೆ ಪಡೆಯಿತು. ಒಲಿವೆಟ್ಟಿ ಕಂಪೆನಿ 1965ರಲ್ಲಿ ರೂಪಿಸಿದ್ದ ‘ಒಲಿವೆಟ್ಟಿ ಪ್ರೋಗ್ರ್ಯಾಮ 101’ ಕೈಗಾರಿಕಾ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತು.

1967ರಲ್ಲಿ ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್‌ ಸಂಸ್ಥೆಯಲ್ಲಿ ಜ್ಯಾಕ್‌ ಕಿಲ್ಬಿ ನೇತೃತ್ವದಲ್ಲಿ ತಯಾರಾದ ‘ಕ್ಯಾಲ್‌ ಟೆಕ್‌’ ಕೈಯಲ್ಲಿ ಹಿಡಿಯಬಹುದಾಗಿದ್ದ ಜಗತ್ತಿನ ಮೊದಲ ಎಲೆಕ್ಟ್ರಾನಿಕ್‌ ಕ್ಯಾಲ್ಕ್ಯುಲೇಟರ್‌. ಹಲವು ಸರ್ಕಿಟ್‌ ಬೋರ್ಡ್‌‌ಗಳಲ್ಲಿ ನೂರಾರು ವ್ಯಾಕ್ಯುಮ್‌ ಟ್ಯೂಬ್‌ ಮತ್ತು ಟ್ರಾನ್ಸಿಸ್ಟರ್‌ಗಳನ್ನು ಬಳಸುತ್ತಿದ್ದರಿಂದ ಅದುವರೆಗೂ ತಯಾರಿಸಲಾಗುತ್ತಿದ್ದ ಗಣಕಯಂತ್ರಗಳು ದೊಡ್ಡ ಗಾತ್ರದ್ದಾಗಿದ್ದವು.

ನಂತರದಲ್ಲಿ ಸೆಮಿ ಕಂಡಕ್ಟರ್‌ಗಳ ಅಭಿವೃದ್ಧಿಯಿಂದಾಗಿ ಕ್ಯಾಲ್ಕ್ಯು ಲೇಟರ್‌ಗಳ ಗಾತ್ರ ಗಣನೀಯವಾಗಿ ಕುಗ್ಗಿತು. ಎಷ್ಟರ ಮಟ್ಟಿಗೆ ಎಂದರೆ ಅಂಗಿ ಜೇಬಿನಲ್ಲಿ ಹಿಡಿಯು ವಷ್ಟು ಅಳತೆಗೆ! 1970 ದಶಕದಿಂದ ಇಂತಹ ಸಾಧನಗಳು ಲಭ್ಯವಾದವು. ಆರಂಭದಲ್ಲಿ ದುಬಾರಿಯಾಗಿದ್ದ ಈ ಸಾಧನಗಳು, ಕಂಪೆನಿಗಳ ನಡುವಣ ಪೈಪೋಟಿಯಿಂದಾಗಿ ಕಡಿಮೆ ಬೆಲೆಗೆ ಸಿಗುವಂತಾಯಿತು.

ವರ್ಷಗಳು ಕಳೆದಂತೆ ಮಾನವ ಬಳಕೆಗೆ ಅನುಗುಣವಾಗಿ ವಿವಿಧ ಉದ್ದೇಶದ ಕ್ಯಾಲ್‌ಕ್ಯುಲೇಟರ್‌ಗಳು ರೂಪುಗೊಂಡವು (ಉದಾಹರಣೆ: ವಿಜ್ಞಾನ ಉದ್ದೇಶದಕ್ಯಾಲ್ಕ್ಯುಲೇಟರ್‌). 1980ರ ದಶಕದ ನಂತರ ನಾವೀಗ ಬಳಸುತ್ತಿರುವ ಕ್ಯಾಲ್ಕ್ಯುಲೇಟರ್‌ಗಳು ಲಭ್ಯವಾದವು. ಈಗೀಗ ಮಾರುಕಟ್ಟೆಯಲ್ಲಿ ಭಿನ್ನ ಉದ್ದೇಶದ ತರಹೇವಾರಿ ಕ್ಯಾಲ್ಕ್ಯುಲೇಟರ್‌ಗಳು ಲಭ್ಯವಿವೆ.

ಇತ್ತೀಚಿನ ದಿನಗಳಲ್ಲಿ ನಾವು ಲೆಕ್ಕ ಹಾಕುವ ಸಾಧನವನ್ನು ಎಷ್ಟು ಅವಲಂಬಿಸಿದ್ದೇವೆ ಎಂದರೆ ಬಾಯಲ್ಲೇ ಲೆಕ್ಕ ಹಾಕಬಹು ದಾದ ಸಣ್ಣಪುಟ್ಟ ಲೆಕ್ಕಕ್ಕೂ ಕ್ಯಾಲ್ಕ್ಯುಲೇಟರ್‌ನ ಮೊರೆ ಹೋಗು ತ್ತೇವೆ. ನಾವು ದಿನ ನಿತ್ಯ ಬಳಸುವ ಮೊಬೈಲ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌ಗಳಲ್ಲೇ ಕ್ಯಾಲ್ಕ್ಯುಲೇಟರ್‌ ಕೂಡ ಇದೆ. ಹಾಗಾಗಿ, ಸಾಮಾನ್ಯ ಲೆಕ್ಕಚಾರಕ್ಕಾಗಿ ಈ ಸಾಧನಗಳನ್ನು ಪ್ರತ್ಯೇಕವಾಗಿ ಖರೀದಿಸಿ ಇಟ್ಟುಕೊಳ್ಳಬೇಕಾದ ಅಗತ್ಯವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT