ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವ–ಪ್ರೇರಣೆ ಇದ್ದರೆ ಒತ್ತಡ ಕಾಡದು’

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒತ್ತಡ ನಮ್ಮನ್ನು ಕಾಡುವುದು ಯಾವಾಗ ಹೇಳಿ?. ಸಾಧಿಸುವ ಬಯಕೆ, ಸ್ವ-ಪ್ರೇರಣಾ ಮನೋಭಾವ ಇಲ್ಲದೆ ಇದ್ದಾಗ. ಪ್ರತಿಯೊಬ್ಬ ವ್ಯಕ್ತಿಗೂ ನಾನು ಏನನ್ನಾದರೂ ಸಾಧಿಸಬೇಕು ಎನ್ನುವ ಅಗಾಧ ಆಸೆ ಇರಬೇಕು. ಆ ಆಸೆಯೇ ಸಾಧನೆ ಮಾಡಲು ಉತ್ತೇಜನ ನೀಡುತ್ತದೆ. ಅಲ್ಲದೆ ಮನ್ಸಸಿಟ್ಟು ಕೆಲಸ‌ ಮಾಡಬೇಕು.‌ ಅದರಿಂದ ಬರುವ ಲಾಭದ ಬಗ್ಗೆ ಹೆಚ್ಚು ಯೋಚಿಸಬಾರದು. ಕೆಲಸ ಮಾಡದೆ ಎಲ್ಲವೂ ಸಿಗಬೇಕು ಎನ್ನುವ ಮನಃಸ್ಥಿತಿಯಂತೂ ಇರಲೇಬಾರದು.

ಮೊದಲಿನಿಂದಲೂ ನಾನು ಫಲಾಪೇಕ್ಷೆ ಮಾಡಲಿಲ್ಲ. ದೇಶ, ಸಮಾಜ, ಸರ್ಕಾರ, ಕಂಪೆನಿಗಾಗಿ ಕೆಲಸ ಮಾಡಬೇಕು ಎನ್ನುವುದೊಂದೇ ನನ್ನ ತಲೆಯಲ್ಲಿದ್ದದ್ದು. ಹೀಗಾಗಿ ಯಾವುದೇ ಕೆಲಸ ಮಾಡಿದರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದೆ.

ವೃತ್ತಿಯಲ್ಲಿ ಆತಂಕ, ಒತ್ತಡ ನನ್ನನ್ನು ಕಾಡಿದ್ದು ಕಡಿಮೆ.‌ ಯಾಕೆಂದರೆ ಇಂದು‌ ಜಗದ್ವಿಖ್ಯಾತಿ ಪಡೆದಿರುವ ಇನ್ಫೋಸಿಸ್‌ನಂತಹ ಸಂಸ್ಥೆಯನ್ನು ಕಟ್ಟುವ ಸಂದರ್ಭದಲ್ಲಿ ನಾನು ಅಲ್ಲಿ ಇದ್ದವ. ಆ ಸಂಸ್ಥೆಯನ್ನು ಕಟ್ಟಬೇಕು, ಬೆಳೆಸಬೇಕು, ಅದು ಪ್ರಪಂಚದಲ್ಲಿಯೇ ನಂ.1 ಆಗಬೇಕು, ಅದರ ಬೆಳವಣಿಗೆಯ ಹಾದಿಗೆ ನಾನೂ ಮಹತ್ವದ ಕೊಡುಗೆ ಕೊಡಬೇಕು ಎನ್ನುವ ಮಹತ್ತರವಾದ ಆಸೆ ನನಗೇ ಇತ್ತು.

ಹೀಗಾಗಿ ಎಷ್ಟೇ ಕೆಲಸವಾದರೂ ನಾನು ಪ್ರೀತಿಯಿಂದ ಮಾಡುತ್ತಿದ್ದೆ. ಬನೆಳಿಗ್ಗೆ ಮನೆ ಬಿಟ್ಟರೆ ರಾತ್ರಿ ಮನೆ ಸೇರುತ್ತಿದ್ದೆ. ಕಂಪೆನಿಯ ಕೆಲಸಕ್ಕಾಗಿ ವಾರಾಂತ್ಯಗಳಲ್ಲಿ ಪ್ರಯಾಣ ಇರುತ್ತಿತ್ತು. 17 ವರ್ಷಗಳಲ್ಲಿ ಹಗಲಿನ ವೇಳೆ ನಾನು ಸಿಟಿಯಲ್ಲಿ ಊಟ ಮಾಡಿಯೇ ಇಲ್ಲ ಎನ್ನಬಹುದು. ಅಷ್ಟು ಬ್ಯುಸಿ ಆಗಿರುತ್ತಿದ್ದೆ. ಆದರೆ ಎಂದಿಗೂ ಅದು ಕಷ್ಟ ಎನಿಸಲೇ ಇಲ್ಲ. ಯಾಕೆಂದರೆ ನಾನು ಇಷ್ಟಪಟ್ಟು, ಮನಸ್ಸಿಟ್ಟು ಮಾಡುತ್ತಿದ್ದ ಕೆಲಸವದು.

ಯಾವಾಗ ಮನುಷ್ಯನಿಗೆ ಕೆಲಸ ಮಾಡುವಲ್ಲಿ ಉತ್ತೇಜನ ಇರುವುದಿಲ್ಲವೋ, ಸಾಧನೆಯ ದಾರಿಗೆ ಪ್ರೋತ್ಸಾಹ ಇರುವುದಿಲ್ಲವೋ, ಆಗ ಎಲ್ಲವೂ ಒತ್ತಡಮಯವಾಗಿಯೇ ಕಾಡುತ್ತದೆ. ಅಲ್ಲದೆ ಆ ಕಾಲದಲ್ಲಿ ಬೆಂಗಳೂರು ತುಂಬಾ ಪ್ರಶಾಂತವಾಗಿತ್ತು; ಇಂದಿನಷ್ಟು ಗಿಜಿಗಿಜಿ ಇರಲಿಲ್ಲ. ಹೀಗಾಗಿ ಓಡಾಡುವುದು ನನಗೆ ಕಷ್ಟ ಎನಿಸಲೇ ಇಲ್ಲ.

ಇವತ್ತು ಪ್ರತಿಯೊಬ್ಬನೂ ಒತ್ತಡದಲ್ಲಿ ಬದುಕು ಸವೆಸುತ್ತಿದ್ದಾನೆ. ಅದಕ್ಕೆ ಮುಖ್ಯ ಕಾರಣ ಜೀವನದ ಗುಣಮಟ್ಟ‌ ತೀರಾ ಕಳಪೆ ಅಗಿರುವುದು. ಸಾಗುವ ದಾರಿಯಲ್ಲೇ ಸುಸ್ತಾದರೆ‌ ಸಾಧಿಸುವ ಮಾತೆಲ್ಲಿ?. ಬೆಂಗಳೂರಿನಲ್ಲಿಯಂತೂ ಟ್ರಾಫಿಕ್ ಸಮಸ್ಯೆಯಿಂದಾಗಿ ಮನುಷ್ಯ ವಿಪರೀತ ಸೋತು ಹೋಗಿದ್ದಾನೆ. ವಾತಾವರಣ ತೀರಾ ಕೆಟ್ಟು ಹೋಗಿದೆ. ನೀರು, ವಿದ್ಯುಚ್ಛಕ್ತಿ ಎಲ್ಲವೂ ಕೆಟ್ಟಿದೆ.

ಮೊದಲು ಜನರ ಜೀವನದ ಗುಣಮಟ್ಟ ಹೆಚ್ಚಿಸಲು ಏನೇನು ಮಾಡಬೇಕೊ ಅದನ್ನು ಸರ್ಕಾರ ಮಾಡಬೇಕು. ಸಾರ್ವಜನಿಕ ಸಾರಿಗೆ ಸಂಪರ್ಕ ಉತ್ತಮಗೊಳ್ಳಬೇಕು. ಮೂಲಭೂತ ಸೌಕರ್ಯಗಳೆಲ್ಲವೂ ಸಿಗುವಂತಾಗಬೇಕು. ಬೇರೆಲ್ಲಾ ದೇಶಗಳಲ್ಲಿ ಇಂಥ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದಾರೆ.

ಅಲ್ಲಿ ಕೆಲಸ ಮಾಡುವುದು ಸುಸ್ತು ಎನಿಸುವುದೇ ಇಲ್ಲ. ಆದರೆ‌ ಇಲ್ಲಿ ಸರಿಯಾಗಬೇಕಿರುವುದು ಸಾಕಷ್ಟಿದೆ. ಸ್ಪರ್ಧೆಗಿಳಿಯುವುದಕ್ಕೆ ಮುಂಚೆಯೇ ಸೋತಂತಾಗುತ್ತಿದೆ ಅಷ್ಟೆ.

ನಿರಂತರ ಕೆಲಸದಿಂದ ಸ್ವ–ಹಿತಾಸಕ್ತಿ ಕಡೆಗೆ ಯೋಚಿಸಲಿಲ್ಲ ಎಂಬ ಬೇಸರ ವೃತ್ತಿ ಜೀವನದಲ್ಲಿ ಅನೇಕ ವರ್ಷ ಕಳೆದ ಮೇಲೆ ಕಾಡಿತು. ಹೆಂಡತಿ, ಮಕ್ಕಳು, ಮನೆಗಾಗಿ ನಾನು ಸಮಯ ಕೊಟ್ಟೇ ಇಲ್ಲ ಎನ್ನುವ ಜ್ನಾನೋದಯವಾಗಿ ಕೆಲಸ ಬಿಡುವ ನಿರ್ಧಾರಕ್ಕೆ ಬಂದೆ. ಆದರೆ‌ ಕೆಲಸ ಬಿಟ್ಟ ನಂತರವೇ ಹೆಚ್ಚು ಒತ್ತಡದಲ್ಲಿ ಸಿಲುಕಿದೆ. ಯಾಕೆಂದರೆ ಬದುಕಿನಲ್ಲಿ ನಾನು ತೆಗೆದುಕೊಂಡು ದೊಡ್ಡ ನಿರ್ಧಾರವದು.

ಬೆಳವಣಿಗೆಯ ಪ್ರತಿ ಹೆಜ್ಜೆಯಲ್ಲಿ ಇದ್ದು, ಏರಿಳಿತಗಳಿಗೆ ಸಾಕ್ಷಿಯಾಗಿದ್ದ ನನಗೆ ಕಂಪೆನಿ ತೀರಾ ಆಪ್ತವಾಗಿಬಿಟ್ಟಿತ್ತು. ಅದರೊಂದಿಗೆ ಭಾವನಾತ್ಮಕ ಸಂಬಂಧವಿದ್ದರಿಂದ ಕಂಪೆನಿ ಬಿಡುವ ಸಂದರ್ಭದಲ್ಲಿ ಸಕ್ಕರೆ ಪ್ರಮಾಣ (ಶುಗರ್‌ ಲೆವಲ್‌), ರಕ್ತದೊತ್ತಡದಲ್ಲಿಯೂ ಏರಿಳಿತವಾಯಿತು. ಆದರೆ ಒತ್ತಡದ ತಂದುಕೊಳ್ಳುವವರು ನಾವೇ, ಅದನ್ನು ಕಡಿಮೆ ಮಾಡಿಕೊಳ್ಳುವವರೂ ನಾವೇ ಆಗಬೇಕು ಎಂದು ಗಟ್ಟಿ ನಿರ್ಧಾರ ಮಾಡಿ ಆ ಚಿಂತೆಯಿಂದ ಹೊರಬಂದೆ.

ಕಂಪೆನಿ ಬೆಳವಣಿಗೆಯ ಪ್ರತಿ ಹೆಜ್ಜೆಯಲ್ಲಿದ್ದೆ. ಆದರೆ 17 ವರ್ಷದ ನಿರಂತರ ಕೆಲಸದ ನಡುವೆ ಬಿಡುವು ಬೇಕು, ನನ್ನ ಜೀವನ ನನಗೆ ಬೇಕು ಎಂದು ಬಯಸಿ ಕೆಲಸಕ್ಕೆ ರಾಜಿನಾಮೆ ನೀಡಿದ್ದೆ. ಬದುಕಿನಲ್ಲಿ ಒಂದು ಬೇಕು ಎಂದರೆ ಇನ್ನೊಂದನ್ನು ಕಳೆದುಕೊಳ್ಳುವುದಕ್ಕೆ ಸಿದ್ಧರಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT