ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಬೆರಳ ಮೇಲಿನ ಏಟು

ಛಡಿ ಚಂಚಂ, ವಿದ್ಯೆ ಘಂಘಂ
Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನೂರು ಚಿಕ್ಕಾಲಗಟ್ಟ ಹಳ್ಳಿ. ನಮಗೆ ಶಾಲೆಗೆ ಕಟ್ಟಡ ಇಲ್ಲದ ಕಾರಣ ಊರ ದೇವಸ್ಥಾನದಲ್ಲಿ ಮೇಷ್ಟ್ರು ಪಾಠ ಹೇಳಿಕೊಡುತ್ತಿದ್ದರು. ಎಲ್ಲರಿಗೂ ಒಬ್ಬರೇ ಶಿಕ್ಷಕರು. ಬುಕ್ಕಪ್ಪ ಅವರ ಹೆಸರು. ಆ ಹೆಸರಿನ ಮುಂದೆ ಮೇಷ್ಟ್ರು ಎಂಬ ವಿಶೇಷಣ ಸೇರಿಕೊಂಡು ‘ಬುಕ್ಕಪ್ಪ ಮೇಷ್ಟ್ರು’ ಎಂದೇ ಊರಲ್ಲಿ ಪ್ರಸಿದ್ಧರು. ಶಿಸ್ತಿನ ಗುರುಗಳವರು. ದೇವಸ್ಥಾನದ ಒಳಗೆ ಒಂದು ಕಂಬಕ್ಕೆ ಬೋರ್ಡು ನಿಲ್ಲಿಸಿಕೊಂಡು ಅದರ ಮೇಲೆ ವರ್ಣಮಾಲೆ, ಕಾಗುಣಿತ, ಮಗ್ಗಿಯನ್ನು ಬರೆದು ನಮಗೆ ಹೇಳಿಕೊಡುತ್ತಿದ್ದ ಅವರ ಶೈಲಿ ಮನದಲ್ಲಿ ಅಚ್ಚಯಳಿಯದೇ ಇದೆ.

ನನಗೆ ಶಾಲೆಗೆ ಹೋಗುವುದೆಂದರೆ ಸಂಕಟ. ಯಾರಪ್ಪ ಈ ಶಾಲೆ ಎಂಬ ಜೈಲನ್ನು ಮಾಡಿದ್ದು ಎಂದು ಬೈದುಕೊಳ್ಳುತ್ತಿದ್ದೆ. ನಾನು ಎಷ್ಟೇ ಹಟ ಮಾಡಿದರೂ, ಅತ್ತರೂ, ಚೀರಿದರೂ ಯಾವುದಕ್ಕೂ ಜಗ್ಗದ ನನ್ನಮ್ಮ ನನ್ನನ್ನು ಎಳೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದಳು. ದಾರಿಯಲ್ಲೆಲ್ಲಾ ಹಾರಾಡಿ, ಚೀರಾಡಿ ಜನ ನೋಡುವ ಹಾಗೆ ಮಾಡಿದರೂ ಪ್ರಯೋಜನವಾಗುತ್ತಿರಲಿಲ್ಲ.

ಅಷ್ಟೆಲ್ಲಾ ಗಲಾಟೆ ಮಾಡಿ ದೇವಸ್ಥಾನ (ಶಾಲೆ) ಬಂದಾಕ್ಷಣ ಗಪ್‌ಚಿಪ್. ಮೇಷ್ಟ್ರು ಹೊಡೆತ ಅಂದರೆ ಹಾಗೆ. ಶಾಲೆಗೆ ಬರಲು ಅತ್ತಿದ್ದಕ್ಕೆ ಹೊಡೆತ, ತಡವಾಗಿ ಬಂದಿದ್ದಕ್ಕೆ ಹೊಡೆತ, ಅವರು ಹೇಳಿದ್ದನ್ನು ಕಲಿಯದೇ ಬಂದದ್ದಕ್ಕೆ ಹೊಡೆತ. ಕಿವಿ ಹಿಂಡಿಸಿಕೊಳ್ಳಬೇಕು, ಜೊತೆಗೆ ಕೈಯನ್ನು ಕಾಲೊಳಗಿನಿಂದ ತಂದು ಬಗ್ಗಿ ಕಿವಿಯನ್ನು ಹಿಡಿದುಕೊಳ್ಳಬೇಕು. ಆಗ ಹೊಟ್ಟೆಯಲ್ಲಿನ ಕರುಳು ಬಾಯಿಗೇ ಬಂದಂತಾಗುತ್ತಿತ್ತು. ಏನು ಬಾಯಿಗೆ ಬಂದರೂ ಮೌನವೇ ಗತಿ. ಎಲ್ಲದಕ್ಕೂ ಮೀರಿದ ಶಿಕ್ಷೆ ಎಂದರೆ ಎರಡೂ ಕೈ ಬೆರಳುಗಳನ್ನು ಜೋಡಿಸಿ ಮಡಚಿ ತಿರುಗಿಸಿ ಹಿಡಿಯಬೇಕು. ಅದರ ಮೇಲೆ ಗುರುಗಳು ಬೆತ್ತದಿಂದ ಹೊಡೆದರೆ ಆ ಆನಂದ ವರ್ಣಿಸಲಸದಳ!

ಇಷ್ಟೆಲ್ಲಾ ಮುಗಿಸಿ ಮನೆಗೆ ಹೋಗಿ ಅಲ್ಲೇನಾದರೂ ತರಲೆ ಮಾಡಿದರೆ ‘ತಾಳು ಬುಕ್ಕಪ್ಪ ಮೇಷ್ಟ್ರಿಗೆ ಹೇಳ್ತೀನಿ’ ಎನ್ನುವ ಬೆದರಿಕೆ. ಆದರೆ ಈಗ ಅವರು ನಾನು ಪ್ರತಿದಿನ ನೆನೆಯುವ ದೇವರಾಗಿದ್ದಾರೆ. ಅವರ ತರುವಾಯ ಎಷ್ಟೊಂದು ಗುರುಗಳನ್ನು ಕಂಡರೂ ಅವರಷ್ಟು ನನ್ನ ಮನದಲ್ಲಿ ಉಳಿದವರು ಯಾರೂ ಇಲ್ಲ. ಖಡಕ್ ಶಿಸ್ತಿನ ಸಿಪಾಯಿ ಎಂದೇ ಹೆಸರಾಗಿದ್ದ ನನ್ನ ಗುರುಗಳನ್ನು ತದ ನಂತರದ ದಿನಗಳಲ್ಲಿ ನೋಡಿದ್ದೇ ಕಡಿಮೆ. ಇಂದಿಗೂ ಆ ದೇವಸ್ಥಾನ, ನನ್ನ ಗುರುಗಳು, ಆ ಪಾಠ, ಆ ಶಿಕ್ಷೆ ಎಲ್ಲವೂ ನನ್ನ ಮನದಲ್ಲಿ ಹಚ್ಚಹಸಿರಾಗಿಯೇ ಇವೆ.
–ಪ್ರೇಮಪಲ್ಲವಿ ಸಿ.ಬಿ. ಚಿತ್ರದುರ್ಗ


ಅರಿಭಯಂಕರ ಶಿಕ್ಷೆ
ಎರಡು ಕಿವಿಗಳನ್ನು ಮಂಡಿಯೂರಿ ಕುಳಿತು ಕಾಲುಗಳಿಂದ ತೂರಿಸಿದ ಕೈಗಳ ಸಹಾಯದಿಂದ ಹಿಡಿದುಕೊಳ್ಳುವ ಕೋದಂಡ ಶಿಕ್ಷೆ, ನಮ್ಮಿಂದಲೇ ಅಣಿ ಮಾಡಿಸಿಕೊಂಡು ಬಂದ ಛಡಿಯೇಟು, ದೂರದಿಂದಲೇ ಗುರಿಯಿಟ್ಟು ಶಬ್ದವೇಧಿ ವಿದ್ಯೆ ಬಳಸಿ ಎಸೆಯುವ ಚಾಕ್‌ಪೀಸ್‌ ಹೊಡೆತ, ಗೇಣು ಬಗ್ಗಿಸಿ ಅದರ ಮೇಲೆ ರೂಲ್‌ ದೊಣ್ಣೆಯಿಂದ ಕ್ಷಣಮಾತ್ರದಲ್ಲಿ ಬೀಳುತ್ತಿದ್ದ ಏಟು- ಮೊದಲಾದ ಅರಿಭಯಂಕರ ಶಿಕ್ಷೆಗಳ ಅರಿವಿದ್ದೂ ತರಲೆ ಮಾಡುತ್ತಿದ್ದ ನಮ್ಮ ಕಥೆ ಹೇಳಿದರೆ ಈಗಿನವರಿಗೆ ಹೇಗೆ ಅರ್ಥವಾದೀತು?.

ನಾನು ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ಗುರುಗಳು ಹುಣಸೆ ಬರಲು ಕೇಳಿದಾಗ ಖುಷಿಯಿಂದ ತಂದುಕೊಟ್ಟು, ಅದರ ಏಟು ಬೇರೆಯವರಿಗೆ ಬೀಳುವಾಗ ಆಗುತ್ತಿದ್ದ ಆನಂದ ಯಾವುದೋ ಸಂದರ್ಭದಲ್ಲಿ ವಿಧಿಯ ವಿಲಾಸದಂತೆ ನಮ್ಮ ಪಾಲಿಗೆ ಎರಗಿದಾಗ ಆಗುತ್ತಿದ್ದ ಸಂಕಟವನ್ನು ಹೇಗೆ ತಾನೇ ಮರೆಯಲು ಸಾಧ್ಯವಾದೀತು?

ಎಂಟನೇ ತರಗತಿ ಓದುತ್ತಿದ್ದಾಗ ಒಮ್ಮೆ ಶ್ರೀನಿವಾಸರೆಡ್ಡಿ ಎಂಬ ಸಾಕ್ಷಾತ್ ದೂರ್ವಾಸ ಮುನಿಯ ಅಪರಾವತಾರದಂತಿದ್ದ ಮೇಷ್ಟ್ರು ರಸಾಯನಶಾಸ್ತ್ರ ವಿಷಯದ ಪಾಠ ಮಾಡುತ್ತಾ, ಗಂಧಕವನ್ನು ಯಾವುದರ ಜೊತೆ ಬೆರೆಸಿದಾಗ ಏನೇನು ಪರಿಣಾಮವಾಗುತ್ತದೆ ಎಂದು ವಿವರಿಸುತ್ತಿದ್ದರು. ಪಕ್ಕದಲ್ಲಿದ್ದ ಗೆಳೆಯ ಗುರುಮೂರ್ತಿ ಮಾಡಿದ ಚಿತಾವಣೆಯಿಂದ ನಾನು ದಿಢೀರನೆ ಮೇಲೆದ್ದು ನಿಂತು ‘ಸಾರ್, ಗಂಧಕವನ್ನು ಮನೆ ಮೇಲೆ ಹಾಕಿದರೆ ಏನಾಗುತ್ತದೆ’ ಎಂದು ಕೇಳಿಯೇಬಿಟ್ಟೆ.

ಗಂಭೀರವಾಗಿ ಪಾಠ ಮಾಡುತ್ತಿದ್ದ ಮೇಷ್ಟರಿಗೆ ಕೋಪ ಎಲ್ಲಿಂದ ಬಂದಿತೋ ಕಾಣೆ. ಮೇಜಿನ ಮೇಲಿಟ್ಟಿದ್ದ ಬರಲನ್ನು ತೆಗೆದುಕೊಂಡು ಬಂದು ‘ಕೈ ಚಾಚು’ ಎಂದು ಗುಡುಗಿ ಮುಂದೆ ಬಂದ ಕೈ ಮೇಲೆ ಎರಡು ಬಾರಿ ಬಾರಿಸಿ ‘ಈಗ ಗೊತ್ತಾಗಿರಬೇಕಲ್ಲವೇ ಏನಾಗುತ್ತದೆ’ ಎಂದು ಹೇಳಿ ಮತ್ತೆ ಬೋಧಿಸಲು ಹೊರಟರು.

ಹೊಡೆತ ಸರಿಯಾಗಿಯೇ, ಅದೂ ಆಯಕಟ್ಟಿನ ಜಾಗಕ್ಕೆ ಬಿದ್ದಿದ್ದರಿಂದಲೋ ಏನೋ ಮುಂದಿನ ಮೂರ್ನಾಲ್ಕು ದಿನ ಊಟ ಮಾಡಲು ಕೂಡ ಸಾಧ್ಯವಾಗದಷ್ಟು ನೋವು ಕಾಡಿಸುತ್ತಿತ್ತು. ಆದರೆ ಗುರುಗಳು ಕೊಟ್ಟ ಏಟಿನ ಕುರಿತು ಮನೆಯಲ್ಲಿ ಹೋಗಿ ಹೇಳಲೂ ಅಳುಕು. ಏಕೆಂದರೆ ನನ್ನ ತಂದೆ ಕೂಡ ಪ್ರೈಮರಿ ಸ್ಕೂಲ್ ಟೀಚರ್. ಹೀಗಾಗಿ ಶಾಲೆಯಲ್ಲಿ ಬಿದ್ದಿದ್ದರ ಜೊತೆಗೆ ಮನೆಯಲ್ಲಿಯೂ ಒಂದೆರಡು ಏಟು ಬಿದ್ದು ‘ಡಬಲ್ ಧಮಾಕ’ ಹೊಂದಬೇಕಾದೀತು ಎನ್ನುವ ಭೀತಿ. ಛಡಿ ಚಂ ಚಂ ಎಂದಾಗ ಇಷ್ಟೆಲ್ಲ ನೆನಪುಗಳು ಮರುಕಳಿಸಿದವು.
–ಎಚ್.ಕೆ. ರಾಘವೇಂದ್ರ, ಕೋಲಾರ

*
ಬೆನ್ನ ಮೇಲೆ ಬಿಸಿ ಬಿಸಿ ಬೆತ್ತದೇಟು
ಬಾಲ್ಯಜೀವನಕ್ಕೂ ಬೆತ್ತಕ್ಕೂ ಬಿಡಿಸಲಾಗದ ನಂಟು. ನಾನು ಓದಿದ್ದು ತುಮಕೂರಿನ ಸಿದ್ಧಗಂಗಾಮಠದಲ್ಲಿ. ಅಲ್ಲಿ ಶಿಕ್ಷಕರು ಕೇವಲ ಪಾಠಕ್ಕೆ ಸೀಮಿತರಾಗಿರಲಿಲ್ಲ. ನಮ್ಮ ಪೋಷಕರೂ ಆಗಿದ್ದರು. ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದರು. ಇಷ್ಟು ಜನರನ್ನು ಬಾಯಿಮಾತಿನಿಂದ ನಿಯಂತ್ರಿಸುವುದು ಅಲ್ಪ ಸಂಖ್ಯೆಯಲ್ಲಿದ್ದ ಶಿಕ್ಷಕರಿಗೆ ಅಸಾಧ್ಯವಾಗಿತ್ತು. ಇದಕ್ಕಾಗಿ ಬೆತ್ತ ನಮ್ಮ ಶಿಕ್ಷಕರ ಅಚ್ಚುಮೆಚ್ಚಿನ ಮಿತ್ರನಾಗಿದ್ದರೆ, ನಮಗೆ ಬಹುದೊಡ್ಡ ಶತ್ರು.

ಮಠದಲ್ಲಿ ಬೆಳಗಿನ ಚುಮುಚುಮು ಚಳಿಯಲ್ಲಿ 5 ಗಂಟೆಗೆ ಏಳಬೇಕಾಗಿತ್ತು. ನಮ್ಮನ್ನು ಎಬ್ಬಿಸಲು ನಮಗಿಂತ ಮುಂಚಿತವಾಗಿಯೇ ನಮ್ಮ ಶಿಕ್ಷಕರು ಎದ್ದು ಪ್ರತಿರೂಮಿನ ಬಾಗಿಲು ಬಡಿಯುತ್ತಿದ್ದರು. ನಾವು ಕ್ಯಾರೇ ಅನ್ನದೇ ಮಲಗಿರುತ್ತಿದ್ದೆವು. ಎರಡನೇ ಸಲ ನಮ್ಮನ್ನು ಛಡಿಯೇಟುಗಳು ನಿದ್ರಾದೇವಿಯಿಂದ ಬಿಡುಗಡೆಗೊಳಿಸುತ್ತಿದ್ದವು. ಹಾಗೆಯೇ ಪ್ರತಿ ಭಾನುವಾರ ಸೌದೆ ತರುವುದು, ಕೃಷಿ ಕೆಲಸ ಮಾಡಬೇಕಿತ್ತು. ಮೈಗಳ್ಳತನದಿಂದ ನಾವು ಎಷ್ಟೋ ಸಲ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಮ್ಮ ಸೋಮಾರಿತನದ ಪರಮಾವಧಿ ಸಹಜವಾಗಿಯೇ ಶಿಕ್ಷಕರ ತಾಳ್ಮೆ ಪರೀಕ್ಷಿಸುತ್ತಿದ್ದವು. ಹೋಮ್ ವರ್ಕ್ ಮಾಡದೇ ಇದ್ದಾಗ, ಕ್ಲಾಸ್ ಬಂಕ್ ಮಾಡಿದಾಗ, ಗಲಾಟೆ ಮಾಡಿದಾಗ ಶಿಕ್ಷಕರು ಬೆತ್ತದೇಟಿನ ರುಚಿ ತೋರಿಸುತ್ತಿದ್ದರು.

ಒಬ್ಬೊಬ್ಬ ಶಿಕ್ಷಕರದೂ ಒಂದೊಂದು ಹೊಡೆಯುವ ಶೈಲಿ. ಧೋನಿಯ ಹೆಲಿಕಾಪ್ಟರ್, ಕೊಹ್ಲಿಯ ಸಿಕ್ಸರ್ ಹೊಡೆತಗಳ ಹಾಗೆ ಪ್ರತಿಯೊಬ್ಬ ಶಿಕ್ಷಕರು ನಮ್ಮ ಮಠದಲ್ಲಿ ಅವರ ವಿಶಿಷ್ಟ ಶೈಲಿಯ ಹೊಡೆತಗಳಿಗೆ ಫೇಮಸ್ ಆಗಿದ್ದರು. ಅದರಲ್ಲಿ ತುಂಬಾ ಪ್ರಸಿದ್ಧರಾದವರೆಂದರೆ ಮಹಾರುದ್ರಯ್ಯ ಗುರುಗಳು. ಅವರು ಶಿಕ್ಷಕರು ಮಾತ್ರವಲ್ಲ, ನಮ್ಮ ಹಾಸ್ಟೆಲಿನ ವಾರ್ಡನ್ ಸಹ ಆಗಿದ್ದರು. ಹೀಗಾಗಿ ವಿದ್ಯಾರ್ಥಿಗಳನ್ನು ನಿಯಂತ್ರಿಸುವ ಜವಾಬ್ದಾರಿ ಅವರದ್ದಾಗಿತ್ತು. ಕ್ಲಾಸ್ ಲೀಡರ್‌ಗಳು ಯಾರು ಪ್ರಾರ್ಥನೆ ತಪ್ಪಿಸಿರುತ್ತಾರೋ, ಯಾರು ಕೆಲಸಕ್ಕೆ ಬಂದಿರುವುದಿಲ್ಲವೋ, ಯಾರು ಕೊಠಡಿಯಲ್ಲಿ ಗಲಾಟೆ ಮಾಡುತ್ತಿರುತ್ತಾರೋ ಅವರೆಲ್ಲರ ಹೆಸರುಗಳನ್ನು ಲಿಸ್ಟ್ ಮಾಡಿ ಮಹಾರುದ್ರಯ್ಯ ಗುರುಗಳಿಗೆ ಕೊಡುತ್ತಿದ್ದರು. ಕನಿಷ್ಠವೆಂದರೂ ಈ ಲಿಸ್ಟ್‌ನಲ್ಲಿ ನೂರಕ್ಕೂ ಹೆಚ್ಚು ಮಹಾನುಭಾವರು ಇರುತ್ತಿದ್ದರು. ಇಷ್ಟೊಂದು ಜನರಿಗೆ ಶಿಕ್ಷೆ ಕೊಡಲು ಮಹಾರುದ್ರಯ್ಯ ಗುರುಗಳು ಮಾತ್ರ ಇರುತ್ತಿದ್ದರು. ಹುಡುಗರೆಲ್ಲ ಹರಕೆ ಕುರಿಗಳಂತೆ ಸರತಿಸಾಲಿನಲ್ಲಿ ನಿಂತುಕೊಳ್ಳುತ್ತಿದ್ದರು. ಪ್ರತಿ ಭಾನುವಾರ ರಾತ್ರಿ ಹಾಸ್ಟೆಲ್ ಆವರಣದಲ್ಲಿ ತಪ್ಪು ಮಾಡಿದವರಿಗೆ ಮಹಾಮಂಗಳಾರತಿ ಕಾರ್ಯಕ್ರಮ ಇರುತ್ತಿತ್ತು. ಅವರ ಬೆತ್ತದೇಟುಗಳು ಕೈಗಳಿಗಿಂತ ಹೆಚ್ಚಾಗಿ ಕಾಲುಸಂದಿಗಳಲ್ಲಿ, ಬೆನ್ನಿಗೆ ಬೀಳುತ್ತಿದ್ದವು.

ನಮ್ಮ ಹುಡುಗರೇನೂ ಕಡಿಮೆಯಿರಲಿಲ್ಲ. ಅವರ ಹೊಡೆತಗಳ ನೋವನ್ನು ತಡೆದುಕೊಳ್ಳಲು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದರು. ಛಡಿಯೇಟುಗಳು ಬೀಳುವ ದಿವಸ ಹುಡುಗರು ಎರಡೆರಡು ಚಡ್ಡಿ, ಅವುಗಳ ಮೇಲೊಂದು ಪ್ಯಾಂಟು, ಅದರ ಮೇಲೊಂದು ಪಂಚೆ ಹಾಗೂ ಮೈತುಂಬಾ ದಪ್ಪನೆಯ ಸ್ವೆಟರ್ ಹಾಕಿಕೊಳ್ಳುತ್ತಿದ್ದರು.

ಏಟು ಬೀಳುವಾಗಲಂತೂ ಇವರ ನಟನೆಗೆ ಆಸ್ಕರ್ ಕೊಟ್ಟರೂ ಕಡಿಮೆಯೇ. ಅಷ್ಟು ಪೆಟ್ಟು ಬೀಳದಿದ್ದರೂ ಗುರುಗಳ ಮುಂದೆ ಭಾರೀ ಪೆಟ್ಟು ಬಿದ್ದಂತೆ ನಟಿಸಿ, ಅಳುತ್ತಿರುವಂತೆ ನಾಟಕ ಮಾಡುತ್ತಿದ್ದರು. ಹುಡುಗರ ನೈಜ ನಟನೆ ಪರಿಣಾಮವೋ ಏನೋ ಅವರು ಒಂದೆರಡು ಏಟುಗಳಿಗೆ ಮಾತ್ರ ಸೀಮಿತರಾಗಿಬಿಡುತ್ತಿದ್ದರು.

ನಂತರ ರೂಮಿಗೆ ಬರುತ್ತಿದ್ದ ಹಾಗೇ ಹುಡುಗರು ತಮ್ಮ ಬುದ್ಧಿವಂತಿಕೆ ಬಗ್ಗೆ ತಾವೇ ಬೆನ್ನು ತಟ್ಟುಕೊಳ್ಳುತ್ತಿದ್ದರು. ಅದೇನೇ ಇರಲಿ, ಶಿಕ್ಷಕರ ಛಡಿಯೇಟುಗಳು ನಮ್ಮನ್ನು ಶಿಸ್ತಿನ ಸಿಪಾಯಿಗಳನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂಬ ಮಾತನ್ನು ಅಲ್ಲಗಳೆಯಲಾಗದು.
–ಹನುಮಂತ ಕೊಪ್ಪದ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT