ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೂಸ್

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಯಾಕೆ ಬಡವರ ಮಕ್ಕಳೇ ಚರಂಡಿಯಲ್ಲಿ ಇಳಿಯಬೇಕು..? ಅವರ ಮಕ್ಕಳು ಓದಿ ಡಾಕ್ಟರ್ ಆಗ್ತಾರೆ, ವಕೀಲರಾಗ್ತಾರೆ, ಎಂಜಿನಿಯರ್ ಆಗ್ತಾರೆ.ನಮ್ಮ ಮಕ್ಕಳು ಮಾತ್ರ ಚರಂಡಿಯಲ್ಲಿ ಇಳಿದು ಮಲ ಬಾಚುತ್ತಾರೆ. ನಿಮ್ಮಿಂದ ಕಟ್ಟಿಕೊಂಡಿರುವ ಚರಂಡಿಯನ್ನು ನಿಮ್ಮ ಮಕ್ಕಳೇ ಸ್ವಚ್ಛಗೊಳಿಸಲಿ. ಅದಕ್ಕೆ ನನ್ನ ಮಕ್ಕಳನ್ನು ಯಾಕೆ ಕರೆಯುತ್ತೀರಿ? - ಆ ಇಳಿವಯಸ್ಸಿನ ತಾಯಿ ಆವೇಶದಿಂದ ಕಂಪಿಸುತ್ತ ಹೀಗೆ ಹೇಳುತ್ತಿದ್ದರೆ, ಅವರು ಬಾಚಿದ ಮಲವನ್ನೆಲ್ಲ ಮುಖಕ್ಕೆ ಎರಚಿದಂತಾಗಿ ಪಾಪಪ್ರಜ್ಞೆಯನ್ನೂ ಅನುಭವಿಸಲು ಅಯೋಗ್ಯರೆಂಬ ಸ್ಥಿತಿಗೆ ತಲುಪಿರುತ್ತೇವೆ.

ಕಕ್ಕೂಸ್ - ಮನರಂಜನೆ - ಉದ್ಯಮ - ಹಣ ಗಳಿಕೆ ಇಂಥ ಜನಪ್ರಿಯ ಮಾನದಂಡಗಳ ಕಣ್ಣಿಂದ ನೋಡಹೊರಟರೆ ಇದನ್ನು ಸಿನಿಮಾ ಅನ್ನಲು ಸಾಧ್ಯವೇ ಇಲ್ಲ. ಆದರೆ ಸಿನಿಮಾ ಕೂಡ ನಮ್ಮ ಸುತ್ತಲಿನ ಜಗತ್ತನ್ನು ಪರದೆಯ ಮೇಲೆ ಮರುಸೃಷ್ಟಿಸುವ ಕಲಾಪ್ರಕಾರ ಎಂದು ಒಪ್ಪಿಕೊಳ್ಳುವುದಾದರೆ ಇದು ನಿಜವಾದ ಸಿನಿಮಾ!

ಇದು ಆರಂಭವಾಗುವುದೇ ‘ಮಲದ ತೊಟ್ಟಿಯಲ್ಲಿನ ಸಾವುಗಳಿಗೆ ಸಂಬಂಧಿಸಿದಂತೆ ನಿಮ್ಮ ಮೌನ ಪಿತೂರಿಗೆ’ ಎಂಬ ಅರ್ಪಣೆಯೊಂದಿಗೆ. ಲೆಫ್ಟ್‌ ಸೈಡ್‌ ಮೀಡಿಯಾ ಲಾಂಛನದಲ್ಲಿ ದಿವ್ಯಾ ಭಾರತಿ ನಿರ್ದೇಶಿಸಿರುವ ಈ ಚಿತ್ರವು 2017ರಲ್ಲಿ ತಮಿಳುನಾಡಿನಲ್ಲಿ ತಯಾರಾಗಿದ್ದು. ತಮಿಳುನಾಡಿನ ಹಲವು ನಗರಗಳು ಈ ಚಿತ್ರದ ಕ್ಷೇತ್ರವಾಗಿದ್ದರೂ ಇದು ಭಾರತದ ಯಾವುದೇ ನಗರಕ್ಕೂ ನೇರವಾಗಿ ಅನ್ವಯಿಸುವಂಥದ್ದು.

ಮಧುರೆ, ಕೊಯಮತ್ತೂರ್, ಚೆನ್ನೈ, ತಿರುನಲ್ವೇಲಿ, ತಿರುಮಂಗಲಮ್, ಪಡುಕೊಟ್ಟಾಯ್, ಹೀಗೆ ಅನೇಕ ನಗರಗಳಲ್ಲಿ ಸಫಾಯಿಕರ್ಮಿಗಳ ಬದುಕನ್ನು ಕುರಿತು ಮಾಡಿದ ಸಾಕ್ಷ್ಯಚಿತ್ರ, ಸದಾ ಸುರಕ್ಷಿತವಲಯದಲ್ಲೇ ಇರುವ ಸೋ ಕಾಲ್ಡ್ ನಾಗರಿಕ ಜಗತ್ತು ನೋಡದ ಇನ್ನೊಂದು ಪ್ರಪಂಚದ ದಾರುಣ ಬದುಕಿಗೆ ಸಾಕ್ಷಿಯಾಗುವಂತೆ ಒತ್ತಾಯಿಸುತ್ತದೆ.

‘ನಿಮ್ಮದೇ ಮಕ್ಕಳ ಮಲ ಮೂತ್ರಗಳನ್ನು ಮುಟ್ಟಲು ಹೇಸಿಕೊಳ್ಳುತ್ತೀರಿ. ಆದರೆ ನಾವು ನಿಮ್ಮಂಥ ಸಾವಿರಾರು ಜನರ ಹೇಲು ಬಾಚುತ್ತಿರುತ್ತೇವೆ. ನಮ್ಮ ಸ್ಥಿತಿ ಹೇಗಿರಬೇಕು?’ ಎಂಬ ಸಫಾಯಿಕರ್ಮಿಯೊಬ್ಬನ ಪ್ರಶ್ನೆಗೆ ಉತ್ತರವೂ ಈ ಚಿತ್ರದಲ್ಲಿಯೇ ಸಿಗುತ್ತದೆ. ‘ಪ್ರತಿದಿನ ಅದನ್ನೇ ಮಾಡುತ್ತಿರುವವರಿಗೆ ಅದೇನೂ ಹೇಸಿಗೆ ಅನಿಸುವುದಿಲ್ಲ. ಅದು ಅವರಿಗೆ ರೂಢಿಯಾಗಿಬಿಟ್ಟಿರುತ್ತದೆ’ ಎಂದು ‘ಸ್ವಚ್ಛ ಭಾರತ’ದಲ್ಲಿ ಕೂತು ವ್ಯಾಖ್ಯಾನಿಸುವವರೆಲ್ಲರೂ ಈ ಚಿತ್ರವನ್ನೊಮ್ಮೆ ನೋಡಬೇಕು.

ದಾರುಣತೆ, ನೋವುಗಳೇ ಬದುಕಾಗಿಬಿಟ್ಟವರಿಗೂ ಅದೆಂದೂ ಸಹ್ಯ ಅನಿಸುತ್ತಿರುವುದಿಲ್ಲ. ಸತ್ತ ನಾಯಿಯ ಕೊಳೆತ ಶರೀರ ಬಾಚಿ ಸ್ವಚ್ಛಗೊಳಿಸಿದ ಹೆಂಗಸು ಮೂರು ದಿನ ಊಟ ಮಾಡಲಾಗದೇ ವಾಂತಿ ಮಾಡಿಕೊಳ್ಳುತ್ತಾ ಒದ್ದಾಡಿದ್ದು, ಮಲದ ತೊಟ್ಟಿಯಲ್ಲಿಳಿದವ ಮೈ ವಾಸನೆ ಮಾಸದೇ ಚಡಪಡಿಸಿದ್ದು, ಆಸ್ಪತ್ರೆ ತ್ಯಾಜ್ಯಗಳಿಂದ ಗಾಯ ಮಾಡಿಕೊಂಡು ಯಾವ ರೋಗ ಮೈಯೊಳಗೆ ಹೆಡೆಯೆತ್ತುವುದೋ ಎಂದು ಹೆದರಿಕೆಯಲ್ಲಿಯೇ ಬದುಕ ನೂಕುವುದು, ಹೆತ್ತಮಕ್ಕಳಿಗೆ ಕೈತುತ್ತಿಕ್ಕಿದರೆ ಎಲ್ಲಿ ತನಗಂಟಿದ ರೋಗಗಳು ಅವರಿಗೂ ಸೋಂಕುವುದೋ ಎಂದು ಭಯಬೀಳುವುದು, ಮದುವೆಯ ಹಸಿ ಕನಸುಗಳಿಂದ ಎಚ್ಚೆತ್ತುಕೊಳ್ಳುವ ಮುನ್ನವೇ ಕೈಹಿಡಿದ ಗಂಡ ಮಲದ ತೊಟ್ಟಿಯಲ್ಲಿ ಅಸುನೀಗಿ ಹೆಣವಾಗಿ ಬಂದಿದ್ದು... ಇಂಥ ನೋವುಗಳು ಎಂದಾದರೂ ರೂಢಿಯಾಗುವುದು ಸಾಧ್ಯವೆ?

ಕಕ್ಕೂಸ್ ಚಿತ್ರ ಹೀಗೆ ನಮ್ಮ ನೆಮ್ಮದಿಯ ನಿದ್ರೆಗೆ ತಮ್ಮ ನಿದ್ರೆ ಕಳೆದುಕೊಂಡವರು, ಚಿರನಿದ್ರೆಗೆ ಜಾರಿದವರ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ಹೋಗುತ್ತದೆ. ನಿಮ್ಮದೇ ಜಗತ್ತಿನ ಇನ್ನೊಂದು ಭಾಗವಾದ ನಿಮ್ಮಂಥದೇ ಮನುಷ್ಯರಿಗೆ ಗೌರವಯುತ ಬದುಕನ್ನು ಕಲ್ಪಿಸಲಾಗದೇ ಎಂಥ ‘ಸೂಪರ್ ಪವರ್’ ಗಳಿಸಿಕೊಂಡರೆ ಏನು ಸಾರ್ಥಕ? ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ.

109 ನಿಮಿಷದ ಈ ಚಿತ್ರದಲ್ಲಿ ಪ್ರಭಾಕರ್‌ ಅವರ ಸಂಗೀತ ಸಂಯೋಜನೆಯ ಒಂದು ಹಾಡು ಮತ್ತು ಅವರದೇ ಹಿನ್ನೆಲೆ ಸಂಗೀತವೂ ಹೇಳುವ ವಿಷಯದ ತೀವ್ರತೆಯನ್ನು ಹೆಚ್ಚಿಸಿದೆ. ಗೋಪಾಲ್‌ಕೃಷ್ಣನ್‌ ಮತ್ತು ಪಳನಿ ಕುಮಾರ್‌ ಅವರ ಛಾಯಾಗ್ರಹಣ ಚಿತ್ರದ ಉದ್ದೇಶವನ್ನು ನಿಷ್ಠುರವಾಗಿ ಸಾಧಿಸಲು ನೆರವಾಗಿದೆ.

ನಿಮ್ಮದೇ ತ್ಯಾಜ್ಯವನ್ನು ಬಾಚುತ್ತ ತ್ಯಾಜ್ಯವಾಗಿಯೇ ಬಿಟ್ಟಿರುವ ಸಮುದಾಯವೊಂದರ ದಾರುಣ ಬದುಕನ್ನು ನೋಡುವ ಧೈರ್ಯ ಇದ್ದರೆ ಯೂ ಟ್ಯೂಬ್ ಕೊಂಡಿ ಇಲ್ಲಿದೆ: goo.gl/uRhjg6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT