ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೆಷ್ಟು ಬಲಿ ಬೇಕೋ?

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಂಗಳವಾರ ರಾತ್ರಿ 7.30ರಿಂದ ಮೈಸೂರಿನಲ್ಲಿ ಧೋ ಎಂದು ಸುರಿಯುವ ಜಡಿಮಳೆ. ಎಂದಿನಂತೆ ವಿದ್ಯುತ್ ಕಡಿತ. ಹೊರ ಜಗತ್ತಿನ ಸಂಪರ್ಕವಿಲ್ಲದೆ ಕತ್ತಲಲ್ಲಿ ಕುಳಿತಿದ್ದೆ. ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಪತ್ರಕರ್ತ ಮಿತ್ರರೊಬ್ಬರು ದೂರವಾಣಿ ಮೂಲಕ ಹೇಳಿದ ಸುದ್ದಿ ಕೇಳಿ ಮನಸ್ಸಿಗೆ ಕತ್ತಲಾವರಿಸಿತು! ಛೇ... ಪಾಪಿಗಳು, ಗಂಡೆದೆಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಂದುಬಿಟ್ಟರಂತೆ! ಮೊನ್ನೆ ಎಂ.ಎಂ.ಕಲಬುರ್ಗಿ, ಇಂದು ಗೌರಿ! ನಿರ್ದಯಿ ರಕ್ತಪಿಪಾಸುಗಳಿಗೆ ಇನ್ನೆಷ್ಟು ಬಲಿ ಬೇಕೋ?

ಗೌರಿ ಲಂಕೇಶ್, ಅಪ್ಪನ ನಿಜವಾದ ಮಗಳಾಗಿದ್ದರು. ಎಂಬತ್ತು-ತೊಂಬತ್ತರ ದಶಕಗಳಲ್ಲಿ ಪಿ.ಲಂಕೇಶ್ ಅವರು ಹಾಕಿದ ವೈಚಾರಿಕತೆಯ ತಳಹದಿಯ ಮೇಲೆ ಹೋರಾಟದ ಹಾದಿಯಲ್ಲಿ ಬದುಕು ನಡೆಸಿದವರು. ಜೀವನದುದ್ದಕ್ಕೂ ಶೋಷಿತರು ಹಾಗೂ ದಮನಿತರ ದನಿಯಾಗಿದ್ದರು. ಭಯೋತ್ಪಾದನೆಯಷ್ಟೇ ಕೋಮುವಾದವೂ ಈ ದೇಶಕ್ಕೆ ಮಾರಕವಾಗಿದೆ. ಇವೆರಡೂ ದೇಶದ ಜನರಲ್ಲಿ ಹೊಸ ಆತಂಕ ಮತ್ತು ಭಯವನ್ನು ಸೃಷ್ಟಿಸುತ್ತಿವೆ. ಪ್ರಜಾಪ್ರಭುತ್ವದಲ್ಲಿ ಪ್ರಗತಿಪರವಾಗಿ ಆಲೋಚನೆ ಮಾಡುವುದೂ ಕೋಮುವಾದದ ವಿರುದ್ಧ ದನಿ ಎತ್ತುವುದೂ ತಪ್ಪೇ?

ಸಾಹಿತಿಗಳು ಮತ್ತು ಪ್ರಗತಿಪರರನ್ನು ‘ಬೇಟೆ’ಯಾಡುವ ದುಷ್ಟಶಕ್ತಿಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ವಿಮರ್ಶೆಯನ್ನು ಕೇವಲ ವಿಮರ್ಶೆಯನ್ನಾಗಿ ಸ್ವೀಕರಿಸುವ ನಾಗರಿಕ ಬುದ್ಧಿಯಿಲ್ಲದ ಈ ನೂತನ ಭಯೋತ್ಪಾದಕರು, ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಯಮದೂತರ ಕೆಲಸ ಮಾಡುತ್ತಿರುವುದು ಆತಂಕದ ಸಂಗತಿ. ಪ್ರತಿಭಟನಾತ್ಮಕ ಧ್ವನಿಗೆ ಎದುರು ನಿಂತು ಪ್ರತ್ಯುತ್ತರ ನೀಡಲಾಗದ ಹೇಡಿಗಳು, ಬೆನ್ನಿಗೆ ಚೂರಿ ಹಾಕುವ ನೀಚ ಕೆಲಸವನ್ನು ಮಾಡಿದ್ದಾರೆ.

ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ ಎರಡು ವರ್ಷ ಕಳೆದರೂ ಕೊಲೆಗಾರರನ್ನು ಸೆರೆ ಹಿಡಿಯದೇ ಇರುವುದು, ಗೌರಿ ಲಂಕೇಶ್‌ರ ಹಂತಕರಿಗೆ ಅಸಾಧ್ಯ ಧೈರ್ಯವನ್ನು ತಂದುಕೊಟ್ಟಿರಬೇಕು! ಇಂತಹ ದಿಟ್ಟ ಪತ್ರಕರ್ತೆಯ ಘೋರ ಹತ್ಯೆ ಪತ್ರಿಕಾಲೋಕಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ; ಪ್ರಗತಿಪರರ ಮಧ್ಯೆ ಶುಷ್ಕ ವಾತಾವರಣವನ್ನು ಸೃಷ್ಟಿಸಿದೆ. ಹಂತಕರನ್ನು ಕೂಡಲೇ ಪತ್ತೆ ಹಚ್ಚಿ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಿದರೆ ಮಾತ್ರ, ಇಂತಹ ಹತ್ಯೆಗಳನ್ನು ತಡೆಗಟ್ಟಲು ಸಾಧ್ಯ.

ಐ. ಸೇಸುನಾಥನ್, ಮೈಸೂರು

ಮೌಲ್ಯಗಳ ಮೇಲೆ ದಾಳಿ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿದೆ. ದುಷ್ಕರ್ಮಿಗಳು ಅವರ ಮೇಲೆ ಬರಸಿಡಿಲಿನ ದಾಳಿ ನಡೆಸುವ ಮೂಲಕ ಇಡೀ ವೈಚಾರಿಕ ಲೋಕಕ್ಕೆ ಗುಂಡಿನ ಸುರಿಮಳೆಗೈದಿದ್ದಾರೆ. ಗೌರಿ ಅವರು ಹಿಂದುತ್ವ ವಿರೋಧಿ ಸಿದ್ಧಾಂತಗಳ ಪ್ರತಿಪಾದಕಿಯಾಗಿದ್ದರು. ಹತ್ಯೆಗೆ ಅದೇ ಕಾರಣ ಇರಬಹುದು.

ಬಾಬಾಸಾಹೇಬ್ ಅಂಬೇಡ್ಕರ್‌ ಅವರು ಹಿಂದುತ್ವ ಕುರಿತು ಸಂಪುಟಗಟ್ಟಲೆ ಬರೆದಿದ್ದಾರೆ, ಮಾತನಾಡಿದ್ದಾರೆ. ಹಿಂದೂ ಧರ್ಮದಲ್ಲಿನ ಮರ್ಮಗಳು, ಹಿಂದೂ ತತ್ವಜ್ಞಾನ, ಕ್ರಾಂತಿ ಮತ್ತು ಪ್ರತಿಕ್ರಾಂತಿ, ಅಸ್ಪೃಶ್ಯರು ಯಾರು? ಶೂದ್ರರು ಯಾರು? ಜಾತಿ ವಿನಾಶ, ಜಾತಿ; ಅದರ ಹುಟ್ಟು, ಬೆಳವಣಿಗೆ..ಹೀಗೆ ಸರಣಿ ಕೃತಿಗಳನ್ನು ಬಾಬಾಸಾಹೇಬರು ರಚಿಸಿದ್ದಾರೆ. ಅವರ ಆ ಎಲ್ಲಾ ಕೃತಿಗಳ ಒಂದೊಂದು ಸಾಲೂ ಹಿಂದುತ್ವದ ವಿರುದ್ಧದ ತೀವ್ರ ಪ್ರತಿರೋಧದ ಚಿಹ್ನೆಗಳಾಗಿ ಈಗಲೂ ಉಳಿದಿವೆ.

ಅಂದಹಾಗೆ ಹಾಗೆ ಅವರು ಹಿಂದುತ್ವದ ವಿರುದ್ಧ ಬರೆಯುತ್ತಲೇ, ಹೋರಾಡುತ್ತಲೇ ವಿಮೋಚನೆಯ ಹಾದಿ ಕಂಡುಕೊಂಡಿದ್ದರು, ಶೋಷಣೆಗೆ ಉತ್ತರ ಹುಡುಕಿಕೊಂಡಿದ್ದರು. ಅದು ಮೀಸಲಾತಿ ಇರಬಹುದು, ಸಂವಿಧಾನ ರಚನೆ ಇರಬಹುದು, ಪ್ರತ್ಯೇಕ ಧರ್ಮ ಸ್ವೀಕಾರ ಇರಬಹುದು. ಹಿಂದುತ್ವದ ವಿರುದ್ಧ ಬರೆಯದಿದ್ದರೆ ಅವರಿಗದು ಸಾಧ್ಯವೇ ಆಗುತ್ತಿರಲಿಲ್ಲ. ಅಂತೆಯೇ ಹಾಗೆ ಬರೆದ ಅಂಬೇಡ್ಕರರ ಬರಹಗಳು ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಒಟ್ಟು ಮೊತ್ತವಲ್ಲದೆ ಬೇರೇನೂ ಅಲ್ಲ. ಒಟ್ಟಾರೆ ಅಂಬೇಡ್ಕರರು ಗನ್ನು ಹಿಡಿಯಲಿಲ್ಲ, ಪೆನ್ನು ಹಿಡಿದರು. ಯಾಕೆಂದರೆ ಹೀಗೆ ಪೆನ್ನು ಹಿಡಿದೇ, ಮನುಸ್ಮೃತಿ ಬರೆದೇ ಈ ದೇಶದ ಶೂದ್ರಾತಿಶೂದ್ರ ಜನಸಾಮಾನ್ಯರನ್ನು ಹೀಗೆ ಹೀನಾಯ ಮಟ್ಟಕ್ಕೆ ತಂದದ್ದು.

ಈ ಹಿನ್ನೆಲೆಯಲ್ಲಿ ಗೌರಿ ಲಂಕೇಶರೂ ಅಷ್ಟೇ; ಬಾಬಾಸಾಹೇಬರ ಹಾಗೆ ಪೆನ್ನು ಹಿಡಿದರು, ಹಿಂದುತ್ವದ ವಿರುದ್ಧ ಬರೆದರು, ಸಂಪಾದಕರಾಗಿ ಇತರರಿಂದ ಬರೆಸಿದರು. ಸಂವಿಧಾನದ ಹಾದಿಯಲ್ಲಿ ವೈಚಾರಿಕ ಕ್ರಾಂತಿಯ ಜೊತೆ ಸಾಗಿದ್ದರು. ಸಂವಿಧಾನ ಮಾರ್ಗ ತೊರೆದಿದ್ದವರನ್ನು ಮತ್ತೆ ದಾರಿಗೆ ತರುವಲ್ಲಿ ಕೂಡ ಅವರು ಪಾತ್ರ ವಹಿಸಿದ್ದರು!

ದುರಂತವೆಂದರೆ ಇಂದು ಗೌರಿ ಲಂಕೇಶರ ಹತ್ಯೆಯಾಗಿದೆ. ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳ ಮೇಲೆ ನಡೆದ ದಾಳಿ, ಅವರ ಮೌಲ್ಯಗಳ ಹತ್ಯೆಯಲ್ಲದೆ ಬೇರೇನೂ ಅಲ್ಲ.

ರಘೋತ್ತಮ ಹೊ.ಬ., ಮೈಸೂರು

ಕೊಲ್ಲುವುದು ಉತ್ತರವೇ?

ಮೊನಚು ಲೇಖನಿಯನ್ನು ಹಿಡಿದ ವಜ್ರಕಾಯದ ಮನಸ್ಸು ಹೊತ್ತಿದ್ದ ಒಬ್ಬ ಪತ್ರಕರ್ತೆಯ ಶಿಥಿಲ ದೇಹವನ್ನು ಗುಂಡಿಟ್ಟು ಸಿಡಿಸಬೇಕೇ? ಗೌರಿ ಲಂಕೇಶ್ ಮಾಡಿದ ತಪ್ಪಾದರೂ ಏನು? ವಿನಾಶಕಾರಿ ದಿಕ್ಕಿಗೆ ಹೋಗುತ್ತಿರುವ ಸಮಾಜವನ್ನು ವೀರ್ಯವತ್ತಾಗಿ ಮಾಡಿ, ಬದುಕನ್ನು ಹಸನು ಮಾಡಲು ಹೊರಟ ಗೌರಿ ಅವರು ವಿಧ್ವಂಸಕ ಕಾರ್ಯದಲ್ಲಿ ತೊಡಗಿದ್ದರೇ? ದೇಶದ ಅಖಂಡತೆಗೆ ಅಡ್ಡ ಬಂದಿದ್ದರೇ? ಸಮಾಜವನ್ನು ಒಡೆದಿದ್ದರೇ? ಹಿಂದುಳಿದ, ಬಸವಳಿದ, ದನಿ ಕಳೆದುಕೊಂಡಿದ್ದ ಅಸಂಖ್ಯಾತ ಜನರನ್ನು ಮೋಸಗೊಳಿಸಿ ಅಧಿಕಾರಕ್ಕಾಗಿ ಹಾತೊರೆದಿದ್ದರೇ? ದೇಶದಲ್ಲಿ ಸಮಾಜಮುಖಿಯಾಗಿರುವುದು ಒಂದು ಅಪರಾಧವೇ?

ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಸಮಕಾಲೀನ ವಿಷಯಗಳ ಬಗ್ಗೆ ಬರೆಯುತ್ತಿದ್ದ ಮೊನಚಾದ ಲೇಖನಗಳು, ವಿರೋಧಿಗಳಿಗೆ ಖಾರವಾಗಿ ಕಂಡಿದ್ದರೆ ಅವುಗಳನ್ನು ಬಲವಾಗಿ ವಿರೋಧಿಸುವ ಹತ್ತಾರು ಮಾರ್ಗಗಳಿರಲಿಲ್ಲವೇ? ವೈಚಾರಿಕ ಸ್ವಾತಂತ್ರ್ಯವನ್ನು ಈ ದೇಶದಲ್ಲಿ ಬೆಳೆಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಗೌರಿ ಅವರಿಗೆ ಗುಂಡಿಟ್ಟು ಕೊಲ್ಲುವುದು ಉಡುಗೊರೆಯೇ?

ಹಿಂದೂ ಧರ್ಮವನ್ನು ಪ್ರತಿಪಾದಿಸಿದ ಮಹಾನ್ ನಾಯಕರು ಎಂದಾದರೂ ಹಿಂಸೆಯನ್ನು ಪುರಸ್ಕರಿಸಿದ್ದರೇ? ಸ್ವಾಮಿ ವಿವೇಕಾನಂದ, ಡಾ. ಅಂಬೇಡ್ಕರ್, ಮಹಾತ್ಮ ಗಾಂಧಿಯವರು ಹೆಣ್ಣಿಗೆ ಕೊಟ್ಟ ಮರ್ಯಾದೆ ಮತ್ತು ಗೌರವವನ್ನು ಗುಂಡಿನಿಂದ ಕಲುಷಿತಗೊಳಿಸಬೇಕೇ?

ಕೆ.ಎನ್. ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT