ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಪಟ್ಟಿ ಧರಿಸಿ ಪತ್ರಕರ್ತರ ಪ್ರತಿಭಟನೆ

Last Updated 7 ಸೆಪ್ಟೆಂಬರ್ 2017, 5:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ ಹತ್ಯೆ ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಪತ್ರಕರ್ತರ ಭವನದಲ್ಲಿ ಮೌನಾಚ ರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಪತ್ರಕರ್ತರು, ಬಳಿಕ ಅಂಬೇಡ್ಕರ ವೃತ್ತ ಮತ್ತು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶಿವರಾಂ, ‘ತಂದೆ ಲಂಕೇಶ್‌ ಅವರ ಉತ್ತರಾಧಿಕಾರಿಯಾಗಿ ಅವರಷ್ಟೇ ಸಾಮಾಜಿಕ ಕಳಕಳಿ ಹೊಂದಿದ್ದ ಗೌರಿ ಅವರು ಹಲವಾರು ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು. ಅವರಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇತ್ತು’ ಎಂದರು.

ಹಿರಿಯ ಪತ್ರಕರ್ತ ಸೋಮಶೇಖರ್‌ ಮಾತನಾಡಿ, ‘ಗೌರಿ ಅವರ ಹತ್ಯೆ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಘಟನೆ. ಪತ್ರಿಕೋದ್ಯಮ ಇತಿಹಾಸದಲ್ಲಿ ಈವರೆಗೆ ಅನೇಕ ನಿರ್ಭಿತ ಪತ್ರಕರ್ತರ ಹತ್ಯೆಗಳು ನಡೆದಿವೆ. ಏಸು, ಬಸವಣ್ಣ ಸೇರಿದಂತೆ ಅನೇಕರು ಸಮಾಜ ಸುಧಾರಣೆಗೆ ಹೋಗಿ ಹತ್ಯೆಯಾಗಿ ಚರಿತ್ರೆಯ ಪುಟ ಸೇರಿದ್ದಾರೆ. ಇವತ್ತು ಗೌರಿ ಅವರ ಹತ್ಯೆ ಕೂಡ ಅದೇ ಸಾಲಿಗೆ ಸೇರಿದೆ’ ಎಂದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ವಿನ್‌ಸ್ಟನ್‌ ಕೆನಡಿ ಮಾತನಾಡಿ, ‘ಸರ್ಕಾರ ಆದಷ್ಟು ಬೇಗ ಹಂತಕರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಅಂದಾಗ ಮಾತ್ರ ಗೌರಿ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ’ ಎಂದು ತಿಳಿಸಿದರು.

ಪತ್ರಕರ್ತರಾದ ವೀರಶೇಖರ್, ನಾರಾಯಣಸ್ವಾಮಿ, ದಯಾಸಾಗರ್, ಪುಟ್ಟರಾಜು, ಬಾಲಕೃಷ್ಣ, ವೇಣು ಗೋಪಾಲ್, ಎಂ.ಕೃಷ್ಣಪ್ಪ, ಜಯರಾಂ, ಕಾಗತಿ ನಾಗರಾಜಪ್ಪ, ಕೃಷ್ಣಪ್ಪ, ವೆಂಕಟೇಶ್, ಮುರುಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT