ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ’

Last Updated 7 ಸೆಪ್ಟೆಂಬರ್ 2017, 5:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗೌರಿ ಲಂಕೇಶ್‌ ಅವರ ಹತ್ಯೆ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಜೆಡಿಎಸ್‌, ಜೆಡಿಯು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯ ಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ಕೊಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜೆಡಿಎಸ್‌: ಎಂ.ಎಂ.ಕಲಬುರ್ಗಿ ಹತ್ಯೆ ನಡೆದು ಎರಡು ವರ್ಷವಾದರೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಇದೀಗ ರಾಜಧಾನಿಯಲ್ಲೇ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ಆಗ್ರಹಿಸಿದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಅಲ್ತಾಫ್‌ ನವಾಜ್‌ ಕಿತ್ತೂರ, ಶ್ರೀಕಾಂತ ಮಗಜಿಕೊಂಡಿ, ಕೆ.ಮಂಜುನಾಥ ದೊಡ್ಡಮನಿ, ಗಂಗಾಧರ ಪೂಜಾರ, ನವೀದ್‌ ಮುಲ್ಲಾ, ನಾಗಭೂಷಣ ಕಾಳೆ, ಸಂಜು ದುಮಕ್ಕನವರ, ಮಂಜುನಾಥ ಮೆಣಸಿನಕಾಯಿ, ವಿಜಯ ಅಳಗುಂಡಗಿ ಭಾಗವಹಿಸಿದ್ದರು.

ಜೆಡಿಯು ವತಿಯಿಂದಲೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯೆ ಸಾವಿತ್ರಿ ಗುಂಡಿ, ವಕ್ತಾರ ಎಸ್‌.ಎನ್‌.ಹೈಬತ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲಗೌಡ ಕಮತರ, ರತ್ನಾ ಗಂಗಣ್ಣವರ, ಫಿರೋಜ್‌ಖಾನ್‌ ಜಿ.ಎಚ್‌. ಪಾಲ್ಗೊಂಡಿದ್ದರು.

ದಲಿತ ಸಂಘರ್ಷ ಸಮಿತಿ: ವಿಚಾರವಾದಿ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ದಲಿತ ಸಂಘರ್ಷ ಸಮಿತಿ(ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಆಗ್ರಹಿಸಿದರು.

ವಿಚಾರವಾದಿಗಳಾದ ಕೆ.ಎಸ್‌.ಭಗವಾನ್‌, ಸಿ.ಎಸ್‌.ದ್ವಾರಕನಾಥ್‌, ಯೋಗೀಶ ಮಾಸ್ಟರ್‌, ಬರಗೂರು ರಾಮಚಂದ್ರಪ್ಪ, ಗಿರೀಶ್‌ ಕಾರ್ನಾಡ್‌ ಅವರಿಗೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಸುರೇಶ ಆರ್‌.ಖಾನಾಪುರ, ಸಿದ್ದಾರ್ಥ ಮಲ್ಲಮ್ಮನವರ, ಪ್ರಕಾಶ ಗುಡಿಹಾಳ, ಕೆಂಚಪ್ಪ ಮಲ್ಲಮ್ಮನವರ, ಮಂಜುನಾಥ ಮಾದರ, ಗೋಪಾಲ ಕೆಲವೂರ ಪಾಲ್ಗೊಂಡಿದ್ದರು. 

ರಕ್ಷಣಾ ವೇದಿಕೆ: ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ವೇದಿಕೆಯ ಪ್ರಮುಖರಾದ ಶಂಕರ ಸಿದ್ದಾಪುರ, ಶಶಿಕಾಂತ ಯಳಮಲಿ, ರಮೇಶ ಭೊಸ್ಲೆ, ಸಮೀರ ಪಂತೋಜಿ, ಮನೋಹ ಸಫಾರೆ, ಪ್ರಕಾಶ ಅನಂತಪುರ, ಮಹೇಶ ಅರಳಿಮರದ ಭಾಗವಹಿಸಿದ್ದರು.

ಹೇಯ ಕೃತ್ಯ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ ಮತ್ತು ಚಿಂತನ ವೇದಿಕೆಯಿಂದ ಬುಧವಾರ ನಗರದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಯಿತು.

ಪರಿಷರ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ರು, ಅನಂತ ಕುಲಕರ್ಣಿ, ಅಶೋಕ, ಅನಿತಾ, ಶಂಕರಗೌಡ ಪಾಟೀಲ, ರಮೇಶ ವೈದ್ಯ ಇದ್ದರು.

ಶ್ರದ್ಧಾಂಜಲಿ: ರಾಯಾಪುರದಲ್ಲಿರುವ ಎಸ್.ಜೆ.ಎಂ.ವಿ. ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಶ್ರದ್ಧಾಂಜಲಿ ಸಭೆ ನಡೆಯಿತು.

ಪ್ರಭಾರ ಪ್ರಾಚಾರ್ಯರಾದ ಡಾ. ಸಿ.ಎಂ.ಕಡಕೋಳ,ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಪಿ.ಯಂಡಿಗೇರಿ, ವಿದ್ಯಾರ್ಥಿಗಳಾದ ಅನೀಲ ತಳವಾರ, ಶ್ವೇತಾ ಕಲ್ಲಣ್ಣವರ ಹಾಗೂ ಕಾವೇರಿ ಸೂರ್ಯವಂಶಿ ಇದ್ದರು.

ಸಂತಾಪ ಸಭೆ: ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಧಾರವಾಡ ಜಿಲ್ಲಾ ಎಐಟಿಯುಸಿ ನಡೆಸಿದ ಸಂತಾಪ ಸಭೆಯಲ್ಲಿ ಒತ್ತಾಯಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಎ.ಖಾಜಿ, ಉಪಾಧ್ಯಕ್ಷ ಆರ್‌.ಎಫ್‌.ಕವಳಿಕಾಯಿ, ಕಾರ್ಯದರ್ಶಿ ಎ.ಎಂ.ಪಿರ್ಜಾದೆ, ಎನ್‌.ಬಿ.ಪಮ್ಮಾರ, ಜಾಫರ್‌ ಮುಲ್ಲಾ, ರಮೇಶ ಬೋಸಲೆ, ಬಶೀರ್‌ ಮುಧೋಳ, ಕಲಾವತಿ ಇದ್ದರು.

ಖಂಡನೆ: ಗೌರಿ ಲಂಕೇಶ್‌ ಹತ್ಯೆಯನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಶ ಡಿ. ಹೊರಕೇರಿ, ಬಸವ ಕೇಂದ್ರದ ಅಧ್ಯಕ್ಷ ಡಾ. ಬಿ.ವಿ.ಶಿರೂರ, ಬಸವರಾಜ ಲಿಂಗಶೆಟ್ಟರ, ಪ್ರೊ. ಎಸ್.ಸಿ.ಇಂಡಿ, ಪ್ರೊ.ಜಿ.ಬಿ.ಹಳ್ಳಾಳ, ಪ್ರೊ.ಎಸ್.ವಿ.ಪಟ್ಟಣಶೆಟ್ಟಿ, ಪ್ರೊ.ಎಸ್.ಎಂ.ಸಾತ್ಮಾರ ಖಂಡಿಸಿದ್ದಾರೆ.

ಪ್ರಕರಣವನ್ನು ಸಿಬಿಐಗೆ ವಹಿಸಲಿ: ಸಂಸದ  ಪ್ರಹ್ಲಾದ ಜೋಶಿ
ಧಾರವಾಡ:
‘ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಕೂಡಲೇ ಸಿಬಿಐಗೆ ವಹಿಸಬೇಕು’ ಎಂದು ಸಂಸದ ಪ್ರಹ್ಲಾದ ಜೋಶಿ ಆಗ್ರಹಿಸಿದರು.

‘ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದ ಎರಡು ವರ್ಷಗಳೇ ಕಳೆದರೂ ಹಂತಕರು ಪತ್ತೆಯಾಗಿಲ್ಲ. ಈ ಪ್ರಕರಣವೂ ಹಾಗಾಗಬಾರದು ಎಂದಾದರೆ ಪ್ರಕರಣವನ್ನು ಸಿಬಿಐಗೆ ವಹಿಸುವುದೇ ಸೂಕ್ತ’ ಎಂದು ಬುಧವಾರ ರಾಷ್ಟ್ರೀಯ ರ್‍್ಯಾಂಕಿಂಗ್‌ ಟೇಬಲ್‌ ಟೆನ್ನಿಸ್‌ ಟೂರ್ನಿ (ದಕ್ಷಿಣ ವಲಯ) ಉದ್ಘಾಟನೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಗೌರಿ ಅವರ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೆಲ ಮಾಧ್ಯಮಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಲೇ ಕೊಲೆ ನಡೆದಿದೆ ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ವಿಚಾರವಾದಿಗಳ ಹತ್ಯೆಗಳು  ನಡೆಯುತ್ತಲೇ ಇವೆ. ಇದು ರಾಜ್ಯ ಸರ್ಕಾರದ ವೈಫಲ್ಯ’ ಎಂದು ಟೀಕಿಸಿದರು.

‘ಸಚಿವ ವಿನಯ ಕುಲಕರ್ಣಿ ಅವರಿಗೆ ಭದ್ರತೆ ನೀಡಿರುವುದು ಒಳ್ಳೆಯ ಕೆಲಸ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರ ಸ್ಥಿತಿಯೇ ಹೀಗಾದರೆ ಜಿಲ್ಲೆಯ ಜನರ ಪಾಡೇನು. ಅವರಿಗೆ ಭದ್ರತೆ ಒದಗಿಸುವವರು ಯಾರು?’ ಎಂದು ವ್ಯಂಗ್ಯವಾಡಿದರು.

ಡಿವೈಎಸ್‌ಪಿ ಗಣಪತಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರಿಂದ ಸಚಿವ ಕೆ.ಜೆ.ಜಾರ್ಜ್‌ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ’ ಎಂದು ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT