ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ

ಹಂತಕರನ್ನು ಪತ್ತೆ ಮಾಡದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ: ಡಾ.ಗಣೇಶ ಎನ್‌.ದೇವಿ ಎಚ್ಚರಿಕೆ
Last Updated 7 ಸೆಪ್ಟೆಂಬರ್ 2017, 6:00 IST
ಅಕ್ಷರ ಗಾತ್ರ

ಧಾರವಾಡ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಧಾರವಾಡದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹತ್ಯೆ ಖಂಡಿಸಿ ಸಾಹಿತಿಗಳು, ವಿಚಾರವಾದಿಗಳ ನೇತೃತ್ವದಲ್ಲಿ ಬುಧವಾರ ಮೌನ ಮೆರವಣಿಗೆ ನಡೆಯಿತು.

ಇಲ್ಲಿನ ಕಲ್ಯಾಣನಗರದ  ಡಾ. ಎಂ. ಎಂ. ಕಲಬುರ್ಗಿ ಅವರ ನಿವಾಸದಿಂದ ಹೊರಟ ಈ ಮೆರವಣಿಗೆಯಲ್ಲಿ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರೂ ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಐಡಿವೈಒ, ಎಐಎಂಎಸ್‌ಎಸ್‌, ಎಸ್‌ಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿಚಾರವಾದಿಗಳು, ಪತ್ರಕರ್ತರು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ‘ಸಜ್ಜನರೇ... ನಿಮ್ಮ ಮೌನ ಕೊಲ್ಲುವವರಿಗೆ ಪ್ರೇರಕ’, ‘ಕೊಲ್ಲುವ ಮನಸ್ಸು ಇರುವಲ್ಲಿ ಧರ್ಮ ಇರುವುದಿಲ್ಲ’, ‘ಹಂತಕರನ್ನು ಬಂಧಿಸಿ’ ಎಂಬ ಬರಹಗಳ ಫಲಕಗಳನ್ನು ಹಿಡಿದು ಸಾಗಿದರು.  ನಂತರ ಕಲಾಭವನದ ಆವರಣದಲ್ಲಿ ಮೆರವಣಿಗೆ ಸಮಾವೇಶಗೊಂಡಿತು.

ಆಮರಣ ಉಪವಾಸ–ಎಚ್ಚರಿಕೆ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಭಾಷಾತಜ್ಞ ಡಾ. ಗಣೇಶ ಎನ್‌.ದೇವಿ, ‘ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್‌, ಕಲಬುರ್ಗಿ ಅವರ ಹತ್ಯೆಗೂ ಹಾಗೂ ಗೌರಿ ಹತ್ಯೆಗೂ ಸಾಮ್ಯತೆ ಇದ್ದು, ಕೂಡಲೇ ಹಂತಕರನ್ನು ಬಂಧಿಸಬೇಕು; ಇಲ್ಲದಿದ್ದರೆ ಆಮರಣ ಉಪವಾಸ ಆರಂಭಿಸಲಾಗುವುದು’ ಎಂದು ಎಚ್ಚರಿಸಿದರು.

ಕೋಮುವಾದಿ ಶಕ್ತಿಗಳು ಈ ಹತ್ಯೆಯ ಹಿಂದಿರುವ ಸಾಧ್ಯತೆ ಇದ್ದು, ಹೀಗಾಗಿ ಸರ್ಕಾರ ಕೂಡಲೇ ಈ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಲೇಖಕ ರಂಜಾನ್ ದರ್ಗಾ ಮಾತನಾಡಿ, ‘ಗೌರಿ ಅವರ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆ. ಅಪರಾಧಿ ಶಕ್ತಿ ರಾಜ್ಯ ಶಕ್ತಿಗಿಂತ ಬಲಿಷ್ಠವಾಗಿರುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಬಸವಣ್ಣನವರ ನಾಡಿನಲ್ಲಿ ಇಂಥ ಕ್ರೌರ್ಯ ಖಂಡನೀಯ. ಇದು ಸಂಶೋಧನೆ ಹಾಗೂ ಸೃಜನಶೀಲತೆಯ ಮೇಲಿನ ದಾಳಿಯಾಗಿದೆ. ರಾಜ್ಯ ಶಕ್ತಿಯನ್ನೇ ಅಂಜಿಸುವ ಮಟ್ಟಿಗೆ ವಿರೋಧಿಗಳ ಶಕ್ತಿ ಬಲಾಢ್ಯವಾಗುತ್ತಿದೆ. ಕೋಮುವಾದಿಗಳನ್ನು ಹಾಗೂ ಉಗ್ರರನ್ನು ಮುಗಿಸಲು ರಾಜ್ಯ ಸರ್ಕಾರ ಪ್ರತಿಜ್ಞೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಗೌರಿ ದೊಡ್ಡ ಸ್ತಂಭವಾಗಿದ್ದರೆ. ನಾವೂ ಸಣ್ಣ ಇಟ್ಟಿಗೆಯಂತಿದ್ದೇವೆ. ಹಂತಕರೇ ನಮಗೂ ಗುಂಡು ಹಾಕಿ. ಹಾಗೆಂದು ಎಷ್ಟು ಜನರಿಗೆ ಗುಂಡು ಹಾಕುತ್ತೀರಿ?’ ಎಂದು ಹೋರಾಟಗಾರ್ತಿ ಶಾರದಾ ದಾಬಡೆ ಆಕ್ರೋಶ ವ್ಯಕ್ತಪಡಿಸಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹಂತಕರನ್ನು ಆಡಳಿತ ವರ್ಗ ಕಾಪಾಡುತ್ತಿದೆ. ಗೌರಿ ಅವರ ಹತ್ಯೆ ಕಳವಳಕಾರಿ ಸಂಗತಿ. ಪತ್ರಕರ್ತೆಯಾಗಿ ಅವರ ಕೆಲಸದ ಬಗ್ಗೆ ನಮಗೆ ಅಭಿಮಾನವಿದೆ’ ಎಂದು ಲೇಖಕಿ ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಹೇಮಾ ಪಟ್ಟಣಶೆಟ್ಟಿ, ಡಾ. ವಿನಯಾ ವಕ್ಕುಂದ, ಶಂಕರ ಹಲಗತ್ತಿ, ಎಂ.ಡಿ.ವಕ್ಕುಂದ, ಕೆ.ಎಚ್. ಪಾಟೀಲ, ಸಂಜೀವ ಕುಲಕರ್ಣಿ ಪತ್ರಕರ್ತೆಯ ಹತ್ಯೆಯನ್ನು ಖಂಡಿಸಿದರು.

ಮೆರವಣಿಗೆಯಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂದಾಜು 15 ಕಾಲೇಜುಗಳು ರಜೆ ಘೋಷಿಸಿದ್ದವು.
ಹತ್ಯೆ ಖಂಡಿಸಿ ಗದಗ, ಹಾವೇರಿ, ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲೂ ಪ್ರತಿಭಟನೆ, ಮೆರವಣಿಗೆಗಳು ನಡೆದಿವೆ.

ಗೌರಿಗೆ  6  ತಿಂಗಳು  ಜೈಲು  ಶಿಕ್ಷೆ  ವಿಧಿಸಿದ್ದ  ನ್ಯಾಯಾಲಯ
ಹುಬ್ಬಳ್ಳಿ:
ಬಿಜೆಪಿ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಲ್ಲಿನ ಜೆಎಂಎಫ್‌ ನ್ಯಾಯಾಲಯ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿ, ಜಾಮೀನಿನ ಮೇಲಿದ್ದರು.

2008ರಲ್ಲಿ ಗೌರಿ ಲಂಕೇಶ್‌ ಪತ್ರಿಕೆಯಲ್ಲಿ ‘ದರೋಡೆಗಿಳಿದ ಬಿಜೆಪಿಗಳು’ ಶೀರ್ಷಿಕೆಯಡಿ ಬಿಜೆಪಿಯ ವೆಂಕಟೇಶ ಮೇಸ್ತ್ರಿ, ಉಮೇಶ ದುಶಿ, ಶಿವಾನಂದ ಭಟ್‌ ವಿರುದ್ಧ  ಭಾವಚಿತ್ರ ಸಮೇತ ವರದಿ ಪ್ರಕಟಿಸಲಾಗಿತ್ತು. ಈ ಮೂವರು ದರೋಡೆಗಿಳಿದಿದ್ದಾರೆ. ಇವರಿಗೆ ಸಂಸದ ಪ್ರಹ್ಲಾದ ಜೋಶಿ ಬೆಂಬಲ ಕೊಡುತ್ತಿದ್ದಾರೆ ಎಂಬರ್ಥದಲ್ಲಿ ವರದಿ ಪ್ರಕಟವಾಗಿತ್ತು.

‘ಈ ವರದಿ ವಿರುದ್ಧ ಸಂಸದ ಜೋಶಿ ಪರವಾಗಿ ಗೌರಿ ಅವರಿಗೆ ನೋಟಿಸ್‌ ಕೊಟ್ಟಿದ್ದೆ. ಆದರೆ, ಅವರು ಅದಕ್ಕೆ ಉತ್ತರ ಕೊಡಲಿಲ್ಲ. ಬಳಿಕ ಹುಬ್ಬಳ್ಳಿಯ ಎರಡನೇ ಜೆಎಂಎಫ್‌ ನ್ಯಾಯಾಲಯದಲ್ಲಿ ಜೋಶಿ ಹಾಗೂ ಉಮೇಶ ದುಶಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು’ ಎಂದು ವಕೀಲ ಸಂಜು ಬಡಸ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಗೌರಿಯವರು ಹೈಕೋರ್ಟ್‌ ಮೊರೆ ಹೋಗಿದ್ದರು. ಅವರ ಮನವಿ ಪುರಸ್ಕರಿಸಿದ್ದ ನ್ಯಾಯಾಲಯ, ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿತ್ತು. ತಡೆಯಾಜ್ಞೆ ತೆರವಾದ ಬಳಿಕ 2016ರ ನವೆಂಬರ್‌ನಲ್ಲಿ ಗೌರಿ ಅವರಿಗೆ 6 ತಿಂಗಳು ಜೈಲು, ತಲಾ ₹10 ಸಾವಿರದಂತೆ ಎರಡು ಪ್ರಕರಣಗಳಿಂದ ಒಟ್ಟು ₹20 ಸಾವಿರ ದಂಡ ವಿಧಿಸಲಾಯಿತು. ಈ ಆದೇಶದ ವಿರುದ್ಧ ಹುಬ್ಬಳ್ಳಿಯ ಐದನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಗೌರಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ವಿಚಾರಣಾ ಹಂತದಲ್ಲಿದೆ’ ಎಂದು ಬಡಸ್ಕರ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT