ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ: ಶಾಸಕ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ

Last Updated 7 ಸೆಪ್ಟೆಂಬರ್ 2017, 6:09 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ಕೊಲ್ಹಾರದ ಗುರುದೇವ ಲಾಜ್‌ನ ಕೊಠಡಿಯಲ್ಲಿ ರೋಣಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಣಮಂತ ನ್ಯಾಮಗೊಂಡ ಹಾಗೂ ಕೊಲ್ಹಾರ ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದು ಗುಣಕಿ  ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಶಾಸಕ ಶಿವಾನಂದ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಹಲ್ಲೆ ನಡೆದ ಸುದ್ಧಿ ತಿಳಿಯುತ್ತಿದ್ದಂತೆ ಕೊಲ್ಹಾರ ಸೇರಿದಂತೆ ಸುತ್ತ ಮುತ್ತಲಿನ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಗುರುದೇವ ಲಾಡ್ಜ್‌ ಮುಂಭಾಗದಲ್ಲಿ ಜಮಾಯಿಸಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಬೆಳಿಗ್ಗೆ ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶಿವಾನಂದ ಪಾಟೀಲ ಗುರದೇವ ಲಾಡ್ಜ್‌ನ ಹಲ್ಲೆ ನಡೆದ ಕೊಠಡಿಯನ್ನು ವೀಕ್ಷಿಸಿದ ನಂತರ ಪ್ರವಾಸಿ ಮಂದಿರಕ್ಕೆ ತೆರಳಿ ಸುದ್ಧಿಗೋಷ್ಠಿ ನಡೆಸಿ ಘಟನೆಯನ್ನು ಖಂಡಿಸಿದರು. ಮಾರಣಾಂತಿಕ ಹಲ್ಲೆ ನಡೆಸಿದ   ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ನಂತರ ಅಪಾರ ಸಂಖ್ಯೆಯ ಕಾರ್ಯ ಕರ್ತರೊಂದಿಗೆ ಶಾಸಕ ಶಿವಾನಂದ ಪಾಟೀಲ ಅವರು ಬೈಕ್‌ ರ್‌್ಯಾಲಿ ಮೂಲಕ ಚಿಕ್ಕಗರಸಂಗಿ, ರೋಣಿಹಾಳ, ಮಸೂತಿ, ಕೂಡಗಿ, ಗೊಳಸಂಗಿ, ಮುತ್ತಗಿ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಬಸವನ ಬಾಗೇವಾಡಿಯ ಅಂಬೇಡ್ಕರ ವೃತ್ತಕ್ಕೆ ತಲುಪಿದರು. ನಂತರ ಪಾದಯಾತ್ರೆ ಮೂಲಕ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಶಿವಾನಂದ ಪಾಟೀಲ, ಕೊಲ್ಹಾರ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲಿನ ಹಲ್ಲೆ ರಾಜಕೀಯ ಪ್ರೇರಿತವಾಗಿದೆ. ರೋಣಿಹಾಳ ಗ್ರಾ.ಪಂ ಅಧ್ಯಕ್ಷ ಹಣಮಂತ ನ್ಯಾಮಗೊಂಡ ಅವರು ತಿಂಗಳ ಹಿಂದಷ್ಟೇ ನೂರಾರು ಬೆಂಬಲಿಗೊರಿಂದಗೆ ಬಿಜೆಪಿ ತೋರೆದು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

ಇದನ್ನು ಸಹಿಸದ ಕೆಲ ದುಷ್ಕರ್ಮಿಗಳು ಈ ಹಲ್ಲೆಗೆ ನಡೆಸಿದ್ದಾರೆ ಎಂಬ ಸಂಶಯ ವ್ಯಕ್ತ ವಾಗುತ್ತಿದೆ. ಈ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸ ಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಯ ಕರ್ತರು ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಮುಖಂಡರಾದ ಕಲ್ಲು ದೇಸಾಯಿ, ಶಕುಂತಲಾ ಕೆರನೂರ, ಸುರೇಶ ಮಣ್ಣೂರ ಇತರರು ಮಾತನಾಡಿದರು.

ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫಿಕ ಪಕಾಳೆ,  ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮಹಿಳಾ ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಮುಖಂಡರಾದ ತಾನಾಜಿ ನಾಗರಾಳ, ಬಸವರಾಜ ಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT