ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ ಹತ್ಯೆಗೆ ಖಂಡನೆ: ಪ್ರತಿಭಟನೆ

ಕೊಲೆಗಾರರ ಬಂಧನಕ್ಕೆ ವಿವಿಧ ಸಂಘಟನೆಗಳು, ವಿಚಾರವಾದಿಗಳು, ಸಾಹಿತಿಗಳು, ಪತ್ರಕರ್ತರ ಸಂಘಗಳಿಂದ ಆಗ್ರಹ
Last Updated 7 ಸೆಪ್ಟೆಂಬರ್ 2017, 7:03 IST
ಅಕ್ಷರ ಗಾತ್ರ

ಹಾವೇರಿ: ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ, ಕೊಲೆಗಾರರ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು, ವಿಚಾರವಾದಿಗಳು, ಸಾಹಿತಿಗಳು, ಪತ್ರಕರ್ತರು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ: ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ), ಸಿಐಟಿಯು ಕಾರ್ಯಕರ್ತರು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮುನ್ಸಿಪಲ್ ಮೈದಾನದಿಂದ ಜಾಥಾದಲ್ಲಿ ಜೆ.ಪಿ ವೃತ್ತದ ಮೂಲಕ ಬಂದ ಕಾರ್ಯಕರ್ತರು, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಎಸ್‌ಎಫ್‌ಐ ಕೇಂದ್ರ ಸಮಿತಿ ಸದಸ್ಯೆ ರೇಣುಕಾ ಕಹಾರ ಮಾತನಾಡಿ, ‘ದೇಶದಲ್ಲಿ ವಿಚಾರವಾದಿಗಳನ್ನು ಕೊಲ್ಲುವ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕೊಲ್ಲಲಾಗುತ್ತಿದೆ, ವಿಚಾರವಾದಿಗಳಾದ ನರೇಂದ್ರ ದಾಬೂಲ್ಕರ್‌, ಗೋವಿಂದ ಪಾನ್ಸಾರೆ, ಹಿರಿಯ ಸಂಶೋಧಕ ಎಂ.ಎಂ.ಕಲ್ಬುರ್ಗಿ ಕೊಲೆ ಮಾಡಿದ ಮೂಲಭೂತವಾದಿಗಳು, ಈಗ ಗೌರಿ ಲಂಕೇಶ್ ಬಲಿ ಪಡೆದಿದ್ದಾರೆ.

ಇದರಿಂದ ಸಮಾಜದಲ್ಲಿ ಉಸಿರು ಗಟ್ಟಿಸುವ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಗಾಂಧೀಜಿ ಕೊಂದ ನಾಥೂರಾಂ ಗೋಡ್ಸೆಯ ವಿಚಾರಗಳನ್ನು ಹೊಂದಿದ ಸಂತತಿಯೇ ನಾಲ್ಕೂ ವಿಚಾರವಾದಿಗಳನ್ನು ಕೊಲೆ ಮಾಡಿವೆ’ ಎಂದರು.

‘ಈ ಹಂತಕರು ಮತ್ತು ಹತ್ಯೆಯ ಹಿಂದಿನ ಶಕ್ತಿಗಳನ್ನು ಹಿಡಿಯುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ. ದೇಶದಲ್ಲಿ ಕೊಲೆಗಡುಕ ಸಂಸ್ಕೃತಿ ಸೃಷ್ಟಿಸಲು ಮೂಲಭೂತವಾದಿ ಸಂಘಟನೆಗಳು ಪ್ರಯತ್ನಸುತ್ತಿವೆ’ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ ಮಾತನಾಡಿ, ‘ಕರ್ನಾಟಕ ಸೌಹಾರ್ದದ ನಾಡು. ಬಸವಾದಿ ಶರಣರ ನಾಡಿನಲ್ಲಿ ರಕ್ತ ಹರಿಸುತ್ತಿರುವ ಮನುಷ್ಯ ವಿರೋಧಿಗಳು ಹಾಗೂ ಶಾಂತಿ ಕದಡುವ ಮೂಲಭೂತವಾದಿ ಸಂಘಟನೆಗಳನ್ನು ಹತ್ತಿಕ್ಕಬೇಕು’ ಎಂದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಎಂ. ಮಾತನಾಡಿ, ‘ಪತ್ರಕರ್ತರು, ವಿಚಾರವಾದಿಗಳ ಕೊಲೆ  ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ವೈಚಾರಿಕತೆ ಎದುರಿಸಲಾಗದ ಧರ್ಮಾಂಧರು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ. ಏಕ ಸಂಸ್ಕೃತಿಯನ್ನು ಪ್ರತಿಪಾದಿಸುವ ಶಕ್ತಿಗಳು, ದೇಶದ ಸಂವಿಧಾನಕ್ಕೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದರು.

ಡಿವೈಎಫ್‌ಐ ಸಂಚಾಲಕರಾದ ಮುಕ್ತಾನಂದ ಹಿರೇಮನಿ, ವಕೀಲರಾದ ಜಿ.ಎ.ಹಿರೇಮಠ, ಸಮಾಜ ಪರಿವರ್ತನಾ ಜನಾಂದೋಲನ ಮುಖ್ಯಸ್ಥೆ ಹಸೀನಾ ಹೆಡಿಯಾಲ, ಬುಡಕಟ್ಟು ಸಮುದಾಯದ ರಾಮಣ್ಣ ಬಾದಗಿ, ಎಸ್‌ಎಫ್‌ಐ ಮುಖಂಡರಾದ ಮಂಜುನಾಥ ಮಕರವಳ್ಳಿ, ಜ್ಯೋತಿ ದೊಡ್ಮನಿ, ಪ್ರವೀಣ ಶಿಗ್ಗಾವಿ, ಮಹೇಶ, ಮಹದೇವ ದಂಡಿನ, ಅಷ್ಪಾಕ್ ಕಾಟೇನಹಳ್ಳಿ, ಪ್ರವೀಣ ತಳವಾರ, ಅಬ್ದುಲ್ ರಜಾಕ್ ಮುಲ್ಲಾ, ಕುಮಾರ ಲಮಾಣಿ, ಮಂಜುನಾಥ ಲಮಾಣಿ, ರಂಗಪ್ಪ ಹರಿಜನ, ಶಾಂತವೀರ ಬಂಡಿಮಠ, ನಿಂಗರಾಜ ದಿಡಗನವರ ಇದ್ದರು.

‘ದೇಶವನ್ನೇ ಬೆಚ್ಚಿ ಬೀಳಿಸಿದೆ’
ಕರ್ನಾಟಕ ರಕ್ಷಣಾ ವೇದಿಕೆ:
ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಬುಧವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಮು ತಳವಾರ ಮಾತನಾಡಿ, ‘ಗೌರಿ ಲಂಕೇಶ್‌ ಹತ್ಯೆಯು ದೇಶವನ್ನೇ ಬೆಚ್ಚಿ ಬೀಳಿಸಿದೆ. ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನೆನಪು ಹಸಿಯಾಗಿರುವಾಗಲೇ ಮತ್ತೊಂದು ಹತ್ಯೆ ನಡೆದಿದೆ. ಮಹಾರಾಷ್ಟ್ರದಲ್ಲಿ ಇಬ್ಬರು ಪ್ರಗತಿಪರ ಚಿಂತಕರ ಹತ್ಯೆಗಳು ನಡೆದಿದ್ದವು. ಈ ಸರಣಿ ಹತ್ಯೆಗಳಲ್ಲಿ ಸಾಮ್ಯತೆ ಇದ್ದು, ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಲೇ ಗೌರಿ ಲಂಕೇಶ್ ಹತ್ಯೆ ನಡೆದಿದೆ. ದುಷ್ಕರ್ಮಿಗಳನ್ನು ಬೇಗನೇ ಪತ್ತೆ ಹಚ್ಚಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು’ ಎಂದು ಆಗ್ರಹಿಸಿದರು.

ಸ್ವಾಭಿಮಾನಿ ಬಣದ ಪ್ರವೀಣ ಕಾಗದ, ಬಸವರಾಜ ಪು. ವರ್ದಿ, ಪ್ರಕಾಶ ಕಲ್ಮನಿ, ಫಕ್ರುದ್ದೀನ್ ಕನವಳ್ಳಿ,   ಲೋಕೇಶ ಯತ್ನಳ್ಳಿ, ಎ.ಬಿ.ನದಾಫ್, ನಾಗರಾಜ ದೊಡ್ಡಗೌಡ್ರ, ವಿಜಯಕುಮಾರ ಕುಲಕರ್ಣಿ, ಮಾಲತೇಶ ಕಾಳಿ, ಭರಮಪ್ಪ ದೊಡ್ಡಮನಿ, ವೀರೇಶ ಕುಲಕರ್ಣಿ, ಸುರೇಶ ವನಹಳ್ಳಿ ಇದ್ದರು.

ಸಾಹಿತಿ, ಕಲಾವಿದರು, ಪತ್ರಕರ್ತರ ಖಂಡನೆ
ಹಾವೇರಿ:
‘ದೇಶದಲ್ಲಿ ವ್ಯಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಬರುತ್ತಿದೆ. ಹಿರಿಯ ಸಂಶೋಧಕ ಕಲಬುರ್ಗಿ ಅವರನ್ನು ಕೊಂದಂತೆಯೇ ಗೌರಿ ಲಂಕೇಶ ಅವರನ್ನು ಕೊಂದಿದ್ದಾರೆ. ಸರ್ಕಾರವು ಕೊಲೆಗಾರರನ್ನು ಪತ್ತೆ ಮಾಡಬೇಕು’ ಎಂದು ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಆಗ್ರಹಿಸಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹಾಗೂ ಕೊಲೆಗಾರರ ಬಂಧನಕ್ಕೆ ಆಗ್ರಹಿಸಿ ಹಾವೇರಿ ಸಾಹಿತಿಗಳು ಹಾಗೂ ಕಲಾವಿದರ ಬಳಗದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು ಮಾತನಾಡಿದರು. 

‘ಗೌರಿ ಲಂಕೇಶ್ ಎಡಪಂಥೀಯ ಹೋರಾಟಗಾರ್ತಿಯಾಗಿದ್ದರು. ತಮ್ಮ ವಿಚಾರಗಳನ್ನು ನಿರ್ಭೀತಿಯಿಂದ ಅಭಿವ್ಯಕ್ತಿಸುತ್ತಿದ್ದರು. ಇಂತಹ ವಿಚಾರಗಳನ್ನು ಹತ್ತಿಕ್ಕುವ ಸಲುವಾಗಿ ವಿಚಾರವಾದಿಗಳ ಸರಣಿ ಕೊಲೆ ನಡೆಯುತ್ತಿವೆ ಎಂಬ ಸಂಶಯ ದಟ್ಟವಾಗಿದೆ. ಹೀಗಾಗಿ ಕೊಲೆಗಾರರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. 

ಸಾಹಿತಿ ಸತೀಶ ಕುಲಕರ್ಣಿ, ಗಂಗಾಧರ ನಂದಿ, ಪ್ರಮುಖರಾದ ಚಂದ್ರಶೇಖರ ಬಾರ್ಕಿ, ಎಂ.ಎನ್. ಪತ್ರಿ, ಗುರುರಾಜ ಶಿರಹಟ್ಟಿ, ಮಾಲತೇಶ ಅಂಗೂರ ಇದ್ದರು.

ಪತ್ರಕರ್ತರ ಮನವಿ
ಹತ್ಯೆಯನ್ನು ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು ಬುಧವಾರ ಮನವಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದಕ್ಕೂ ಮೊದಲು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದ ಪತ್ರಕರ್ತರು, ‘ಪತ್ರಕರ್ತರು, ವಿಚಾರವಾದಿಗಳ ಮೇಲಿನ ದಾಳಿಯನ್ನು ಸರ್ಕಾರ ತಡೆಹಿಡಿಯಬೇಕು. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು’ ಎಂದು ಮನವಿ ಮಾಡಿದರು. ಪತ್ರಕರ್ತರಾದ ನಿಂಗಪ್ಪ ಚಾವಡಿ, ಗಂಗಾಧರ ಹೂಗಾರ್ ಇದ್ದರು.

ಸಿಬಿಐಗೆ ವಹಿಸಲು ಆಗ್ರಹ
ಸವಣೂರ:
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್‌ ವಿ.ಡಿ. ಸಜ್ಜನರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ರಾಜಶೇಖರ ಗುರುಸ್ವಾಮಿಮಠ, ಉಪಾ ಧ್ಯಕ್ಷ ಮಾಲತೇಶ ಹರ್ಲಾಪೂರ, ಆನಂತ ಮತ್ತಿಗಟ್ಟಿ, ಅಶೋಕ ಕಾಶೆಟ್ಟಿ, ಯೋಗೇಶ ಜಂಬಗಿ, ಅಶೋಕ ಕಳಲಕೊಂಡ, ಗಣೇಶ ಪಾಟೀಲ, ಕರವೇ ತಾಲ್ಲೂಕು ಅಧ್ಯಕ್ಷ ಪರಸುರಾಮ ಇಳಗೇರ ಇದ್ದರು.

ಸಿಎಂಗೆ ಮನವಿ
ಬ್ಯಾಡಗಿ:
  ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯರು ಬುಧವಾರ ತಹಶೀಲ್ದಾರ್‌ ಶಿವಶಂಕರ ನಾಯಕ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ  ಚಂದ್ರು ಛತ್ರದ ಮಾತನಾಡಿ ‘ಗೌರಿ ಲಂಕೇಶ್‌ ಅವರ ಹತ್ಯೆ ಪ್ರಜಾಪ್ರಭುತ್ವದ ಬಹು ದೊಡ್ಡ ಕಗ್ಗೊಲೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂಜಗಾಪುರ ಮಾತನಾಡಿ ‘ಸರ್ಕಾರ ಸಾಹಿತಿ ಹಾಗೂ ಹೋರಾಟಗಾರರಿಗೆ ರಕ್ಷಣೆ ನೀಡಬೇಕು’ ಎಂದರು.

ಈ ವೇಳೆ ಜೀವರಾಜ ಛತ್ರದ, ಎಂ.ಎಂ.ಪಾಟೀಲ, ಕರವೇ ಸದಸ್ಯರಾದ ಮಹೇಶ ಉಜನಿ, ಬಸವರಾಜ ಹಾವನೂರ, ಶಂಭು ಎಲಿ, ಪ್ರಕಾಶ ಹೆಗಡೆ, ಮಂಜು ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT