ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಕಾರ್ಯಕರ್ತರ ಬಂಧನ, ಬಿಡುಗಡೆ

‘ಮಂಗಳೂರು ಚಲೋ’: ಜಿಲ್ಲೆಯಾದ್ಯಂತ ಬೈಕ್‌ ರ‍್ಯಾಲಿ ನಡೆಸಲು ಬಿಜೆಪಿ ಕಾರ್ಯಕರ್ತರ ಪ್ರಯತ್ನ
Last Updated 7 ಸೆಪ್ಟೆಂಬರ್ 2017, 7:14 IST
ಅಕ್ಷರ ಗಾತ್ರ

ಹಾವೇರಿ: ‘ಮಂಗಳೂರು ಚಲೋ’ಗೆ ಜಿಲ್ಲೆಯ ವಿವಿಧೆಡೆಯಿಂದ ರ‍್ಯಾಲಿ ಹೊರಟಿದ್ದ 283 ಬೈಕ್‌ಗಳ ಸಹಿತ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಬುಧವಾರ ಬೆಳಿಗ್ಗೆ ವಶಕ್ಕೆ ಪಡೆದ ಪೊಲೀಸರು, ಬಳಿಕ ಬಿಡುಗಡೆ ಮಾಡಿದರು.

ಇದೇ 7ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಬೈಕ್‌ಗಳ ಮೂಲಕ ಹೊರಟಿದ್ದರು. ಬೆಳಿಗ್ಗೆ ಶಿವಮೊಗ್ಗಕ್ಕೆ ತೆರಳಿ, ಅಲ್ಲಿಂದ ರಥಯಾತ್ರೆ ಜೊತೆ ಬೈಕ್ ರ‍್ಯಾಲಿ ಹೋಗಲು ಉದ್ದೇಶಿಸಿದ್ದರು.

ಆದರೆ, ಜಿಲ್ಲೆಯಲ್ಲಿ ಬೈಕ್ ರ‍್ಯಾಲಿ ನಿಷೇಧಿಸಿದ ಜಿಲ್ಲಾ ದಂಡಾಧಿಕಾರಿಗಳು ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ನೇತೃತ್ವದಲ್ಲಿ  ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ನಾಕಾಬಂಧಿ ಹಾಕಿದ ಪೊಲೀಸರು, ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ.

ನಗರದ ಮುನ್ಸಿಪಲ್ ಮೈದಾನದಲ್ಲಿ ಮಂಗಳವಾರ ಸಂಜೆ ಬೈಕ್ ರ್‍ಯಾಲಿಗೆ ಸಾಂಕೇತಿಕವಾಗಿ ಚಾಲನೆ ನೀಡಲು ಯತ್ನಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಹಾಗೂ 26 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಬಳಿಕ ಬಿಡುಗಡೆ ಮಾಡಿದ್ದರು. 
38 ಕಾರ್ಯಕರ್ತರ ಬಂಧನ

ಸವಣೂರ:  ‘ಮಂಗಳೂರು ಚಲೋ’ ರ‍್ಯಾಲಿಗೆ ಬಿಜೆಪಿ ತಾಲ್ಲೂಕು ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬುಧವಾರ ಪಟ್ಟಣದಲ್ಲಿ ತಡೆದರು. ನಿಷೇಧದ ನಡುವೆಯೂ ಬೈಕ್ ರ್‍ಯಾಲಿಗೆ ಅಣಿಯಾದ 38 ಮಂದಿ ಕಾರ್ಯಕರ್ತರನ್ನು ಬಂಧಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಬೈಕ್ ರ್‍ಯಾಲಿಗೆ ಅನುಮತಿ ನಿರಾಕರಿಸಿತ್ತು. ಆದರೆ, ನಿಷೇಧದ ನಡುವೆಯೂ ಬೈಕ್ ರ‍್ಯಾಲಿ ನಡೆಸಲು ಕಾರ್ಯಕರ್ತರು ಸಿದ್ಧತೆ ನಡೆಸಿದ್ದರು. ಬುಧವಾರ ಬೆಳಿಗ್ಗೆ ಪಟ್ಟಣದ ಕೃಷಿ ಮಾರುಕಟ್ಟೆ ಎದುರಿಗೆ ಜಮಾಯಿಸಿದ್ದರು. ಆಗ ಪೊಲೀಸರು ಎಲ್ಲರನ್ನೂ ತಡೆದರು.

ರ್‍ಯಾಲಿಗೆ ಅವಕಾಶ ನಿರಾಕರಿಸಿದ ಪೊಲೀಸರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರ‍್ಯಾಲಿಗೆ ಅವಕಾಶ ನೀಡುವಂತೆ ಆಗ್ರಹಿಸಿ, ಪೊಲೀಸರ ಜತೆಗೆ ವಾಗ್ವಾದ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಹೇಶ ಸಾಲಿಮಠ, ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಹನಮಂತಗೌಡ ಮುದಿಗೌಡ್ರ, ನಿಂಗಪ್ಪ ಬಂಕಾಪೂರ, ಪುರಸಭೆ ಅಧ್ಯಕ್ಷ ಖಲಂದರ್‌ ಹಮ್ಮದ್ ಅಕ್ಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಸಂಘಮೇಶ ಏರೇಶೀಮಿ, ರಾಮಣ್ಣ ಸಂಕ್ಲೀಪೂರ, ಗಂಗಾಧರ ಬಾಣದ, ಪ್ರವೀಣ ಚರಂತಿಮಠ, ಚನ್ನವೀರಯ್ಯ ದುರ್ಗದಮಠ, ಮೈಲಾರಿ ಬಂಕಾಪೂರ ಇದ್ದರು.

ಶಾಸಕ ಬಸವರಾಜ ಬೊಮ್ಮಾಯಿ ಸೆರೆ
ಶಿಗ್ಗಾವಿ:
‘ಮಂಗಳೂರ ಚಲೋ’ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಸೇರಿದಂತೆ ಬಿಜೆಪಿ ಮುಖಂಡರನ್ನು ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಟೋಲ್‌ ನಾಕಾ ಬಳಿ ಬುಧವಾರ ಪೊಲೀಸ್‌ರು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ಸಂಘ–ಪರಿವಾರದವರ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಹಮ್ಮಿಕೊಂಡ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರು ಹೊರಟಿದ್ದರು. ಶಿಗ್ಗಾವಿಯಿಂದ ಬಿಜೆಪಿ ಯುವ ಮೋರ್ಚಾ ಸಹಯೋಗದಲ್ಲಿ ಬೈಕ್‌ ರ‍್ಯಾಲಿ ಮೂಲಕ ಜಯ ಘೋಷಣೆ ಹಾಕುತ್ತಾ ಹೋಗುತ್ತಿರುವ ಸಂದರ್ಭದಲ್ಲಿ ಅವರನ್ನು ಪೊಲೀಸರು ತಡೆದು ಬಂಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ ಬೊಮ್ಮಾಯಿ, ‘ಪ್ರಜಾಪ್ರಭುತ್ವದ ತಳಹದಿಯಲ್ಲಿ ನಡೆಯುವ ರ‍್ಯಾಲಿಗೆ ಕಾಂಗ್ರೆಸ್‌ ಸರ್ಕಾರ ಅಡ್ಡಿ ಮಾಡುವುದು ಕರಾಳ ದಿನವಾಗಿದೆ. ರಾಜ್ಯದಲ್ಲಿ ಸಾಹಿತಿ ಕಲಬರ್ಗಿ, ಪತ್ರಕರ್ತೆ ಗೌರಿ ಲಂಕೇಶ್‌, ನಿಷ್ಠಾವಂತ ಪೊಲೀಸ್‌ ಅಧಿಕಾರಿ ಗಣಪತಿ, ಬಂಡೆಪ್ಪನವರ, ಜಿಲ್ಲಾಧಿಕಾರಿ ರವಿ, ಆರ್‌ಎಸ್‌ಎಸ್‌ ಕಾರ್ಯಕರ್ತ ಸೇರಿ ಈವರೆಗೆ ಸುಮಾರು 31ಜನರ ಸಾವಿನ ಕುರಿತು ಸರ್ಕಾರ ಸರಿಯಾದ ತನಿಖೆ ಮಾಡಿಲ್ಲ. ಅದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ’ ಎಂದು ಹರಿಹಾಯ್ದರು.

‘ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ. ಮತ ಬ್ಯಾಂಕಿಗಾಗಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ. ಕಲ್ಯಾಣ ರಾಜ್ಯವನ್ನು ಪೊಲೀಸ್‌ಗಿರಿ ರಾಜ್ಯವನ್ನಾಗಿ ಮಾಡುತ್ತಿದೆ. ಯುವಕರ ರಕ್ತದಲ್ಲಿ ಆಡಳಿತ ಮಾಡಲು ಬಿಡುವುದಿಲ್ಲ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಕಾಲ ಬರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿಮನರದ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ನಂತರ ಕೊಲೆ, ಸುಲಿಗೆಗೆ ಹೆಚ್ಚುತ್ತಿದೆ. ಅದರಿಂದಾಗಿ ಆಡಳಿತ ತಂತ್ರ ಸಂಪೂರ್ಣ ಕುಸಿದು ಹೋಗಿದೆ. ಮಹಿಳೆ, ಯುವಕರ ಮೇಲೆ ದಬ್ಬಾಳಿಕೆಗಳು ನಿರತವಾಗಿವೆ. ಕಾಂಗ್ರೆಸ್‌ ಜನತೆ ಮಾಡುವ ದ್ರೋಹವನ್ನು ಸಹಿಸುವುದಿಲ್ಲ’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ರಾಜ್ಯ ಯುವ ಮೋರ್ಚಾ ಘಟಕದ ಸದಸ್ಯ ವೀರಣ್ಣ ಅಂಗಡಿ, ತಾಲ್ಲೂಕು ಘಟಕದ ಅಧ್ಯಕ್ಷ ಆಂಜನೆಯ ಗುಡಗೇರಿ, ಬಾಪುರಗೌಡ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು, ಬಿಜೆಪಿ ಯುವ ಮೋರ್ಚಾ ಘಟಕದ ಅನೇಕ ಕಾರ್ಯಕರ್ತರು ಇದ್ದರು.

ಸರ್ಕಾರಕ್ಕೆ ತಕ್ಕಪಾಠ: ಯು.ಬಿ. ಬಣಕಾರ
ಹಿರೇಕೆರೂರ:
ರಾಜ್ಯದಲ್ಲಿ ಸಂಘ– ಪರಿವಾರದ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಮಂಗಳೂರು ಚಲೋ ಅಂಗವಾಗಿ ತಾಲ್ಲೂಕಿನಿಂದ ಹೊರಟ ಬೈಕ್ ರ್‍ಯಾಲಿಗೆ ಪಟ್ಟಣದಲ್ಲಿ ಬುಧವಾರ ಶಾಸಕ ಯು.ಬಿ.ಬಣಕಾರ ಚಾಲನೆ ನೀಡಿದರು.

ಶಾಸಕರು ಸೇರಿದಂತೆ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಯು.ಬಿ.ಬಣಕಾರ, ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್ ಸರ್ಕಾರ ಮಂಗಳೂರು ಚಲೋ ಬೈಕ್ ರ್‍ಯಾಲಿಗೆ ಅನುಮತಿ ನಿರಾಕರಿಸಿತ್ತುದ್ದು, ಸರ್ಕಾರ ನ್ಯಾಯವಾದ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ನಡೆಸುತ್ತಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಕ್ಷಣೆ ಕೊಡಬೇಕಾದ ಸರ್ಕಾರವೇ ಹೋರಾಟ ಹತ್ತಿಕ್ಕುತ್ತಿದೆ. ಇದಕ್ಕೆ ತಕ್ಕ ಪಾಠವನ್ನು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಲಿಸುತ್ತದೆ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಚಪ್ಪರದಹಳ್ಳಿ, ಸಂತೋಷ ಕುಮಾರ ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಿವರಾಜ ಹರಿಜನ, ಎನ್.ಎಂ.ಈಟೇರ, ಮುಖಂಡರಾದ ಪಾಲಾಕ್ಷಗೌಡ ಪಾಟೀಲ, ಮಹೇಂದ್ರ ಬಡಳ್ಳಿ, ಮಲ್ಲಿಕಾರ್ಜುಜ ಬುರಡೀಕಟ್ಟಿ, ಷಣ್ಮುಖಯ್ಯ ಮಳಿಮಠ, ದತ್ತಾತ್ರೇಯ ರಾಯ್ಕರ್, ಹನುಮಂತಗೌಡ ಭರಮಣ್ಣನವರ, ಆನಂದಪ್ಪ ಹಾದಿಮನಿ, ಬಿ.ಟಿ. ಚಿಂದಿ, ಶಿವಕುಮಾರ ತಿಪ್ಪಶೆಟ್ಟಿ ಇದ್ದರು.

ಬ್ಯಾಡಗಿ:  ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಖಂಡಿಸಿ ಬೈಕ್‌ ರ್‌್ಯಾಲಿಗೆ ಮುಂದಾಗಿದ್ದ ಬಿಜೆಪಿ ತಾಲ್ಲೂಕು ಘಟಕದ ಕಾರ್ಯಕರ್ತರನ್ನು ಪೊಲೀಸರು ಬುಧವಾರ ಮುಂಜಾನೆ ಬಂಧಿಸಿ, ಎರಡು ಗಂಟೆಯ ಬಳಿಕ ಬಿಡುಗಡೆ ಮಾಡಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕ್ರಣ್ಣ ಮಾತನವರ ಸೇರಿದಂತೆ 25ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಿಜೆಪಿ ಕಾರ್ಯಾಲಯದ ಎದುರು ಬಂಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT