ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸ್ಥಗಿತ; ಅಂಗಡಿ, ಮನೆಗೆ ನುಗ್ಗಿದ ನೀರು

ಬೈಲಹೊಂಗಲ, ಘಟಪ್ರಭಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ವರ್ಷಧಾರೆ
Last Updated 7 ಸೆಪ್ಟೆಂಬರ್ 2017, 7:25 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಗುಡುಗು, ಮಿಂಚಿನೊಂದಿಗೆ  ಆರ್ಭಟಿ ಸಿದ ಮಳೆ ಬುಧವಾರ ತಗ್ಗು ಪ್ರದೇಶದ ಮನೆ, ಅಂಗಡಿಗಳಿಗೆ ನುಗ್ಗಿ ಜನರು ಪರದಾಡುವಂತಾಯಿತು.

ಮಧ್ಯಾಹ್ನ 3ಕ್ಕೆ ಆರಂಭವಾದ ಮಳೆ ಸತತ ಮೂರು ತಾಸು ಬಿದ್ದಿತು. ಮಳೆಯಿಂದಾಗಿ ಪ್ರಮುಖ ರಸ್ತೆ, ಹಳ್ಳ, ಚರಂಡಿಗಳು ತುಂಬಿ ಹರಿದವು.

ಬಜಾರ ರಸ್ತೆ, ಬಸ್ ನಿಲ್ದಾಣ ಸುತ್ತಮುತ್ತ ಬೀದಿ ವ್ಯಾಪಾರಿಗಳು ಮಾರಾಟಕ್ಕೆ ಹಚ್ಚಿಟ್ಟಿದ ಸಾಮಗ್ರಿಗಳು ಮಳೆ ನೀರಲ್ಲಿ ತೇಲಿ ಹೋದವು. ಬಸ್ ನಿಲ್ದಾಣ ಆವರಣದ ಹೊಸೂರ ಬಸ್ ನಿಲ್ಲುವ ಸ್ಥಳ ಮಳೆ ನೀರಿನಿಂದ ಜಲಾವೃತಗೊಂಡಿತ್ತು. ಇಂಚಲ ಕ್ರಾಸ್ ಸಾರ್ವಜನಿಕ ಗ್ರಂಥಾಲಯ ಪಕ್ಕದಲ್ಲಿರುವ ರಾಜ ಕಾಲುವೆ ಹಳ್ಳ ತುಂಬಿ ಹರಿಯಿತು.

ಇದರಿಂದ ಮಳೆ ನೀರು ತುಂಬಿ ಹರಿದು ಲಕ್ಷ್ಮೀ ಕಾಂಪ್ಲೆಕ್ಸ್ ತಟವಟಿ ಶೋರೂಮ್ ಒಳಂಗಣ ಪ್ರವೇಶಿಸಿ ಶೋರೂಮ್ ಸಂಪೂರ್ಣ ಜಲಾವೃತ ಗೊಂಡಿತ್ತು.  8 ಕಂಪ್ಯೂಟರ್, ₹8 ಲಕ್ಷ ವೆಚ್ಚದ ಪೀಠೋಪಕರಣಗಳು, ₹4 ಲಕ್ಷ ಮೌಲ್ಯದ ಆಟೊಮೊಬೈಲ್ಸ್ ಸಾಮಗ್ರಿ ಗಳು  ಮಳೆ ನೀರಿಗೆ ಹಾನಿಯಾದವು ಎಂದು ಮಾಲೀಕ ಶಿವಶಂಕರ ತಟವಟಿ ಸುದ್ದಿಗಾರರಿಗೆ ತಿಳಿಸಿದರು.

ಸೇಲ್ ಅಂಗಡಿಗೆ ಮಳೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎನ್ನಲಾಗಿದೆ. ರಸ್ತೆ ತುಂಬೆಲ್ಲ ಮಳೆ ನೀರು ಹರಿದು ಸಂಚಾರಕ್ಕೆ ತೀವ್ರ ಅಡಚಣೆ ಯಾಯಿತು. 2 ಕಿ.ಮೀ. ಉದಕ್ಕೂ ನೂರಾರು ವಾಹನಗಳು ಸರದಿ ಸಾಲಲ್ಲಿ ನಿಂತಿದ್ದವು.

ಇದೇ ವೇಳೆ ಅಗ್ನಿಶಾಮಕದಳ ವಾಹನ ಸಂಚಾರ ದಟ್ಟಣೆಯಲ್ಲಿ ಸಿಲುಕಿತ್ತು. ಸಾರ್ವಜನಿಕರ ಸಹಾಯ ದಿಂದ ಮಳೆ ನೀರಿನಿಂದ ತುಂಬಿದ್ದ ಶೋರೂಮ್‌ನಿಂದ ನೀರು ಹೊರ ತೆಗೆಯಿತು. ಸುಗಮ ಸಂಚಾರ ಕಲ್ಪಿಸಲು ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು.

ನಂದೆಮ್ಮ ದೇವಿ ನಗರ, ಇಂದಿರಾ ನಗರ, ಅಂಬೆರಡ್ಕರ ಗಲ್ಲಿ, ಆನಿಗೋಳ ಅಗಸಿ ಮಾರ್ಗದ ಮನೆಗಳಲ್ಲಿ ಮಳೆ ನೀರು ನಿಂತು ನಿವಾಸಿಗಳು ತೊಂದರೆ ಅನುಭವಿಸಿದರು. ಕೆಲವೆಡೆ ಸಿಡಿಲಿಗೆ ವಿದ್ಯುತ್ ಕಂಬಗಳು ಶಾರ್ಟ್ ಆದವು. ಸಂಪಗಾಂವ, ಸಾಣಿಕೊಪ್ಪ, ಬೈಲವಾಡ, ಯರಡಾಲ, ನೇಗಿನಹಾಳ, ದೊಡವಾಡ, ಬುಡರಕಟ್ಟಿ  ಗ್ರಾಮದಲ್ಲಿ ಜೋರಾಗಿ ಮಳೆ ಸುರಿಯಿತು. ರೈತರ ಜಮೀನುಗಳಲ್ಲಿ ಮಳೆ ನೀರು ನಿಂತು ತುಂಬಿ ಹರಿಯಿತ್ತು.

ಘಟಪ್ರಭಾ ವರದಿ: ಬುಧವಾರ ಸಂಜೆ 5 ಗಂಟೆಗೆ ಸುಮಾರು ಅರ್ಧ ಗಂಟೆ ಕಾಲ ಸುರಿದ ಪರಿಣಾಮ ಅಲ್ಲಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಪರದಾಡಿದರು. ಶಾಲೆ ಬಿಡುವ ಸಮಯದ ವೇಳೆ ಮಳೆ ಬಿದ್ದುದರಿಂದಾಗಿ ಮಕ್ಕಳು ಕೂಡ ಪರದಾಡಿದರು.

ಕಳೆದ ವಾರದಿಂದ ಸ್ವಲ್ಪವೂ ಮಳೆ ಇರಲಿಲ್ಲ. ಆದರೆ ಇಂದಿನ ಮಳೆ ಯಿಂದಾಗಿ ಬಿತ್ತಿ ಬೆಳೆಗಳಿಗೆ ಜೀವಾಮೃತ ದೊರಕಿದಂತಾಯಿತು.

ಕೊಣ್ಣೂರು, ಮರಡಿಮಠ, ಮೇಲ್ಮನಹಟ್ಟಿ, ಗೋಡಗೇರಿ, ಶಿವಾಪುರ, ಸಾವಳಗಿ, ರಾಜಾಪೂರ, ಮಲ್ಲಾಪೂರ, ಹುಣಶ್ಯಾಳ ಪಿ.ಜಿ. ಸಂಗನಕೇರಿ, ಅರಭಾಂವಿ, ಧುಪದಾಳ, ಶಿಂಧಿಕುರಬೇಟ, ಲೋಳಸೂರ ಇನ್ನಿತರ ಗ್ರಾಮಗಳಲ್ಲಿ ಮಳೆಯನ್ನೇ ಅವಲಂಬಿತ ರೈತರು ಸ್ವಲ್ಪ ನಿಟ್ಟುಸಿರು ಬಿಟ್ಟರಾದರೂ ಇನ್ನೂ ಹೆಚ್ಚು ಮಳೆಯಾದರೆ, ಬೆಳೆಗಳು ಹುಲುಸಾಗಿ ಬೆಳೆಯಲು ಸಾಧ್ಯವೆಂದು ಧುಪದಾಳದ ರೈತ ನಿಂಗನಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT