ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತ, ಯೋಧರನ್ನು ಗುರುತಿಸಿ ಗೌರವಿಸಿ’

ಹುಕ್ಕೇರಿಯಲ್ಲಿ ಶಿವಾನಂದ ಸ್ವಾಮೀಜಿಯ 60ನೇ ಜನ್ಮ ದಿನೋತ್ಸವ ಕಾರ್ಯಕ್ರಮ
Last Updated 7 ಸೆಪ್ಟೆಂಬರ್ 2017, 7:31 IST
ಅಕ್ಷರ ಗಾತ್ರ

ಹುಕ್ಕೇರಿ: ತಂದೆ-–ತಾಯಿ, ಶಿಕ್ಷಕ, ರೈತ ಹಾಗೂ ಯೋಧರನ್ನು ಸದಾವಕಾಲ ಗೌರವಿಸಬೇಕು ಎಂದು ಬಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಮಹಾಂತೇಶ್ವರಮಠದ ಪೀಠಾಧಿಪತಿ  ಶಿವಾನಂದ ಸ್ವಾಮೀಜಿ ಅವರ 60 ನೇ ಜನ್ಮ ದಿನೋತ್ಸವ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಹೆತ್ತವರಲ್ಲಿ ಆ ದೇವರನ್ನು ಕಾಣುವಂತೆ, ಅಕ್ಷರ ಕಲಿಸುವ ಗುರು, ದೇಶಕ್ಕೆ ಅನ್ನ ನೀಡುವ ರೈತ ಮತ್ತು ನಾವೆಲ್ಲರೂ ಮುಕ್ತ ಸ್ವಾತಂತ್ರ್ಯದಿಂದ ಓಡಾಡುವಂತೆ ತಮ್ಮ ಕುಟುಂಬವನ್ನು ತೊರೆದು ಜೀವದ ಹಂಗಿಲ್ಲದೇ ನಮಗೆ ರಕ್ಷಣೆ ನೀಡಿ ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಯೋಧರನ್ನು ಸ್ಮರಿಸುತ್ತಿರಬೇಕು ಎಂದರು.

ಅಲ್ಲದೇ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದರೂ ಸಹ ವಚನ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಸಂಪಾದಿಸಿ ತಮ್ಮ ಪ್ರವಚನಗಳ ಮೂಲಕ ಜನರ ಹೃದಯಕ್ಕೆ ಲಗ್ಗೆ ಹಾಕುವಂತೆ ಇಬ್ರಾಹಿಂ ಸುತಾರ ಧಾರ್ಮಿಕ ವಿಚಾರಗಳು ಪ್ರಶಂಸನೀಯ ವಾಗಿವೆ. ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಶಿಕ್ಷಕರ ದಿನಾಚರಣೆ ದಿನವೇ 60ರಲ್ಲಿ ಪದಾರ್ಪಣೆ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ಸಮಾರಂಭ ಆಯೋಜಿಸಲಾಗುವುದು ಎಂದರು.

ಸಾನ್ನಿಧ್ಯ ವಹಿಸಿ ನಿಡಸೋಸಿ ಜಗದ್ಗುರು ಶಿವಲಿಂಗೇಶ್ವರ ಸ್ವಾಮೀಜಿ  ಮಾತನಾಡಿದರು. ಹಿರಿಯ ನಿವೃತ್ತ ಶಿಕ್ಷಕರಾದ ಪಾರೇಶ ಮುನ್ನೋಳಿ, ಲಕ್ಷ್ಮಣ ಮುನ್ನೋಳಿ, ಮಲ್ಲಪ್ಪ ಲಟ್ಟಿ ಹಾಗೂ ಶಿರಗಾಂವ ಗ್ರಾಮದ ಬಿ.ಕೆ.ಮುನ್ನೋಳಿ ಅವರನ್ನು ರಮೇಶ ಕತ್ತಿ, ಮಹಾದೇವ ಇಸ್ಲಾಂಪುರೆ, ಮಲ್ಲಿಕಾರ್ಜುನ ಕಣಗಲಿ ಹಾಗೂ ಅಣ್ಣಪ್ಪ ಮುನ್ನೋಳಿ ಪಾದಪೂಜೆ ನೆರವೇರಿಸಿ ಗುರು ನಮನ ಸಲ್ಲಿಸಿದರು.

ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಚಿತ್ತಾಪೂರದ ಶ್ರೀಗಳು, ಶೇಗುಣಸಿ ಮಹಾಂತ ದೇವರು ನೇತೃತ್ವ ವಹಿಸಿ ಧರ್ಮ ಜಾಗೃತಿ ಕುರಿತು ಮಾತನಾಡಿದರು. ಇಬ್ರಾಹಿಂ ಸುತಾರ ಅವರು ಭಕ್ತಿ ಮಾರ್ಗದ ಪ್ರವಚನ ನೀಡಿದರು. ಬಸವರಾಜ ಸೋರಗಾಂವಿ ಭಾಗವಹಿಸಿದ್ದರು. 

ಗೌರವ: ಶಿವಾನಂದ ಸ್ವಾಮೀಜಿ ಅವರನ್ನು ವಿವಿಧ ಸಂಘ- ಸಂಸ್ಥೆಗಳು ಸೇರಿದಂತೆ ಅರ್ಬನ್ ಬ್ಯಾಂಕ ನಿರ್ದೇಶಕರಾದ ಮಲ್ಲಿಕಾರ್ಜುನ ಬೆಲ್ಲದ, ರಾಜಾರಾಮ ಶಿರಾಳಕರ ಹಾಗೂ ಪ್ರಧಾನ ವ್ಯವಸ್ಥಾಪಕ ಸುಜೀತ ಕತ್ತಿ ಸತ್ಕರಿಸಿ ಗೌರವಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ದೀಪಕ ಮುರಗಾಲಿ, ಸಿದಲಿಂಗಯ್ಯ ಕಡಹಟ್ಟಿ, ಬಸವರಾಜ ಮಹಾಶೆಟ್ಟಿ, ಅಕ ಬೆಲ್ಲದ, ಅ.ಮ.ಮುಂಡಾಸಿ, ಬಸವರಾಜ ಮಠಪತಿ, ಮಹಾನಿಂಗ ಶೆಟ್ಟಿ, ಬಾಳೇಶ ಕಾಮಗೌಡ, ದೀಪಕ ಮಾಳಗಿ, ವಿನೋದ ಬುರ್ಜಿ, ಸುಧೀರ ಕತ್ತಿ, ರಮೇಶ ಅಲಕನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತಿರಿದ್ದರು.

ಶಿಕ್ಷಕ ಎನ್.ಎಲ್. ತೇರದಾಳ ಸ್ವಾಗತಿಸಿದರು. ಕಮತೇನಹಟ್ಟಿಯ ಗುರುದೇವ ದೇವರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT