ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಗೆಲ್ಲುವುದು ಕಾಂಗ್ರೆಸ್ ಗುರಿ’

Last Updated 7 ಸೆಪ್ಟೆಂಬರ್ 2017, 7:42 IST
ಅಕ್ಷರ ಗಾತ್ರ

ಸಿದ್ದಾಪುರ: ‘ಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳನ್ನು  ಗೆಲ್ಲುವ ಗುರಿಗೆ ಪೂರಕವಾಗಿ ಪಕ್ಷದ ಸಂಘಟನಾ ಕೆಲಸ ಮಾಡುತ್ತಿದ್ದೇವೆ’ ಎಂದು ಕಾಂಗ್ರೆಸ್ ಪಕ್ಷದ ಕ್ಷೇತ್ರ ಉಸ್ತುವಾರಿ ಎಂ.ಎಲ್‌.ಮೂರ್ತಿ ಹೇಳಿದರು. ಪಟ್ಟಣದಲ್ಲಿ ಬುಧವಾರ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ಮೋದಿ ಅವರಿಂದ ಜನರು ಭ್ರಮ ನಿರಸನಗೊಂಡಿದ್ದಾರೆ. 14 ಸಾವಿರ ಕೋಟಿ ಕಪ್ಪು ಹಣ ತರಲು ₹ 22 ಸಾವಿರ ಕೋಟಿ ವೆಚ್ಚ ಮಾಡಿದ್ದಾರೆ. ‘ಭೇಟಿ ಬಚಾವೋ’ ಎನ್ನುವವರು ಹೆಣ್ಣು ಮಕ್ಕಳು ಉಪಯೋಗಿಸುವ ನ್ಯಾಪ್‌ಕಿನ್‌ಗೆ ಜಿಎಸ್‌ಟಿ ಹಾಕಿದ್ದಾರೆ. ಗ್ಲುಕೋಸ್ ಬಿಸ್ಕಿಟ್‌ಗೆ ಶೇ 18 ಜಿ.ಎಸ್‌ಟಿ ಹಾಕಲಾಗಿದ್ದರೆ, ಚಿನ್ನದ ಬಿಸ್ಕಿಟ್‌ಗೆ ಶೇ 3 ಜಿ.ಎಸ್‌.ಟಿ ಹಾಕಿದ್ದಾರೆ’  ಎಂದು ಅವರು ಹೇಳಿದರು.

‘ಬಿಜೆಪಿಯಲ್ಲಿ  ಸಚಿವರಾಗಲು ಅರ್ಹತೆ ಎಂದರೆ ಜಾತೀಯತೆ  ಮಾಡುವುದು ಎಂಬಂತಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಂವಿಧಾನ ಬದ್ಧತೆ, ಜನಪರ ಚಿಂತನೆ, ಸಹನೆ, ಸಮಾನತೆ ಇರುವುದರಿಂದ ಪಕ್ಷದಲ್ಲಿ ಗುರುತಿಸಿಕೊಳ್ಳಲು ಕಾಯಬೇಕಾಗುತ್ತದೆ’ ಎಂದರು.

‘2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರವನ್ನು ನಾವು(ಕಾಂಗ್ರೆಸ್) ಪಕ್ಷ ಪಡೆಯಬೇಕಾಗಿದೆ. ಹಿಂದಿನ (ಲೋಕಸಭೆ ಮತ್ತು ವಿಧಾನ ಸಭೆ) ಚುನಾವಣೆಯಲ್ಲಿ ಇಲ್ಲಿ ಯಾರು ಗೆಲ್ಲುವ ಅಭ್ಯರ್ಥಿ ಎಂಬುದನ್ನು ಜಿಜ್ಞಾಸೆ ಮಾಡುವಲ್ಲಿ ಸೋತಿದ್ದೇವೆ.

ಈ ಬಾರಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಿದ್ದೇವೆ. ಜನಪರವಾದ ಮತ್ತು ಬಹುಸಂಖ್ಯಾತರಿಗೆ ಇಷ್ಟವಾಗುವ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೆ ಇಳಿಸಲಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರ ನೀಡಿದರು.

‘ಕಾರ್ಯಕರ್ತರಿಗೆ ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಪಕ್ಷದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು  ಈ ಸಂದರ್ಭದಲ್ಲಿ ಸೂಚಿಸಿದರು.

ಕೆಪಿಸಿಸಿ ಕಾರ್ಯದರ್ಶಿ ವಿ.ಎಸ್.ಆರಾಧ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ನಾಗರಾಜ, ಎಸ್‌.ಬಿ.ಗೌಡರ್, ಎಸ್‌.ಕೆ.ಭಾಗವತ್ , ಮತ್ತಿತರ ಪ್ರಮುಖರು ಇದ್ದರು.

*
ಬ್ರಿಟಿಷರು ತಕ್ಕಡಿ ಹಿಡಿದುಕೊಂಡು ಬಂದು ನಮ್ಮನ್ನು ದರೋಡೆ ಮಾಡಿದ್ದರು. ಮೋದಿ ಇಲ್ಲಿಯೇ  ಇದ್ದುಕೊಂಡು ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
-ಎಂ.ಎಲ್‌.ಮೂರ್ತಿ,
ಕಾಂಗ್ರೆಸ್ ಪಕ್ಷದ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT