ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನರಂಜಿಸಿದ ಯಕ್ಷಗಾನ ಗೊಂಬೆಯಾಟ

ಅರಿವು ಮೂಡಿಸಿದ ‘ಶಾಲೆಯೆಡೆಗೆ.. ಗೊಂಬೆ ನಡಿಗೆ’
Last Updated 7 ಸೆಪ್ಟೆಂಬರ್ 2017, 8:00 IST
ಅಕ್ಷರ ಗಾತ್ರ

ಕುಮಟಾ: ಉಡುಪಿ ಜಿಲ್ಲೆಯ ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್‌ ಯಕ್ಷಗಾನ ಗೊಂಬೆಯಾಟ  ಟ್ರಸ್ಟ್ ಕಲಾವಿದರು ಸೋಮವಾರ ಇಲ್ಲಿಯ ಕೊಂಕಣ ಎಜುಕೇಶನ್ ಟ್ರಸ್ಟ್‌ ಪ್ರೌಢ ಶಾಲೆಯಲ್ಲಿ ನಡೆಸಿದ ‘ಶಾಲೆಯೆಡೆಗೆ.. ಗೊಂಬೆ ನಡಿಗೆ’ ಕಾರ್ಯಕ್ರಮ ವಿದ್ಯಾರ್ಥಿಗಳ, ಶಿಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಯಕ್ಷಗಾನ ಪಾತ್ರಧಾರಿಗಳ ವೇಷ ತೊಟ್ಟ ಗೊಂಬೆಗಳನ್ನು ಸೂತ್ರದ ಮೂಲಕ ಕುಣಿಸಿದ ಸೂತ್ರಧಾರ  ಪ್ರತಿ ಗೊಂಬೆಯ ಕುಣಿತಕ್ಕೆ ಆ ಕ್ಷಣದಲ್ಲಿ ವಿವರಗಳನ್ನು ನೀಡುತ್ತಾ ಹೋದರು.

ಗೊಂಬೆ ಕುಣಿತದ ಪುಟ್ಟ ವೇದಿಕೆ ಪಕ್ಕದಲ್ಲಿರುವ ಭಾಗವತರು, ಗೊಂಬೆಗಳ ಕುಣಿತಕ್ಕೆ ತಕ್ಕಂತೆ ಯಕ್ಷಗಾನ, ಪದ್ಯ ಹಾಡುವಾಗ ಚಂಡೆ, ಮದ್ದಲೆ, ತಾಳ, ಹಾರ್ಮೋನಿಯಂ ಒಳಗೊಂಡ ವಾದ್ಯದವರು ಸಾಥ್ ನೀಡಿದರು. ಗೊಂಬೆಯ ಚಲಿಸುವ ಎಲ್ಲ ಭಾಗಗಳಿಗೆ ಸೂತ್ರ ಅಳವಡಿಸಿ ಅವೆಲ್ಲವನ್ನೂ ತನ್ನ ಕೈಯಲ್ಲಿ ನಿಯಂತ್ರಿಸುತ್ತಾ, ಅವುಗಳ ಕುಣಿತಕ್ಕೆ ಸೂತ್ರಧಾರ ತಾನೂ ಹೆಜ್ಜೆ ಹಾಕುವಾಗ ವಿದ್ಯಾರ್ಥಿಗಳು, ಶಿಕ್ಷಕರು ತನ್ಮಯರಾಗಿ ಗೊಂಬೆ ಕುಣಿತ ಆನಂದಿಸಿದರು. 

ಸೂತ್ರಧಾರನಿಗೂ ಯಕ್ಷಗಾನ ಶೈಲಿಯ ಎದೆಹಾರ, ಕಾಲಿಗೆ ಗೆಜ್ಜೆ, ತಲೆಗೆ  ಪಗಡೆಯನ್ನೊಳಗೊಂಡ ವೇಷವಿದೆ. ರಾಕ್ಷಸ, ಕುದುರೆ, ಹಾಸ್ಯಗಾರ, ಕುಮಾರ, ವೀರ ಮುಂತಾದ ಪಾತ್ರಗಳು ವೇದಿಕೆ ಬಂದಾಗ ಹಿಮ್ಮೇಳದಿಂದ ಯಕ್ಷಗಾನ ಶೈಲಿಯ ಹಾಡು, ವಾದ್ಯ ಮೊಳಗಿದವು. ಭರತನಾಟ್ಯ ಮಾಡುವ ಹೆಣ್ಣು ಗೊಂಬೆ ಕುಣಿಯುವಾಗ  ಹಿಮ್ಮೇಳದಿಂದ  ಬಂದ ‘ಒಬ್ಬನ ಒಳಗಿಟ್ಟೆ, ಒಬ್ಬನ ಹೊರಗಿಟ್ಟೆ, ಒಬ್ಬನ ಕರಕೊಂಡು ಒಳಗೋದೆ..’ ಎನ್ನುವ ಜನಪದ ಶೈಲಿಯ ಹಾಡು ಎದುರು ಕೂತವರನ್ನು ಹಿಡಿದಿಟ್ಟಿತು.

ವೇದಿಕೆಗೆ ಬಂದು ಸೂತ್ರಧಾರನ ಆಣತಿಯಂತೆ  ಕುಣಿದು, ನರ್ತಿಸಿ ಹೋಗುವ ಗೊಂಬೆಯಾಟದ ಕೊನೆಯಲ್ಲಿ ಅತ್ಯುತ್ತಮ ಸಂದೇಶವೊಂದಿದೆ. ಎಲ್ಲವನ್ನೂ ತನ್ನ ಸೂತ್ರದ ಮೂಲಕ ನಿಯಂತ್ರಿಸುವ ಮನುಷ್ಯ ಕೊನೆಗೆ ಪೃಥ್ವಿಯ ಆಚೆಗೂ ತನ್ನ ಕರಾಳ ಹಸ್ತ ಚಾಚುತ್ತಾನೆ ಎನ್ನುವುದನ್ನು ಹೇಳುವಾಗ ಪೃಥ್ವಿಯ ಸಂಕೇತವಾದ ಭೂಗೋಳದ ಎರಡು ಬದಿಗಳ ರಂಧ್ರಗಳಿಂದ ಎರಡು ಕೈಗಳು ಹೊರ ಬರುತ್ತವೆ.

ಸೂತ್ರಧಾರನ ಪಾತ್ರ ನಿರ್ವಹಿಸಿದ ಭಾಸ್ಕರ್ ಕಾಮತ್ ಮಾತನಾಡಿ, ‘ಬೇರೆ ಬೇರೆ ಹತ್ತಾರು ದೇಶಗಳಲ್ಲಿ ಈ ರಂಗ ಕಲೆ ಪ್ರದರ್ಶನ ಕಂಡಿದೆ. ನಾಗರಾಜ ಭಟ್ಟ ಮಲ್ಪೆ ಎನ್ನುವವರ ಪ್ರಾಯೋಜಕತ್ವದಲ್ಲಿ ಕುಮಟಾದಿಂದ ಕಾಸರಗೋಡಿನವರೆಗೆ ಬೇರೆ ಬೇರೆ 22 ಶಿಕ್ಷಣ ಸಂಸ್ಥೆಗಳಲ್ಲಿ ಪ್ರದರ್ಶನ ಕಾಣಲಿವೆ. ಡಾ. ಸುಧಾ ಮೂರ್ತಿ, ಡಾ. ಪಿ. ದಯಾನಂದ ಪೈ ಅವರು ಇಡೀ ಯೋಜನೆಯ ಪ್ರಾಯೋಜಕರಾಗಿದ್ದಾರೆ’ ಎಂದರು.  

ವೃತ್ತ ಪ್ರಾಚಾರ್ಯ ವಿ.ಜಿ. ಹೆಗಡೆ,  ಸಂಸ್ಥೆಯ ಅಧ್ಯಕ್ಷ ಕಾಶಿನಾಥ ನಾಯಕ, ಶೀಕ್ಷಕ ಆರ್.ಎಚ್. ದೇಶಭಂಡಾರಿ ಮತ್ತು ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು. ಕಲಾ ತಂಡದಲ್ಲಿ ಮಹಾಬಲೇಶ್ವರ ಗೌಡ, ಶಂಕರ ಮೊಗವೀರ, ನಾರಾಯಣ ಬಿಲ್ಲವ, ಪ್ರಭಾಕರ ಆಚಾರ್ಯ, ಭರತ ಮೈಪಾಡಿ,  ರಾಜೇಂದ್ರ ಪೈ ಇದ್ದರು.

*
ಸುಮಾರು 350 ವರ್ಷಗಳ ಇತಿಹಾಸವಿರುವ ಯಕ್ಷಗಾನ ಗೊಂಬೆಯಾಟ ಕಲೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ನಡೆಸುವ ಪ್ರಯತ್ನವೇ ಕಾರ್ಯಕ್ರಮದ ಉದ್ದೇಶ.
–ಭಾಸ್ಕರ್ ಕಾಮತ್,
ಸೂತ್ರಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT