ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯಕ್ಕಾಗಿ ನಿಲ್ಲದ ಪರದಾಟ

ಹಳೆಮಲಪನಗುಡಿಯಲ್ಲಿ ಸಾಮೂಹಿಕ ಬಯಲು ಶೌಚಾಲಯದ ಕಾಂಪೌಂಡ್‌ ತೆರವು
Last Updated 7 ಸೆಪ್ಟೆಂಬರ್ 2017, 9:11 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಹಳೆಮಲಪನ ಗುಡಿಯಲ್ಲಿ ಮಹಿಳೆಯರಿಗಾಗಿ ನಿರ್ಮಿ ಸಿದ್ದ ಸಾಮೂಹಿಕ ಬಯಲು ಶೌಚಾ ಲಯದ ಕಾಂಪೌಂಡ್‌ ಅನ್ನು ಏಕಾಏಕಿ ತೆರವುಗೊಳಿಸಿರುವುದರಿಂದ ಸ್ಥಳೀ ಯರು ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮದ ಶ್ರೀರಾಮ–ಗಣೇಶ–ಹನುಮ ದೇವಸ್ಥಾನದ ಮಗ್ಗುಲಲ್ಲಿ 100X60 ಅಡಿ ಜಾಗದ ಸುತ್ತಲೂ ಸುಮಾರು ಹತ್ತರಿಂದ ಹನ್ನೆರಡು ಅಡಿಗಳವರೆಗೆ ಕಾಂಪೌಂಡ್‌ ನಿರ್ಮಿಸಿ, ಮಹಿಳೆಯರಿಗೆ ಸಾಮೂಹಿಕ ಶೌಚ ಲಯಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಸುಮಾರು 35ರಿಂದ 40 ವರ್ಷಗಳಿಂದ ಗ್ರಾಮದ 1,2 ಹಾಗೂ 3ನೇ ವಾರ್ಡ್‌ನ ಮಹಿಳೆಯರು ಇದನ್ನು ಉಪಯೋಗಿಸುತ್ತಿದ್ದಾರೆ. ಆದರೆ, ವಾರದ ಹಿಂದೆ ಗ್ರಾಮ ಪಂಚಾಯಿತಿಯಿಂದ ಆವರಣ ತೆರವುಗೊಳಿಸಿದ್ದರಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಶೌಚಾಲಯ ತೆರವು ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಹುಟ್ಟಿದಾಗಿನಿಂದಲೂ ಶೌಚಾಲಯವನ್ನು ಉಪಯೋಗಿಸುತ್ತಿದ್ದೇನೆ. ನನ್ನಂತೆ ಅನೇಕ ಮಹಿಳೆಯರು ಇದನ್ನೇ ನೆಚ್ಚಿಕೊಂಡಿದ್ದಾರೆ. ಹಣ ವಂತರು ಅವರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆ ಮನೆಯ ಹೆಣ್ಣು ಮಕ್ಕಳಿಗೆ ಸಮಸ್ಯೆಯಿಲ್ಲ. ಆದರೆ, ಬಡವರು ಏನು ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ಗ್ರಾಮದ ಗೌರಮ್ಮ.

‘ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಹಣ ಕೊಡಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ನಮ್ಮದು ಚಿಕ್ಕ ಮನೆ. ಅಡುಗೆ ಮಾಡುವುದು, ಮಲಗುವುದು ಎಲ್ಲವೂ ಅಲ್ಲೇ. ಮೊದಲೇ ಕಿರಿದಾದ ಜಾಗ. ಅಂತಹದ್ದರಲ್ಲಿ ಶೌಚಾಲಯ ನಿರ್ಮಿಸಿ ಕೊಳ್ಳಲು ಆಗುತ್ತದೆಯೇ?’ ಎಂದು ಕೇಳಿದರು.

‘ಅನೇಕ ವರ್ಷಗಳಿಂದ ಮಹಿಳೆಯರು ಶೌಚಾಲಯ ಉಪಯೋಗಿಸುತ್ತಿದ್ದಾರೆ. ಇಲ್ಲಿಯವರೆಗೆ ಯಾರಿಗೂ ಯಾವುದೇ ಸಮಸ್ಯೆಯಾಗಿಲ್ಲ. ಯಾವುದೇ ರೀತಿಯ ರೋಗ, ರುಜಿನ ಹರಡಿಲ್ಲ. ಆದರೆ, ಈಗ ರೋಗ ಗಳು ಹರಡುತ್ತವೆ ಎಂದು ಹೇಳುತ್ತಿದ್ದಾರೆ. ಇದಕ್ಕಾಗಿ ಶೌಚಾಲಯಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿದ್ದಾರೆ.

ಶೌಚಾಲಯದ ಕಾಂಪೌಂಡ್‌ ಬೀಳಿಸುವ ಮುನ್ನ ಬೇರೆ ಕಡೆಯಾದರೂ ವ್ಯವಸ್ಥೆ ಮಾಡಬೇಕಿತ್ತು. ಯಾವುದೇ ವ್ಯವಸ್ಥೆ ಮಾಡದೇ ತರಾತುರಿಯಲ್ಲಿ ಗೋಡೆ ಬೀಳಿಸಿರುವುದರಿಂದ ಅನೇಕ ಮಹಿಳೆಯರು ತೊಂದರೆ ಅನುಭವಿಸು ತ್ತಿದ್ದಾರೆ. ರಾತ್ರಿ ವೇಳೆ ಬಹಿರ್ದೆಸೆಗೆ ಹೋಗುತ್ತಿದ್ದಾರೆ’ ಎಂದರು.

‘ಗ್ರಾಮದ 1,2 ಹಾಗೂ 3ನೇ ವಾರ್ಡ್‌ಗಳಲ್ಲಿ ಮನೆಗಳು ಬಹಳ ಇಕ್ಕಟ್ಟಾಗಿವೆ. ಜನ ಓಡಾಡಲು ಜಾಗವಿಲ್ಲ. ಅಂತಹದ್ದರಲ್ಲಿ ಜನ ಶೌಚಾಲಯವಾ ದರೂ ಹೇಗೆ ಕಟ್ಟಿಸಿಕೊಳ್ಳುತ್ತಾರೆ. ಸಣ್ಣ ಸಣ್ಣ ಮನೆಗಳಲ್ಲಿ ಜನ ವಾಸಿಸುತ್ತಿದ್ದಾರೆ. ಹೀಗಿರುವಾಗ ಶೌಚಾಲಯ ಎಲ್ಲಿ ನಿರ್ಮಿಸಿಕೊಳ್ಳುತ್ತಾರೆ’ ಎಂದು ಗ್ರಾಮದ ವಕೀಲ ರಾಘವೇಂದ್ರ ಪ್ರಶ್ನಿಸುತ್ತಾರೆ.

ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಒ.) ಉಮೇಶ್‌ ಅವರು ಹೇಳುವುದೇ ಬೇರೆ. ‘ಬಯಲು ಶೌಚಾ ಲಯದ ಕಾಂಪೌಂಡ್‌ ತೆರವುಗೊಳಿಸ ಲಾಗುವುದು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಸರ್ಕಾರದಿಂದ ನೆರವು ಒದಗಿಸಲಾಗುವುದು ಎಂದು ಆರು ತಿಂಗಳ ಹಿಂದೆಯೇ ತಿಳಿಸಲಾಗಿತ್ತು. ಆದರೆ, ಯಾರೊಬ್ಬರೂ ತಲೆಗೆ ಹಾಕಿ ಕೊಂಡಿಲ್ಲ. ಈಗ ಕೂಗಾಡಿದರೆ ಏನು ಪ್ರಯೋಜನ’ ಎಂದು ಕೇಳಿದರು.

‘ಸರ್ಕಾರದ ನಿರ್ದೇಶನದ ಮೇರೆಗೆ ಇತ್ತೀಚೆಗೆ ಪಂಚಾಯಿತಿಯಲ್ಲಿ ಸರ್ವಾನುಮತದಿಂದ ಶೌಚಾಲಯದ ಕಾಂಪೌಂಡ್‌ ತೆರವುಗೊಳಿಸುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

*
ಎಲ್ಲೂ ಬಯಲು ಶೌಚಾಲಯ ಇರುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಪಂಚಾಯ್ತಿಯಲ್ಲಿ ತೆಗೆದುಕೊಂಡ ತೀರ್ಮಾನದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಕೆಲವರು ರಾಜಕೀಯ ಮಾಡುತ್ತಿದ್ದಾರೆ.
-ಉಮೇಶ್‌,
ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT